ಆಪ್ ತೊರೆದ ಮರುದಿನವೇ ಬಿಜೆಪಿ ಸೇರಿದ ಕೈಲಾಶ್ ಗೆಹ್ಲೋಟ್
ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಮತ್ತು ಹರ್ಷ್ ಮಲ್ಹೋತ್ರಾ, ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ್ ಮತ್ತು ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನಿಲ್ ಬಲೂನಿ ಸೇರಿದಂತೆ ಬಿಜೆಪಿ ನಾಯಕರು ಕೈಲಾಶ್ ಬರಮಾಡಿಕೊಂಡರು.;
ದೆಹಲಿಯ ಮಾಜಿ ಸಚಿವ ಹಾಗೂ ಆಪ್‌ನ ಪ್ರಮುಖ ನಾಯಕ ಕೈಲಾಶ್ ಗೆಹ್ಲೋಟ್ ಸೋಮವಾರ (ನವೆಂಬರ್ 18) ಬಿಜೆಪಿಗೆ ಸೇರ್ಪಡೆಗೊಂಡಿದಾರೆ. ಭಾನುವಾರ ಅವರು ಏಕಾಏಕಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಜತೆಗೆ ಕ್ಯಾಬಿನೆಟ್ ಕೂಡ ತೊರೆದಿದ್ದರು.
ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಮತ್ತು ಹರ್ಷ್ ಮಲ್ಹೋತ್ರಾ, ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್ದೇವ್ ಮತ್ತು ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನಿಲ್ ಬಲೂನಿ ಸೇರಿದಂತೆ ಬಿಜೆಪಿ ನಾಯಕರು ಕೈಲಾಶ್ ಅವರನ್ನು ಬರಮಾಡಿಕೊಂಡರು.
ಗೆಹ್ಲೋಟ್ ಅವರ ಸೇರ್ಪಡೆಯನ್ನು ರಾಷ್ಟ್ರ ರಾಜಧಾನಿಯ ರಾಜಕೀಯದಲ್ಲಿ "ದೊಡ್ಡ ತಿರುವು" ಎಂದು ಖಟ್ಟರ್ ಬಣ್ಣಿಸಿದ್ದಾರೆ. ಎರಡು ಬಾರಿ ಶಾಸಕ ಮತ್ತು ವಕೀಲರಾಗಿರುವ ಗೆಹ್ಲೋಟ್ ಅವರು ಉತ್ತಮ ಕೆಲಸಗಳಿಗೆ ಹೆಸರುವಾಸಿಯಾದ ನಾಯಕ ಎಂದು ಸಚ್ದೇವ್ ಬಿಜೆಪಿ ಸೇರ್ಪಡೆ ಬಳಿಕ ಹೊಗಳಿದ್ದಾರೆ.
ಒತ್ತಡಕ್ಕೆ ಮಣಿದಿಲ್ಲ
ರಾಜಕೀಯ ನಿಷ್ಠೆ ಬದಲಾಯಿಸಿದ ಬಳಿಕ ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ, ಗೆಹ್ಲೋಟ್, "ಇದು ನನಗೆ ಸುಲಭದ ಹೆಜ್ಜೆಯಲ್ಲ. ನಾನು ಅಣ್ಣಾ ಹಜಾರೆ (ಎಎಪಿಯನ್ನು ಹುಟ್ಟುಹಾಕಿದ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ) ಕಾಲದಿಂದಲೂ ಎಎಪಿಯ ಭಾಗವಾಗಿದ್ದೆ ಮತ್ತು ದೆಹಲಿಗಾಗಿ ಕೆಲಸ ಮಾಡುತ್ತಿದ್ದೇನೆ. ಶಾಸಕನಾಗಿ, ಸಚಿನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.
"ಇದು ರಾತ್ರೋರಾತ್ರಿ ನಿರ್ಧಾರ ಎಂದು ಕೆಲವರು ಭಾವಿಸಬಹುದು. ಅದು ಅಲ್ಲದಿದ್ದೆರ ಒತ್ತಡದಿಂದಾಗಿ ಎಂದು ಹೇಳಬಹುದು. ಆದರೆ ಒತ್ತಡದಿಂದಾಗಿ ನಾನು ಎಂದಿಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಲು ಬಯಸುತ್ತೇನೆ" ಎಂದು ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು, ಅಲ್ಲದೆ, ತನಿಖಾ ಸಂಸ್ಥೆಗಳ ಭಯ ಅವರಿಗೆ ಇತ್ತು ಎಂಬುದನ್ನು ನಿರಾಕರಿಸಿದ್ದಾರೆ.
