ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮೋದಿ ಅವರಿಗೆ 'ಶಿಕ್ಷಣ' ನೀಡಲು ಸಮಯ ಕೋರಿದ ಖರ್ಗೆ

ರಾಜಸ್ಥಾನದಲ್ಲಿ ಪ್ರಧಾನಿ ಹೇಳಿಕೆಗೆ ವ್ಯಾಪಕ ಖಂಡನೆ;

Update: 2024-04-22 13:06 GMT

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಪ್ರಣಾಳಿಕೆ ಬಗ್ಗೆ ʻಶಿಕ್ಷಣʼ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಮಯಾವಕಾಶ ಕೇಳಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ. 

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನ ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳು ಇರುವವರಿಗೆ ಹಂಚುತ್ತದೆ ಎಂದು ಪ್ರಧಾನಿ ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ಸಭೆಯಲ್ಲಿ ಹೇಳಿದ ಬಳಿಕ ಕಾಂಗ್ರೆಸ್‌ ತೀವ್ರವಾಗಿ ಪ್ರತಿಕ್ರಿಯಿಸಿದೆ.

ಖರ್ಗೆ ಟ್ವೀಟ್: ಭಾನುವಾರ ತಡರಾತ್ರಿ ಖರ್ಗೆ ಅವರು ಎಕ್ಸ್ ನಲ್ಲಿ ಪ್ರಧಾನಿ ಮೋದಿಯವರ ಮಾತುಗಳನ್ನು ʻದ್ವೇಷ ಭಾಷಣʼ ಮತ್ತು ಜನರ ಗಮನ ಬೇರೆಡೆಗೆ ಸೆಳೆಯುವ ʻಯೋಜಿತ ತಂತ್ರʼ ಎಂದು ಟೀಕಿಸಿದರು. ಕಾಂಗ್ರೆಸ್ ಪ್ರಣಾಳಿಕೆಯು ʻಪ್ರತಿಯೊಬ್ಬ ಭಾರತೀಯನಿಗೆ ಸಂಬಂಧಿಸಿದೆʼ ಮತ್ತು ಧರ್ಮದ ಉಲ್ಲೇಖವನ್ನು ಹೊಂದಿಲ್ಲ. ಅಧಿಕಾರಕ್ಕಾಗಿ ಸುಳ್ಳು ಹೇಳುವುದು, ಆಧಾರರಹಿತ ಉಲ್ಲೇಖಗಳನ್ನು ಮಾಡುವುದು ಮತ್ತು ವಿರೋಧಿಗಳ ಮೇಲೆ ಸುಳ್ಳು ಆರೋಪ ಮಾಡುವುದು ಆರೆಸ್ಸೆಸ್ ಮತ್ತು ಬಿಜೆಪಿಯ ತರಬೇತಿಯ ವಿಶೇಷತೆʼ ಎಂದು ಖರ್ಗೆ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕೋಮು ಧ್ರುವೀಕರಣ: ಎಐಸಿಸಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ʻಅವರ ಹೇಳಿಕೆಗಳು ಪ್ರಧಾನಿ ಹುದ್ದೆಗೆ ಸರಿಹೊಂದುವುದಿಲ್ಲ. ಪಕ್ಷದ ಪ್ರಣಾಳಿಕೆ ಬಗ್ಗೆ ಅವರಿಗೆ ʻಶಿಕ್ಷಣʼ ನೀಡಲು ಖರ್ಗೆ ಅವರು ಮೋದಿಯವರನ್ನು ಭೇಟಿಗೆ ಸಮಯ ಕೇಳಿದ್ದಾರೆʼ ಎಂದು ಹೇಳಿದರು. ಪಕ್ಷದ ಲೋಕಸಭೆ ಚುನಾವಣೆ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಮೋದಿ ಅವರಿಗೆ ಪ್ರಣಾಳಿಕೆ ಪ್ರತಿಗಳನ್ನು ಕಳುಹಿಸಲಿದ್ದಾರೆ. ಪಕ್ಷ ಒಂದು ಲಕ್ಷ ಜನರ ಸಹಿಯೊಂದಿಗೆ ಚುನಾವಣೆ ಆಯೋಗಕ್ಕೆ ಮೋದಿ ವಿರುದ್ಧ ಮನವಿ ಸಲ್ಲಿಸಲಿದೆ. ‘ಕೋಮು ಧ್ರುವೀಕರಣ’ ಸೃಷ್ಟಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಭಾಷಣವನ್ನು ಮೋದಿ ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ. 

