ಲಾಲ್‌ಬಾಗ್‌ನಲ್ಲಿ ಪುಪ್ಫ ವಿಲಾಸ; ಪ್ರೇಕ್ಷಕರಲ್ಲಿ ನವೋಲ್ಲಾಸ
ಲಾಲ್‌ಬಾಗ್‌ನ ನರ್ಸರಿಯಲ್ಲಿ ಕುಂಡದಲ್ಲಿ ಬೆಳೆಸಿದ ಗಿಡಗಳು ಹಾಗೂ ಪುಣೆ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಂತಹ ಸ್ಥಳಗಳಿಂದ ತರಿಸಿದ ಹೂವುಗಳನ್ನು ಈ ಪ್ರದರ್ಶನದಲ್ಲಿ ಸೇರ್ಪಡೆಯಾಗಿವೆ.;
ಹೂವುಗಳಿಂದ ಅರಳಿದ ಕಿತ್ತೂರು ರಾಣಿ ಚೆನ್ನಮ್ಮನ ಕೋಟೆ
ಸಸ್ಯಕಾಶಿ ಲಾಲ್‌ಬಾಗ್‌ನ ಗಾಜಿನ ಮನೆಯೊಳಗೆ ಸ್ವಾತಂತ್ರ್ಯ ದಿನದ ಅಂಗವಾಗಿ 218 ನೇ ಫಲಫುಪ್ಪ ಪ್ರದರ್ಶನ ಆರಂಭವಾಗಿದೆ. ಈ ಬಾರಿ ಕಿತ್ತೂರು ರಾಣಿ ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ವಿಷಯಾಧರಿತ ಫಲಪುಪ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಬಣ್ಣ ಬಣ್ಣದ ಹೂವುಗಳಲ್ಲಿ ಕಿತ್ತೂರು ಕೋಟೆ, ಅದರ ಮೇಲೆ ಕಿತ್ತೂರು ಸಂಸ್ಥಾನದ ಲಾಂಛನ, ನೂರಾರು ಪುಷ್ಪಗಳ ಮಧ್ಯೆ ಕಿತ್ತೂರು ರಾಣಿ ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳು ಅನಾವರಣಗೊಂಡಿವೆ.
ತೋಟಗಾರಿಕೆ ಇಲಾಖೆಯಿಂದ ಲಾಲ್‌ಬಾಗ್‌ನಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ 'ವೀರರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ವಿಷಯ ಆಧಾರಿತ 218ನೇ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದು, ಈ ಪ್ರದರ್ಶನವು ಆಗಸ್ಟ್ 7ರಿಂದ 18ರ ವರೆಗೆ ನಡೆಯಲಿದೆ.
ಗಾಜಿನ ಮನೆಯಲ್ಲಿ ವೀರರಾಣಿ ಚನ್ನಮ್ಮ ಅವರ ಕಾರ್ಯಕ್ಷೇತ್ರವಾಗಿದ್ದ ಕಿತ್ತೂರು ಕೋಟೆಯ ಮಾದರಿಯನ್ನು 18 ಅಡಿ ಎತ್ತರ ಹಾಗೂ 34 ಅಡಿ ಸುತ್ತಳತೆಯ ಈ ಭವ್ಯ ಕೋಟೆಯನ್ನು ಹಸಿರು, ಬಿಳಿ, ಕಂದು ಹಾಗೂ ಗುಲಾಬಿ ವರ್ಣದ 1.5 ಲಕ್ಷ ಡಚ್ ಗುಲಾಬಿ, 1.5 ಲಕ್ಷ ಹೈಬ್ರಿಡ್ ಸೇವಂತಿಗೆ ಹಾಗೂ 30 ಸಾವಿರ ಕೋಲ್ಕತ್ತಾ ಸೇವಂತಿಗೆ ಹೂವುಗಳನ್ನು ಬಳಸಿ ನಿರ್ಮಿಸಲಾಗಿದೆ. ಒಟ್ಟಾರೆಯಾಗಿ ಈ ಕೋಟೆಗೆ 6.6 ಲಕ್ಷ ಹೂವುಗಳನ್ನು ಬಳಸಿ ನಿರ್ಮಿಸಿದ ಈ ಕಲಾಕೃತಿಯಯನ್ನು ನಿರ್ಮಿಸಲಾಗಿದೆ.
ಈ ಪುಪ್ಪ ಪ್ರದರ್ಶನ ಬಗ್ಗೆ ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಗದೀಶ್, ಈ ಪ್ರದರ್ಶನಕ್ಕೆ ದೇಶದ ಮೂಲೆ ಮೂಲೆಯಿಂದ ಹೂವುಗಳು ಹರಿದು ಬಂದಿವೆ. ಸ್ಥಳೀಯ ಹಾಗೂ ಹೊರಗಿನ ಕಂಪನಿಗಳಿಂದ ಒಟ್ಟು 40ಕ್ಕೂ ಹೆಚ್ಚು ಬಗೆಯ ವಾರ್ಷಿಕ ಹೂವುಗಳ ಗಿಡಗಳನ್ನು ತಂದು ನಾಲ್ಕು ತಿಂಗಳುಗಳ ಕಾಲ ಲಾಲ್‌ಬಾಗ್‌ನಲ್ಲಿ ಬೆಳೆಸಲಾಗಿದೆ. ಇಲ್ಲಿಯೇ ಬೆಳೆದಂತಹ ಡೇಲಿಯಾ, ಸೇವಂತಿಗೆ ಮುಂತಾದ 40ಕ್ಕೂ ಹೆಚ್ಚು ಬಗೆಯ ಹೂವುಗಳನ್ನು ಈ ಪ್ರದರ್ಶನಕ್ಕೆ ಬಳಸಲಾಗಿದೆ. ಇದಲ್ಲದೆ ಲಾಲ್‌ಬಾಗ್‌ನ ನರ್ಸರಿಯಲ್ಲಿ ಕುಂಡದಲ್ಲಿ ಬೆಳೆಸಿದ ಗಿಡಗಳು ಹಾಗೂ ಪುಣೆ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಂತಹ ಸ್ಥಳಗಳಿಂದ ತರಿಸಿದ ಹೂವುಗಳನ್ನು ಈ ಪ್ರದರ್ಶನದಲ್ಲಿ ಸೇರ್ಪಡೆಯಾಗಿವೆ ಎಂದರು.
