Loksabha Election 2024 | ಎಐಸಿಸಿ ಅಧ್ಯಕ್ಷರಿಗೆ ಕಲಬುರಗಿ ಚುನಾವಣೆ ಭಾವನಾತ್ಮಕ ಸಮರ
ಮಲ್ಲಿಕಾರ್ಜುನ ಖರ್ಗೆ ಅವರು 2019 ರಲ್ಲಿ ಸೋತ ಸ್ಥಾನವನ್ನು ಮರಳಿ ಪಡೆಯಲು ಉತ್ಸುಕರಾಗಿದ್ದಾರೆ. ಕರ್ನಾಟಕದಲ್ಲಿ ಮತ್ತೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವ ಬಿಜೆಪಿ, ಕಲಬುರಗಿ ಮೇಲೆ ಕಣ್ಣಿಟ್ಟಿದೆ;
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಬಹಳ ಭಾವುಕರಾಗಿ, ಕಲಬುರಗಿ ಲೋಕಸಭೆ ಕ್ಷೇತ್ರದ ಭಾಗವಾದ ಅಫಜಲಪುರ ವಿಧಾನಸಭೆ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಮನವಿ ಮಾಡಿದರು.ʻಕಾಂಗ್ರೆಸ್‌ಗೆ ಮತ ಹಾಕದಿದ್ದರೂ ಪರವಾಗಿಲ್ಲ. ಆದರೆ, ಕ್ಷೇತ್ರಕ್ಕೆ ಮಾಡಿರುವ ಉತ್ತಮ ಕೆಲಸಗಳನ್ನು ಸ್ಮರಿಸಿಕೊಂಡು, ಅಂತ್ಯಕ್ರಿಯೆಗೆ ಆಗಮಿಸಬೇಕುʼ ಎಂದು ಕೋರಿದರು.
ʻಶವವನ್ನು ಸುಟ್ಟರೆ ಮೊಂಬತ್ತಿ ಬೆಳಗಿರಿ ಅಥವಾ ದಫನ ಮಾಡಿದರೆ, ಮಣ್ಣು ಹಾಕಿರಿ. ಅಂತ್ಯಕ್ರಿಯೆ ಸಮಯದಲ್ಲಿ ಹೆಚ್ಚು ಜನರು ಸೇರಿ ದರೆ, ನಾನು ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ ಎಂದು ಇತರರು ಅರಿತುಕೊಳ್ಳುತ್ತಾರೆ; ನಿಮ್ಮ ಮತ ವ್ಯರ್ಥವಾಗಬಾರದು ಎಂದು ಮನವಿ ಮಾಡುತ್ತೇನೆ ... ,ʼ ಎಂದು ಹೇಳಿದ್ದರು.
ಕರ್ನಾಟಕದ ಮುಖ್ಯ ಕ್ಷೇತ್ರ
ಈ ಭಾವನಾತ್ಮಕ ಹೇಳಿಕೆಗೆ ಕಲಬುರಗಿಯಲ್ಲಿ ಖರ್ಗೆಯವರದ್ದು ಪ್ರತಿಷ್ಠೆಯ ಹೋರಾಟ ಆಗಿರುವುದು ಕಾರಣ. ಕಲಬುರಗಿ ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಹೆಚ್ಚು ಗಮನ ಸೆಳೆದ ಕ್ಷೇತ್ರಗಳಲ್ಲಿ ಒಂದು. ಖರ್ಗೆ ಅವರು ಕ್ಷೇತ್ರದ ಮತದಾರರಲ್ಲಿ ಭಾವ ನಾತ್ಮಕ ಬಂಧವನ್ನು ಬೆಸೆಯಲು ಹತಾಶ ಪ್ರಯತ್ನ ನಡೆಸುತ್ತಿದ್ದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ, ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಇದು ಕೊನೆಯ ಪ್ರಯತ್ನದಂತೆ ತೋರುತ್ತಿದೆ.
ಖರ್ಗೆಯವರು ಗದ್ಗದವಾಗಿ ಈ ಮನವಿ ಮಾಡುತ್ತಿದ್ದಾಗ, ಅವರ ಮುಖದಲ್ಲಿ ನೋವು-ಹತಾಶೆ ಎದ್ದು ಕಾಣುತ್ತಿತ್ತು. ತಮ್ಮ ನಾಯಕ ಸ್ಥೈರ್ಯವನ್ನು ಮರಳಿ ಪಡೆದುಕೊಳ್ಳಲಿ ಎಂದು ಅಫಜಲಪುರದ ನಾಗರಿಕರು ಕೂಡ ಕೆಲವು ಸೆಕೆಂಡು ಕಾಲ ಮೌನ ತಳೆದರು.
