ಹೊತ್ತಿ ಉರಿದ ಬಸ್‌; ಪುನರ್ಜನ್ಮ ಪಡೆದ ಪ್ರಯಾಣಿಕರ ಸ್ಥಿತಿ ಹೇಗಿದೆ? ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ
x
ಸುಟ್ಟು ಕರಕಲಾದ ಬಸ್‌

ಹೊತ್ತಿ ಉರಿದ ಬಸ್‌; ಪುನರ್ಜನ್ಮ ಪಡೆದ ಪ್ರಯಾಣಿಕರ ಸ್ಥಿತಿ ಹೇಗಿದೆ? ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ

ಹಿರಿಯೂರು ಬಳಿ ನಡೆದ ಸೀಬರ್ಡ್ ಬಸ್ ಅಗ್ನಿ ದುರಂತದಲ್ಲಿ 17 ಮಂದಿ ಸಾವನ್ನಪ್ಪಿದ್ದು, ಬದುಕುಳಿದ ಪ್ರಯಾಣಿಕರ ಹೆಸರು ಮತ್ತು ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳ ಸಂಪೂರ್ಣ ವಿವರಗಳಿಗಾಗಿ ಈ ವರದಿ ಓದಿ.


ಕ್ರಿಸ್‌ಮಸ್ ಹಬ್ಬದ ಸಂಭ್ರಮದ ನಡುವೆಯೇ ರಾಜ್ಯವನ್ನು ಕಣ್ಣೀರಿಡುವಂತೆ ಮಾಡಿದ ಚಿತ್ರದುರ್ಗದ ಬಸ್ ದುರಂತದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಈ ಭೀಕರ ಅಪಘಾತದಲ್ಲಿ 17 ಪ್ರಯಾಣಿಕರು ಹಾಗೂ ಲಾರಿ ಚಾಲಕ ಬೆಂಕಿಗೆ ಆಹುತಿಯಾಗಿದ್ದಾರೆ. ಬಸ್‌ನಲ್ಲಿದ್ದ ಒಟ್ಟು 32 ಜನರಲ್ಲಿ 16 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?

ಸೀ ಬರ್ಡ್ ಸಿಬ್ಬಂದಿ ಹೇಳುವ ಪ್ರಕಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಅವರ ಬಸ್‌ನಲ್ಲಿ ಒಟ್ಟು 32 ಜನ ಪ್ರಯಾಣಿಕರು ಇದ್ದರು. ಆ ಕಡೆಯಿಂದ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ, ಡಿವೈಡರ್ ಹಾರಿ ಬಸ್‌ನ ಡೀಸೆಲ್ ಟ್ಯಾಂಕ್ ಬಳಿಯೇ ಜೋರಾಗಿ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು, ತಕ್ಷಣವೇ ಡೀಸೆಲ್ ಟ್ಯಾಂಕ್ ಒಡೆದು ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಮಾತ್ರದಲ್ಲಿ ಇಡೀ ಬಸ್ ದಗದಗನೆ ಹೊತ್ತಿ ಉರಿದಿದೆ

ಗಾಯಾಳುಗಳ ಸ್ಥಿತಿ ಹೇಗಿದೆ?

ಅಪಘಾತದಲ್ಲಿ ಗಾಯಗೊಂಡವರನ್ನು ಹಿರಿಯೂರು ಮತ್ತು ಶಿರಾದ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹಿರಿಯೂರು ಆಸ್ಪತ್ರೆಯಲ್ಲಿ ಮೂರು ಜನ ಮಹಿಳೆಯರು ಕೂಡ ದಾಖಲಾಗಿದ್ದಾರೆ. ಬೆಂಕಿ ಬಿದ್ದ ತಕ್ಷಣ ಇವರು ಧೈರ್ಯ ಮಾಡಿ ಕೆಳಗೆ ಇಳಿದಿರೋದ್ರಿಂದ ಪ್ರಾಣ ಉಳಿದಿದೆ. ಮಿಲನ, ಕವಿತಾ ಮತ್ತು ಸಂಧ್ಯಾ ಅವರಿಗೆ ಇಲ್ಲಿ ಚಿಕಿತ್ಸೆ ನಡೀತಿದೆ. ಇವರಿಗೆ ಸುಟ್ಟ ಗಾಯಗಳಾಗಿದ್ರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 6 ಜನ ಪುರುಷರು ಅಡ್ಮಿಟ್ ಆಗಿದ್ದಾರೆ. ಕೀರ್ತನ್, ಕಿರಣ್ ಪಾಲ್, ದಿಲೀಪ್, ಮಂಜುನಾಥ್ ಮತ್ತು ಅನಿರುದ್ಧ್ ಇಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಇವರೆಲ್ಲರೂ ನಿದ್ದೆಯಲ್ಲಿದ್ದಾಗ ಆದ ಘಟನೆಯಿಂದ ಆಘಾತದಲ್ಲಿದ್ದಾರೆ. ಶಿರಾದಲ್ಲಿ 4 ಜನ ಮಹಿಳೆಯರು ದಾಖಲಾಗಿದ್ದಾರೆ. ಅಮೃತ, ಈಶ, ದೇವಿಕಾ ಮತ್ತು ನಂದಿತಾ ಅವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಇವರು ಹೇಳಿಕೆ ಪಡೆದಿದ್ದಾರೆ.

