Election 2024: ಹಾಸನದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿರುದ್ಧ ಕಾಂಗ್ರೆಸ್ ತೀವ್ರ ಸೆಣೆಸಾಟ
ಹಾಸನ ಕ್ಷೇತ್ರ ಒಕ್ಕಲಿಗ ಸಮುದಾಯದ ಪ್ರಾಬಲ್ಯದಿಂದಾಗಿ ಜನತಾ ದಳ (ಜಾತ್ಯತೀತ)ದ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿದೆ. ಹೀಗಿದ್ದರೂ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಜೆಡಿಎಸ್ ಅಭ್ಯರ್ಥಿ ಮತ್ತು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಮರು ಆಯ್ಕೆಗೆ ಬೆವರು ಸುರಿಸುತ್ತಿದ್ದಾರೆ.
ಹಾಸನದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿದೆ. ಜಿಲ್ಲೆಯಲ್ಲಿರುವ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ನಾಲ್ಕು ಕ್ಷೇತ್ರ ಹಾಗೂ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ತಲಾ ಎರಡು ಕ್ಷೇತ್ರಗಳನ್ನು ಹಂಚಿಕೊಂಡಿವೆ.
ಚೈತನ್ಯಶಾಲಿ ದೇವೇಗೌಡರು: ಮೈತ್ರಿಕೂಟದ ಹಿರಿಯ ತಾರಾ ಪ್ರಚಾರಕರಾದ 91 ವರ್ಷದ ದೇವೇಗೌಡರು, ಸುಡುಬಿಸಿಲಿನಲ್ಲಿ ಹಾಸನದ ಹಳ್ಳಿ ಹಳ್ಳಿಗೆ ತೆರಳಿ ಅನೇಕ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ಲೋಕಸಭೆಗೆ ಮೊಮ್ಮಗ ಪ್ರಜ್ವಲ್ ಅವರ ಆಯ್ಕೆ ಮತ್ತು ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಆಗಿಸುವುದು ತಮ್ಮ ಬಯಕೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಪ್ರಜ್ವಲ್ ಅವರನ್ನು ಪರಾಜಯಗೊಳಿಸಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಒಂದು ಕಾಲದ ದೇವೇಗೌಡರ ಆಪ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಸಮ ಬಲದ ಸ್ಪರ್ಧೆ: ಈವರೆಗಿನ 17 ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಒಂಬತ್ತು ಮತ್ತು ಕಾಂಗ್ರೆಸ್ಸೇತರ ಪಕ್ಷಗಳು ಎಂಟು(ಜನತಾ ಪಕ್ಷ ಮತ್ತು ಜೆಡಿಎಸ್ ಏಳು) ಬಾರಿ ಗೆಲುವು ಸಾಧಿಸಿವೆ. 2004ರಿಂದ ಜೆಡಿಎಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದೆ.
ಈ ಕ್ಷೇತ್ರ ದೇವೇಗೌಡ ಮತ್ತು ಸಿದ್ದರಾಮಯ್ಯ ಇಬ್ಬರಿಗೂ ಪ್ರತಿಷ್ಠೆಯ ವಿಷಯವಾಗಿದೆ. ಮುಖ್ಯಮಂತ್ರಿಯವರ ಆಕ್ರಮಣಕಾರಿ ಮಾತಿನ ನಂತರ ದೇವೇಗೌಡರು,ʻಸಿದ್ದರಾಮಯ್ಯನವರ ದುರಹಂಕಾರವನ್ನು ನಾಶಮಾಡಲು ಪಣ ತೊಟ್ಟಿದ್ದಾರೆʼ.
ಕ್ಷೇತ್ರದಲ್ಲಿ ದೇವೇಗೌಡರು ಮತ್ತು ಸಿದ್ದರಾಮಯ್ಯ ಅವರ ಕೆಲಸವನ್ನು ನೋಡಿದರೆ, ಜೆಡಿಎಸ್ ಗೆಲುವು ಸುಲಭವಲ್ಲ ಎಂದು ತೋರಿಸುತ್ತದೆ. ಆದರೆ, ಪ್ರಜ್ವಲ್ ಅವರ 2019 ರ ಮತಗಳಿಕೆ ಪ್ರಮಾಣ ಶೇ.52.96 ಇದ್ದು, ಇದು 2014 ರಲ್ಲಿ ದೇವೇಗೌಡರು ಗಳಿಸಿದ್ದಕ್ಕಿಂತ (ಶೇ. 44.44) ಅಧಿಕ.
