ಹೊಸದಿಲ್ಲಿ, ಏ.25- ಕಾರಣಪಟ್ಟಿಗಳು ಹಾಗೂ ವಕೀಲರಿಗೆ ಪ್ರಕರಣಗಳ ದಾಖಲು ಮತ್ತು ಪಟ್ಟಿ ಮಾಡುವಿಕೆ ಕುರಿತ ಮಾಹಿತಿಯನ್ನು ವ್ಯಾಟ್ಸಾಪ್ ಸಂದೇಶದ ಮೂಲಕ ಹಂಚಿಕೊಳ್ಳಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಗುರುವಾರ ಹೇಳಿದ್ದಾರೆ.
ಅವರ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠವು ಸಂವಿಧಾನದ ಪರಿಚ್ಛೇದ 39(ಬಿ)ರಡಿ ಖಾಸಗಿ ಆಸ್ತಿಗಳನ್ನು ʻಸಮುದಾಯದ ಭೌತಿಕ ಸಂಪನ್ಮೂಲಗಳುʼ ಎಂದು ಪರಿಗಣಿಸಬಹುದೇ ಎಂಬ ಅರ್ಜಿಯ ವಿಚಾರಣೆ ನಡೆಸಬೇಕಿತ್ತು. ವಿಚಾರಣೆ ಪ್ರಾರಂಭಿಸುವ ಮೊದಲು ಸಿಜೆಐ ಈ ಘೋಷಣೆ ಮಾಡಿದರು. ಈ ಪರಿಚ್ಛೇದ ರಾಜ್ಯ ನಿರ್ದೇಶಕ ತತ್ವದ ಭಾಗವಾಗಿದೆ.
ʻ ಸುಪ್ರೀಂ ಕೋರ್ಟ್ ತನ್ನ 75 ನೇ ವರ್ಷದಲ್ಲಿ ಐಟಿ ಸೇವೆಗಳೊಂದಿಗೆ ವಾಟ್ಸಾಪ್ ಸಂದೇಶಗಳನ್ನು ಸಂಯೋಜಿಸುವ ಮೂಲಕ ನ್ಯಾಯದ ಪ್ರವೇಶವನ್ನು ಬಲಪಡಿಸುವ ಉಪಕ್ರಮವನ್ನು ಪ್ರಾರಂಭಿಸಿದೆ. ವಕೀಲರು ಪ್ರಕರಣಗಳನ್ನು ದಾಖಲಿಸಿದ ಬಳಿಕ ಸ್ವಯಂಚಾಲಿತ ಸಂದೇಶ ಸ್ವೀಕರಿಸುತ್ತಾರೆ. ವಕೀಲರ ಸಂಘದ ಸದಸ್ಯರು ಕಾರಣಪಟ್ಟಿಗಳನ್ನುಕೂಡ ಮೊಬೈಲಿನಲ್ಲಿ ಪಡೆಯುತ್ತಾರೆʼ ಎಂದು ಹೇಳಿದರು.
ʻಇದು ನಮ್ಮ ಕೆಲಸದ ರೀತಿಯಲ್ಲಿ ಗಮನಾರ್ಹ ಬದಲಾವಣೆ ತರುತ್ತದೆ. ಕಾಗದ ಉಳಿಸುತ್ತದೆ. ಇ-ಕೋರ್ಟ್ ಯೋಜನೆಗೆ ಕೇಂದ್ರ 7 ಸಾವಿರ ಕೋಟಿ ರೂ. ಮಂಜೂರು ಮಾಡಿದೆʼ ಎಂದು ನ್ಯಾ. ಚಂದ್ರಚೂಡ್ ಹೇಳಿದರು.
ಕಾರಣಪಟ್ಟಿ ಎಂದರೆ, ನಿರ್ದಿಷ್ಟ ದಿನದಂದು ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುವ ಪ್ರಕರಣಗಳ ವಿವರ. ಕೋರ್ಟಿನ ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ಆ ಫೋನ್ ಯಾವುದೇ ಸಂದೇಶ ಮತ್ತು ಕರೆಗಳನ್ನು ಸ್ವೀಕರಿಸುವುದಿಲ್ಲ.
ʻಇದು ಮತ್ತೊಂದು ಕ್ರಾಂತಿಕಾರಿ ಹೆಜ್ಜೆʼ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರವು ದಾವೆದಾರರು ಮತ್ತು ವಕೀಲರಿಗೆ ನ್ಯಾಯಾಂಗಕ್ಕೆ ಪ್ರವೇಶವನ್ನು ಹೆಚ್ಚಿಸಲು ಡಿಜಿಟಲೀಕರಣಕ್ಕೆ ಬದ್ಧವಾಗಿದೆ ಎಂದು ಮೆಹ್ತಾ ಹೇಳಿದರು.
ಸಿಜೆಐ ಚಂದ್ರಚೂಡ್ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಂಗದ ಕಾರ್ಯಚಟುವಟಿಕೆಯನ್ನು ಡಿಜಿಟಲೀಕರಣಗೊಳಿಸಲು ಕ್ರಮ ತೆಗೆದುಕೊಳ್ಳುತ್ತಿದೆ..