Lok Sabha Election 2024| ನಾಳೆ 6 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ
ಹರಿಯಾಣ, ಯುಪಿ, ದೆಹಲಿ, ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್ ಮತ್ತು ಜಮ್ಮು-ಕಾಶ್ಮೀರದ 58 ಸ್ಥಾನಗಳಿಗೆ ಮೇ 25 ರಂದು ಮತದಾನ ನಡೆಯಲಿದೆ. ಬಳಿಕ ಅಂತಿಮ ಹಂತದಲ್ಲಿ ಕೇವಲ ಶೇ.10 ಸೀಟುಗಳು ಮಾತ್ರ ಉಳಿಯುತ್ತವೆ.
ಶನಿವಾರ (ಮೇ 25)ರಂದು ನಡೆಯುವ ಲೋಕಸಭೆ ಚುನಾವಣೆಯ 6ನೇ ಹಂತದಲ್ಲಿ 43 ಸ್ಥಾನಗಳಿಗೆ ಮೇ 25ರಂದು ಮತಚಲಾವಣೆ ನಡೆಯಲಿದೆ.
ಮೊದಲ ಐದು ಹಂತಗಳಲ್ಲಿ ಶೇ. 79 ರಷ್ಟು ಮತದಾನ ಪೂರ್ಣಗೊಂಡಿದೆ. ಹರಿಯಾಣದ ಎಲ್ಲಾ 10 ಸ್ಥಾನ ಹಾಗೂ ದೆಹಲಿಯ ಎಲ್ಲಾ ಏಳು ಸ್ಥಾನಗಳಿಗೆ ಮತದಾನ ನಡೆಯಲಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಆರನೇ ಹಂತದ ಚುನಾವಣೆ ನಡೆಯಲಿದೆ. ಈ ರಾಜ್ಯಗಳಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ.
ಜಾರ್ಖಂಡ್ ಮತ್ತು ಒಡಿಶಾ ಮೂರನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಸಲಿವೆ. ಒಡಿಶಾದಲ್ಲಿ 147 ವಿಧಾನಸಭೆ ಸದಸ್ಯರನ್ನು ಆಯ್ಕೆ ಮಾಡಲು ಏಕ ಕಾಲದಲ್ಲಿ ಚುನಾವಣೆಗಳು ನಡೆಯುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
ಉತ್ತರ ಪ್ರದೇಶ: 80 ರಲ್ಲಿ 14 (ಸುಲ್ತಾನ್‌ಪುರ್, ಪ್ರತಾಪ್‌ಗಢ್, ಫುಲ್‌ಪುರ್, ಅಲಹಾಬಾದ್, ಅಂಬೇಡ್ಕರ್ ನಗರ, ಶ್ರಾವಸ್ತಿ, ಡೊಮರಿಯಾಗಂಜ್, ಬಸ್ತಿ, ಸಂತ ಕಬೀರ್ ನಗರ, ಲಾಲ್‌ಗಂಜ್, ಅಜಂಗಢ, ಜೌನ್‌ಪುರ್, ಮಚ್ಲಿಶಹರ್, ಭದೋಹಿ) ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ರಾಜ್ಯದ ಪೂರ್ವಾಂಚಲ ಪ್ರದೇಶದಲ್ಲಿ ಇಂಡಿಯ ಒಕ್ಕೂಟದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಉಳಿಸಿ ಘೋಷಣೆಗಳು ಹೆಚ್ಚಿನ ಅನುರಣನವನ್ನು ಕಂಡುಕೊಳ್ಳುತ್ತವೆ. 2019 ರ ಚುನಾವಣೆಯಲ್ಲಿ, ಅಖಿಲೇಶ್ ಯಾದವ್ ಅವರ ಎಸ್‌ಪಿ ಮತ್ತು ಮಾಯಾವತಿಯ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದವು. 14 ಸ್ಥಾನಗಳಲ್ಲಿ ಬಿಜೆಪಿ ಎಂಟು, ಮಿತ್ರ ಪಕ್ಷ ನಿಶಾದ್ ಪಕ್ಷ ಸಂತ ಕಬೀರ್ ನಗರದಿಂದ ಗೆದ್ದಿತ್ತು. ಈ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವಿನ ಅಂತರ ಕಡಿಮೆಯಿದೆ.
