ಧರ್ಮಸ್ಥಳ ಪ್ರಕರಣ | ಎಸ್‌ಐಟಿ ತನಿಖೆ ಪೂರ್ವಾಗ್ರಹವಲ್ಲ ; ದಿನೇಶ್ ಗುಂಡೂರಾವ್ ಸ್ಪಷ್ಟನೆ
ಎಸ್‌ಐಟಿ ತನಿಖಾ ವರದಿ ಬಂದ ಬಳಿಕ ಸರ್ಕಾರ ಕಾನೂನುಬದ್ಧ ಕ್ರಮ ಕೈಗೊಳ್ಳಲಿದೆ. ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆಗಳನ್ನು ಯಾರೂ ನೀಡಬಾರದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.;
ಧರ್ಮಸ್ಥಳ ಅಥವಾ ಧರ್ಮಾಧಿಕಾರಿ ವಿರುದ್ಧ ಸರ್ಕಾರಕ್ಕೆ ಯಾವುದೇ ರೀತಿಯ ಪೂರ್ವಗ್ರಹವಿಲ್ಲ, ಸರ್ಕಾರ ನಿಷ್ಪಕ್ಷಪಾತ ಹಾದಿಯಲ್ಲೇ ತನಿಖೆ ನಡೆಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಧರ್ಮಸ್ಥಳ ಪ್ರಕರಣದ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡವು ಕಾನೂನಿನಡಿಯೇ ತನಿಖೆ ನಡೆಸುತ್ತಿದೆ. ಇದರ ಬಗ್ಗೆ ಜನರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.
ಎಸ್‌ಐಟಿ ತನಿಖಾ ವರದಿ ಬಂದ ಬಳಿಕ ಸರ್ಕಾರ ಕಾನೂನುಬದ್ಧ ಕ್ರಮ ಕೈಗೊಳ್ಳಲಿದೆ. ಯಾರ ಮೇಲೆಯೂ ಅನಾವಶ್ಯಕ ಅಪಪ್ರಚಾರ ಮಾಡುವುದು ತಪ್ಪು. ವಿಶೇಷವಾಗಿ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆಗಳನ್ನು ಯಾರೂ ನೀಡಬಾರದು. ಜತೆಗೆ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನವನ್ನೂ ಮಾಡಬಾರದು ಎಂದು ಮನವಿ ಮಾಡಿದರು.
ಎಸ್ಐಟಿ ತನಿಖೆಯಿಂದ ಸತ್ಯಾಸತ್ಯತೆ
ಎಸ್ಐಟಿ ತನಿಖೆಯಿಂದ ಧರ್ಮಸ್ಥಳ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡುವುದು ಸಲ್ಲ. ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರ ಬರಬೇಕಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಗಮನಿಸಿದ್ದೇನೆ. ನಾವೆಲ್ಲರೂ ಧರ್ಮಸ್ಥಳ ಮಂಜುನಾಥನ ಭಕ್ತರು, ಈ ವಿಚಾರವಾಗಿ ಡಿಸಿಎಂ ಅವರ ಹೇಳಿಕೆಗೆ ನನ್ನ ಸಹಮತವಿದೆ. ಎಸ್ ಐ ಟಿ ತನಿಖೆ ಬಗ್ಗೆ ಅಧಿಕಾರಿಗಳು ಗೃಹಸಚಿವರಿಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಕ್ಷೇತ್ರ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಅವಹೇಳನ ಮಾಡಲಾಗುತ್ತಿದೆ. ಸೌಜನ್ಯಳಿಗೆ ಅನ್ಯಾಯ ಆಗಿದ್ದರೆ, ನ್ಯಾಯ ಸಿಗಬೇಕು. ಮುಸಕುಧಾರಿ ಬೇರೆ ಬೇರೆ ಸ್ಥಳವನ್ನು ಗುರುತು ಮಾಡುತ್ತಿದ್ದಾನೆ. ಇದಕ್ಕೆಲ್ಲಾ ಉತ್ತರ ಸಿಗಬೇಕು ಎಂದೇ ಎಸ್‌ಐಟಿ ರಚಿಸಲಾಗಿದೆ. ಆದಷ್ಟು ಬೇಗ ಉತ್ತರ ಸಿಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.