ನವದೆಹಲಿ, ಏಪ್ರಿಲ್ 19- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಿತೂರಿ ನಡೆಯುತ್ತಿದ್ದು, ಜೈಲಿನಲ್ಲಿ ಏನು ಬೇಕಾದರೂ ಆಗಬಹುದು ಎಂದು ಆಪ್ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನ್ನಾಡಿ, ಬಿಜೆಪಿಯ ʻಕಾರ್ಯವಿಧಾನʼ ಯಾರನ್ನಾದರೂ ಕೊಲ್ಲುವ ಮಟ್ಟಕ್ಕೂ ಇಳಿಯಬಹುದು ಎಂದು ಆರೋಪಿಸಿದರು.
ಕೇಜ್ರಿವಾಲ್ ಅವರ ಅನಾರೋಗ್ಯವನ್ನು ಗೇಲಿ ಮಾಡಿದ ಬಿಜೆಪಿ ನಾಯಕರನ್ನು ಟೀಕಿಸಿದ ಅವರು, ದೆಹಲಿ ಮುಖ್ಯಮಂತ್ರಿ ಬಗ್ಗೆ ʻದಾರಿತಪ್ಪಿಸುವʼ ಸುದ್ದಿಗಳನ್ನು ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ ಎಂದು ದೂರಿದರು. ʻಜೈಲಿನ ನಿಯಮಗಳ ಪ್ರಕಾರ, ಕೈದಿಗಳ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶವಿಲ್ಲ ಎಂದಾದರೆ, ಇಡಿ ಗುರುವಾರ ಮಾಧ್ಯಮಗಳಲ್ಲಿ ಕೇಜ್ರಿವಾಲ್ ಅವರ ನಕಲಿ ಆಹಾರ ಪಟ್ಟಿಯನ್ನು ಏಕೆ ಪ್ರಚಾರ ಮಾಡಿದೆ? ಕೇಜ್ರಿವಾಲ್ ತಲೆಬಾಗುವುದಿಲ್ಲʼ ಎಂದು ಸಿಂಗ್ ಹೇಳಿದರು.
ಅರವಿಂದ್ ಕೇಜ್ರಿವಾಲ್ ಅವರಿಗೆ ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ಇನ್ಸುಲಿನ್ ನಿರಾಕರಿಸುವ ಮೂಲಕ ಕೊಲ್ಲುವ ಸಂಚು ನಡೆದಿದೆ ಎಂದು ದೆಹಲಿ ಕ್ಯಾಬಿನೆಟ್ ಸಚಿವೆ ಅತಿಶಿ ಗುರುವಾರ ಆರೋಪಿಸಿದ್ದರು. ಆದರೆ, ಜೈಲು ಅಧಿಕಾರಿಗಳು ಆರೋಪವನ್ನು ನಿರಾಕರಿಸಿದ್ದರು.
ವೈದ್ಯಕೀಯ ಜಾಮೀನು ಪಡೆಯಲು ಅಥವಾ ಆಸ್ಪತ್ರೆಗೆ ದಾಖಲಾಗಲು ಕೇಜ್ರಿವಾಲ್ ಅವರು ಪ್ರತಿದಿನ ಮಾವು, ಬಾಳೆಹಣ್ಣು ಮತ್ತು ಸಿಹಿತಿಂಡಿ ಸೇವಿಸುತ್ತಿದ್ದಾರೆ ಎಂದು ಇಡಿ ನ್ಯಾಯಾಲಯದಲ್ಲಿ ಹೇಳಿತ್ತು.
ಸಿಂಗ್ ಅವರ ಆರೋಪಕ್ಕೆ ಜಾರಿ ನಿರ್ದೇಶನಾಲಯ(ಇಡಿ) ಮತ್ತು ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.