
ಕ್ರಿಸ್ಮಸ್ ಹಬ್ಬದಂದೇ ಕರಾಳ ಘಟನೆ; ಭೀಕರ ಅಪಘಾತ- 9 ಜನ ಸಜೀವ ದಹನ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸೀಬರ್ಡ್ ಬಸ್‌ನಲ್ಲಿದ್ದ 9 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಕ್ರಿಸ್ಮಸ್ ಹಬ್ಬದ ಸಂಭ್ರಮದ ನಡುವೆಯೇ ಕರಾಳ ಘಟನೆಯೊಂದು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 9 ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ಸುಮಾರು 2 ಗಂಟೆಯ ಹೊತ್ತಿಗೆ ಎಚ್‌ಪಿ ಪೆಟ್ರೋಲ್ ಬಂಕ್ ಬಳಿ ಸೀಬರ್ಡ್ ಕಂಪನಿಗೆ ಸೇರಿದ ಖಾಸಗಿ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ಸುಮಾರು 9 ಮಂದಿ ಸಜೀವ ದಹನವಾಗಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಸೀಬರ್ಡ್ ಬಸ್‌ನಲ್ಲಿ ಸುಮಾರು 32ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಜವನಗೊಂಡನಹಳ್ಳಿ ಬಳಿ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದ ಕಾರಣ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಕಣ್ಣೆದುರೇ ಸುಟ್ಟು ಭಸ್ಮವಾಗಿದ್ದಾರೆ. ದುರದೃಷ್ಟವಶಾತ್ ಲಾರಿ ಚಾಲಕ ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಹಿರಿಯೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರ ದೇಹಗಳು ಗುರುತು ಪತ್ತೆ ಹಚ್ಚಲಾಗದ ಸ್ಥಿತಿಯಲ್ಲಿ ಸುಟ್ಟು ಹೋಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Live Updates
- 25 Dec 2025 4:43 PM IST
40 ಮಕ್ಕಳನ್ನು ಉಳಿಸಿ, ಉರಿಯುವ ಬಸ್‌ನಿಂದ 9 ಜೀವಗಳನ್ನು ರಕ್ಷಿಸಿದ ರಿಯಲ್ ಹೀರೊ
ಚಿತ್ರದುರ್ಗದಲ್ಲಿ ನಡೆದ ಭೀಕರ ರಸ್ತೆ ಅಪಘಾತದ ವೇಳೆ ದಾಂಡೇಲಿಗೆ ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳ ಬಸ್ ಚಾಲಕ ತೋರಿದ ಈ ಚಾಕಚಕ್ಯತೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಾವಿನ ದವಡೆಯಿಂದ ಪಾರಾದ ಈ 'ಗ್ರೇಟ್ ಎಸ್ಕೇಪ್' ಘಟನೆಯ ಕುರಿತು 'ದ ಫೆಡರಲ್ ಕರ್ನಾಟಕ' ಜೊತೆಗೆ ಮಾತನಾಡಿದ ಅವರು, ಕರಾಳ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟರು.
