ತಮಿಳುನಾಡಿನಲ್ಲೂ ಘೋರ ದುರಂತ! ಟೈರ್ ಸ್ಫೋಟಗೊಂಡು ಬಸ್‌ ಕಾರಿಗೆ ಡಿಕ್ಕಿ- 9 ಬಲಿ

ತಮಿಳುನಾಡಿನ ಕಡಲೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಮತ್ತು ಎರಡು ಕಾರುಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ.

Update: 2025-12-25 03:12 GMT
ಬಸ್‌ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು
Click the Play button to listen to article

ಚಿತ್ರದುರ್ಗದ ಘೋರ ದುರಂತದ ನಡುವೆಯೇ ಇದೀಗ ತಮಿಳುನಾಡಿನಲ್ಲೂ ಬುಧವಾರ ತಡರಾತ್ರಿ ನಡೆದ ಭೀಕರ ಬಸ್‌ ಅಪಘಾತದ ಬಗ್ಗೆ ವರದಿಯಾಗಿದೆ. ಕಡಲೂರು ಜಿಲ್ಲೆಯ ಇಳುತ್ತೂರು ಗ್ರಾಮದ ಬಳಿ ಬುಧವಾರ ರಾತ್ರಿ (ಡಿಸೆಂಬರ್ 24) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ನಡೆದಿದ್ದೇನು?

ತಿರುಚಿಯಿಂದ ಚೆನ್ನೈಗೆ ತೆರಳುತ್ತಿದ್ದ ಸರ್ಕಾರಿ ಬಸ್‌ನ ಟೈರ್ ಹಠಾತ್ತನೆ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆ ವಿಭಾಜಕವನ್ನು (ಮಡಿಯನ್) ದಾಟಿ ವಿರುದ್ಧ ದಿಕ್ಕಿಗೆ ನುಗ್ಗಿದೆ. ಈ ವೇಳೆ ಚೆನ್ನೈನಿಂದ ತಿರುಚಿಯತ್ತ ಸಾಗುತ್ತಿದ್ದ ಎಸ್‌ಯುವಿ ಮತ್ತು ಕಾರಿಗೆ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಭೀಕರ ಸಂಘರ್ಷದಲ್ಲಿ ಖಾಸಗಿ ವಾಹನಗಳಲ್ಲಿದ್ದ ಏಳು ಮಂದಿ ಸೇರಿದಂತೆ ಒಟ್ಟು 9 ಪ್ರಯಾಣಿಕರು (5 ಪುರುಷರು ಮತ್ತು 4 ಮಹಿಳೆಯರು) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳ ಸ್ಥಿತಿ ಗಂಭೀರ

ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Tags:    

Similar News