2019 ರಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಗೆದ್ದಿದ್ದ 15 ಸ್ಥಾನಗಳಲ್ಲಿ ಐದು( ಅಜಂಗಢ -ಎಸ್‌ಪಿ, ಅಂಬೇಡ್ಕರ್ ನಗರ, ಶ್ರಾವಸ್ತಿ, ಲಾಲ್‌ಗಂಜ್ ಮತ್ತು ಜೌನ್‌ಪುರ್ -ಬಿಎಸ್‌ಪಿ) ಇಲ್ಲಿದೆ. ಈ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಮಾಯಾವತಿ ಅವರು 2019ರಲ್ಲಿ ಗಳಿಸಿದ್ದ ದಲಿತ ಮತಗಳ ದೊಡ್ಡ ಭಾಗ ಎಸ್‌ಪಿಯತ್ತ ಸ್ಥಿರವಾಗಿ ಚಲಿಸುತ್ತಿದೆ ಎಂದು ಅನೇಕ ರಾಜಕೀಯ ವೀಕ್ಷಕರು ನಂಬಿದ್ದಾರೆ. 2022 ರ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಿದ್ದರೂ, ಎಸ್‌ಪಿ-ಕಾಂಗ್ರೆಸ್ ಹಿಂದುಳಿದ ವರ್ಗಗಳ ಜೊತೆಗೆ ಪರಿಶಿಷ್ಟ ಜಾತಿಯ ಮತದಾರರನ್ನು ಓಲೈಸಲು ಪ್ರಯತ್ನಿಸುತ್ತಿವೆ.
ಬಿಜೆಪಿಯು ಅನುಪ್ರಿಯಾ ಪಟೇಲ್ ಅವರ ಅಪ್ನಾ ದಳ (ಎಸ್), ಒ ಪಿ ರಾಜ್ಭರ್ ಅವರ ಎಸ್‌ಬಿಎಸ್‌ಪಿ ಮತ್ತು ಸಂಜಯ್ ನಿಶಾದ್ ಅವರ ನಿಶಾದ್ ಪಕ್ಷದೊಂದಿಗೆ ಸೀಟು ಹಂಚಿಕೊಂಡಿದೆ.
ಹರಿಯಾಣ: ಅಂಬಾಲಾ, ಕುರುಕ್ಷೇತ್ರ, ಸಿರ್ಸಾ, ಹಿಸಾರ್, ಕರ್ನಾಲ್, ಸೋನಿಪತ್, ರೋಹ್ಟಕ್, ಭಿವಾನಿ-ಮಹೇಂದ್ರಗಢ, ಗುರ್ಗಾಂವ್, ಫರಿದಾಬಾದ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. 2019 ರಲ್ಲಿ ಈ ಎಲ್ಲ ಕ್ಷೇತ್ರಗಳು ಎನ್‌ಡಿಎ ಪಾಲಾಗಿದ್ಧವು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ರಾಜ್ಯ ಸರ್ಕಾರವು ಈಗ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರ ಪ್ರತಿಭಟನೆ ಜನರ ಮನಸ್ಸಿನಲ್ಲಿ ಹಸಿರಾಗಿದೆ. ದುಶ್ಯಂತ್ ಚೌತಾಲಾ ನೇತೃತ್ವದ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಬಿಜೆಪಿಗೆ ಬೆಂಬಲ ಹಿಂತೆಗೆದುಕೊಂಡಿದೆ. 2014 ರಲ್ಲಿ ಬಿಜೆಪಿ ಏಳು ಸ್ಥಾನ ಗೆದ್ದಿತ್ತು.
ಪಶ್ಚಿಮ ಬಂಗಾಳ: 42 ರಲ್ಲಿ 8 (ತಮ್ಲುಕ್, ಕಂಠಿ, ಘಟಾಲ್, ಜರ್ಗ್ರಾಮ್, ಮೇದಿನಿಪುರ್, ಪುರುಲಿಯಾ, ಬಂಕುರಾ, ಬಿಷ್ಣುಪುರ್) ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಬೆಂಗಾಲಿಯ ಜನಪ್ರಿಯ ತಾರೆಗಳಾದ ದೀಪಕ್ ಅಧಿಕಾರಿ ಮತ್ತು ಹಿರಣ್ಮೊಯ್ ಚಟರ್ಜಿ, ಘಟಾಲ್ ಕ್ಷೇತ್ರದಲ್ಲಿ ಸೆಣೆಸಲಿದ್ದಾರೆ. ದೇವ್ ಈ ಕ್ಷೇತ್ರದಿಂದ ಎರಡು ಬಾರಿ ಟಿಎಂಸಿ ಸಂಸದರಾಗಿದ್ದು, ಹಿರಾನ್ ಪ್ರಸ್ತುತ ಖರಗ್‌ಪುರದ ಬಿಜೆಪಿ ಶಾಸಕ.