"ನಾನು ಬಸ್‌ನಲ್ಲಿ 40 ಮಕ್ಕಳನ್ನು ಕರೆದುಕೊಂಡು ದಾಂಡೇಲಿಗೆ ಹೋಗುತ್ತಿದ್ದೆ. ಸೀಬರ್ಡ್ ಬಸ್ ನನ್ನ ವಾಹನವನ್ನು ಓವರ್‌ಟೇಕ್ ಮಾಡಿ ಸುಮಾರು 80 ಅಡಿ ಮುಂದೆ ಹೋಗಿತ್ತು. ಅಷ್ಟರಲ್ಲಿ, ಎದುರುಗಡೆಯಿಂದ ಅತಿವೇಗವಾಗಿ ಬಂದ ಕಂಟೇನರ್ ಡಿವೈಡರ್ ಹಾರಿ ನೇರವಾಗಿ ಸೀಬರ್ಡ್ ಬಸ್ಸಿಗೆ ಡಿಕ್ಕಿ ಹೊಡೆಯಿತು. ಆ ಕ್ಷಣ ನಾನು ಮಧ್ಯದ ಲೇನ್‌ನಲ್ಲಿದ್ದೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆಯೇ ತಕ್ಷಣ ಎಚ್ಚೆತ್ತು ಬಸ್ಸನ್ನು ಎಡಕ್ಕೆ ತಿರುಗಿಸಿದೆ. ಅಷ್ಟರಲ್ಲಿ ಅಪಘಾತಕ್ಕೀಡಾದ ಬಸ್ ನನ್ನ ವಾಹನಕ್ಕೆ ಸ್ವಲ್ಪ ತಗುಲಿತ್ತು. ಆದರೂ ಧೈರ್ಯಗುಂದದೆ ಸ್ಟೀರಿಂಗ್ ನಿಯಂತ್ರಿಸಿ, ಸರ್ವಿಸ್ ರಸ್ತೆಯ ಎಡಭಾಗಕ್ಕೆ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿದೆ. ನನ್ನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಎಲ್ಲ ಮಕ್ಕಳು ಸುರಕ್ಷಿತವಾಗಿ ಉಳಿದರು," ಎಂದು ಚಾಲಕ ನಿಟ್ಟುಸಿರು ಬಿಟ್ಟರು.
- 25 Dec 2025 12:33 PM IST
ಮೃತರ ಸಂಖ್ಯೆ ಬಗ್ಗೆ ಸಚಿವರು ಮತ್ತು ಅಧಿಕಾರಿಗಳ ನಡುವೆ ಗೊಂದಲ, ಮೂವರು ಪ್ರಯಾಣಿಕರು ನಾಪತ್ತೆ
ಚಿತ್ರದುರ್ಗದ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ಖಾಸಗಿ ಬಸ್ ಅಪಘಾತವು ತೀವ್ರ ಆತಂಕಕ್ಕೆ ಕಾರಣವಾಗಿದ್ದು, ದುರಂತದಲ್ಲಿ ಮೃತಪಟ್ಟವರ ನಿಖರ ಸಂಖ್ಯೆಯ ಕುರಿತು ಅಧಿಕಾರಿಗಳು ಮತ್ತು ಸಚಿವರ ನಡುವೆ ಗೊಂದಲ ಮೂಡಿದೆ. ಘಟನೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಮಾಹಿತಿ ನೀಡಿದ್ದ ಐಜಿಪಿ ರವಿಕಾಂತೇಗೌಡ ಅವರು, ಅಪಘಾತದ ತೀವ್ರತೆಗೆ ಒಂಭತ್ತು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ, ಈ ಹೇಳಿಕೆಗೆ ವ್ಯತಿರಿಕ್ತವಾಗಿ ಸಾರಿಗೆ ಸಚಿವರು ಮಾಹಿತಿ ನೀಡಿದ್ದು, ಅಪಘಾತದಲ್ಲಿ ಐವರು ಪ್ರಯಾಣಿಕರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳು ಮತ್ತು ಸರ್ಕಾರದ ನಡುವಿನ ಈ ವಿಭಿನ್ನ ಹೇಳಿಕೆಗಳು ಸಾರ್ವಜನಿಕರಲ್ಲಿ ಹಾಗೂ ಮೃತರ ಕುಟುಂಬಸ್ಥರಲ್ಲಿ ಗೊಂದಲಕ್ಕೆ ದಾರಿ ಮಾಡಿಕೊಟ್ಟಿವೆ. ಇನ್ನುಳಿದಂತೆ, ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ನಾಪತ್ತೆಯಾದವರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಅಂಕನಹಳ್ಳಿಯ ಸಾಫ್ಟ್‌ವೇರ್ ಎಂಜಿನಿಯರ್ ನವ್ಯಾ ಹಾಗೂ ಚನ್ನರಾಯಪಟ್ಟಣ ಮೂಲದ ಮತ್ತೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಮಾನಸ ಸೇರಿದ್ದಾರೆ. ಇವರೊಂದಿಗೆ ಮತ್ತೊಬ್ಬ ಪ್ರಯಾಣಿಕನ ಬಗ್ಗೆಯೂ ಯಾವುದೇ ಸುಳಿವು ಲಭ್ಯವಾಗಿಲ್ಲ. ನಾಪತ್ತೆಯಾದವರ ಕುಟುಂಬಸ್ಥರು ಆತಂಕಗೊಂಡಿದ್ದು, ಸ್ಥಳಕ್ಕೆ ಧಾವಿಸಿದ್ದಾರೆ.