ಕಾಂಗ್ರೆಸ್ ಸವಾಲು: ಮಾಜಿ ಸಂಸದ ಹಾಗೂ ದೇವೇಗೌಡರ ಪ್ರತಿಸ್ಪರ್ಧಿ ದಿವಂಗತ ಜಿ. ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಎಂ. ಪಟೇಲ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಎರಡು ಪ್ರಭಾವಿ ಕುಟುಂಬಗಳ ನಡುವಿನ ನಾಲ್ಕು ದಶಕಗಳ ಹಿಂದಿನ ರಾಜಕೀಯ ಕದನ ಮತ್ತೆ ಮುನ್ನೆಲೆಗೆ ಬಂದಿದ್ದು, ಮೂರನೇ ತಲೆಮಾರಿನವರು ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ.
1999ರಲ್ಲಿ ಪುಟ್ಟಸ್ವಾಮಿಗೌಡರು ದೇವೇಗೌಡರನ್ನು ಸೋಲಿಸಿದ್ದರು. ಹೊಳೆನರಸೀಪುರದಲ್ಲಿ ಪ್ರಜ್ವಲ್ ಅವರ ತಂದೆ ಹೆಚ್.ಡಿ.ರೇವಣ್ಣ ವಿರುದ್ಧ ಶ್ರೇಯಸ್ ಪಟೇಲ್ ಅವರ ತಾಯಿ ಎಸ್.ಜಿ.ಅನುಪಮಾ ಸೋತಿದ್ದಾರೆ. ಕಳೆದ ವರ್ಷ ರೇವಣ್ಣ ವಿರುದ್ಧ ಶ್ರೇಯಸ್ ಕೇವಲ 3,000 ಮತಗಳಿಂದ ಹಿಂದೆ ಬಿದ್ದಿದ್ದರು.
ಮಿತ್ರರ ಬದಲಾವಣೆ: 2019ರ ಬಳಿಕ ಹಾಸನದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿ (ಎಸ್) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಜ್ವಲ್, ಈ ಬಾರಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿ. ಪ್ರಜ್ವಲ್ ಅವರು ಮೋದಿ ಮತ್ತು ಅಜ್ಜನನ್ನು ಆಧರಿಸಿದ್ದರೆ, ಕಾಂಗ್ರೆಸ್ ತನ್ನ ಕಲ್ಯಾಣ ಕಾರ್ಯಕ್ರಮಗಳು, ವಿಶೇಷವಾಗಿ, ಗ್ಯಾರಂಟಿಗಳು ಹಾಗೂ ನಿರ್ಗಮಿತ ಸಂಸದರ ವಿರುದ್ಧ ಜನಾಭಿಪ್ರಾಯವನ್ನು ಆಧರಿಸಿದೆ.
ಒಳಹರಿವುಗಳು: ʻಈ ಚುನಾವಣೆ ಪ್ರಜ್ವಲ್‌ಗೆ ಕಠಿಣವಾಗಿರಲಿದೆ. ಅವರ ವಿರುದ್ಧ ಆಡಳಿತವಿರೋಧಿ ಅಲೆ ಇದೆ. ಸ್ಥಳೀಯ ಬಿಜೆಪಿ ಕಾರ್ಯಕರ್ತರು, ಪ್ರಮುಖವಾಗಿ ಮಾಜಿ ಶಾಸಕ ಪ್ರೀತಂ ಗೌಡ ಅವರನ್ನು ಕರೆದುಕೊಂಡು ಹೋಗುವಲ್ಲಿ ವಿಫಲವಾಗಿರುವುದು ಅವರಿಗೆ ದುಬಾರಿಯಾಗ ಬಹುದುʼ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಕಲಗೂಡಿನ ಜೆಡಿಎಸ್ ಹಿರಿಯ ಮುಖಂಡರೊಬ್ಬರು ಎಚ್ಚರಿಸಿದ್ದಾರೆ.