ಕಠಿಣ ಸವಾಲು
ವಿಧಾನಸಭೆ ಅಥವಾ ಸಂಸತ್ತಿನ ಚುನಾವಣೆಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಖರ್ಗೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಅವರು ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಪಾರ ಒತ್ತಡದ ಹೊರತಾಗಿಯೂ, ರಾಷ್ಟ್ರಮಟ್ಟದ ಕಾರ್ಯಗಳಲ್ಲಿ ನಿರತರಾಗಿರುವ ಕಾರಣ ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸದೆ ಇರಲು ನಿರ್ಧರಿಸಿದ್ದಾರೆ. ಅವುಗಳಲ್ಲಿ ಬಿಜೆಪಿ ವಿರುದ್ಧದ ಪ್ರತಿಪಕ್ಷ ʻಇಂಡಿಯʼ ಒಕ್ಕೂಟದ ಹೋರಾಟವನ್ನು ಮುನ್ನಡೆಸುತ್ತಿರುವುದೂ ಒಂದು.
ಅನೇಕ ಚುನಾವಣಾ ಕದನಗಳ ಅನುಭವಿಯಾದ ಖರ್ಗೆ ಅವರು ಅಕ್ಟೋಬರ್ 2022 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ನಂತರ ಅತಿ ಕಠಿಣ ಸವಾಲು ಎದುರಿಸುತ್ತಿದ್ದಾರೆ. 2023 ರಲ್ಲಿ ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದ ನಂತರ, ಹುಟ್ಟೂರು ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನೂ ಪ್ರಬಲವಾಗಿದೆ ಎಂದು ಸಾಬೀತುಪಡಿಸಬೇಕಿದೆ.
81ರ ಹರೆಯದ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಪ್ರಬಲ ಬಿಜೆಪಿ ವಿರುದ್ಧ ಸೆಣೆಸುತ್ತಿದ್ದಾರೆ. ಕಲಬುರಗಿ ಚುನಾವಣೆ ಕದನವು ನರೇಂದ್ರ ಮೋದಿ ಮತ್ತು ಖರ್ಗೆ ನಡುವಿನ ಕದನವನ್ನುಹೋಲುತ್ತದೆ.
ಪ್ರಮುಖ ಚುನಾವಣೆ ಕಣ
ಕಲಬುರಗಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ. 2019ರಲ್ಲಿ ಖರ್ಗೆ ಅವರನ್ನು ಸೋಲಿಸಿದ್ದ ಉಮೇಶ್ ಜಾಧವ್ ಅವರ ಜೊತೆ ದೊಡ್ಡಮನಿ ಹೋರಾಟ ನಡೆಸುತ್ತಿದ್ದಾರೆ.
2019ರಲ್ಲಿ ಖರ್ಗೆ ಅವರು ಪ್ರತಿಸ್ಪರ್ಧಿಯಾಗಿ ಬದಲಾದ ಅನುಯಾಯಿ ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸಿ, 95,452 ಮತಗಳ ಅಂತರ ದಿಂದ ಸೋಲುಂಡರು. ವಾಸ್ತವವಾಗಿ, 1972 ರಿಂದ ಅವರ 47 ವರ್ಷಗಳ ರಾಜಕೀಯ ಪ್ರಯಾಣದಲ್ಲಿ ಮೊದಲ ಚುನಾವಣೆ ಸೋಲು ಇದು. ಇದರಿಂದಾಗಿಯೇ ಖರ್ಗೆ ಮತ್ತು ಕಾಂಗ್ರೆಸ್ ಇಬ್ಬರಿಗೂ ಕಲಬುರಗಿ ಕ್ಷೇತ್ರ ಮುಖ್ಯವಾಗಿ ಪರಿಣಮಿಸಿದೆ. ಆದರೆ, ಸಂವಿಧಾನದ 371 (ಜೆ) ಪರಿಚ್ಛೇದದಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ (ಹೈದರಾಬಾದ್ ಕರ್ನಾಟಕ) ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಪಡೆಯುವಲ್ಲಿ ಖರ್ಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪರಿಗಣಿಸಿರುವುದರಿಂದ, ಅವರು ಪ್ರಮುಖ ಟ್ರಂಪ್ ಕಾರ್ಡ್ ಹೊಂದಿದ್ದಾರೆ. ಮತ್ತು, ದೊಡ್ಡಮನಿ ಪ್ರಚಾರದಲ್ಲಿ ಈ ಅಂಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಅಜೇಯ ನಾಯಕ