ಮೇದಿನಿಪುರ ಕ್ಷೇತ್ರದಿಂದ ಬಿಜೆಪಿಯ ಅಗ್ನಿಮಿತ್ರ ಪಾಲ್ ಅವರು ಟಿಎಂಸಿಯ ಜೂನ್ ಮಾಲಿಯಾ ಅವರನ್ನು ಎದುರಿಸುತ್ತಾರೆ. ಸಿಪಿಐನ ಬಿಪ್ಲಬ್ ಭಟ್ಟಇನ್ನೊಬ್ಬ ಸ್ಪರ್ಧಿ. ಪೂರ್ವ ಮಿಡ್ನಾಪುರ ಜಿಲ್ಲೆಯ ಕಂಠಿ ಮತ್ತು ತಮ್ಲುಕ್ , ಅಧಿಕಾರಿ ಕುಟುಂಬದ ಭದ್ರಕೋಟೆಗಳು. ಇವರೆಲ್ಲರೂ ಟಿಎಂಸಿ ತೊರೆದು, ಬಿಜೆಪಿ ಸೇರಿದ್ದಾರೆ. ಮೂರು ಬಾರಿ ಕಂಠಿ ಸಂಸದ ಸಿಸಿರ್ ಅಧಿಕಾರಿ ಬದಲು ಅವರ ಕಿರಿಯ ಮಗ ಸೌಮೇಂದು ಅಧಿಕಾರಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಲಿದ್ದಾರೆ.
ತಮ್ಲುಕ್‌ನಲ್ಲಿ ಬಿಜೆಪಿ ಕಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರನ್ನು ಕಣಕ್ಕಿಳಿಸಿದೆ. ಸಿಪಿಎಂನ ಸಯಾನ್ ಬ್ಯಾನರ್ಜಿ ಮತ್ತು ಟಿಎಂಸಿಯ ದೇಬಂಗ್ಶು ಭಟ್ಟಾಚಾರ್ಯ ಅವರನ್ನು ಎದುರಿಸಲಿದ್ದಾರೆ.
ಜಾರ್ಗ್ರಾಮ್‌ನಲ್ಲಿ 2019 ರಲ್ಲಿ ಗೆದ್ದ ಬಿಜೆಪಿಯ ಕುನಾರ್ ಹೆಂಬ್ರಾಮ್, ಟಿಎಂಸಿಗೆ ಸ್ಥಳಾಂತರಗೊಂಡಿದ್ದಾರೆ. ಟಿಎಂಸಿ ಸಂತಾಲಿ ನಾಟಕಕಾರ ಮತ್ತು ಲೇಖಕ ಕಲಿಪದ ಸೊರೆನ್ ಅವರನ್ನು ಕಣಕ್ಕಿಳಿಸಿದೆ. ಪುರುಲಿಯಾದಲ್ಲಿ ಬಿಜೆಪಿಯ ಜ್ಯೋತಿರ್ಮಯ್ ಸಿಂಗ್ ಮಹತೋ ಅವರು ರಾಜ್ಯ ಸಚಿವ ಟಿಎಂಸಿಯ ಶಾಂತಿರಾಮ್ ಮಹತೋ ಅವರನ್ನು ಎದುರಿಸುತ್ತಿದ್ದಾರೆ. ಮಾಜಿ ಶಾಸಕ ಮತ್ತು ಹಿರಿಯ ರಾಜ್ಯ ಕಾಂಗ್ರೆಸ್ ನಾಯಕ ನೇಪಾಳ ಮಹತೋ ಸ್ಪರ್ಧೆಯಲ್ಲಿದ್ದಾರೆ. ಬಂಕುರಾದಲ್ಲಿ ಮೋದಿ ಸಂಪುಟದ ಕಿರಿಯ ಸಚಿವ ಸುಭಾಸ್ ಸರ್ಕಾರ್ ಅವರು ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಿಷ್ಣುಪುರದಲ್ಲಿ ಪಕ್ಷದ ಸಹೋದ್ಯೋಗಿ ಸೌಮಿತ್ರಾ ಖಾನ್ ಸ್ಪರ್ಧಿಸುತ್ತಿದ್ದಾರೆ.
ದೆಹಲಿ: ಚಾಂದಿನಿ ಚೌಕ್, ಈಶಾನ್ಯ ದೆಹಲಿ, ಪೂರ್ವ ದೆಹಲಿ, ನವದೆಹಲಿ, ವಾಯವ್ಯ ದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿಯಲ್ಲಿ ಚುನಾವಣೆ ನಡೆಯುತ್ತಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ, ಜಾಮೀನಿನಿಂದ ಬಿಡುಗಡೆ, ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ ಮತ್ತು ಬಿಜೆಪಿಗೆ ಸೇರ್ಪಡೆ, ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ, ಕಾಂಗ್ರೆಸ್‌ನ ಕನ್ಹಯ್ಯ ಕುಮಾರ್ ಮೇಲಿನ ಹಲ್ಲೆ ಇತ್ಯಾದಿ ಘಟನೆಗಳು ನಡೆದಿವೆ.
