ಪಿತ್ರೋಡಾ ಅವರ 'ಪಿತ್ರಾರ್ಜಿತ ತೆರಿಗೆ' ಹೇಳಿಕೆಯಿಂದ ವಿವಾದ

ಅಂತರ ಕಾಯ್ದುಕೊಂಡ ಕಾಂಗ್ರೆಸ್: ಯಾವ ಪ್ರಧಾನಿ ಕೂಡ ಈ ರೀತಿ ಮಾತನಾಡುವುದಿಲ್ಲ-ಪಿತ್ರೋಡಾ;

Update: 2024-04-24 13:05 GMT

ʻತಮ್ಮ ಪಕ್ಷ ಸಂಪತ್ತಿನ ಉತ್ತಮ ಹಂಚಿಕೆಗಾಗಿ ನೀತಿಯನ್ನು ರೂಪಿಸುತ್ತದೆʼ ಎಂಬ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. 

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಸಂಪತ್ತನ್ನು ಮರುಹಂಚಿಕೆ ಮಾಡಲಿದೆ ಎಂದು ಬಿಜೆಪಿ ಆರೋಪಿಸುತ್ತಿರುವ ಸಮಯದಲ್ಲಿ ಬಂದಿರುವ ಈ ಹೇಳಿಕೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

ಬುಧವಾರ (ಏಪ್ರಿಲ್ 24) ಪ್ರಕಟವಾದ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಪಿತ್ರೋಡಾ, ಕಾಂಗ್ರೆಸ್ ಪ್ರಣಾಳಿಕೆ ಮೇಲಿನ ಪ್ರಧಾನಿ ನರೇಂದ್ರ ಮೋದಿಯವರ ದಾಳಿ ಮತ್ತು ಪಕ್ಷ ಸಾರ್ವಜನಿಕರ ಸಂಪತ್ತನ್ನು ಮರುಹಂಚಿಕೆ ಮಾಡಲು ಉದ್ದೇಶಿಸಿದೆ ಎಂಬ ಆರೋಪ ಕುರಿತು ಚರ್ಚಿಸಿದ್ದಾರೆ. 

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಅವರಿಗೆ ಪ್ರಾತಿನಿಧ್ಯಕ್ಕಾಗಿ ನೀತಿ ಚೌಕಟ್ಟನ್ನು ರಚಿಸಲು ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸುವ ಬಗ್ಗೆ ಹೇಳಿದೆ. ಆದರೆ, ಪ್ರಣಾಳಿಕೆಯು ಸಂಪತ್ತಿನ ʻಮರುಹಂಚಿಕೆʼ ಕುರಿತು ಚರ್ಚಿಸಿಲ್ಲ. 

ಪಿತ್ರೋಡಾ ಹೇಳಿದ್ದೇನು?: ʻಕಾಂಗ್ರೆಸ್ ಆರ್ಥಿಕ ಪಿರಮಿಡ್‌ನ ಕೆಳಭಾಗದಲ್ಲಿರುವ ಜನರ ಬಗ್ಗೆ ಕಾಳಜಿ ವಹಿಸುತ್ತದೆ. ಮುಸ್ಲಿಮರು ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ಸುಧಾರಣೆಗೆ ಕೆಲಸ ಮಾಡುತ್ತದೆ. ಶತಕೋಟ್ಯಧೀಶರಿಗೆ ನಮ್ಮ ಸಹಾಯದ ಅಗತ್ಯವಿಲ್ಲ. ಬಡವರಿಗೆ ನಮ್ಮ ಸಹಾಯ ಬೇಕು. ಕಳೆದ 10 ವರ್ಷಗಳಲ್ಲಿ ಅಸಮಾನತೆ ಗಣನೀಯವಾಗಿ ಹೆಚ್ಚಿದೆʼ ಎಂದು ಪಿತ್ರೋಡಾ ತಿಳಿಸಿದರು

ʻನಿಮ್ಮ ಸಂಪತ್ತನ್ನು ತೆಗೆದುಕೊಂಡು, ಬೇರೆಯವರಿಗೆ ಕೊಡುತ್ತೀರಿ ಎಂದಲ್ಲ. ಬದಲಾಗಿ, ಸಂಪತ್ತಿನ ಕೇಂದ್ರೀಕರಣವನ್ನು ತಡೆಯಲು ಹೊಸ ನೀತಿಗಳನ್ನು ರಚಿಸುವುದು. ಇದು ಏಕಸ್ವಾಮ್ಯ ಕಾಯಿದೆಯನ್ನು ಹೋಳುತ್ತದೆ,ʼ ಎಂದು ಸೇರಿಸಿದರು.