ಬಹುಕಾಲದಿಂದ ದೇವೇಗೌಡರ ಕುಟುಂಬವನ್ನು ಬೆಂಬಲಿಸಿರುವ ಹಾಸನದ ಹಲವು ಮತದಾರರಿಗೆ ಬಿಜೆಪಿಯೊಂದಿಗೆ ಮೈತ್ರಿ ಸಂತಸ ತಂದಿಲ್ಲ.
ಬಲವಾದ ಬೆಂಬಲ: ʻಹಿಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ದೇವೇಗೌಡರನ್ನು ನಿಂದಿಸಿತ್ತು. ಈಗ ಜೆಡಿಎಸ್ ಜೊತೆ ಕೈ ಜೋಡಿಸಿದೆ. ಆದರೆ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಮತ ದೇವೇಗೌಡರಿಗೆ. ನಮಗೂ ಮೋದಿ ಅವರಿಗೆ ಮಾರುಹೋಗಿಲ್ಲ' ಎಂದು ಹಾಸನ ಜಿಲ್ಲೆಯ ದ್ಯಾಪಲಾಪುರದ ಚಿನ್ನಪ್ಪಗೌಡ ಹೇಳಿದರು. ವಯಸ್ಸನ್ನೂ ಲೆಕ್ಕಿಸದೆ ದೇವೇಗೌಡರು ಪ್ರಚಾರ ಮಾಡುತ್ತಿರುವ ರೀತಿ ಹಲವರಿಗೆ ಮೆಚ್ಚಿಗೆಯಾಗಿದೆ. ಹೊಳೆನರಸೀಪುರದ ಮತದಾರರು ಪುಟ್ಟಸ್ವಾಮಿಗೌಡರು ಸಂಸದರಾಗಿದ್ದ ಅವಧಿಯಲ್ಲಿ ನೀಡಿದ ಕೊಡುಗೆಯಿಂದಾಗಿ ಶ್ರೇಯಸ್ ಪಟೇಲ್ ಅವರ ಬಗ್ಗೆ ಅನುಕಂಪ ಹೊಂದಿದ್ದರೂ, ದೇವೇಗೌಡರ ಕಾರಣದಿಂದ ಪ್ರಜ್ವಲ್ ಅವರನ್ನು ಬೆಂಬಲಿಸುತ್ತಿದ್ದಾರೆ.
ಆಂತರಿಕ ಒತ್ತಡ: ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹಾಗೂ ತಳಮಟ್ಟದ ಕಾರ್ಯಕರ್ತರ ನಡುವೆ ಸಮನ್ವಯದ ಕೊರತೆಯಿದೆ. ಹಾಸನ ಟಿಕೆಟ್ ಆಕಾಂಕ್ಷಿ ಯಾಗಿದ್ದ ಬಿಜೆಪಿಯ ಪ್ರೀತಂ ಗೌಡ ಅವರು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ʻಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸದ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಹೇಳಲು ಸಾಧ್ಯವಿಲ್ಲʼ ಎಂದರು.
ಕೋಪವನ್ನು ತಣ್ಣಗಾಗಿಸಲು ಪ್ರಜ್ವಲ್ ಇತ್ತೀಚೆಗೆ ಆರ್‌ಎಸ್‌ಎಸ್ ಮತ್ತು ಅದರ ಕಾರ್ಯಕರ್ತರ ಬೇಷರತ್ ಕ್ಷಮೆಯಾಚಿಸಿ, ʻಸಮಾಜ ಮತ್ತು ರಾಷ್ಟ್ರಕ್ಕಾಗಿ ಕೆಲಸ ಮಾಡಲು ಬದ್ಧವಾಗಿದ್ದೇನೆʼ ಎಂದು ಹೇಳಿದರು.
