ಇಂಡಿಯ ಒಕ್ಕೂಟದ ಪ್ರಧಾನಿ 'ಸಮಾನರಲ್ಲಿ ಮೊದಲಿಗರು': ತರೂರ್

Update: 2024-05-04 13:31 GMT

ʻಲೋಕಸಭೆ ಚುನಾವಣೆ ನಂತರ ವಿರೋಧ ಪಕ್ಷಗಳು ಒಂದಾಗುತ್ತವೆ. ಇಂಡಿಯ ಒಕ್ಕೂಟದ ಪ್ರಧಾನಿ ಸಮಾನರಲ್ಲಿ ಮೊದಲಿಗ ಆಗಿರುತ್ತಾರೆ. ಸಹಯೋಗ ಹಾಗೂ ಸಮಾನತೆಗೆ ಆದ್ಯತೆ ನೀಡುತ್ತಾರೆʼ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದರು. 

ಎಣಿಕೆಯ ದಿನವಾದ ಜೂನ್‌ 4ರ ನಂತರ ತೃಣಮೂಲ ಕಾಂಗ್ರೆಸ್ ಸೇರಿದಂತೆ, ವಿರೋಧ ಪಕ್ಷಗಳು ಒಟ್ಟಾಗಿ ಸೇರಲಿವೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಭಯಪಡಬೇಕಿಲ್ಲ ಎಂದು ಪಿಟಿಐ ಸಂಪಾದಕರ ಜೊತೆಗಿನ ಸಂವಾದದಲ್ಲಿ ಹೇಳಿದರು. ʻದೇಶದ ಆರ್ಥಿಕ ಬೆಳವಣಿಗೆಯ ಕಾರ್ಯಕ್ಷಮತೆಯು ಒಂದೇ ಪಕ್ಷದ ಸರ್ಕಾರಕ್ಕಿಂತ ಸಮ್ಮಿಶ್ರ ಸರ್ಕಾರದಲ್ಲಿ ಉತ್ತಮವಾಗಿದೆʼ ಎಂದು ಹೇಳಿದರು. 

ಹಿಡಿತ ಕಳೆದುಕೊಂಡಿದೆ: ʻಇದು ಬದಲಾವಣೆಯ ಚುನಾವಣೆ. ಸದ್ಯಕ್ಕೆ ಬಿಜೆಪಿ ನಿರೂಪಣೆ ಮೇಲೆ ತನ್ನ ಹಿಡಿತವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸದೆ ಇದ್ದುದು ಸರಿಯಾದ ಕ್ರಮ. ಅದು ವೈಭವೀಕರಣದ ರಾಜಕೀಯ ವೇದಿಕೆಯಾಗಿದ್ದರಿಂದ, ಆಹ್ವಾನವನ್ನು ತಿರಸ್ಕರಿಸಿದ್ದು ಸರಿʼ ಎಂದು ಸಮರ್ಥಿಸಿಕೊಂಡರು. 

ʻಸಮ್ಮಿಶ್ರ ಸರ್ಕಾರವು ಏಕ ಪಕ್ಷದ ಸರ್ಕಾರಕ್ಕಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ನಿಜ. ಮೋದಿಯವರ ಶೈಲಿ, ಅವರ ಸುತ್ತ ನಿರ್ಮಿಸಿರುವ ವ್ಯಕ್ತಿತ್ವದ ಆರಾಧನೆ ಮತ್ತು ಬಿಜೆಪಿ ಆಡಳಿತದ ರೀತಿಯನ್ನು ಗಮನಿಸಿದರೆ, ಇಂಡಿಯ ಒಕ್ಕೂಟದ ಸರ್ಕಾರ ಕಳೆದ 10 ವರ್ಷದಲ್ಲಿ ನಾವು ನೋಡಿದ್ದ ಆಡಳಿತಕ್ಕಿಂತ ಭಿನ್ನವಾಗಿರಲಿದೆ. ನಾವು ಮುಂದಿನ ಸರ್ಕಾರವನ್ನು ರಚಿಸುತ್ತೇವೆ. ಇಂಡಿಯ ಒಕ್ಕೂಟದ ಪ್ರಯೋಜನವೆಂದರೆ ಯಾವುದೇ ರೀತಿಯ ನಿರಂಕುಶಾಧಿಕಾರ ಪ್ರವೃತ್ತಿ ಇರುವುದಿಲ್ಲ. ಇತರ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ನಾವು ಈಗ ನೋಡುತ್ತಿರುವುದು ಅಧ್ಯಕ್ಷೀಯ ಸಂಸದೀಯ ವ್ಯವಸ್ಥೆ. ಅದು ಅತ್ಯಂತ ಕೆಟ್ಟದು,ʼ ಎಂದು ವಾದಿಸಿದರು. 

