ಬೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ

ಬೆಂಗಳೂರಿನ ಇವಿ ಬಳಕೆದಾರರಿಗೆ ತ್ವರಿತ ಹಾಗೂ ವಿಶ್ವಾಸಾರ್ಹ ಇವಿ ಚಾರ್ಜಿಂಗ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರದ ಸ್ಥಾಪನೆಯೂ ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಎಂಡಿ ಡಾ. ಎನ್. ಶಿವಶಂಕರ್ ತಿಳಿಸಿದರು.;

Update: 2025-08-15 14:15 GMT

ಬೆಸ್ಕಾಂ ಇವಿ ಕೇಂದ್ರಕ್ಕೆ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್ ಚಾಲನೆ ನೀಡಿದರು.

ವಿದ್ಯುತ್ ವಾಹನ ಮೂಲ ಸೌಕರ್ಯ ಅಭಿವೃದ್ದಿಯಲ್ಲಿ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದ್ದು, ಬೇಡಿಕೆಗೆ ಅನುಕೂಲವಾಗುವಂತೆ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಬದ್ಧವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೆವಿಕಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್ ತಿಳಿಸಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಇವಿ(EV) ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಬೆಂಗಳೂರಿನ ಇವಿ ಬಳಕೆದಾರರಿಗೆ ತ್ವರಿತ ಹಾಗೂ ವಿಶ್ವಾಸಾರ್ಹ ಇವಿ ಚಾರ್ಜಿಂಗ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರದ ಸ್ಥಾಪನೆಯೂ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಸುಮಾರು 250 ಬ್ಯಾಟರಿ ವಿನಿಮಯ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಇಂಡೋ ಫಾಸ್ಟ್ ಎನರ್ಜಿ ಕಂಪನಿಯ ಸಹಭಾಗಿತ್ವದಲ್ಲಿ ಬೆಸ್ಕಾಂ ಕಾರ್ಪೋರೇಟ್‌ ಕಚೇರಿಯಲ್ಲಿ ಇವಿ ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸಲಾಗಿದೆ," ಎಂದರು.

"ಇವಿ ವಾಹನಗಳಲ್ಲಿನ ಖಾಲಿಯಾದ ಬ್ಯಾಟರಿಗಳನ್ನು ಜಾರ್ಜ್‌ ಆದ ಬ್ಯಾಟರಿಗಳೊಂದಿಗೆ ಈ ಕೇಂದ್ರದಲ್ಲಿ ಕೇವಲ 2 ನಿಮಿಷದಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ದ್ವಿಚಕ್ರ ಹಾಗೂ ತ್ರಿಚಕ್ರ ಇವಿ ಬಳಕೆದಾರರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ"ಎಂದು ತಿಳಿಸಿದರು.

"ನಗರದ 20 ಕಡೆಗಳಲ್ಲಿ ಬೆಸ್ಕಾಂನ ಬ್ಯಾಟರಿ ವಿನಿಮಯ ಕೇಂದ್ರಗಳು ಸ್ಥಾಪನೆಯಾಗಲಿವೆ. ಕರ್ನಾಟಕದಲ್ಲಿ ಒಟ್ಟು 5,871 ಇವಿ ಚಾರ್ಜಿಂಗ್‌ ಸ್ಟೇಷನ್‌ಗಳಿವೆ. ಬೆಂಗಳೂರು ನಗರದಲ್ಲಿ 4,503 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಈ ವರ್ಷ ಹೊಸದಾಗಿ 50 ಕಡೆಗಳಲ್ಲಿ 140 ಚಾರ್ಜರ್‌ಗಳನ್ನು ಅಳವಡಿಸಲಾಗಿದೆ," ಎಂದು ಮಾಹಿತಿ ನೀಡಿದರು. 

Tags:    

Similar News