ಮತದಾರರ ಕಡೆಗಣನೆ: ಕಳೆದ ಐದು ವರ್ಷಗಳಲ್ಲಿ ಪ್ರಜ್ವಲ್ ಮತದಾರರನ್ನು ಕಾಡಿದ ಕೆಲವು ಸಮಸ್ಯೆಗಳನ್ನು ಕಡೆಗಣಿಸಿದ್ದಾರೆ ಎಂದು ಆಲೂರಿನ ನಾರಾಯಣ ಗೌಡ ಅಭಿಪ್ರಾಯ ಪಡುತ್ತಾರೆ.ʻಆಲೂರು, ಸಕಲೇಶಪುರ ಮತ್ತು ಬೇಲೂರಿನಲ್ಲಿ ಮನುಷ್ಯ-ವನ್ಯಜೀವಿ ಸಂಘರ್ಷ ಸಮಸ್ಯೆ ಬಗೆಹರಿಸುವಲ್ಲಿ ಅವರು ವಿಫಲರಾಗಿದ್ದಾರೆ. ಅವರು ಜನರ ಕೈಗೆ ಸುಲಭವಾಗಿ ಸಿಗುತ್ತಿರಲಿಲ್ಲʼ. ಆದರೆ, ಅವರು ಶ್ರೇಯಸ್ ಪಟೇಲ್‌ಗಿಂತ ಮೇಲುಗೈ ಸಾಧಿಸಿದಂತೆ ಕಂಡುಬರುತ್ತಿದೆ. ಹಲವು ಒಕ್ಕಲಿಗರು ಜೆಡಿಎಸ್‌ಗೆ ಬೆಂಬಲ ನೀಡಿದ್ದರೂ, ಪಕ್ಷದಲ್ಲಿ ಒಂದು ಕುಟುಂಬ ಪ್ರಾಬಲ್ಯ ಸಾಧಿಸಿರುವುದು ಕೆಲವರಿಗೆ ಅಸಮಾಧಾನ ತಂದಿದೆ.
ಎರಡನೇ ಬಾರಿಗೆ ಆಯ್ಕೆಯಾಗುತ್ತೇನೆ ಎಂದು ಪ್ರಜ್ವಲ್ ʻಫೆಡರಲ್ʼಗೆ ಹೇಳಿದರು: ʻನನ್ನ ಕೆಲಸವೇ ಸಾಕ್ಷಿ. ಬಿಜೆಪಿ ಜೊತೆಗಿನ ಮೈತ್ರಿ ಹೆಚ್ಚುವರಿ ಕೊಡುಗೆʼ ಎಂದರು.
ಕಠಿಣ ಹೋರಾಟ: ಬಿಜೆಪಿ-ಜೆಡಿ(ಎಸ್) ಮೈತ್ರಿ ವಿರುದ್ಧ ಕಠಿಣ ಹೋರಾಟ ಎಂದು ಒಪ್ಪಿಕೊಂಡಿರುವ ಶ್ರೇಯಸ್, ʻ ಕಾಂಗ್ರೆಸ್ ಸರ್ಕಾರದ ಖಾತರಿ ಯೋಜನೆಗಳನ್ನು ಮತ್ತು ಜನರ ಬೆಂಬಲದಲ್ಲಿ ಸಂಪೂರ್ಣ ನಂಬಿಕೆ ಇದೆʼ ಎಂದು ಹೇಳುತ್ತಾರೆ.
ಒಂದು ಕಾಲದಲ್ಲಿ ಜೆಡಿಎಸ್ ಪರ ಸಹಾನುಭೂತಿ ಹೊಂದಿದ್ದ ಅರಸೀಕೆರೆಯ ಶಿವನಂಜಪ್ಪ, ಮಹಿಳೆಯರ ಭಾವನೆಗಳು ಮತ್ತು ಗ್ಯಾರಂಟಿ ಗಳು ಕಾಂಗ್ರೆಸ್ ಪರ ಕೆಲಸ ಮಾಡುತ್ತವೆಯೇ ಅಥವಾ ಮೋದಿಯವರ ಹಿಂದುತ್ವ ಮತ್ತು ರಾಷ್ಟ್ರೀಯತೆ ಗೆಲ್ಲುತ್ತದೆಯೇ ಎಂದು ನೋಡಬೇಕಿದೆʼ ಎನ್ನುತ್ತಾರೆ.