ಖರ್ಗೆ ಅವರು ಕಲಬುರಗಿ ಜಿಲ್ಲೆಯ ಗುರುಮಠ್ಕಲ್ ಕ್ಷೇತ್ರದಿಂದ ಒಂಬತ್ತು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2019 ರಲ್ಲಿ ಸೋಲುವ ಮೊದಲು (2009 ಮತ್ತು 2014) ಲೋಕಸಭೆಯಲ್ಲಿ ಎರಡು ಬಾರಿ ಕಲಬುರಗಿಯನ್ನು ಪ್ರತಿನಿಧಿಸಿದ್ದರು. ಕಲಬುರಗಿ ಲೋಕಸಭೆ ಕ್ಷೇತ್ರವು ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ - ಅಫಜಲಪುರ, ಜೇವರ್ಗಿ, ಗುರುಮಠ್ಕಲ್, ಚಿತ್ತಾಪುರ, ಸೇಡಂ, ಕಲಬುರಗಿ ಗ್ರಾಮಾಂತರ, ಕಲಬುರಗಿ ದಕ್ಷಿಣ ಮತ್ತು ಕಲಬುರಗಿ ಉತ್ತರ. ಗುರುಮಠ್ಕಲ್ (ಜೆಡಿಎಸ್‌ನ ನಾಗನಗೌಡ ಕುಂದಕೂರ್) ಮತ್ತು ಕಲಬುರಗಿ ಗ್ರಾಮಾಂತರ (ಬಿಜೆಪಿಯ ಬಸವರಾಜ ಮತ್ತಿಮಡು) ಹೊರತುಪಡಿಸಿ, ಉಳಿದೆಲ್ಲ ಶಾಸಕರು ಕಾಂಗ್ರೆಸ್‌ನವರು. ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು,1952ರ ಮೊದಲ ಚುನಾವಣೆಯಿಂದ 1996 ರವರೆಗೆ ಹಿಡಿತ ಹೊಂದಿತ್ತು. 1999 ರಲ್ಲಿ ಮತ್ತೆ ಹಿಡಿತ ಸಾಧಿಸಿ, 2019 ರವರೆಗೆ ಪ್ರಾಬಲ್ಯವನ್ನು ಮುಂದುವರಿಸಿತು.
ಪ್ರತೀಕಾರಕ್ಕೆ ಯತ್ನ
ಏತನ್ಮಧ್ಯೆ, ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಚೇತರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಪ್ರಧಾನಿ ಮೋದಿಯವರು ಕರ್ನಾಟಕದಲ್ಲಿ ತಮ್ಮ ಚುನಾವಣೆ ಪ್ರಚಾರವನ್ನು ಕಲಬುರಗಿಯಿಂದ ಪ್ರಾರಂಭಿಸಿದ್ದು, ಉತ್ತರ ಕರ್ನಾಟಕ ಸ್ಥಾನದ ಮಹತ್ವವನ್ನು ಒತ್ತಿಹೇಳಿದ್ದು ಗಮನಾರ್ಹವಾಗಿದೆ.
ಖರ್ಗೆಯವರು ಸ್ಪರ್ಧಿಸದೆ ಇದ್ದರೂ, ತಾವು ಸೋತಿರುವ ಎಸ್‌ಸಿ ಮೀಸಲು ಕ್ಷೇತ್ರವನ್ನು ಮರಳಿ ಪಡೆಯಲು ಸಕಲ ಪ್ರಯತ್ನ ನಡೆಸುತ್ತಿದ್ದಾರೆ. ಏಕೆಂದರೆ, 2019ರಲ್ಲಿ ಅವರನ್ನು ಸೋಲಿಸಲು ಇಡೀ ರಾಷ್ಟ್ರ ಒಗ್ಗಟ್ಟಾಗಿತ್ತು. ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮತ್ತು ಇತರರು ಅವರನ್ನು ಸೋಲಿಸಲು ಗುಲ್ಬರ್ಗದಲ್ಲಿ ಬೀಡು ಬಿಟ್ಟಿದ್ದರು.
ʻಕಲಬುರಗಿಯ ಜನರು ಮೋದಿ ಮತ್ತು ಶಾಗೆ ಪ್ರತಿಕ್ರಿಯಿಸುವುದಿಲ್ಲ ಎಂಬ ವಿಶ್ವಾಸವಿತ್ತು. ಆದರೆ, ದುರದೃಷ್ಟವಶಾತ್, ನಾನು ಚುನಾವಣೆ ಯಲ್ಲಿ ಸೋಲುಂಡೆ. ಕಾಂಗ್ರೆಸ್ ಮತ್ತೊಮ್ಮೆ ಸೋತರೆ, ನಿಮ್ಮ ಹೃದಯದಲ್ಲಿ ನನಗೆ ಸ್ಥಾನವಿಲ್ಲ ಎಂದು ಭಾವಿಸುತ್ತೇನೆ,ʼ ಎಂದು ಮತದಾರ ರಿಗೆ ಹೇಳಿದರು.