ಮಣಿಪುರದ ವಿಭಜಕ ತಂತ್ರ: ʻ ದೇಶದ ಪ್ರಧಾನಿಯ ದ್ವೇಷ ಭಾಷಣ ಕುರಿತು ಚುನಾವಣೆ ಆಯೋಗ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂದು ನಾನು ಬಯಸುತ್ತೇನೆ. ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ಜನರನ್ನು ವಿಭಜಿಸುವ ಸಾರ್ವಜನಿಕ ಕರೆʼ ಎಂದು ಆರೋಪಿಸಿದರು. ʻಮೊದಲ ಹಂತದ ಚುನಾವಣೆ ಅನುಕೂಲಕರವಾಗಿಲ್ಲ ಎಂದು ಪ್ರಧಾನಿ ಇಂತಹ ಕೆಳಮಟ್ಟದ ತಂತ್ರ ಬಳಸಿದರು. ಮಣಿಪುರದಲ್ಲಿ ಇದೇ ವಿಭಜಕ ತಂತ್ರ ಬಳಸಿದರು. ಕಳೆದ 11 ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಧಾರ್ಮಿಕ ಪೂಜಾ ಸ್ಥಳಗಳನ್ನು ಸುಟ್ಟು ಹಾಕಲಾಗಿದೆ. ಮಹಿಳೆಯರನ್ನು ವಿವಸ್ತ್ರಗೊಳಿಸಿ, ಹಲ್ಲೆ ಮತ್ತು ಅತ್ಯಾಚಾರ ಮಾಡಲಾಗಿದೆ. ಆದರೆ, ಮಣಿಪುರಕ್ಕಾಗಿ ಒಂದೇ ಒಂದು ಕಣ್ಣೀರು ಹಾಕಲು ನಿರಾಕರಿಸಿದರುʼ ಎಂದು ವೇಣುಗೋಪಾಲ್ ಹೇಳಿದರು.

ಜೈರಾಮ್ ರಮೇಶ್ ಅವರ ಟೀಕೆ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ʻ ಭಾರತೀಯ ಮಹಿಳೆಯರ ಚಿನ್ನಾಭರಣಗಳ ಮಾರಾಟ ಮತ್ತು ಅಡಮಾನಕ್ಕೆ ಕಾರಣರಾದ ಪ್ರಧಾನಿಯಾಗಿ ಅವರು ಇತಿಹಾಸದಲ್ಲಿ ದಾಖಲಾಗುತ್ತಾರೆʼ ಎಂದು ಹೇಳಿದರು. 

ʻನೋಟು ಅಮಾನ್ಯೀಕರಣ, ಜಿಎಸ್‌ಟಿ, ಯೋಜಿತವಲ್ಲದ ಕೋವಿಡ್ ಲಾಕ್‌ಡೌನ್ ಮತ್ತು ಕಳಪೆ ಪರಿಹಾರ ಪ್ಯಾಕೇಜ್‌ಗಳು ದೇಶದ ಕುಟುಂಬಗಳನ್ನು ಸಾಲಕ್ಕೆ ತಳ್ಳಿದವು. ದೇಶಿಗರ ನಿವ್ವಳ ಉಳಿತಾಯ ಅತ್ಯಂತ ಕಡಿಮೆ ಮಟ್ಟದಲ್ಲಿದೆ (ಜಿಡಿಪಿಯ ಶೇ.5). ಫೆಬ್ರವರಿ 2024 ರಲ್ಲಿ ಚಿನ್ನದ ಸಾಲ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ. ದಾಟಿದೆ,ʼ ಎಂದು ಬರೆದಿದ್ದಾರೆ.