2014 ರಿಂದ ದೆಹಲಿಯ ಎಲ್ಲ ಲೋಕಸಭೆ ಸ್ಥಾನಗಳನ್ನು ಹೊಂದಿರುವ ಬಿಜೆಪಿ, ಹಾಲಿ ಸಂಸದರಲ್ಲಿ ಆರು ಮಂದಿಯನ್ನು ಕೈಬಿಟ್ಟಿದೆ. ಕೇಜ್ರಿವಾಲ್ ಅವರಿಂದ ತೀವ್ರ ಪ್ರಚಾರ, ಬಂಧನದ ವಿರುದ್ಧ ಸಾರ್ವಜನಿಕರ ಆಕ್ರೋಶವು ಬಿಜೆಪಿಗೆ ಪರಿಸ್ಥಿತಿ ಕಷ್ಟಕರವಾಗಿಸಿದೆ. ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಬಿಜೆಪಿಯ ಹಾಲಿ ಸಂಸದ ಮನೋಜ್ ತಿವಾರಿ ವಿರುದ್ಧ ಕಣಕ್ಕಿಳಿದಿರುವ ಕನ್ಹಯ್ಯ ಕುಮಾರ್ ಮತ್ತು ಯೋಗೇಂದ್ರ ಚಂದೋಲಿಯಾ ಅವರನ್ನು ಎದುರಿಸುತ್ತಿರುವ ಉದಿತ್ ರಾಜ್ ಅವರಿಗೆ ಕಠಿಣ ಪ್ರರತಿರೋಧ ಎದುರಾಗಿದೆ. ಆಪ್ ಕಳೆದ ಎರಡು ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಸಂಪೂರ್ಣ ಬಹುಮತದೊಂದಿಗೆ ಗೆದ್ದಿದ್ದರೂ, ದೆಹಲಿಯಲ್ಲಿ ಒಂದೇ ಒಂದು ಲೋಕಸಭೆ ಸ್ಥಾನವನ್ನು ಗೆದ್ದಿಲ್ಲ. ಆಪ್ ಪಶ್ಚಿಮ ದೆಹಲಿ ಮತ್ತು ಪೂರ್ವ ದೆಹಲಿ ಸ್ಥಾನಗಳಲ್ಲಿ ಬಿಜೆಪಿಗೆ ಕಠಿಣ ಸ್ಪರ್ಧೆ ನೀಡುತ್ತಿದೆ.
ಒಡಿಶಾ: 21 ರಲ್ಲಿ 6 (ಸಂಬಲ್ಪುರ್, ಕಿಯೋಂಜಾರ್, ಧೆಂಕನಲ್, ಕಟಕ್, ಪುರಿ, ಭುವನೇಶ್ವರ) ಕ್ಷೇತ್ರಗಳಲ್ಲಿ ಹಾಗೂ 43 ವಿಧಾನಸಭೆ ಕ್ಷೇತ್ರಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದೆ. ಪುರಿ ಮತ್ತು ಕಟಕ್‌ನಲ್ಲಿ ಬಿಜೆಡಿ ತನ್ನ ಹಿಡಿತ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪುರಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಅರೂಪ್ ಪಟ್ನಾಯಕ್ ಅವರನ್ನುಎದುರಿಸಲಿದ್ದಾರೆ. ಕಟಕ್‌ನಲ್ಲಿ ಬಿಜೆಡಿಯ ಭರ್ತೃಹರಿ ಮಹತಾಬ್ ಅವರು ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿ ಸೇರಿದರು. ಅವರು ಬಿಜೆಡಿಯ ಸಂತೃಪ್ತ್ ಮಿಶ್ರಾ ಮತ್ತು ಕಾಂಗ್ರೆಸ್‌ನ ಸುರೇಶ್ ಮಹಾಪಾತ್ರ ಅವರನ್ನು ಎದುರಿಸಲಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ ಅಪರಾಜಿತಾ ಸಾರಂಗಿ ಭುವನೇಶ್ವರ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಳ್ಳಲು ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಂಬಲ್ಪುರವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಧೆಂಕನಾಲ್ ಮತ್ತು ಎಸ್‌ಟಿ ಮೀಸಲು ಕ್ಷೇತ್ರವಾದ ಕಿಯೋಂಜಾರ್‌ನಲ್ಲಿ ಬಿಜೆಡಿ ತನ್ನ ಹಿಡಿತ ಉಳಿಸಿಕೊಳ್ಳಲು ನೋಡುತ್ತಿದೆ.
