ಬಯಲು ಸೀಮೆಗೆ ಸಿಹಿ ಸುದ್ದಿ: ಎತ್ತಿನಹೊಳೆ ನೀರು ಮೊದಲು ಕೋಲಾರ, ಚಿಕ್ಕಬಳ್ಳಾಪುರಕ್ಕೆ

ಕೋಮಲ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆ ನಡೆಸಲಾಗುವುದು. ಮೇವು ಮತ್ತು ವಿದ್ಯುತ್ ಎರಡೂ ಅಗತ್ಯವಿದೆ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು.;

Update: 2025-08-15 12:08 GMT
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಮಾತನಾಡಿದರು.

ದಶಕಗಳಿಂದ ಕುಡಿಯುವ ನೀರಿಗಾಗಿ ಹಾತೊರೆಯುತ್ತಿರುವ ಬಯಲು ಸೀಮೆಯ ಮೂರು ಪ್ರಮುಖ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಎತ್ತಿನಹೊಳೆ ಯೋಜನೆಯ ನೀರನ್ನು ಮೊದಲು ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲು ನಿರ್ಧರಿಸಲಾಗಿದೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಎತ್ತಿನಹೊಳೆ ಯೋಜನೆಯ ಅಂತಿಮ ಭಾಗದಲ್ಲಿರುವ ಈ ಮೂರು ಜಿಲ್ಲೆಗಳಿಗೆ ನೀರು ತಲುಪುವುದರ ಬಗ್ಗೆ ನಮಗೂ ಆತಂಕವಿತ್ತು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿರುವ ಅವರು, ಈ ಮೂರು ಜಿಲ್ಲೆಗಳಿಗೆ ಆದ್ಯತೆ ಮೇಲೆ ನೀರು ಹರಿಸಲು ಒಪ್ಪಿಗೆ ಸೂಚಿಸಿದ್ದಾರೆ" ಎಂದು ತಿಳಿಸಿದರು. ಈ ನಿರ್ಧಾರವು ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸಂದ ಜಯವಾಗಿದೆ.

ಕೋಲಾರಕ್ಕೆ ಡಬಲ್ ಧಮಾಕ: ವೈದ್ಯಕೀಯ ಕಾಲೇಜು, ನಗರಸಭೆ ಮೇಲ್ದರ್ಜೆಗೆ

ಕೋಲಾರ ಜಿಲ್ಲೆಯ ಮತ್ತೊಂದು ಬಹುದೊಡ್ಡ ಕನಸಾದ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದರು. "ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಮೊದಲಿಗೆ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಲು ಪ್ರಯತ್ನಿಸಲಾಗುವುದು. ಒಂದು ವೇಳೆ ಖಾಸಗಿಯವರು ಮುಂದೆ ಬರದಿದ್ದರೆ, ಸರ್ಕಾರವೇ ಸಂಪೂರ್ಣ ಜವಾಬ್ದಾರಿ ಹೊತ್ತು ಕಾಲೇಜು ನಿರ್ಮಿಸಲಿದೆ" ಎಂದು ಅವರು ಹೇಳಿದರು. ಇದೇ ವೇಳೆ, ಕೋಲಾರ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನೂ ಪರಿಶೀಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೋಮುಲ್ ಅಕ್ರಮ: ತನಿಖೆಗೆ ಆದೇಶ

ಕೋಲಾರ ಹಾಲು ಒಕ್ಕೂಟದಲ್ಲಿ (ಕೋಮುಲ್) ಮೇವು ಮತ್ತು ವಿದ್ಯುತ್ಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಸಂಬಂಧ ಸ್ಥಳೀಯ ಶಾಸಕರಾದ ನಾರಾಯಣಸ್ವಾಮಿ ಮತ್ತು ನಂಜೇಗೌಡ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ರಾಜಣ್ಣ ವಜಾ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ

ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಇದು ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರ. ನಾವೆಲ್ಲರೂ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ" ಎಂದರು. "ರಾಜಣ್ಣ ಅವರು ಬಿಜೆಪಿ ಕಡೆ ಒಲವು ಹೊಂದಿದ್ದಾರೆ" ಎಂಬ ಶ್ರೀರಾಮುಲು ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಶ್ರೀರಾಮುಲು ಅವರು ಮೊದಲು ಬಿಜೆಪಿಯಲ್ಲಿ ತಮ್ಮ ಸ್ಥಾನಮಾನ ಏನೆಂಬುದನ್ನು ತಿಳಿದುಕೊಳ್ಳಲಿ" ಎಂದು ಸಲಹೆ ನೀಡಿದರು. 

Tags:    

Similar News