Priyanka Gandhi : ವಯನಾಡ್‌ನ ಪ್ರಸಿದ್ಧ ತಿರುನೆಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಿಯಾಂಕ ಗಾಂಧಿ
"ಭಗವಾನ್ ಮಹಾವಿಷ್ಣು ಯಾವಾಗಲೂ ವಯನಾಡ್ ಜನರನ್ನು ರಕ್ಷಿಸಲಿ ಮತ್ತು ಅವರಿಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗಲಿ " ಎಂದು ಪ್ರಿಯಾಂಕಾ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.;
ವಯನಾಡ್ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಏತನ್ಮಧ್ಯೆ ಭಾನುವಾರ ಅವರು ಸ್ಥಳೀಯ ಪ್ರಾಚೀನ ತಿರುನೆಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವರ ಪ್ರಾರ್ಥನೆ ಮಾಡಿದ ಅವರು ಅಲ್ಲಿನ ಅರ್ಚಕರಿಂದ ಪ್ರಸಾದ ಸ್ವೀಕರಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅವರು ದೇವಾಲಯಕ್ಕೆ ಭೇಟಿ ನೀಡಿರುವ ಚಿತ್ರಗಳನ್ನು ಹಂಚಿಕೊಂಡು ಎಲ್ಲರಿಗೂ ಹರಸಿದ್ದಾರೆ.
ಪೋಸ್ಟ್‌ನಲ್ಲಿ ,ಪ್ರಿಯಾಂಕಾ ಗಾಂಧಿ ತಿರುನೆಲ್ಲಿ ದೇವಾಲಯವು ತನ್ನ ಹೃದಯದಲ್ಲಿ ಯಾಕೆ ವಿಶೇಷ ಸ್ಥಾನ ಹೊಂದಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ದೇವಾಲಯವು ಆಧ್ಯಾತ್ಮಿಕ ಪ್ರಾಮುಖ್ಯತೆಯ ಸ್ಥಳ ಮಾತ್ರವಲ್ಲ, ದೇವಾಲಯದ ಪಕ್ಕದಲ್ಲಿ ಹರಿಯುವ ಪಾಪನಾಶಿನಿ ನದಿಯಲ್ಲಿ ತಮ್ಮ ತಂದೆ ದಿ. ರಾಜೀವ್ ಗಾಂಧಿ ಅವರ ಚಿತಾಭಸ್ಮ ವಿಸರ್ಜಿಸಿದ್ದಾರೆ ಎಂದು ಹೇಳಿದ್ದಾರೆ.
"ಇಂದು, ನಾನು ಕೇರಳದ ವಯನಾಡ್‌ನ ಅತ್ಯಂತ ಪ್ರಾಚೀನವಾಗಿರುವ ತಿರುನೆಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದೆ. ನನ್ನ ತಂದೆಯ ಚಿತಾಭಸ್ಮವನ್ನು ದೇವಾಲಯದ ಪಕ್ಕದಲ್ಲಿ ಹರಿಯುವ ಪಾಪನಾಶಿನಿ ನದಿಯಲ್ಲಿ ವಿಸರ್ಜಿಸಲಾಗಿತ್ತು. ಹೀಗಾಗಿ ನನಗೆ ಇದು ವಿಶೇಷ ಜಾಗ" ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ .
"ಭಗವಾನ್ ಮಹಾವಿಷ್ಣು ಯಾವಾಗಲೂ ವಯನಾಡ್ ಜನರನ್ನು ರಕ್ಷಿಸಲಿ ಮತ್ತು ಅವರಿಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಸಿಗಲಿ " ಎಂದು ಪ್ರಿಯಾಂಕಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಮುಂಬರುವ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಿಯಾಂಕಾ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್ ಬರೇಲಿ ಎರಡೂ ಕ್ಷೇತ್ರವನ್ನು ಗೆದ್ದ ನಂತರ ರಾಹುಲ್ ಗಾಂಧಿ ಈ ಸ್ಥಾನ ತ್ಯಜಿಸಿದದ್ದರು. ನವೆಂಬರ್ 13 ರಂದು ಚುನಾವಣೆ ನಡೆಯಲಿದೆ.