- 25 Dec 2025 12:14 PM IST
ಸುಟ್ಟ ಬೂದಿಯಾದ ಬಸ್‌ನಲ್ಲಿ ಮಗಳಿಗಾಗಿ ಹುಡುಕಾಡುತ್ತಿರುವ ತಂದೆ
ಚಿತ್ರದುರ್ಗದ ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಂಟೇನರ್ ಡಿಕ್ಕಿಯಾಗಿ ಖಾಸಗಿ ಸ್ಲೀಪರ್ ಕೋಚ್ ಬಸ್ ಹೊತ್ತಿ ಉರಿದಿದೆ. ಈ ದುರಂತದಲ್ಲಿ ಐವರು ಸಜೀವ ದಹನವಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಚನ್ನರಾಯಪಟ್ಟಣ ಮೂಲದ ನವ್ಯಾ ಮತ್ತು ಮಾನಸ ಎಂಬ ಯುವತಿಯರು ನಾಪತ್ತೆಯಾಗಿದ್ದು, ಕಿಟಕಿ ಗಾಜಿನ ಮೂಲಕ ಹೊರಬಂದ ಮಿಲನಾ ಎಂಬಾಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ವಿಚಾರ ಗೊತ್ತಾಗುತ್ತಿದ್ದಂತೆ ಓಡೋಡಿ ಬಂದ ನವ್ಯಾ ತಂದೆ ಮಂಜಪ್ಪ, ದುರಂತದ ಜಾಗದಲ್ಲಿ ಮಗಳು ಕಾಣುತ್ತಿಲ್ಲ, ಆಸ್ಪತ್ರೆಯಲ್ಲೂ ನನ್ನ ಮಗಳೇ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನವ್ಯಾ, ಮಾನಸ, ಮಿಲನ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಏಪ್ರಿಲ್ ನಲ್ಲಿ ನನ್ನ ಮಗಳ ಮದುವೆ ನಿಶ್ಚಯ ಆಗಿತ್ತು. ಈಗ ನನ್ನ ಮಗಳೇ ಕಾಣುತ್ತಿಲ್ಲ ಎಂದು ತಂದೆ ಕಣ್ಣೀರು ಹಾಕಿದ್ದಾರೆ.
- 25 Dec 2025 11:49 AM IST
ಚಿತ್ರದುರ್ಗ ಬಸ್ ಅಪಘಾತ| ಮೃತರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಿಸಿದ ಸಿ.ಎಂ ಸಿದ್ದರಾಮಯ್ಯ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಮೃತರ ಸಾಮಾಜಿಕ ಜಾಲತಾಣ 'ಎಕ್ಸ್' ಮೂಲಕ ದುಃಖ ವ್ಯಕ್ತಪಡಿಸಿರುವ ಸಿಎಂ, ಕ್ರಿಸ್‌ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಹೀಗೆ ದುರಂತದಲ್ಲಿ ಕೊನೆಗೊಂಡಿರುವುದು ಅತ್ಯಂತ ವಿಷಾದನೀಯ ಎಂದು ಸಂತಾಪ ಸೂಚಿಸಿದ್ದಾರೆ.
- 25 Dec 2025 11:33 AM IST
ಸಾವಿನ ದವಡೆಯಿಂದ ಪಾರಾದ ಮಾವಳ್ಳಿ ಗೆಳೆಯರು: ಬಸ್ ಬೆಂಕಿಯಿಂದ ಕೂದಲೆಳೆ ಅಂತರದಲ್ಲಿ ಪಾರು!
