ಚುನಾವಣೆ 2024: ಪಶ್ಚಿಮ ಬಂಗಾಳದಲ್ಲಿ ಎಡರಂಗದ ಪುನಶ್ಚೇತನ

ಯುವಜನರ ಸೇರ್ಪಡೆಯಿಂದ ಎಡರಂಗ ಆಕ್ರಮಣಕಾರಿ ಪ್ರವೃತ್ತಿ ಬೆಳೆಸಿಕೊಂಡು, ಚಲನಶೀಲವಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು, ಹೆಚ್ಚು ಜನರನ್ನು ತಲುಪಲಾಗುತ್ತಿದೆ.

Update: 2024-05-15 11:46 GMT

ಮೇ 7 ರಂದು ನಡೆದ ಮೂರನೇ ಹಂತದ ಮತದಾನದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಅವರು ತೃಣಮೂಲ ಕಾಂಗ್ರೆಸ್ಸಿನ ʻನಕಲಿ ಏಜೆಂಟʼ ನನ್ನು ಮುರ್ಷಿದಾಬಾದ್‌ನ ಮತಗಟ್ಟೆಯಿಂದ ಹೊರಗೆಳೆದಿರುವುದು ಬಂಗಾಳದಲ್ಲಿ ಚುನಾವಣೆಯ ತೀವ್ರತೆಯನ್ನು ಸೂಚಿಸುತ್ತದೆ. ರಾಜ್ಯದಲ್ಲಿ ಎಡ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದು, ಪಕ್ಷದ ಮುಖ್ಯಸ್ಥರೇ ಹೋರಾಟ ಮುಂಚೂಣಿಯಲ್ಲಿ ಇದ್ದಾರೆ.

ಸಲೀಂ(69) ಅವರ ಆತ್ಮವಿಶ್ವಾಸದ ಮೂಲವು ಒಂಬತ್ತು ಪಕ್ಷಗಳ ಒಕ್ಕೂಟದಲ್ಲಿನ ಹೊಸ ಆತ್ಮವಿಶ್ವಾಸದಲ್ಲಿದೆ ಎಂದು ರಾಜಕೀಯ ವ್ಯಾಖ್ಯಾನಕಾರ ಮತ್ತು ಲೇಖಕ ಎಂ.ಡಿ. ಸಾದುದ್ದೀನ್ ಅರ್ಜೂ ಹೇಳುತ್ತಾರೆ. ಇಂಥ ಆತ್ಮವಿಶ್ವಾಸವು ಎಡರಂಗದಲ್ಲಿ ಬಹಳ ಹಿಂದೆಯೇ ಕಾಣೆಯಾಗಿತ್ತು. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ನ್ನು ಪದಚ್ಯುತಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ ಮಿತ್ರಪಕ್ಷವಾಗಬಹುದೆಂಬ ಗ್ರಹಿಕೆ ವಿಶೇಷವಾಗಿ ಪಕ್ಷದ ಕೆಳ ಹಂತಗಳಲ್ಲಿ ಬೇರೂರಿತ್ತು. 

ಸವೆದುಹೋದ ನೆಲೆ: ತನ್ನ ಬೆಂಬಲದ ಆಧಾರಮೂಲಗಳು ಬಿಜೆಪಿಗೆ ಬದಲಾದಾಗಲೂ, ಪಕ್ಷದ ನಾಯಕತ್ವ ಕಣ್ಣುಮುಚ್ಚಿ ಕುಳಿತಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 42 ಸಂಸದೀಯ ಸ್ಥಾನಗಳಲ್ಲಿ 18 ರಲ್ಲಿ ಗೆಲುವು ಸಾಧಿಸಿ, ಶೇ.22.76 ರಷ್ಟು ಮತ ಗಳಿಸಲು ಎಡರಂಗ ನೆರವಾಯಿತು. ಇದರಿಂದ ಎಡರಂಗ ತನ್ನ ಶೇ.16 ಕ್ಕಿಂತ ಹೆಚ್ಚು ಮತಗಳನ್ನು ಕಳೆದುಕೊಂಡಿತು.

ಎರಡು ವರ್ಷಗಳ ನಂತರ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮಯದಲ್ಲಿ ಎಡಪಕ್ಷಗಳು ಇನ್ನೂ ಆಘಾತದಿಂದ ಹೊರಬಂದಿರಲಿಲ್ಲ. ಬಿಜೆಪಿ ಉದಯದ ನಂತರ ಬಂಗಾಳ ರಾಜಕೀಯದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ಧ್ರುವೀಕರಣವನ್ನು ಪ್ರಶ್ನಿಸಲು ಬಲ ಎಡಪಕ್ಷಗಳಿಗೆ ಇರಲಿಲ್ಲ.