ಇಂಡೋ-ಅಮೆರಿಕನ್ ಹೈಬ್ರಿಡ್ ಕಂಪನಿ, ಭಾಗ್ಯಲಕ್ಷ್ಮೀ ನರ್ಸರಿ, ಪ್ಲೋರಾನ್ ಪ್ಲೋರಾ ಕಂಪನಿಗಳಂತಹ ಪ್ರತಿಷ್ಠಿತ ಸಂಸ್ಥೆಗಳಿಂದಲೂ ಕೆಲವು ವಿಶೇಷ ಜಾತಿಯ ಹೂವುಗಳನ್ನು ತರಲಾಗಿದೆ. ವಿಶೇಷವಾಗಿ, ಶೀತ ಪ್ರದೇಶಗಳಲ್ಲಿ ಬೆಳೆಯುವ ಹೂವುಗಳನ್ನು ನಂದಿ ಹಿಲ್ಸ್ ಮತ್ತು ಊಟಿಯಿಂದ ತರಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಇವುಗಳ ಜೊತೆಗೆ, ಎಚ್‌ಎಲ್‌ನಂತಹ ಕಂಪನಿಗಳು ಬೆಳೆಸಿದ ವಿಶೇಷ ಹೂವುಗಳೂ ಇಲ್ಲಿ ಪ್ರದರ್ಶನದಲ್ಲಿವೆ ಎಂದು ತಿಳಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಕೆಚ್ಚೆದೆಯನ್ನು ಸಾರುವ ಚಿತ್ರಣಗಳೂ ಹೂವುಗಳಲ್ಲಿ ಮೂಡಿವೆ. ಈ ಪ್ರದರ್ಶನವು ಕೇವಲ ಚನ್ನಮ್ಮ ಮತ್ತು ರಾಯಣ್ಣರಿಗೆ ಮಾತ್ರ ಸೀಮಿತವಾಗಿಲ್ಲ. ಇವರೊಂದಿಗೆ, ರಾಣಿ ಅಬ್ಬಕ್ಕ ದೇವಿ, ಚೆನ್ನಾ ಭೈರಾದೇವಿ, ಬೆಳವಾಡಿ ಮಲ್ಲಮ್ಮ, ಮತ್ತು ಒನಕೆ ಓಬವ್ವ ಅವರಂತಹ ನಮ್ಮ ನಾಡಿನ ಇತರ ವೀರ ವನಿತೆಯರ ಪ್ರತಿಮೆಗಳೂ ಪ್ರದರ್ಶನದಲ್ಲಿ ಸೇರಿಕೊಂಡಿವೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮರ ಐಕ್ಯ ಸ್ಮಾರಕದ ಮಾದರಿಯನ್ನು ಕೂಡ ಹೂವುಗಳಲ್ಲಿ ಮರುಸೃಷ್ಟಿಸಲಾಗಿದೆ. 8 ಅಡಿ ಅಗಲ ಮತ್ತು 13 ಅಡಿ ಎತ್ತರದ ಈ ಸುಂದರ ಗೋಪುರವನ್ನು 50 ಸಾವಿರಕ್ಕೂ ಹೆಚ್ಚು ಗುಲಾಬಿಗಳು ಮತ್ತು 2.40 ಲಕ್ಷ ಸೇವಂತಿಗೆ ಹೂವುಗಳಿಂದ ಅಲಂಕರಿಸಲಾಗಿದೆ. ಇದರ ಭವ್ಯತೆಗೆ ಮನಸೋತಿರುವ ಜನರು ಅದರ ಮುಂದೆ ನಿಂತು ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದಾರೆ.
ವೀಕ್ಷಣೆ ಸಮಯ ಹಾಗೂ ಶುಲ್ಕದ ವಿವರ
ಸಮಯ: ಆಗಸ್ಟ್ 17 ರ ವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 6 ಗಂಡೆ ವರೆಗೆ
ಶುಲ್ಕ: ವಾರದ ದಿನಗಳಲ್ಲಿ ವಯಸ್ಕರಿಗೆ 80 ರೂಪಾಯಿ, ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳ (ಶನಿವಾರ, ಭಾನುವಾರ) ವೇಳೆ 100 ರೂಪಾಯಿ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ. ಸಮವಸ್ತ್ರದಲ್ಲಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಟಿಕೆಟ್ ಪಡೆಯುವ ವಿಧಾನಗಳು
ಟಿಕೆಟ್‌ಗಳನ್ನು ಲಾಲ್‌ಬಾಗ್ ಪ್ರವೇಶ ದ್ವಾರಗಳಲ್ಲಿ ಪಡೆಯಬಹುದು. ಅಧಿಕೃತ ಪೋರ್ಟಲ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ಪ್ರದರ್ಶನಕ್ಕೆ ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಜನರು ಬಂದಿದ್ದಾರೆ. ಮಳೆ ಸ್ವಲ್ಪ ಅಡ್ಡಿಪಡಿಸಿದರೂ, ವಾರಾಂತ್ಯದಲ್ಲಿ ಜನಸಾಗರವೇ ಹರಿದುಬರುವ ನಿರೀಕ್ಷೆಯಿದೆ.