ಬಿಜೆಡಿ ಸರ್ಕಾರದ ಅವಧಿ ಜೂನ್ 4ಕ್ಕೆ ಮುಕ್ತಾಯ: ಪ್ರಧಾನಿ
ಬಿಜೆಪಿ ‘ಹಗಲುಗನಸು’ ಕಾಣುತ್ತಿದೆ; ಪಟ್ನಾಯಕ್;
ಮೇ 6-ತಮ್ಮನ್ನು ʻಜಗನ್ನಾಥನ ಪುತ್ರʼ ಎಂದು ಕರೆದುಕೊಂಡಿರುವ ಪ್ರಧಾನಿ, ಒಡಿಶಾದಲ್ಲಿ ಬಿಜೆಡಿ ಸರ್ಕಾರದ ಅವಧಿ ಜೂನ್ 4ರಂದು ಮುಗಿಯಲಿದೆ ಎಂದಿದ್ದಾರೆ.
ಬೆಹ್ರಾಮ್‌ಪುರದಲ್ಲಿ ತಮ್ಮ ಮೊದಲ ಚುನಾವಣಾ ಸಭೆಯಲ್ಲಿ ಮಾತನಾಡಿ, ʻಒಡಿಶಾವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಬಿಜೆಪಿಗೆ ಅವಕಾಶ ನೀಡಬೇಕು. ರಾಜ್ಯಕ್ಕೆ ಒಡಿಯಾ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಸಿಎಂ ಅಗತ್ಯವಿದೆ. ಚುನಾವಣೆ ನಂತರ ಇಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ರಚಿಸಲಿದೆ. ಬಿಜೆಡಿ ಸರ್ಕಾರದ ಮುಕ್ತಾಯ ದಿನಾಂಕ ಜೂನ್ 4, 2024ʼ ಎಂದು ಹೇಳಿದರು.
ಗಿರಿಜನ ಕಲ್ಯಾಣಕ್ಕಾಗಿ ಕೆಲಸ: ಬುಡಕಟ್ಟು ಜನರು ಅಧಿಕ ಸಂಖ್ಯೆಯಲ್ಲಿರುವ ನಬರಂಗಪುರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ʻತಮ್ಮ ಸರ್ಕಾರ ಸ್ಥಳೀಯ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ನೀವು ಮೋದಿಯವರ 10 ವರ್ಷಗಳ ನಾಯಕತ್ವದ ದಾಖಲೆಯನ್ನು ನೋಡಿದ್ದೀರಿ. ಅವರು ಬುಡಕಟ್ಟು ಕಲ್ಯಾಣಕ್ಕೆ ಅಯವ್ಯಯವನ್ನು ಮೊದಲಿಗಿಂತ ಐದು ಪಟ್ಟು ಹೆಚ್ಚಿಸಿದ್ದಾರೆʼ ಎಂದು ಹೇಳಿದರು.
ʻಕೇಂದ್ರ ಸರ್ಕಾರ ಬುಡಕಟ್ಟು ಪ್ರದೇಶಗಳಲ್ಲಿ 400ಕ್ಕೂ ಅಧಿಕ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಸ್ಥಾಪಿಸಿದೆ. ತಮ್ಮ ಸಚಿವಾಲಯ ದಲ್ಲಿ ಶೇ.7ರಷ್ಟು ಎಸ್‌ಟಿ, ಎಸ್‌ಸಿ ಮತ್ತು ಒಬಿಸಿ ವರ್ಗಗಳಿಗೆ ಸೇರಿದ ಜನರು ಇದ್ದಾರೆʼ ಎಂದು ಹೇಳಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉಲ್ಲೇಖಿಸಿದ ಪ್ರಧಾನಿ, ʻಒಡಿಶಾದ ಮಗಳಿಗೆ ಬಿಜೆಪಿ ದೇಶದ ಅತ್ಯುನ್ನತ ಸ್ಥಾನವನ್ನು ನೀಡಿದೆʼ ಎಂದು ಹೇಳಿದರು.
ಬಿಜೆಡಿಯಿಂದ ಯೋಜನೆಗಳ ನಾಶ: ಆಯುಷ್ಮಾನ್ ಭಾರತ್ ಯೋಜನೆಯನ್ನು ಬಿಜೆಡಿ ಸರ್ಕಾರ ಜಾರಿಗೊಳಿಸದೆ ಇರುವುದರಿಂದ, ಒಡಿಶಾದಲ್ಲಿ ಯಾರಿಗೂ ಪ್ರಯೋಜನವಾಗಿಲ್ಲ.ರಾಜ್ಯಕ್ಕೆ 'ಜಲ್ ಜೀವನ್ ಮಿಷನ್' ಯೋಜನೆಯಡಿ ಕೇಂದ್ರ 10,000 ಕೋಟಿ ರೂ. ನೀಡಿತು. ಆದರೆ, ಬಿಜೆಡಿ ಹಣವನ್ನು ಸರಿಯಾಗಿ ಖರ್ಚು ಮಾಡಲಿಲ್ಲ. ಛತ್ತೀಸ್‌ಗಢದ ಭತ್ತದ ರೈತರು ಪ್ರತಿ ಕ್ವಿಂಟಲ್‌ಗೆ 3,100 ರೂ. ಎಂಎಸ್‌ಪಿ ಪಡೆಯುತ್ತಾರೆ. ಆದರೆ, ಒಡಿಶಾದಲ್ಲಿ 2,100 ರೂ. ಪಡೆಯುತ್ತಿದ್ದಾರೆʼ ಎಂದು ಆರೋಪಿಸಿದರು.
ʻಒಡಿಶಾದ ಜನರಿಗೆ ಶಕ್ತಿ ಮತ್ತು ಉತ್ಸಾಹವಿದೆ. ಆದರೆ, ಬಿಜೆಡಿ ಸರ್ಕಾರ ಅವರಿಗೆ ಸರಿಯಾದ ಅವಕಾಶ ನೀಡಲಿಲ್ಲ. ನೀವು ಕಾಂಗ್ರೆಸ್‌ಗೆ 50 ವರ್ಷ ಮತ್ತು ಬಿಜೆಡಿಗೆ 25 ವರ್ಷ ನೀಡಿದ್ದೀರಿ. ಬಿಜೆಪಿಗೆ ಕೇವಲ ಐದು ವರ್ಷ ಕೊಡಿ. ಒಡಿಶಾವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಮೋದಿ ಆಶ್ವಾಸನೆ ನೀಡಿದರು.
ಪಟ್ನಾಯಕ್ ತಿರುಗೇಟು: ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಟ್ನಾಯಕ್, ʻಒಡಿಶಾದಲ್ಲಿ ಸರ್ಕಾರ ರಚಿಸುವ ಬಗ್ಗೆ ಬಿಜೆಪಿ ಹಗಲುಗನಸು ಕಾಣುತ್ತಿದೆʼ ಎಂದರು. ಪಟ್ನಾಯಕ್ ಅವರ ಆಪ್ತ ಸಹಾಯಕ ವಿ.ಕೆ. ಪಾಂಡಿಯನ್, ʻಜೂನ್ 9 ರಂದು ಬೆಳಗ್ಗೆ 11.30- 1.30 ರೊಳಗೆ ನಡುವೆ ಸತತ ಆರನೇ ಬಾರಿಗೆ ಒಡಿಶಾದ ಮುಖ್ಯಮಂತ್ರಿಯಾಗಿ ಪಟ್ನಾಯಕ್ ಪ್ರಮಾಣವಚನ ಸ್ವೀಕರಿಸಲಿದ್ದಾರೆʼ ಎಂದು ಹೇಳಿದರು.