2021 ರ ವಿಧಾನಸಭೆ ಕದನಕ್ಕೆ ಮುನ್ನ ರಾಜ್ಯದಲ್ಲಿ ಕ್ಷೀಣಿಸಿರುವ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡರೂ, ಅದೊಂದು ಅರೆ ಮನಸ್ಸಿನ ಪ್ರಯತ್ನವಾಗಿತ್ತು. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ, ಎರಡೂ ಪಕ್ಷಗಳು ಒಂದೇ ಒಂದು ಸ್ಥಾನ ಪಡೆಯಲು ವಿಫಲವಾದವು.

ಎಡ ಪಕ್ಷಗಳ ಪುನಶ್ಚೇತನ: ಕಳೆದುಕೊಳ್ಳುವುದು ಏನೂ ಇಲ್ಲ ಎಂದಾದಾಗ, ತಿರುಗಿ ಹೋರಾಡುವುದು ಉಳಿದ ಆಯ್ಕೆಯಾಗಿರುತ್ತದೆ. ಸಿಪಿಐ (ಎಂ) ನೇತೃತ್ವದ ಎಡರಂಗ ಈ ಬಾರಿ ಮಾಡುತ್ತಿರುವುದು ಅದನ್ನೇ.

ʻಇದು ಹೋರಾಟವನ್ನು ಶತ್ರು ಶಿಬಿರಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನʼ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಅಮಲ್ ಸರ್ಕಾರ್. ʻಉದ್ದೇಶ ಸ್ಪಷ್ಟವಾಗಿರುವುದು ಗೋಚರಿಸುತ್ತದೆ. ಪಕ್ಷದ ಸಾಂಪ್ರದಾಯಿಕ ನಿಲುವಿಗೆ ವಿರುದ್ಧವಾಗಿ ಅನುಭವಿಗಳ ಬದಲು ಯುವಜನರ ಮೇಲೆ ವಿಶ್ವಾಸ ಇಟ್ಟಿರುವುದು ಇದಕ್ಕೆ ಉದಾಹರಣೆʼ ಎನ್ನುತ್ತಾರೆ.

ರಾಜ್ಯದಲ್ಲಿ ಇಂಡಿಯ ಒಕ್ಕೂಟದ ಭಾಗವಾದ ಎಡರಂಗ ಕಣಕ್ಕಿಳಿದ 30 ಅಭ್ಯರ್ಥಿಗಳಲ್ಲಿ ಸಲೀಂ ಸೇರಿದಂತೆ ಕೇವಲ ನಾಲ್ವರು ಮಾತ್ರ 60 ವರ್ಷ ದಾಟಿದವರು. ಎಂಟು ಮಂದಿ 30ರ ಹರೆಯದವರು.

ಈ ಯುವ ಬ್ರಿಗೇಡ್ ಪಕ್ಷಕ್ಕೆ ಹೊಸ ಚೈತನ್ಯ ತುಂಬಿರುವುದಲ್ಲದೆ, ಮತದಾರರೊಂದಿಗೆ ತ್ವರಿತ ಸಂಪರ್ಕ ಸ್ಥಾಪಿಸಲು ಕೃತಕ ಬುದ್ಧಿಮತ್ತೆ (ಎಐ) ಬಳಕೆಯಂತಹ ಹೊಸ ಆಲೋಚನೆಗಳನ್ನು ಪರಿಚಯಿಸಿದೆ. ಸಿಪಿಐ(ಎಂ) ತನ್ನ ಚುನಾವಣೆ ಸಿದ್ಧತೆಯನ್ನು ರಾಜ್ಯದ ಎರಡು ಪ್ರಮುಖ ಪಕ್ಷಗಳಾದ ಟಿಎಂಸಿ ಮತ್ತು ಬಿಜೆಪಿಗಿಂತ ಬಹಳ ಮೊದಲೇ ಆರಂಭಿಸಿತು.

