ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾ ಅವರಿಗೆ ಸುಪ್ರೀಂ ಜಾಮೀನು

ನವ್ಲಾಖಾ ಅವರು ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಕರಣದಲ್ಲಿ ಇನ್ನೂ ಆರೋಪ ದಾಖಲಿಸಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.

Update: 2024-05-14 10:28 GMT

ನವದೆಹಲಿ, ಮೇ 14- ಎಲ್ಗಾರ್ ಪರಿಷತ್- ಮಾವೋವಾದಿ ನಂಟು ಪ್ರಕರಣದಲ್ಲಿ ಕಾರ್ಯಕರ್ತ ಗೌತಮ್ ನವ್ಲಾಖಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ. 

ನವ್ಲಾಖಾ ಅವರಿಗೆ ನೀಡಲಾಗಿದ್ದ ಜಾಮೀನಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಲು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್ ಮತ್ತು ಎಸ್.ವಿ.ಎನ್.ಭಟ್ಟಿ ಅವರ ಪೀಠ ನಿರಾಕರಿಸಿತು. ಗೃಹಬಂಧನದಲ್ಲಿ ಭದ್ರತೆ ವೆಚ್ಚ 20 ಲಕ್ಷ ರೂ.ನೀಡುವಂತೆ ನವ್ಲಾಖಾ ಅವರಿಗೆ ನಿರ್ದೇಶನ ನೀಡಿದೆ. 

ʻಹೈಕೋರ್ಟ್ ಜಾಮೀನಿಗೆ ನೀಡಿದ ತಡೆಯಾಜ್ಞೆಯನ್ನು ವಿಸ್ತರಿಸುವುದಿಲ್ಲ. ವಿಚಾರಣೆ ಪೂರ್ಣಗೊಳ್ಳಲು ಹಲವು ವರ್ಷ ಬೇಕಾಗಬಹುದು. ವಿವಾದ ಕುರಿತು ವಿಸ್ಕೃತ ವಿಚಾರಣೆ ಇಲ್ಲದೆ, ನಾವು ತಡೆಯನ್ನು ವಿಸ್ತರಿಸುವುದಿಲ್ಲ. 20 ಲಕ್ಷ ರೂ. ಆದಷ್ಟು ಬೇಗ ಎದುರು ಪಕ್ಷಕ್ಕೆ ಪಾವತಿಸ ಬೇಕು,ʼ ಎಂದು ಪೀಠ ಹೇಳಿದೆ. ನವ್ಲಾಖಾ ಅವರು ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಕರಣದಲ್ಲಿ ಇನ್ನೂ ಆರೋಪ ದಾಖಲಿಸಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.

ಕಳೆದ ವರ್ಷ ಡಿಸೆಂಬರ್ 19 ರಂದು ಬಾಂಬೆ ಹೈಕೋರ್ಟ್ ನವ್ಲಾಖಾ ಅವರಿಗೆ ಜಾಮೀನು ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಎನ್‌ಐಎ ಸಮಯ ಕೋರಿದ್ದರಿಂದ, ಮೂರು ವಾರ ಕಾಲ ತನ್ನ ಆದೇಶವನ್ನು ತಡೆಹಿಡಿಯಿತು. 2018ರ ಆಗಸ್ಟ್‌ನಲ್ಲಿ ಬಂಧನಕ್ಕೊಳಗಾಗಿದ್ದ ನವ್ಲಾಖಾ ಅವರನ್ನು 2023ರ ನವೆಂಬರ್‌ನಲ್ಲಿ ಗೃಹ ಬಂಧನದಲ್ಲಿಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಅವರು ಪ್ರಸ್ತುತ ನವಿ ಮುಂಬೈನಲ್ಲಿ ನೆಲೆಸಿದ್ದಾರೆ.

ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದಕ ಭಾಷಣಗಳಿಂದ ಪಶ್ಚಿಮ ಮಹಾರಾಷ್ಟ್ರ ನಗರದ ಹೊರವಲಯದಲ್ಲಿರುವ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ನಡೆಯಿತು ಎಂದು ಪೊಲೀಸರು ಹೇಳಿದ್ದರು. ಪ್ರಕರಣದಲ್ಲಿ 16 ಕಾರ್ಯಕರ್ತರನ್ನು ಬಂಧಿಸಿದ್ದು, ಅವರಲ್ಲಿ ಐವರು ಜಾಮೀನು ಪಡೆದಿದ್ದಾರೆ. 

Tags:    

Similar News