ಉಚಿತ ಬಸ್‌, ಫ್ರೀ ಕರೆಂಟ್‌, ಜಾತಿ ಗಣತಿ: ಮಹಾ ಚುನಾವಣೆಗೆ ʼಕರ್ನಾಟಕʼ ಮಾದರಿ

ಮಹಾರಾಷ್ಟ್ರದ ಅಭಿವೃದ್ಧಿಯು ಐದು ಸ್ತಂಭಗಳಾದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಮತ್ತು ಉದ್ಯೋಗ, ನಗರಾಭಿವೃದ್ಧಿ, ಪರಿಸರ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಒತ್ತು ನೀಡಲಾಗಿದೆ.

Update: 2024-11-10 12:22 GMT
ಮಹಾವಿಕಾಸ್‌ ಅಘಾಡಿಯ ಪ್ರಣಾಳಿಕೆಯನ್ನುಬಿಡುಗಡೆ ಮಾಡಲಾಯಿತು.

ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ (ನವೆಂಬರ್ 10) ಬಿಡುಗಡೆ ಮಾಡಿದರು. ಮುಖ್ಯವಾಗಿ ಮಹಿಳೆಯರು, ಯುವಕರು ಮತ್ತು ರೈತರನ್ನು ಸೆಳೆಯಬಲ್ಲ ಯೋಜನೆಗಳು ಮತ್ತು ಕಲ್ಯಾಣ ಯೋಜನೆಗಳ ಭರವಸೆಯನ್ನು ನೀಡಲಾಗಿದೆ. ಕರ್ನಾಟಕದ ರೀತಿಯಲ್ಲೇ ಮಹಿಳೆಯರಿಗೆ ಫ್ರೀ ಬಸ್‌, ಉಚಿತ ಕರೆಂಟ್‌, ಉದ್ಯೋಗ ಮತ್ತು ಜಾತಿ ಗಣತಿಯ ಭರವಸೆ ನೀಡಲಾಗಿದೆ. 

ʼಮಹಾರಾಷ್ಟ್ರನಾಮʼ ಎಂಬ ಶೀರ್ಷಿಕೆಯಡಿ ಪ್ರಣಾಳಿಕೆಯನ್ನು ಮೈತ್ರಿ ಪಕ್ಷಗಳ ಉನ್ನತ ನಾಯಕರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಎಂವಿಎ ರಾಜ್ಯಕ್ಕಾಗಿ ಕೆಲಸ ಮಾಡುವ ಐದು ಪ್ರಮುಖ ಕ್ಷೇತ್ರಗಳನ್ನು ಖರ್ಗೆ ಬೊಟ್ಟು ಮಾಡಿದರು. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಕೈಗಾರಿಕೆ ಮತ್ತು ಉದ್ಯೋಗ, ನಗರಾಭಿವೃದ್ಧಿ, ಪರಿಸರ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಪೂರಕವಾಗಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. 

ಮಹಿಳಾ ಸಬಲೀಕರಣ

ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ಚುನಾವಣೆಗೆ ಮುಂಚಿತವಾಗಿ ʼಲಡ್ಕಿ ಬಹಿನ್ʼ ಯೋಜನೆ ಘೋಷಿಸಿದೆ. ಹೀಗಾಗಿ ಎಂವಿಎ ಮಹಿಳೆಯರಿಗೆ ಸರಣಿ ಭರವಸೆಗಳನ್ನು ನೀಡಿದ್ದು ಮಹಿಳೆಯರ ಮತಗಳತ್ತ ಕಣ್ಣು ಹಾಯಿಸಿದೆ.

ಮಹಾಲಕ್ಷ್ಮಿ ಯೋಜನೆಯ ಭಾಗವಾಗಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಮಾಸಿಕ 3,000 ರೂ.ಗಳ ಸಹಾಯಧನ ಘೋಷಿಸಿದೆ. ಮಹಾರಾಷ್ಟ್ರದಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಸೇವೆ ಪರಿಚಯಿಸುವುದಾಗಿ ಅದು ಭರವಸೆ ನೀಡಿದೆ. ಪ್ರತಿ ವರ್ಷ ಮಹಿಳೆಯರಿಗೆ ತಲಾ 500 ರೂ.ಗಳಂತೆ ಆರು ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡುವ ಭರವಸೆ ಕೊಟ್ಟಿದೆ.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ 'ನಿರ್ಭಯ್ ಮಹಾರಾಷ್ಟ್ರ' ನೀತಿ ರೂಪಿಸುವುದಾಗಿ ಮತ್ತು ಮಹಾರಾಷ್ಟ್ರ ಶಕ್ತಿ ಕ್ರಿಮಿನಲ್ ಕಾನೂನು, 2020 ಜಾರಿಗೆ ತರುವುದಾಗಿ ಮೈತ್ರಿಕೂಟ ಭರವಸೆ ನೀಡಿದೆ.