ಕ್ರಿಸ್‌ಮಸ್ ರಜೆಯ ಖುಷಿಯಲ್ಲಿ ಗೋಕರ್ಣಕ್ಕೆ ಪ್ರವಾಸ ಹೊರಟಿದ್ದ ಬೆಂಗಳೂರಿನ ಮಾವಳ್ಳಿಯ ಏಳು ಮಂದಿ ಗೆಳೆಯರು, ಭೀಕರ ಬಸ್ ಅಗ್ನಿ ದುರಂತದಿಂದ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾವಳ್ಳಿ ಮೂಲದ ಮಂಜುನಾಥ್, ಸಂಧ್ಯಾ, ಶಶಾಂಕ್, ದಿಲೀಪ್, ಬಿಂದು, ಕವಿತಾ ಮತ್ತು ಪ್ರೀತಿಸ್ವರನ್ ಎಂಬ ಏಳು ಜನ ಗೆಳೆಯರ ತಂಡ ವೀಕೆಂಡ್ ಕಳೆಯಲು ಖಾಸಗಿ ಬಸ್ ಮೂಲಕ ಗೋಕರ್ಣಕ್ಕೆ ಪ್ರಯಾಣ ಬೆಳೆಸಿದ್ದರು. ಪ್ರಯಾಣದ ವೇಳೆ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಆದರೆ, ಸಮಯಪ್ರಜ್ಞೆ ಮೆರೆದ ಗೆಳೆಯರು ತಕ್ಷಣ ಎಚ್ಚೆತ್ತುಕೊಂಡು ಬಸ್‌ನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.
- 25 Dec 2025 11:26 AM IST
ಸಾವಿನ ದವಡೆಯಿಂದ ಪಾರಾದ ಕುಟುಂಬ
ಕಿರಣ್ ಮತ್ತು ಅವರ ಕುಟುಂಬ ಕೂಡ ಗೋಕರ್ಣ ಟ್ರಿಪ್‌ಗೆ ಹೋಗುತ್ತಿದ್ದರು. ಇವರು ಬಸ್‌ನ ಎಡಭಾಗದ ಕೆಳಗಿನ ಸೀಟ್‌ಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಕಿರಣ್ ಪಾಲ್ (13L), ಕೀರ್ತನ (14L), ನಂದಿತಾ (15L) ಮತ್ತು ದೇವಿಕಾ (16L) ಒಂದೇ ಕಡೆ ಇದ್ದಿದ್ದರಿಂದ, ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಹೊರಗೆ ಬಂದಿದ್ದಾರೆ. ಅದೃಷ್ಟವಶಾತ್ ಇಡೀ ಕುಟುಂಬ ಸಾವಿನ ದವಡೆಯಿಂದ ಪಾರಾಗಿದೆ. ಈ ದುರಂತದಲ್ಲಿ ಗಾಯಗೊಂಡ ಆರು ಜನರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಕಿರಣ್ ಅವರ ಕುಟುಂಬದ ಸದಸ್ಯರಾದ ಕೀರ್ತನ ಅವರಿಗೆ 5% ಸುಟ್ಟ ಗಾಯಗಳಾಗಿದ್ದರೆ, ದೇವಿಕಾ ಅವರಿಗೆ 3% ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಇವರ ಗಾಯಗಳು ಗಂಭೀರವಾಗಿಲ್ಲ.