ಪರಿಚ್ಛೇದ 371(ಜೆ) ಟ್ರಂಪ್ ಕಾರ್ಡ್
ಕಾಂಗ್ರೆಸ್ ಅಧ್ಯಕ್ಷರು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ದೊಡ್ಡಮನಿ ಅವರಿಂದ ಮಾಹಿತಿ ಪಡೆಯುತ್ತಿದ್ದಾರೆ ಎಂದು ಖರ್ಗೆ ಅವರ ನಿಕಟವರ್ತಿಗಳು ಫೆಡರಲ್‌ಗೆ ತಿಳಿಸಿದ್ದಾರೆ.
ಆದರೆ, ಅವರ ಮಗ ಪ್ರಿಯಾಂಕ್ ಖರ್ಗೆ ಮತ್ತು ಅನುಯಾಯಿ ಡಾ. ಶರಣಪ್ರಕಾಶ ಪಾಟೀಲ್ ಇಬ್ಬರೂ ಬೆವರು ಹರಿಸುತ್ತಿದ್ದಾರೆ. ವಿವಿಧ ಜಾತಿ ಗುಂಪುಗಳು ಮತ್ತು ಕಾರ್ಮಿಕ ವರ್ಗವನ್ನು ಪ್ರತ್ಯೇಕವಾಗಿ ಭೇಟಿಯಾಗುತ್ತಿದ್ದಾರೆ. ದೊಡ್ಡಮನಿ ಅವರ ಚುನಾವಣೆ ಪ್ರಚಾರವನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಯೋಜಿಸಿದೆ. ಐದು ಗ್ಯಾರಂಟಿಗಳಲ್ಲದೆ, ಪರಿಚ್ಛೇದ 371ಜೆ ಪಡೆದ ಕೀರ್ತಿ ಪಕ್ಷಕ್ಕೆ ಇದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಹೇಳಿದರು.
ಬಿಜೆಪಿ ದೃಢನಿರ್ಧಾರ
ಆದರೆ, ಉಮೇಶ್ ಜಾಧವ್ ಅವರು ‘ಅಜೇಯ’ನನ್ನು ಸೋಲಿಸಿದ್ದರಿಂದ, ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಅಷ್ಟೇ ದೃಢಸಂಕಲ್ಪ ಮಾಡಿದೆ. ಹಿಂದುತ್ವದ ಕಾರ್ಡ್ ಮುಂದುಮಾಡುತ್ತಿದೆ, ಎದುರಾಳಿಯನ್ನು 'ಮುಸ್ಲಿಂ ಪರ' ಎಂದು ಕರೆಯುತ್ತಿದೆ ಮತ್ತು ಕಲಬುರಗಿಯಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ ಹೊಸ ರೈಲುಗಳನ್ನು ಪ್ರಾರಂಭಿಸಿದ್ದು ತನ್ನ ಸಾಧನೆ ಎಂದು ಹೇಳಿಕೊಳ್ಳುತ್ತಿದೆ.
ಕಲಬುರಗಿ ಕ್ಷೇತ್ರದಲ್ಲಿ 20,98,202 ಮತದಾರರಿದ್ದಾರೆ. ಮತದಾರರಲ್ಲಿ ಕೋಲಿಗಳು(ಕಬ್ಬಲಿಗರು) ಅಂದಾಜು 2.5 ಲಕ್ಷ, 5 ಲಕ್ಷದಷ್ಟಿರುವ ಲಿಂಗಾಯತರು, ಸುಮಾರು 3 ಲಕ್ಷದಷ್ಟಿರುವ ಕುರುಬ ಸಮುದಾಯ ಎರಡನೇ ಅತಿ ದೊಡ್ಡ ಸಮುದಾಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಣದಿಂದಾಗಿ ಕಾಂಗ್ರೆಸ್‌ಗೆ ಮತ ಹಾಕುವ ಸಾಧ್ಯತೆಯಿದೆ. ಮುಸ್ಲಿಮರು ಸುಮಾರು 2.5 ಲಕ್ಷ ಇದ್ದು,ಕಾಂಗ್ರೆಸ್ ಇದರಲ್ಲಿ ಸಿಂಹ ಪಾಲು ಸಾಧ್ಯತೆಯಿದೆ. ಲಿಂಗಾಯತರ ಮತಗಳನ್ನು ಬಿಜೆಪಿ ನೆಚ್ಚಿಕೊಂಡಿದೆ.