ವಾಜಪೇಯಿ ಒಮ್ಮತದ ನಿರ್ಮಾಪಕರು: ʻಅಟಲ್ ಬಿಹಾರಿ ವಾಜಪೇಯಿ ಅವರು ಅಂಥ ಒಮ್ಮತದ ನಿರ್ಮಾಪಕರ ಅತ್ಯುತ್ತಮ ಉದಾಹರಣೆ. ಅವರು ಬಹುಮತವನ್ನು ಹೊಂದಿರಲಿಲ್ಲ. ತಮ್ಮ ಒಕ್ಕೂಟದಲ್ಲಿ 26 ಪಕ್ಷಗಳನ್ನು ಹೊಂದಿದ್ದರು. ಆದರೆ, ಅವರ ಸರ್ಕಾರ ಪರಿಣಾಮಕಾರಿ ಫಲಿತಾಂಶ ನೀಡಿತು,ʼ ಎಂದು ತರೂರ್ ಹೇಳಿದರು. 

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತ ಶೈಲಿಯನ್ನು ಶ್ಲಾಘಿಸಿದ ಅವರು, ಅವರು ಪಟ್ಟುಬಿಡದೆ ಆರ್ಥಿಕ ಗುರಿಯನ್ನು ಸಾಧಿಸಿದರು. ಅವರ ಅವಧಿಯಲ್ಲಿ ಅತ್ಯುತ್ತಮ ಬೆಳವಣಿಗೆ ದರ ದಾಖಲಾಯಿತು. ಎಡ ಪಕ್ಷಗಳು ಯುಪಿಎ-2 ಸರ್ಕಾರವನ್ನು ತೊರೆದವು. ಪ್ರಧಾನಿಯೊಬ್ಬರು ಸಮ್ಮಿಶ್ರ ಪಾಲುದಾರರಿಗೆ ಸ್ಪಷ್ಟ ರೇಖೆಯನ್ನು ಎಳೆಯಬೇಕಾದ ಸಮಸ್ಯೆ ಇರುತ್ತದೆ. ಯುಪಿಎ ಜನರ ಹಿತಾಸಕ್ತಿಗಳನ್ನು ಕಾಪಾಡಿದೆ,ʼ ಎಂದು ಹೇಳಿದರು.

ಭಯಪಡಬೇಕಿಲ್ಲ: ʻಸಮ್ಮಿಶ್ರ ಸರ್ಕಾರದ ಬಗ್ಗೆ ಭಯಪಡುವ ಅಗತ್ಯವಿಲ್ಲ. ಮತದಾರರು ಅಭ್ಯರ್ಥಿ ಯಾರು, ಅವನು/ಅವಳು ಯಾವ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ ಎಂಬ ಬಗ್ಗೆ ಯೋಚಿಸುತ್ತಾರೆ,ʼ ಎಂದು ಹೇಳಿದರು.

ಕೇರಳದಲ್ಲಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳ ನಡುವಿನ ಕಹಿ ವಿನಿಮಯ ಸರ್ಕಾರ ರಚನೆಗೆ ಅಡ್ಡಿಯಾಗಬಹುದೇ ಎಂಬ ಪ್ರಶ್ನೆಗೆ, ʻಸಮ್ಮಿಶ್ರ ಸರ್ಕಾರಗಳು ಮತದಾನದ ನಂತರ ಬರುತ್ತವೆ. ಆದರೆ, ಚುನಾವಣೆಗೆ ಮುನ್ನವೇ ಒಟ್ಟುಗೂಡಿಸುವ ಗಂಭೀರ ಪ್ರಯತ್ನ ಮಾಡಲಾಗಿದೆ. ಯುಡಿಎಫ್ ಅನ್ನು ಮುನ್ನಡೆಸುವ ಕಾಂಗ್ರೆಸ್ ಮತ್ತು ಎಲ್ಡಿಎಫ್ ಅನ್ನು ಮುನ್ನಡೆಸುವ ಕಮ್ಯುನಿಸ್ಟರು ಎಂದೆಂದಿಗೂ ಪಾಲುದಾರರಾಗುತ್ತಾರೆ ಎಂದು ಹೇಳಲು ಆಗುವುದಿಲ್ಲʼ ಎಂದು ಹೇಳಿದರು. 

ʻನಾವು ಕಳೆದ 55 ವರ್ಷಗಳಿಂದ ಪರಸ್ಪರ ಹೊಡೆದಾಡಿದ್ದೇವೆ ಮತ್ತು ಕಳೆದ ಚುನಾವಣೆಯವರೆಗೂ ಅಧಿಕಾರದಲ್ಲಿ ಇದ್ದೆವು. ತಮಿಳುನಾಡಿನಲ್ಲಿ ಸಿಪಿಐ(ಎಂ), ಸಿಪಿಐ, ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಡಿಎಂಕೆ ಪಾಲುದಾರರಾಗಿದ್ದೇವೆ. ಯಾವುದೇ ಸಮಸ್ಯೆ ಇಲ್ಲ.ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ನಾವು ಒಟ್ಟಾಗುತ್ತೇವೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಪಿತ್ರಾರ್ಜಿತ ತೆರಿಗೆ ಬಗ್ಗೆ ಚರ್ಚಿಸಿಲ್ಲ.ಆದರೆ, ಆಡಳಿತ ಪಕ್ಷ ಬಳಸುತ್ತಿರುವ ಅಸ್ತ್ರಗಳು ಸೋಲು ಕಾಣುತ್ತಿವೆʼ ಎಂದು ಹೇಳಿದರು.

Tags:    

Similar News