- 25 Dec 2025 10:41 AM IST
ಹಿರಿಯೂರು ಬಳಿ ಭೀಕರ ಅಪಘಾತ: 42 ಶಾಲಾ ಮಕ್ಕಳ ಪವಾಡಸದೃಶ ಪಾರು
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಕ್ರಾಸ್ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ 42 ಶಾಲಾ ಮಕ್ಕಳು ಪವಾಡಸದೃಶವಾಗಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ದಾಂಡೇಲಿಗೆ ಶಾಲಾ ಪ್ರವಾಸಕ್ಕೆ ತೆರಳುತ್ತಿದ್ದ ಬಸ್, ಗೊರ್ಲತ್ತು ಕ್ರಾಸ್ ಬಳಿ ಬರುತ್ತಿದ್ದಂತೆ ಮುಂಭಾಗದಲ್ಲಿ ಲಾರಿ ಮತ್ತು ಖಾಸಗಿ ಸ್ಲೀಪರ್ ಕೋಚ್ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸುಮಾರು 15ಕ್ಕೂ ಹೆಚ್ಚು ಜನರು ಸಜೀವ ದಹನರಾಗಿದ್ದಾರೆ. ಅಪಘಾತದ ರಭಸಕ್ಕೆ ಸ್ಲೀಪರ್ ಕೋಚ್ ಬಸ್‌ನ ಡೀಸೆಲ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿ ಉರಿಯಲಾರಂಭಿಸಿತ್ತು. ಇದೇ ವೇಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಶಾಲಾ ಬಸ್ಸಿಗೂ ಬೆಂಕಿ ಹರಡಲು ಶುರುವಾಗಿದೆ. ಬಸ್ಸಿಗೆ ಬೆಂಕಿ ತಗುಲುತ್ತಿದ್ದಂತೆ ಎಚ್ಚೆತ್ತ ಚಾಲಕ, ಮಕ್ಕಳನ್ನು ರಕ್ಷಿಸುವ ಭರದಲ್ಲಿ ಬಸ್ಸನ್ನು ರಸ್ತೆಯ ಪಕ್ಕಕ್ಕೆ ಚಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಶಾಲಾ ಬಸ್ಸು ಹೆದ್ದಾರಿಯ ತಡೆಗೋಡೆಯನ್ನು ಕಿತ್ತುಕೊಂಡು ಚರಂಡಿ ದಾಟಿ ಆಚೆ ಬದಿಗೆ ಹೋಗಿ ನಿಂತಿದೆ. ಬಸ್ಸಿನಲ್ಲಿದ್ದ 42 ಶಾಲಾ ಮಕ್ಕಳು ತಕ್ಷಣವೇ ಕೆಳಗಿಳಿದಿದ್ದು, ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಸದ್ಯ ಮಕ್ಕಳಿದ್ದ ಬಸ್ಸಿನ ಚಾಲಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
- 25 Dec 2025 10:11 AM IST
ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್ ಮತ್ತು ಟ್ರಕ್ ನಡುವೆ ಹಿರಿಯೂರು ಬಳಿ ಅಪಘಾತ ಸಂಭವಿಸಿ ಹಲವರು ಸಜೀವ ದಹನಗೊಂಡಿರುವ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಮೃತಪಟ್ಟವರಿಗೆ ನನ್ನ ಸಂತಾಪಗಳನ್ನು ತಿಳಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಇಂತಹ ದುರಂತಗಳು ಮರುಕಳಿಸದಿರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
- 25 Dec 2025 10:08 AM IST
ಚಿತ್ರದುರ್ಗ ಬಸ್ ಅಪಘಾತ| ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿನಡೆದ ಅಪಘಾತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
"ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ಅಗ್ನಿ ಅವಘಡದಲ್ಲಿ ಅಮಾಯಕ ಜೀವಗಳು ಬಲಿಯಾಗಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ಮೃತರ ಕುಟುಂಬಗಳಿಗೆ ನನ್ನ ಭಾವಪೂರ್ಣ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
- 25 Dec 2025 10:01 AM IST
ಚಿತ್ರದುರ್ಗ ಭೀಕರ ಬಸ್ ಅಪಘಾತ| ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಚಿತ್ರದುರ್ಗದಲ್ಲಿ ನಡೆದ ಭೀಕರ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಸಂತ್ರಸ್ತರಿಗೆ ಆರ್ಥಿಕ ನೆರವು ಘೋಷಿಸಿದೆ. ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಅಮಾಯಕ ಜೀವಗಳು ಬಲಿಯಾಗಿರುವುದು ನನಗೆ ತೀವ್ರ ದುಃಖ ತಂದಿದೆ. ಮೃತರ ಕುಟುಂಬಗಳಿಗೆ ನನ್ನ ಭಾವಪೂರ್ಣ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿರುವ ಪ್ರಧಾನಿ ಮೋದಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದಾರೆ.