ಉತ್ತರಾಧಿಕಾರ ತೆರಿಗೆ: 100 ದಶ ಲಕ್ಷ ಡಾಲರಿಗಿಂತ ಹೆಚ್ಚುಸಂಪತ್ತು ಇರುವ ವ್ಯಕ್ತಿಗಳ ಸಾವಿನ ನಂತರ ಪಿತ್ರಾರ್ಜಿತ ತೆರಿಗೆ ವಿಧಿಸುವ ಅಮೆರಿಕದ ಉದಾಹರಣೆ ನೀಡಿರುವ ಪಿತ್ರೋಡಾ, ಸಂಪತ್ತಿನ ಶೇ.55 ನ್ನು ಸರ್ಕಾರಕ್ಕೆ ತೆಗೆದುಕೊಳ್ಳುತ್ತದೆ. ಸಂಪತ್ತನ್ನು ಗಳಿಸಿದ್ದೀರಿ ಮತ್ತು ಸಾವಿನ ಬಳಿಕ ಅರ್ಧದಷ್ಟು ಸಂಪತ್ತನ್ನು ಸಾರ್ವಜನಿಕರಿಗೆ ಬಿಡಬೇಕು. ಇದು ನನ್ನ ಪ್ರಕಾರ ನ್ಯಾಯೋಚಿತʼ ಎಂದರು.

ʻ ಶ್ರೀಮಂತ ಭಾರತೀಯರು ಕೆಲಸಗಾರರಿಗೆ ಸಾಕಷ್ಟು ವೇತನ ನೀಡುವುದಿಲ್ಲ. ನ್ಯಾಯಯುತ ವೇತನ ಪಡೆಯಲು ಕಾಂಗ್ರೆಸ್ ನೀತಿ ಚೌಕಟ್ಟನ್ನು ರೂಪಿಸುತ್ತದೆ. ದೇಶದಲ್ಲಿ ಕನಿಷ್ಠ ವೇತನ ಇಲ್ಲ. ಕನಿಷ್ಠ ವೇತನ ನಿಯಮ ತಂದರೆ, ಅದು ಸಂಪತ್ತಿನ ಹಂಚಿಕೆಯಾಗಲಿದೆʼ ಎಂದು ಪಿತ್ರೋಡಾ ಹೇಳಿದರು.

ಹೇಳಿಕೆ ತಿರುಚಲಾಯಿತು: ಸಂದರ್ಶನ ಪ್ರಕಟಗೊಂಡ ಬಳಿಕ ಗೃಹ ಸಚಿವ ಅಮಿತ್ ಶಾ ಒಳಗೊಂಡಂತೆ  ಬಿಜೆಪಿ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿತು. 

ʻಅವರ ಗುಪ್ತ ಯೋಜನೆಗಳು ಬಹಿರಂಗಗೊಂಡಿವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಿಂದ ಸಮೀಕ್ಷೆ ಪ್ರಸ್ತಾಪವನ್ನು ಹಿಂಪಡೆಯಬೇಕು. ನಮ್ಮ ಆದ್ಯತೆ ಅಲ್ಪಸಂಖ್ಯಾತರಲ್ಲ; ಬಡವರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳುʼ ಎಂದು ಶಾ ಹೇಳಿದರು. 

ಬಿಜೆಪಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವೀಯ, ʻಕಾಂಗ್ರೆಸ್ ಭಾರತವನ್ನು ನಾಶ ಮಾಡುತ್ತಿದೆ. ಸ್ಯಾಮ್ ಪಿತ್ರೋಡಾ ಸಂಪತ್ತಿನ ಮರುಹಂಚಿಕೆಗೆ ಶೇ.50 ಪಿತ್ರಾರ್ಜಿತ ತೆರಿಗೆ ಪ್ರತಿಪಾದಿಸುತ್ತಾರೆ. ಪರಿಶ್ರಮ ಮತ್ತು ಉದ್ಯಮಶೀಲತೆಯಿಂದ ಗಳಿಸುವುದರಲ್ಲಿ ಶೇ. 50 ಅನ್ನು ತೆಗೆದುಕೊಳ್ಳಲಾಗುತ್ತದೆʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ʻಕುಟುಂಬದ ಸಲಹೆಗಾರ ಬಾಯಿ ಬಿಟ್ಟಿದ್ದಾರೆ. ಸಂಘಟಿತ ಲೂಟಿ ಮತ್ತು ಕಷ್ಟಪಟ್ಟು ಸಂಪಾದಿಸಿದ ಹಣದ ಕಾನೂನುಬದ್ಧ ಲೂಟಿ' ಆಗಿದೆʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ದೂರ ಕಾಯ್ದುಕೊಂಡ ಕಾಂಗ್ರೆಸ್:‌ ʻಪಿತ್ರೋಡಾ ಅವರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗೆ ತನ್ನ ವೈಯಕ್ತಿಕ ಅಭಿಪ್ರಾಯ ಚರ್ಚಿಸಲು, ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಅವರ ಅಭಿಪ್ರಾಯಗಳು ಕಾಂಗ್ರೆಸ್‌ನ ನಿಲುವು ಪ್ರತಿಬಿಂಬಿಸುತ್ತವೆ ಎಂದು ಅರ್ಥವಲ್ಲʼ ಎಂದು ಹಿರಿಯ ನಾಯಕ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಬರೆದಿದ್ದಾರೆ. 