ಬಸ್ ಸಿಬ್ಬಂದಿಯೂ ಬಚಾವ್!
ಬಸ್‌ನ ಡ್ರೈವರ್ ರಫೀಕ್ ಮತ್ತು ಕಂಡಕ್ಟರ್ ಸಾದಿಕ್ ಇಬ್ಬರೂ ಬದುಕುಳಿದಿದ್ದಾರೆ. ಸಾಮಾನ್ಯವಾಗಿ ಇಂಥಾ ಆಕ್ಸಿಡೆಂಟ್ ಆದಾಗ ಡ್ರೈವರ್‌ಗೆ ಏಟು ಬೀಳೋದು ಜಾಸ್ತಿ. ಚಾಲಕ ಮತ್ತು ಕಂಡಕ್ಟರ್‌ ಇಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಪೊಲೀಸ್ ಮತ್ತು ಅಗ್ನಿಶಾಮಕ ದಳದ ಕಾರ್ಯಾಚರಣೆ

ಸುದ್ದಿ ತಿಳಿಯುತ್ತಿದ್ದಂತೆಯೇ ಹಿರಿಯೂರು ಠಾಣೆಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಬೆಂಕಿಯ ರೌದ್ರಾವತಾರ ಎಷ್ಟಿತ್ತೆಂದರೆ, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಷ್ಟರಲ್ಲಿ ಬಸ್ ಸಂಪೂರ್ಣ ಅಸ್ಥಿಪಂಜರವಾಗಿತ್ತು. ಸದ್ಯ ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಚಾಲಕನ ಅತಿ ವೇಗ ಅಥವಾ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಸರ್ಕಾರದ ಸ್ಪಂದನೆ

ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಾಗುತ್ತಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ.

ಕರ್ನೂಲ್‌ ದುರಂತ

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಚಿನ್ನತೇಕೂರು ಬಳಿ ಸಂಭವಿಸಿದ ಆ ಭೀಕರ ಅಗ್ನಿ ದುರಂತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಹೈದರಾಬಾದ್‌ನಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಎಸಿ ಸ್ಲೀಪರ್ ಬಸ್, ರಾಷ್ಟ್ರೀಯ ಹೆದ್ದಾರಿ 44ರಲ್ಲಿ ವಿರುದ್ಧ ದಿಕ್ಕಿನಿಂದ ಬಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಾಗ ಈ ದುರಂತ ಸಂಭವಿಸಿತು.

ಡಿಕ್ಕಿಯ ರಭಸಕ್ಕೆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಕ್ಷಣಾರ್ಧದಲ್ಲಿ ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ಹರಡಿತು. ಬಸ್ ಎಸಿ ಆಗಿದ್ದರಿಂದ ಕಿಟಕಿ ಗಾಜುಗಳು ಸಂಪೂರ್ಣ ಬಂದ್ ಆಗಿದ್ದವು, ಹೀಗಾಗಿ ಬೆಂಕಿ ಹೊತ್ತಿಕೊಂಡಾಗ ದಟ್ಟವಾದ ಹೊಗೆ ಬಸ್ಸಿನ ಒಳಗೆ ತುಂಬಿಕೊಂಡಿತು. ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರು ಹೊರಬರಲು ದಾರಿ ಕಾಣದೆ ಅಸಹಾಯಕರಾದರು. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿ ಬಸ್ಸನ್ನು ಸಂಪೂರ್ಣವಾಗಿ ಆವರಿಸಿದ್ದು, ಸುಮಾರು 20ಕ್ಕೂ ಹೆಚ್ಚು ಮಂದಿ ಆಸನಗಳಲ್ಲೇ ಸಜೀವ ದಹನವಾಗಿ ಕರಕಲಾಗಿದ್ದರು.

Read More
Next Story