ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿಲತಾ ವಿರುದ್ಧ ಎಫ್‌ಐಆರ್

Update: 2024-05-13 11:01 GMT

ಮೇ 13- ಹೈದರಾಬಾದ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಮಾಧವಿ ಲತಾ ಅವರು ಗುರುತು ಪರಿಶೀಲಿಸಲು ಬುರ್ಖಾ ಧರಿಸಿದ ಮಹಿಳೆಯರಿಗೆ ಮುಖ ತೋರಿಸುವಂತೆ ಕೇಳಿದ್ದಾರೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಮಾಧವಿ ಲತಾ ಅವರು ಬುರ್ಖಾ ಧರಿಸಿರುವ ಮಹಿಳಾ ಮತದಾರರನ್ನುಗುರುತಿನ ಚೀಟಿಯೊಂದಿಗೆ ಹೋಲಿಸಲು ಮುಖ ತೋರಿಸಲು ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 171 ಸಿ, 186, 505 (1) (ಸಿ) ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 132 ರ ಅಡಿಯಲ್ಲಿ ಮಲಕ್‌ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೈದರಾಬಾದ್ ಜಿಲ್ಲಾಧಿಕಾರಿ ಎಕ್ಸ್‌ ನಲ್ಲಿ ತಿಳಿಸಿದ್ದಾರೆ. 

ಇದಕ್ಕೂ ಮುನ್ನ ಮಾಧವಿ ಲತಾ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ರೊನಾಲ್ಡ್ ರಾಸ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಅಭ್ಯರ್ಥಿಗಳ ಗುರುತು ಪರಿಶೀಲಿಸುವ ಅಧಿಕಾರ ಅಭ್ಯರ್ಥಿಗಳಿಗೆ ಇಲ್ಲ ಎಂದು ತಿಳಿಸಿದ್ದರು. 

ಮಾಧವಿ ಲತಾ ಅವರು ಹಾಲಿ ಸಂಸದ-ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿದ್ದಾರೆ. ಮುಸ್ಲಿಂ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರ ದಶಕಗಳಿಂದ ಓವೈಸಿ ಕುಟುಂಬದ ಭದ್ರಕೋಟೆಯಾಗಿದೆ. ಈ ಕುರಿತು ಓವೈಸಿ ಪ್ರತಿಕ್ರಿಯಿಸಿಲ್ಲ. ಆದರೆ, ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಪರಿಶೀಲಿಸುವ ಹಕ್ಕು ಇದೆ: ಕಾನೂನಿನ ಪ್ರಕಾರ, ಮತದಾರರ ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಅಭ್ಯರ್ಥಿಗೆ ಇದೆ ಎಂದು ಮಾಧವಿ ಲತಾ ಹೇಳಿದ್ದಾರೆ. ʻಗುರುತು ಪರಿಶೀಲಿಸುವ ಮೊದಲು ಅವರಲ್ಲಿ ವಿನಂತಿಸಿಕೊಂಡಿದ್ದೆ. ನಾನು ಅಭ್ಯರ್ಥಿ. ಕಾನೂನಿನ ಪ್ರಕಾರ, ಗುರುತಿನ ಚೀಟಿಗಳನ್ನು ಪರಿಶೀಲಿಸುವ ಹಕ್ಕು ಹೊಂದಿದ್ದೇನೆ. ಇದನ್ನು ದೊಡ್ಡ ಸಮಸ್ಯೆ ಎಂದು ಬಿಂಬಿಸುತ್ತಿರುವವರು ಭಯಭೀತರಾಗಿದ್ದಾರೆ ಎಂದರ್ಥ,ʼ ಎಂದು ತಿಳಿಸಿದರು. ಮತಗಟ್ಟೆಯಲ್ಲಿ ಪೊಲೀಸ್ ಸಿಬ್ಬಂದಿ ಏನನ್ನೂ ಪರಿಶೀಲಿಸುತ್ತಿಲ್ಲ. ಅನೇಕ ಹಿರಿಯ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ತೆಗೆದುಹಾಕಿದ್ದಾರೆ ಎಂದು ದೂರಿದ್ದಾರೆ ಎಂದರು.

Tags:    

Similar News