ಪಕ್ಷದ ಸಹೋದ್ಯೋಗಿ ಪವನ್ ಖೇರಾ ಕೂಡ ಪಿತ್ರೋಡಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ʻಪ್ರಧಾನಿಗೆ ಸಾಮಾಜಿಕ ನ್ಯಾಯದ ಸಮಸ್ಯೆ ಇದೆ. ದೇಶದ ಶೇ.70ರಷ್ಟು ಸಂಪತ್ತು ಕೇವಲ 22 ಜನರ ಕೈಯಲ್ಲಿದೆ. ಇದರಿಂದ ಬಿಜೆಪಿಯ 10 ವರ್ಷಗಳ ನೀತಿಗಳ ಫಲ ಇದು. ಇದಕ್ಕಾಗಿ ನಾವು ಜಾತಿ ಗಣತಿಗೆ ಆದ್ಯತೆ ನೀಡಿದ್ದೇವೆʼ ಎಂದು ಹೇಳಿದರು. 

ಪಿತ್ರೋಡಾ ತಿರುಗೇಟು: ʻತಮ್ಮ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಶೇ.55 ರಷ್ಟು ತೆಗೆದುಕೊಳ್ಳಲಾಗುವುದು ಎಂದು ಯಾರು ಹೇಳಿದರು? ಭಾರತದಲ್ಲಿ ಇದನ್ನು ಮಾಡಬೇಕು ಎಂದು ಯಾರು ಹೇಳಿದರು? ಬಿಜೆಪಿ ಮತ್ತು ಮಾಧ್ಯಮಗಳು ಏಕೆ ಗಾಬರಿಗೊಂಡಿವೆ?ʼ ಎಂದು ಪಿತ್ರೋಡಾ ಪ್ರಶ್ನಿಸಿದರು.

ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು,ʻಯಾವ ಪ್ರಧಾನಿ ಕೂಡ ಈ ರೀತಿ ಮಾತನಾಡುವುದಿಲ್ಲ. ಮೊದಲಿಗೆ ನಾನು ಇದು ಕೃತಕ ಬುದ್ಧಿಮತ್ತೆಯಿಂದ ರಚಿಸಿದ ವಿಡಿಯೋ ಎಂದು ಭಾವಿಸಿದ್ದೆ. ಭಾರತೀಯರು ಮೂರ್ಖರು ಮತ್ತು ಅವರನ್ನು ಹಾದಿ ತಪ್ಪಿಸಬಹುದು ಎಂದು ಪ್ರಧಾನಿ ಭಾವಿಸಿದಂತೆ ಕಾಣುತ್ತದೆ. ಅವರು ಕಾನೂನಿಗಿಂತ ಮೇಲೆ ಇಲ್ಲ. ನಿಮ್ಮ ಚಿನ್ನ ಮತ್ತು ಮಂಗಳಸೂತ್ರವನ್ನು ಕದಿಯುತ್ತಾರೆ ಎಂದು ಹೇಳುವುದು ಅವಾಸ್ತವʼ ಎಂದು ಪಿತ್ರೋಡಾ ಖಂಡಿಸಿದರು. 

ʻಕಾಂಗ್ರೆಸ್ ಪ್ರಣಾಳಿಕೆ ಉತ್ತಮವಾಗಿದೆ. ನಾನು ಅಮೆರಿಕದಲ್ಲಿ ಉತ್ತರಾಧಿಕಾರ ತೆರಿಗೆ ಕುರಿತು ಹೇಳಿದ್ದನ್ನು ಗೋಧಿ ಮಾಧ್ಯಮಗಳು ತಿರುಚಿರುವುದು ದುರದೃಷ್ಟಕರʼ ಎಂದರು. 

ಪಿತ್ರೋಡಾ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷ.

Tags:    

Similar News