ಸಿಬಿಐ, ಇಡಿ ಒತ್ತಡದಿಂದಾಗಿ ನಾನು ಇದನ್ನು ಮಾಡಿದ್ದೇನೆ ಎಂಬ ನಿರೂಪಣೆ ಇದೆ. ನಾನು ಅವರಿಗೆ (ಅವರ ಟೀಕಾಕಾರರಿಗೆ) ಹೇಳಲು ಬಯಸುತ್ತೇನೆ . 2015ರಿಂದ ಎಎಪಿ ಸದಸ್ಯರಾಗಿ. ಶಾಸಕನಾಗಿ, ಸಚಿವನಾಗಿ ಒತ್ತಡದ ಕಾರಣಕ್ಕೆ ನಾನು ಏನನ್ನೂ ಮಾಡಿಲ್ಲ ಎಂದರು.
ಚುನಾವಣೆಗೂ ಮುನ್ನ ಬಿಜೆಪಿಗೆ ಉತ್ತೇಜನ
ಗೆಹ್ಲೋಟ್ ಅವರ ಸೇರ್ಪಡೆ ಎಎಪಿಯಿಂದ ಅಧಿಕಾರವನ್ನು ಕಸಿದುಕೊಳ್ಳಲು ನೋಡುತ್ತಿರುವ ಬಿಜೆಪಿಗೆ ದೊಡ್ಡ ಉತ್ತೇಜನ ನೀಡಲಿದೆ. ವಿಧಾನಸಭಾ ಚುನಾವಣೆಯಲ್ಲಿ ತನ್ನ ಅವಕಾಶ ಹೆಚ್ಚುತ್ತದೆ ಎಂದು ಬಿಜೆಪಿ ಭರವಸೆ ಹೊಂದಿದೆ.
ಗೆಹ್ಲೋಟ್ ಅವರ ಪಕ್ಷಾಂತರವು ವಿಧಾನಸಭಾ ಚುನಾವಣೆಗೆ ಮೂರು ತಿಂಗಳ ಮೊದಲು ನಡೆದಿದೆ.
ಮದ್ಯ ನೀತಿ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾಗ ಗೆಹ್ಲೋಟ್ ಅವರು ಕೇಜ್ರಿವಾಲ್ ಅವರ ಆಪ್ತರಲ್ಲಿ ಒಬ್ಬರು ಎನಿಸಿಕೊಂಡಿದ್ದರು.
ಮುಜುಗರ ಎಂದಿದ್ದ ಗೆಹ್ಲೋಟ್
ರಾಜಕೀಯ ಮಹತ್ವಾಕಾಂಕ್ಷೆಗಳು ಜನರ ಬಗ್ಗೆ ಪಕ್ಷದ ಬದ್ಧತೆಯನ್ನು ಮೀರಿಸಿದೆ ಎಂದು ಆರೋಪಿಸಿ ಗೆಹ್ಲೋಟ್ ಭಾನುವಾರ ಎಎಪಿಯನ್ನು ತೊರೆದಿದ್ದಾರೆ. ಜನರ ಹಕ್ಕುಗಳಿಗಾಗಿ ಹೋರಾಡುವ ಬದಲು, ನಾವು ನಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ಮಾತ್ರ ಹೋರಾಡುತ್ತಿದ್ದೇವೆ" ಎಂದು 50 ವರ್ಷದ ಕೈಲಾಶ್ ಹೇಳಿದ್ದಾರೆ.
ಎಎಪಿಯ ಪ್ರಮುಖ ನಾಯಕಾರಿಗಿದ್ದ ಗೆಹ್ಲೋಟ್ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. , 'ಶೀಶ್‌ಮಹಲ್' ನಂತಹ ಪ್ರಕರಣಗಳು ಮುಜುಗರ ತಂದಿದೆ ಎಂದಿದ್ದರು.