ಪಾದಯಾತ್ರೆ ಮತ್ತು ಸಭೆ: ಪಕ್ಷದ ಭಾಗವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ), ರಾಜ್ಯ ಕಾರ್ಯದ ರ್ಶಿ ಮೀನಾಕ್ಷಿ ಮುಖರ್ಜಿ ಅವರ ನೇತೃತ್ವದಲ್ಲಿ 50 ದಿನಗಳ 'ಇನ್ಸಾಫ್ ಯಾತ್ರೆ' ಆರಂಭಿಸಿತು. ಜನವರಿಯಲ್ಲಿ ಕೋಲ್ಕತ್ತಾದ ಬ್ರಿಗೇಡ್ ಮೈದಾನದಲ್ಲಿ ಬೃಹತ್ ಸಭೆಯೊಂದಿಗೆ ಮುಕ್ತಾಯಗೊಂಡ ಯಾತ್ರೆ, ʻಭ್ರಷ್ಟ ಟಿಎಂಸಿʼ ಮತ್ತು ʻಕೋಮುವಾದಿ ಬಿಜೆಪಿʼ ವಿರುದ್ಧದ ಹೋರಾಟಕ್ಕೆ ಧ್ವನಿ ನೀಡಿತು.

ಮೆರವಣಿಗೆಗೆ ಗ್ರಾಮೀಣ ಬಂಗಾಳದಲ್ಲಿ ಸಿಕ್ಕ ಪ್ರತಿಕ್ರಿಯೆಯಿಂದ ಪಕ್ಷ ಮತ್ತೆ ರಾಜಕೀಯ ಪರಿಗಣನೆಗೆ ಬಂದಿತು. ಅದರ ಮೆರವಣಿಗೆಗಳು, ರೋಡ್‌ಶೋಗಳು ಮತ್ತು ಬೀದಿ ಬದಿಯ ಸಭೆಗಳು ಜನರನ್ನು ಸೆಳೆಯಲಾರಂಭಿಸಿದವು. ಅದಕ್ಕಿಂತ ಮುಖ್ಯವಾಗಿ, ವಿರೋಧಿಗಳು ಗಮನಿಸಲು ಆರಂಭಿಸಿದರು.

ಹಿಂದಿನ ಚುನಾವಣೆಗಳಲ್ಲಿ ಪಕ್ಷವನ್ನು ಬಹುತೇಕ ಕಡೆಗಣಿಸಿದ್ದ ಟಿಎಂಸಿ ಮತ್ತು ಬಿಜೆಪಿಯ ಸ್ಟಾರ್ ಪ್ರಚಾರಕರು, ಪಕ್ಷದ ಪ್ರಸ್ತುತತೆಯನ್ನು ಪದೇಪದೇ ಪ್ರಶ್ನಿಸಿದ್ದಾರೆ.

ʻಎಡ ಪಕ್ಷಗಳು, ವಿಶೇಷವಾಗಿ ಸಿಪಿಐ (ಎಂ), 2021 ರ ವಿಧಾನಸಭೆ ಚುನಾವಣೆ ನಂತರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ನಾವು ಯುವ ಜನರತ್ತ ಗಮನ ತಿರುಗಿಸಿದ್ದೇವೆ. ಪಕ್ಷದ ಪುನಶ್ಚೇತನ ಯುವಕರಿಂದ ಪ್ರೇರೇಪಿತವಾಗಿದೆ. ತರಬೇತಿ ಮತ್ತು ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಒತ್ತು ನೀಡಿದೆವು. ಈ ಹಿಂದೆ ಕಾರ್ಯಕರ್ತರು ಪಕ್ಷದಲ್ಲಿ ಉಳಿದುಕೊಳ್ಳುತ್ತಿರಲಿಲ್ಲ. ಏಕೆಂದರೆ, ನಾವು ಯುವ ಕಾರ್ಯಕರ್ತರ ಜೀವನೋಪಾಯಕ್ಕೆ ನೆರವಾಗುತ್ತಿರಲಿಲ್ಲ,ʼ ಎಂದು ಸಲೀಂ ದ ಫೆಡರಲ್‌ ಗೆ ತಿಳಿಸಿದರು.

ʻಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಪಕ್ಷದ ಸ್ವಯಂಸೇವಕರು ನೀಡಿದ ನಿಸ್ವಾರ್ಥ ಸೇವೆಯಿಂದ ಎಡರಂಗವಿಲ್ಲದೆ ಬಂಗಾಳದ ಪುನರುತ್ಥಾನ ಸಾಧ್ಯವಿಲ್ಲ ಎಂಬ ನಂಬಿಕೆ ಜನಸಾಮಾನ್ಯರಲ್ಲಿ ಬರಲು ಕಾರಣವಾಯಿತು. ಈ ಬಾರಿ ಮತದಾರರು ಟಿಎಂಸಿ-ಬಿಜೆಪಿ ಎಂಬ ಬೈನರಿಯನ್ನು ಮೀರಿ ಹೋಗಿದ್ದಾರೆ. ಏಕೆಂದರೆ, ಉತ್ತಮ ಪರ್ಯಾಯವಿದೆ ಎಂಬುದು ಅವರಿಗೆ ಗೊತ್ತಾಗಿದೆ,ʼ ಎಂದು ಸಲೀಂ ಹೇಳಿದರು.

