ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ದ 223 ಉದ್ಯೋಗಿಗಳ ನೇಮಕದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ, ಎಲ್ಲರನ್ನೂ ವಜಾಗೊಳಿಸಿದ್ದಾರೆ. ಈ ನಿರ್ಧಾರ ಎಲ್‌ಜಿ ಮತ್ತು ಆಪ್ ಸರ್ಕಾರದ ನಡುವೆ ಇನ್ನೊಂದು ಸುತ್ತು ಸಂಘರ್ಷಕ್ಕೆ ಕಾರಣವಾಗಲಿದೆ.
ಗುತ್ತಿಗೆ ಆಧಾರದ ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ತೆಗೆದುಹಾಕಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ. ಅಕ್ರಮ ನೇಮಕ: ಮಾಜಿ ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್(ಈಗ ಆಪ್ ರಾಜ್ಯಸಭೆ ಸದಸ್ಯೆ) ಸರ್ಕಾರದ ಅನುಮತಿಯಿಲ್ಲದೆ ಮತ್ತು ನಿಯಮಗಳಿಗೆ ವಿರುದ್ಧವಾಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಆದೇಶ ಹೇಳಿದೆ. ʻಡಿಸಿಡಬ್ಲ್ಯು ನಿಬಂಧನೆಗಳನ್ನು ಉಲ್ಲಂಘಿಸಿದೆ.
ವಿವಿಧ ಸ್ಥಾಯಿ ಸೂಚನೆಗಳನ್ನು ಉಲ್ಲಂಘಿಸಿ 223 ಹುದ್ದೆಗಳನ್ನು ರಚಿಸಿದೆ ಮತ್ತು ಸಮರ್ಪಕ ಕಾರ್ಯವಿಧಾನವನ್ನು ಅನುಸರಿಸದೆ ಸಿಬ್ಬಂದಿ ನೇಮಕ ಮಾಡಿಕೊಂಡಿದೆʼ ಎಂದು ಆದೇಶ ತಿಳಿಸಿದೆ. ಸ್ಥಾಯಿ ಸಮಿತಿ 40 ನೌಕರರನ್ನು ಮಂಜೂರು ಮಾಡಿತ್ತು. ಆದರೆ, ಲೆಫ್ಟಿನೆಂಟ್ ಗವರ್ನರ್ ಅವರ ಅನುಮೋದನೆಯಿಲ್ಲದೆ 223 ಹೊಸ ಹುದ್ದೆಗಳನ್ನು ರಚಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯ ಅಗತ್ಯ ಮತ್ತು ಪ್ರತಿ ಹುದ್ದೆಗೆ ಅರ್ಹತೆಯನ್ನು ನಿರ್ಣಯಿಸಲು ಯಾವುದೇ ಅಧ್ಯಯನ ನಡೆಸಿ. ನೇಮಿಸಿಕೊಳ್ಳಲು ಯಾವುದೇ ಆಡಳಿತಾತ್ಮಕ ಅನುಮೋದನೆ ಮತ್ತು ಆರ್ಥಿಕ ಮಂಜೂರು ಪಡೆದಿಲ್ಲ ಎಂದು ಆದೇಶ ಹೇಳಿದೆ.
ಹೆಚ್ಚು ವೇತನ: ಕೆಲವರಿಗೆ ಅಧಿಕ ವೇತನ ನಿಗದಿಗೊಳಿಸಲಾಗಿದೆ. ಮಂಜೂರಾಗದೆ ಮತ್ತು ಸರಿಯಾದ ಕಾರ್ಯವಿಧಾನ ಅನುಸರಿಸದ ನೇಮಕಗಳು ಅನೂರ್ಜಿತ. ಡಿಸಿಡಬ್ಲ್ಯುಗೆ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಅಧಿಕಾರ ಇಲ್ಲ. ಡಿಸಿಡಬ್ಲ್ಯು ಅಧ್ಯಕ್ಷರ ಹುದ್ದೆ ಸದ್ಯ ಖಾಲಿ ಇದೆ. ನೇಮಕಕ್ಕೆ ಸಂಬಂಧಿಸಿದಂತೆ ಅನುಮೋದನೆ ಪಡೆಯುವಂತೆ ಮಲಿವಾಲ್ ಅವರಿಗೆ ಪದೇ ಪದೇ ಹೇಳಲಾಗಿದೆʼ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಲೆಫ್ಟಿನೆಂಟ್ ಗವರ್ನರ್ ಕಚೇರಿಯು ಆಡಳಿತಾತ್ಮಕ ಕ್ರಮಗಳನ್ನು ತಡೆಯುತ್ತಿದೆ ಮತ್ತು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲ ಎಂದು ಎಎಪಿ ಮೊದಲಿನಿಂದಲೂ ಆರೋಪಿಸುತ್ತಿದೆ. ಆದೇಶಕ್ಕೆ ಎಎಪಿ ಮತ್ತು ಮಲಿವಾಲ್ ಇನ್ನೂ ಪ್ರತಿಕ್ರಿಯಿಸಿಲ್ಲ.