ಬಿಹಾರ: 40 ರಲ್ಲಿ 8 (ವಾಲ್ಮೀಕಿ ನಗರ, ಪಶ್ಚಿಮ ಚಂಪಾರಣ್, ಪೂರ್ವಿ ಚಂಪಾರಣ್, ಶಿಯೋಹರ್, ವೈಶಾಲಿ, ಗೋಪಾಲ್‌ಗಂಜ್, ಸಿವಾನ್, ಮಹಾರಾಜ್‌ಗಂಜ್) ಚುನಾವಣೆ ನಡೆಯುತ್ತಿದೆ. ಬಿಹಾರದ ಆರನೇ ಹಂತದ ಚುನಾವಣೆಯು ʻಬಾಹುಬಲಿʼ ಅಥವಾ ಬಿಹಾರ ರಾಜಕೀಯದ ಪ್ರಬಲರ ನಡುವಿನ ಸ್ಪರ್ಧೆಯಾಗಿದೆ. ಶಿಯೋಹರ್ ಕ್ಷೇತ್ರದಿಂದ ಬಿಹಾರದ ಪ್ರಮುಖ ರಾಜಕೀಯ ಕುಟುಂಬದ ಭಾಗವಾಗಿರುವ ರಿತು ಜೈಸ್ವಾಲ್ ವಿರುದ್ಧ ಆನಂದ್ ಮೋಹನ್ ಸಿಂಗ್ ಅವರ ಪತ್ನಿ ಜೆಡಿಯು ಅಭ್ಯರ್ಥಿ ಲವ್ಲಿ ಆನಂದ್ ಸ್ಪರ್ಧಿಸುತ್ತಿದ್ದಾರೆ. ಹಲವು ಆರೋಪಗಳನ್ನು ಎದುರಿಸುತ್ತಿರುವ ಮುನ್ನಾ ಶುಕ್ಲಾ ವೈಶಾಲಿಯಿಂದ ಹಾಗೂ ಮೊಹಮ್ಮದ್ ಸಹಾಬುದ್ದೀನ್ ಅವರ ಪತ್ನಿ ಹೆನಾ ಶಹಾಬ್ ಅವರು ಸಿವಾನ್ ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಜಾರ್ಖಂಡ್: 14 ರಲ್ಲಿ 4 (ಗಿರಿದಿಹ್, ಧನ್‌ಬಾದ್, ರಾಂಚಿ, ಜಮ್‌ಶೆಡ್‌ಪುರ) ದಲ್ಲಿ ಚುನಾವಣೆ ನಡೆಯುತ್ತಿದೆ. ಬಿಜೆಪಿ ರಾಜ್ಯದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರ: 5 ರಲ್ಲಿ 1 (ಅನಂತನಾಗ್-ರಾಜೌರಿ) ಚುನಾವಣೆ ನಡೆಯಲಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್‌ನ ಮಿಯಾನ್ ಅಲ್ತಾಫ್ ಮತ್ತು ಅಪ್ನಿ ಪಕ್ಷದ ಜಾಫರ್ ಮಿನ್ಹಾಸ್ ನಡುವೆ ತ್ರಿಕೋನ ಸ್ಪರ್ಧೆಗೆ ಸಿದ್ಧವಾಗಿದೆ. ಬಿಜೆಪಿ, ಸ್ಪರ್ಧೆಯಿಂದ ದೂರ ಉಳಿದಿದೆ.
ಜಮ್ಮು ಮತ್ತು ಕಾಶ್ಮೀರ: 5 ರಲ್ಲಿ 1 (ಅನಂತನಾಗ್-ರಾಜೌರಿ) ಚುನಾವಣೆ ನಡೆಯಲಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್‌ನ ಮಿಯಾನ್ ಅಲ್ತಾಫ್ ಮತ್ತು ಅಪ್ನಿ ಪಕ್ಷದ ಜಾಫರ್ ಮಿನ್ಹಾಸ್ ನಡುವೆ ತ್ರಿಕೋನ ಸ್ಪರ್ಧೆಗೆ ಸಿದ್ಧವಾಗಿದೆ. ಬಿಜೆಪಿ, ಸ್ಪರ್ಧೆಯಿಂದ ದೂರ ಉಳಿದಿದೆ.