ಚುನಾವಣಾ ಆಯೋಗದ ಮೌನ ತೀರಾ ಕೆಟ್ಟದ್ದು: ಯೆಚೂರಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಎಕ್ಸ್‌ನಲ್ಲಿʻಪ್ರಧಾನಿಯವರ ಹೇಳಿಕೆ ಕ್ರೂರವಾಗಿದ್ದರೆ, ಚುನಾವಣೆ ಆಯೋಗದ ಮೌನವು ಹೆಚ್ಚು ಕ್ರೂರʼ ಎಂದು ಹೇಳಿದರು. ʻಅವರ ಭಾಷಣವು ಮಾದರಿ ನೀತಿ ಸಂಹಿತೆ ಮತ್ತು ದ್ವೇಷ ಭಾಷಣದ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಸಂಪೂರ್ಣ ಉಲ್ಲಂಘನೆ. ಕಠಿಣ ಕ್ರಮ ಮತ್ತು ನ್ಯಾಯಾಲಯದ ನಿಂದನೆಗೆ ಅರ್ಹವಾಗಿದೆʼ ಎಂದು ಹೇಳಿದರು. 

ಪತ್ರ ಬರೆಯಲು ಕೋರಿಕೆ: ತೃಣಮೂಲ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಸಾಕೇತ್ ಗೋಖಲೆ ಅವರು ಮೋದಿಯವರ ಹೇಳಿಕೆ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವಂತೆ ಜನರಿಗೆ ಮನವಿ ಮಾಡಿದ್ದಾರೆ. ಎಕ್ಸ್‌ನ ಪೋಸ್ಟ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ ಇಮೇಲ್ ಐಡಿ ಹಂಚಿಕೊಂಡಿರುವ ಅವರು, ʻ ಚುನಾವಣಾ ಆಯೋಗ ಪ್ರತಿಪಕ್ಷಗಳ ಮಾತು ಕೇಳುವುದಿಲ್ಲʼ ಎಂದು ಹೇಳಿದರು. 

ಒವೈಸಿ ವಾಗ್ದಾಳಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.ʻ2002 ರಿಂದ ಮೋದಿ ನೀಡಿರುವ ಏಕೈಕ ಗ್ಯಾರಂಟಿ ಮುಸ್ಲಿಮರ ನಿಂದನೆʼ ಎಂದು ಹೇಳಿದ್ದಾರೆ. ʻಮೋದಿ ಅವರು ಮುಸ್ಲಿಮರನ್ನು ನುಸುಳುಕೋರರು ಮತ್ತು ಅನೇಕ ಮಕ್ಕಳನ್ನು ಹೊಂದಿರುವವರು ಎಂದು ಕರೆದಿದ್ದಾರೆ. ಮೋದಿಯವರ ಆಡಳಿತದಲ್ಲಿ ದೇಶದ ಸಂಪತ್ತಿನ ಮೊದಲ ಹಕ್ಕು ಅವರ ಶ್ರೀಮಂತ ಸ್ನೇಹಿತರದ್ದು. ಶೇ.1 ರಷ್ಟು ಭಾರತೀಯರು ದೇಶದ ಸಂಪತ್ತಿನ ಶೇ.40 ಪಾಲು ಹೊಂದಿದ್ದಾರೆʼ ಎಂದು ಹೇಳಿದರು. 

ಶಿವಸೇನೆ (ಯುಬಿಟಿ) ಪ್ರಿಯಾಂಕಾ ಚತುರ್ವೇದಿ, ʻತಪ್ಪುದಾರಿಗೆಳೆಯುವ, ದ್ವೇಷಪೂರಿತ ಹೇಳಿಕೆʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

Tags:    

Similar News