9 ರಿಂದ 16 ವರ್ಷದ ಬಾಲಕಿಯರಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಲಸಿಕೆಯ ಭರವಸೆ ನೀಡುವುದರ ಜೊತೆಗೆ 18 ವರ್ಷ ತುಂಬಿದ ಬಾಲಕಿಯರಿಗೆ ತಲಾ 1 ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಲಾಗಿದೆ. ಮುಟ್ಟಿನ ಸಮಯದಲ್ಲಿ ಮಹಿಳಾ ಉದ್ಯೋಗಿಗಳಿಗೆ ಎರಡು ಆಯ್ಕೆಯ ರಜೆಗಳನ್ನು ನೀಡುವ ಬಗ್ಗೆಯೂ ಪ್ರಣಾಳಿಕೆಯಲ್ಲಿ ಉಲ್ಲೇಖವಿದೆ.

ಯುವಕರಿಗೆ ಉದ್ಯೋಗಾವಕಾಶಗಳು

ಯುವ ಮತದಾರರನ್ನು ಸೆಳೆಯುವ ಉದ್ದೇಶದಿಂದ, ಸರ್ಕಾರ ರಚನೆಯಾದ 100 ದಿನಗಳಲ್ಲಿ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳಿಗೆ ನೇಮಕ ಮಾಡುವುದಾಗಿ ಎಂವಿಎ ಭರವಸೆ ನೀಡಿದೆ. ಐದು ವರ್ಷಗಳಲ್ಲಿ ರಾಜ್ಯದಲ್ಲಿ 1.25 ಮಿಲಿಯನ್ ಉದ್ಯೋಗಾವಕಾಶ ಸೃಷ್ಟಿಸುವುದಾಗಿ ಅದು ಭರವಸೆ ನೀಡಿದೆ.

ನಿರುದ್ಯೋಗಿಗಳಿಗೆ 4,000 ರೂಪಾಯಿ ಸ್ಟೈಫಂಡ್ ಮತ್ತು ಯುವ ಕಲ್ಯಾಣಕ್ಕಾಗಿ ಯುವ ಆಯೋಗ ಸ್ಥಾಪಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಈ ಸ್ಟೈಫಂಡ್ ಉದ್ಯೋಗ ಅರಸುತ್ತಿರುವ ಯುವಕರ ನೆರವಿಗೆ ಬರಲಿದೆ. ಅವರು ವೃತ್ತಿಜೀವನದ ಅವಕಾಶಗಳನ್ನು ಅನುಸರಿಸುತ್ತಾ ಆರ್ಥಿಕ ನೆರವು ಪಡೆಯಲಿದ್ದಾರೆ.

ಮಹಾರಾಷ್ಟ್ರದಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ಮುಂದೂಡಲಾಗುತ್ತಿರುವ ವಿವಾದವನ್ನು ಗಮನದಲ್ಲಿಟ್ಟುಕೊಂಡು, ಆ ಪರೀಕ್ಷೆಯನ್ನು ನಡೆಸುವ ಭರವಸೆಯನ್ನು ಕಾಂಗ್ರೆಸ್‌ ನೀಡಿದೆ. ಪರೀಕ್ಷೆಯ ನಂತರ 45 ದಿನಗಳಲ್ಲಿ ಫಲಿತಾಂಶಗಳನ್ನು ಘೋಷಿಸಲು ಬದ್ಧ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಎಲ್ಲರಿಗೂ ಆರೋಗ್ಯ ವಿಮೆ

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ರೀತಿಯಲ್ಲಿಯೇ ಎಂವಿಎ 25 ಲಕ್ಷ ರೂ.ಗಳ ಆರೋಗ್ಯ ವಿಮಾ ಯೋಜನೆ ಪರಿಚಯಿಸುವ ಭರವಸೆ ನೀಡಿದೆ. ಈ ಯೋಜನೆಯು ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ. ಈ ಯೋಜನೆಯಡಿ ಉಚಿತ ಔಷಧಗಳನ್ನು ಸಹ ನೀಡಲಾಗುವುದು.

ಕೃಷಿ ಬಿಕ್ಕಟ್ಟು ಪರಿಹರಿಸುವುದು

ರಾಜ್ಯದ ರೈತರಿಗೆ, 3 ಲಕ್ಷ ರೂ.ವರೆಗಿನ ಸಾಲ ಮನ್ನಾ ಮತ್ತು ನಿಯಮಿತ ಸಾಲ ಮರುಪಾವತಿಗೆ 50,000 ರೂ.ಗಳ ಪ್ರೋತ್ಸಾಹ ಧನ ಕೊಡುವುದಾಗಿ ಹೇಳಿದೆ. ಅಲ್ಲದೆ, ಕೃಷಿಕರ ಆತ್ಮಹತ್ಯೆಯಿಂದ ತೊಂದರೆಗೆ ಒಳಗಾಗುವ ಕುಟುಂಬಗಳ ವಿಧವೆಯರು ಮತ್ತು ಮಕ್ಕಳಿಗೆ ಸಹಾಯ ಮಾಡುವ ಭರವಸೆ ನೀಡಿದೆ. ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಉನ್ನತ ಮಟ್ಟದ ಸಮಿತಿ ಸ್ಥಾಪಿಸಲಾಗುವುದು ಎಂದು ಎಂವಿಎ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಬೆಳೆ ವಿಮೆ ಯೋಜನೆಯನ್ನು ಹೆಚ್ಚು ಲಭ್ಯವಾಗುವಂತೆ ಸರಳೀಕರಿಸುವದಾಗಿಯೂ ಹೇಳಿದೆ.