ʻ ಕಾಂಗ್ರೆಸ್ ಮತ್ತು ಎಡ ಮೈತ್ರಿಗೆ ತಳಮಟ್ಟದಲ್ಲಿ ಬೆಂಬಲ ಸಿಗುತ್ತಿದೆ. ಕಾಂಗ್ರೆಸ್ ಮತಗಳು ತನ್ನ ಬುಟ್ಟಿಗೆ ವರ್ಗಾವಣೆಯಾಗಲಿದೆ ಎಂದು ಎಡ ಪಕ್ಷಗಳು ಆಶಾವಾದ ಹೊಂದಿವೆʼ ಎಂದರು.

ಎಡ ಪಕ್ಷಗಳು 30 ಮತ್ತು ಕಾಂಗ್ರೆಸ್ 12 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಸಿಪಿಐ(ಎಂ) 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಸುಲಭದ ಕೆಲಸವಲ್ಲ: ʻಈ ಬಾರಿ ಮೈತ್ರಿಯನ್ನು ತಳ ಮಟ್ಟದಿಂದ ಕಟ್ಟಲಾಗಿದೆ. ನೆಲ ಮಟ್ಟದ ಜನರು ಮೈತ್ರಿಯ ಅತ್ಯಂತ ಶಕ್ತಿಯುತ ಬೆಂಬಲಿಗರಾಗಿದ್ದಾರೆ,ʼ ಎಂದು ಸಲೀಂ ಹೇಳಿದರು. ʻಆದರೆ, ಪುನಶ್ಚೇತನವು ಪತನದಷ್ಟು ತೀವ್ರ ಮತ್ತು ತ್ವರಿತವಾಗಿ ಆಗದೆ ಇರಬಹುದುʼ ಎಂದು ಸರ್ಕಾರ್ ಎಚ್ಚರಿಸುತ್ತಾರೆ. 15 ವರ್ಷಗಳಲ್ಲಿ ವಿಧಾನಸಭೆಯಲ್ಲಿ ಎಡ ಪಕ್ಷಗಳ ಶಾಸಕರ ಸಂಖ್ಯೆ 235 ರಿಂದ (2006 ರಲ್ಲಿ) ಶೂನ್ಯಕ್ಕೆ (2021 ರಲ್ಲಿ) ಇಳಿದಿದೆ. ರಾಜ್ಯ ವಿಧಾನಸಭೆ ಬಲ 294. ಎಡ-ಕಾಂಗ್ರೆಸ್ ಮೈತ್ರಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗದೆ ಇರಬಹುದು. ಆದರೆ, ಸುಮಾರು 20 ಕ್ಷೇತ್ರಗಳಲ್ಲಿ ಸ್ಪರ್ಧೆಯನ್ನು ತ್ರಿಕೋನ ಹೋರಾಟವಾಗಿ ಪರಿವರ್ತಿಸಿದೆ ಎಂದು ಹೇಳಿದರು. 

2021ರಲ್ಲಿ ಎಡರಂಗದ ಮತಗಳ ಪ್ರಮಾಣ ಶೇ.4.73 ಮತ್ತು ಕಾಂಗ್ರೆಸ್‌ನ ಮತಗಳ ಪ್ರಮಾಣ ಶೇ.2.93ಕ್ಕೆ ಕುಸಿದಿದೆ. 

ಚಿಮ್ಮುಹಲಗೆ: ಈ ಚುನಾವಣೆಯಲ್ಲಿ ಗಮನಾರ್ಹ ಸಂಖ್ಯೆಯ ಸೀಟುಗಳನ್ನು ಗೆಲ್ಲುವುದು ಕಷ್ಟದ ಕೆಲಸ. ಆದರೆ, ಎರಡು ವರ್ಷಗಳ ನಂತರ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಂಘಟನೆಯನ್ನು ಚಿಮ್ಮುಹಲಗೆಯಂತೆ ಬಳಸಿಕೊಂಡು, ಗೌರವಾನ್ವಿತ ಮಟ್ಟಕ್ಕೆ ಹೆಚ್ಚಿಸುವುದರ ಮೇಲೆ ಗಮನ ಹರಿಸಬಹುದು.

Tags:    

Similar News