ಛತ್ತೀಸಗಢ | ಪೊಲೀಸ್ ಕಾರ್ಯಾಚರಣೆ: ಹತ್ತು ನಕ್ಸಲರ ಹತ್ಯೆ

Update: 2024-04-30 13:33 GMT

ನಾರಾಯಣಪುರ/ ರಾಯಪುರ: ಛತ್ತೀಸ್‌ಗಢದ ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿ ಮಂಗಳವಾರ ಬೆಳಿಗ್ಗೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಹತ್ತು ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇದು 15 ದಿನಗಳಲ್ಲಿ ನಕ್ಸಲೀಯರಿಗೆ ಎರಡನೇ ದೊಡ್ಡ ಹೊಡೆತ. ಮಂಗಳವಾರದ ಎನ್‌ಕೌಂಟರ್‌ನ ಸ್ಥಳ ಕಂಕೇರ್‌ನ ಕಲ್ಪರ್ ಗ್ರಾಮದ ದಕ್ಷಿಣಕ್ಕೆ 30 ಕಿಮೀ ದೂರದಲ್ಲಿದೆ. ಅಲ್ಲಿ ಏಪ್ರಿಲ್ 16 ರಂದು 29 ನಕ್ಸಲೀಯರು ಹತರಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಮಾವೋವಾದಿಗಳ ಉಪಸ್ಥಿತಿ ಬಗ್ಗೆ ಮಾಹಿತಿ ಆಧರಿಸಿ, ಸೋಮವಾರ ರಾತ್ರಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಸ್ಥಳದಿಂದ ಎಕೆ-47 ರೈಫಲ್, ಇನ್ಸಾಸ್‌ ರೈಫಲ್ ಜೊತೆಗೆ ಇತರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹತ್ಯೆಯಾದವರ ಗುರುತು ಪತ್ತೆಯಾಗಿಲ್ಲ.

ನಕ್ಸಲೀಯರ ಭದ್ರಕೋಟೆಯಾಗಿರುವ ಅಬುಜ್ಮದ್ ಪ್ರದೇಶದ ಟೆಕ್ಮೇಟಾ ಮತ್ತು ಕಾಕೂರ್ ಗ್ರಾಮಗಳ ನಡುವಿನ ಅರಣ್ಯದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಎನ್‌ಕೌಂಟರ್ ನಡೆದಿದೆ. ಪೊಲೀಸ್ ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ ವಿಜಯ್ ಶರ್ಮಾ ಅವರು ʻಈ ಕಾರ್ಯಾಚರಣೆ ಪ್ರಮುಖ ಯಶಸ್ಸುʼ ಎಂದು ಬಣ್ಣಿಸಿದರು. ನಕ್ಸಲೀಯರು ಮಾತುಕತೆಗೆ ಬರಬೇಕು ಮತ್ತು ಹಿಂಸಾಚಾರದ ಹಾದಿಯನ್ನು ತ್ಯಜಿಸಬೇಕೆಂದು ಮನವಿ ಮಾಡಿದರು.

‘ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ನೇತೃತ್ವದ ರಾಜ್ಯ ಸರ್ಕಾರವು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಬಯಸುತ್ತದೆ. ಮಾತನಾಡಲು ನಾವು ಸಿದ್ಧರಿದ್ದೇವೆ. ಅವರಿಗೆ ಉತ್ತಮ ಪುನರ್ವಸತಿ ವ್ಯವಸ್ಥೆ ಮಾಡುತ್ತೇವೆ. ಬಸ್ತಾರ್‌ನಲ್ಲಿ ಶಾಂತಿ ನೆಲೆಸಬೇಕು ಮತ್ತು ಅಲ್ಲಿ ಅಭಿವೃದ್ಧಿಯಾಗಬೇಕು ಎಂದು ನಾವು ಬಯಸುತ್ತೇವೆ,ʼ ಎಂದು ಹೇಳಿದರು.

ನಾರಾಯಣಪುರ ಮತ್ತು ಕಂಕೇರ್ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಈ ವರ್ಷ ಇದುವರೆಗೆ 91 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Tags:    

Similar News