ಜಾತಿ ಗಣತಿ, ಮೀಸಲಾತಿ ಸುಧಾರಣೆ

ಸಾಮಾಜಿಕ ನ್ಯಾಯದ ಸಮಸ್ಯೆ ಪರಿಹರಿಸಲು ಜಾತಿ ಜನಗಣತಿ ನಡೆಸುವುದು ಅತ್ಯಗತ್ಯ ಎಂದು ಎಂವಿಎ ಪ್ರಣಾಳಿಕೆಯಲ್ಲಿನ ಪುನರುಚ್ಚರಿಸಿದೆ. ಯಾಕೆಂದರೆ ಕಾಂಗ್ರೆಸ್‌ ದೇಶಾದ್ಯಂತ ಜಾತಿ ಗಣತಿ ನಡೆಸುವುದಕ್ಕೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದೆ. ಮೀಸಲಾತಿಯ ಮೇಲಿನ 50% ಮಿತಿ ತೆಗೆದುಹಾಕುವುದಾಗಿ ಮೈತ್ರಿಕೂಟವು ಪ್ರತಿಜ್ಞೆ ಮಾಡಿದೆ. ಆರ್ಥಿಕ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಹೆಚ್ಚಿನ ಅವಕಾಶದ ಭರವಸೆ ಕೊಟ್ಟಿದೆ.

ಹೊಸ ಕೈಗಾರಿಕಾ ನೀತಿ

ಮೈತ್ರಿಕೂಟವು ಹೊಸ ಕೈಗಾರಿಕಾ ನೀತಿ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಮೀಸಲಾದ ಸಚಿವಾಲಯದ ಭರವಸೆ ನೀಡಿದೆ. ಸಂಘಟಿತ ಮತ್ತು ಅಸಂಘಟಿತ ನೈರ್ಮಲ್ಯ ಕಾರ್ಮಿಕರಿಗೆ ಕಲ್ಯಾಣ ನಿಗಮವು ಎಂವಿಎ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಒಂದಾಗಿದೆ.

300 ಯೂನಿಟ್ ವರೆಗಿನ ವಿದ್ಯುತ್ ಬಿಲ್ ಗಳನ್ನು ಬಳಸುವ ಗ್ರಾಹಕರಿಗೆ ಮಾಸಿಕ 100 ಯೂನಿಟ್ ವರೆಗೆ ವಿದ್ಯುತ್ ಬಿಲ್ ಮನ್ನಾ ಮತ್ತು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಪುನಃಸ್ಥಾಪಿಸಲಾಗುವುದಾಗಿ ಎಂದು ಎಂವಿಎ ಭರವಸೆ ನೀಡಿದೆ. ಸ್ವಸಹಾಯ ಗುಂಪುಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ಇಲಾಖೆ ಸ್ಥಾಪಿಸುವುದು, ಮಕ್ಕಳ ಕಲ್ಯಾಣಕ್ಕಾಗಿ ಮೀಸಲಾದ ಸಚಿವಾಲಯವನ್ನು ರಚಿಸುವುದು ಪ್ರಣಾಳಿಕೆಯಲ್ಲಿನ ಭರವಸೆಯಾಗಿದೆ.

ಹಣದ ಕೊರತೆ ಇಲ್ಲ

ಕರ್ನಾಟಕದಲ್ಲಿ ಖಾತರಿಗಳ ಅನುಷ್ಠಾನಕ್ಕಾಗಿ 52,000 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಬಜೆಟ್ ಮತ್ತು ವೆಚ್ಚದ ವಿವರಗಳು ಲಭ್ಯವಿದೆ ಎಂದು ಅವರು ಹೇಳಿ ಖರ್ಗೆ ಹೇಳಿದ್ದಾರೆ.

ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಮಾತನಾಡಿ, ಮೂಲಸೌಕರ್ಯ ಯೋಜನೆಗಳಿಗೆ ವೆಚ್ಚದ ಹೆಚ್ಚಳ ಮತ್ತು ಭ್ರಷ್ಟಾಚಾರ ನಿಲ್ಲಿಸಿದರೆ ಸಾಕಷ್ಟು ಹಣ ಲಭ್ಯವಿರುತ್ತದೆ ಎಂದು ಹೇಳಿದರು.

Tags:    

Similar News