ಕೋಲಿ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿ , ಈಡೇರಿಸದೆ ಇರುವುದರಿಂದ ಕೋಲಿಗಳು ಅಸಮಾಧಾನಗೊಂಡಿದ್ದಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ಕೋಲಿ ನಾಯಕ ಬಾಬುರಾವ್ ಚಿಂಚನಸೂರ್ ಅವರನ್ನು ಬಿಜೆಪಿ ಸೆಳೆದುಕೊಂಡಿತ್ತು. ಅವರು ಸಮುದಾಯದ ಮತಗಳನ್ನು ಬಿಜೆಪಿ ಪರವಾಗಿ ಸೆಳೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಚಿಂಚನಸೂರ್ ಮತ್ತು ಗುತ್ತೇದಾರ್ ಅಂಶ
ಬಿಜೆಪಿ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಚಿಂಚನಸೂರ್ ಕಾಂಗ್ರೆಸ್‌ಗೆ ಮರಳಿದ್ದಾರೆ. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಕೂಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕಳೆದ ಚುನಾವಣೆಯಲ್ಲಿ ಅಫಜಲಪುರ ವಿಧಾನಸ ಭಾ ಕ್ಷೇತ್ರದಲ್ಲಿ ಖರ್ಗೆ ಅವರಿಗಿಂತ ಜಾಧವ್ 35,000 ಕ್ಕೂ ಹೆಚ್ಚು ಮತ ಗಳಿಸಲು ನೆರವಾಗಿದ್ದರು. ಇಬ್ಬರೂ ಕಾಂಗ್ರೆಸ್ಸಿಗೆ ಮರಳಿರುವುದು ಕಾಂಗ್ರೆಸ್‌ಗೆ ನೆರವಾಗಲಿದೆ.
ಎಸ್‌ಸಿ (ಬಲಗೈ) ಮತದಾರರು ದೊಡ್ಡಮನಿ ಅವರನ್ನು ಬೆಂಬಲಿಸುತ್ತಾರೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ, ಉಮೇಶ್ ಜಾಧವ್ ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದು, ಅವರಿಗೇ ಮತ ಹಾಕುತ್ತಾರೆ ಎಂಬ ಬಿಜೆಪಿ ಹೇಳುತ್ತಿದೆ. ರೇವು ನಾಯಕ್ ಬೆಳಮಗಿ ಮತ್ತು ಸುಭಾಷ್ ರಾಥೋಡ್ ಅವರ ಮೂಲಕ ಲಂಬಾಣಿ ಮತಗಳ ಗಣನೀಯ ಭಾಗವನ್ನು ಕಾಂಗ್ರೆಸ್ ಸೆಳೆಯಲಿದೆ ಎಂಬ ನಿರೀಕ್ಷೆಯಿದೆ.
371(ಜೆ) ವಿಧಿ ತಿರಸ್ಕರಿಸಿದ್ದ ಆಡ್ವಾಣಿ
ಈ ಭಾಗದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ತನ್ನನ್ನು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದೆ. 1999 ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಅವರು 371 (ಜೆ) ವಿಧಿಯಡಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನವನ್ನು ತಿರಸ್ಕರಿಸಿದರು ಎಂಬುದು ಬಿಜೆಪಿಯನ್ನು ಕಾಡುತ್ತಲೇ ಇದೆ. ಅಂತಿಮವಾಗಿ, ಯುಪಿಎ 2012 ರಲ್ಲಿ ಆ ಸ್ಥಾನಮಾನ ನೀಡಿತು. ಇದನ್ನು ಖರ್ಗೆ ಅವರ ಕಿರೀಟದ ಗರಿ ಎಂದು ಪರಿಗಣಿಸಲಾಗಿದೆ.
371 (ಜೆ) ಕಲಂ ದೊಡ್ಡಮನಿ ಅವರಿಗೆ ಅನುಕೂಲಕರವಾಗಿ ಪರಿಣಮಿಸುತ್ತದೆಯೇ ಅಥವಾ ಜನರು ಜಾತಿಯನ್ನು ಲೆಕ್ಕಿಸದೆ ಮೋದಿ ಅವರಿಗೆ ಮತ ಹಾಕುತ್ತಾರೆಯೇ ಎನ್ನುವುದು ಜೂನ್ 4ರಂದು ಬಹಿರಂಗವಾಗಲಿದೆ.