
ಕ್ರಿಸ್ಮಸ್ ಹಬ್ಬದಂದೇ ಕರಾಳ ಘಟನೆ; ಭೀಕರ ಅಪಘಾತ- 9 ಜನ ಸಜೀವ ದಹನ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸೀಬರ್ಡ್ ಬಸ್‌ನಲ್ಲಿದ್ದ 9 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಕ್ರಿಸ್ಮಸ್ ಹಬ್ಬದ ಸಂಭ್ರಮದ ನಡುವೆಯೇ ಕರಾಳ ಘಟನೆಯೊಂದು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 9 ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ಸುಮಾರು 2 ಗಂಟೆಯ ಹೊತ್ತಿಗೆ ಎಚ್‌ಪಿ ಪೆಟ್ರೋಲ್ ಬಂಕ್ ಬಳಿ ಸೀಬರ್ಡ್ ಕಂಪನಿಗೆ ಸೇರಿದ ಖಾಸಗಿ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ಸುಮಾರು 9 ಮಂದಿ ಸಜೀವ ದಹನವಾಗಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಸೀಬರ್ಡ್ ಬಸ್‌ನಲ್ಲಿ ಸುಮಾರು 32ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಜವನಗೊಂಡನಹಳ್ಳಿ ಬಳಿ ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನಗಳಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದ ಕಾರಣ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಕಣ್ಣೆದುರೇ ಸುಟ್ಟು ಭಸ್ಮವಾಗಿದ್ದಾರೆ. ದುರದೃಷ್ಟವಶಾತ್ ಲಾರಿ ಚಾಲಕ ಕೂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಹಿರಿಯೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತರ ದೇಹಗಳು ಗುರುತು ಪತ್ತೆ ಹಚ್ಚಲಾಗದ ಸ್ಥಿತಿಯಲ್ಲಿ ಸುಟ್ಟು ಹೋಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Live Updates
- 25 Dec 2025 9:55 AM IST
ಚಿತ್ರದುರ್ಗ ಭೀಕರ ಬಸ್ ಅಪಘಾತ| ಕೇಂದ್ರ ಸಚಿವ ಕುಮಾರಸ್ವಾಮಿ ಸಂತಾಪ
ಚಿತ್ರದುರ್ಗದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಅವರು, ಚಿತ್ರದುರ್ಗದ ಸಮೀಪ ಖಾಸಗಿ ಬಸ್ʼವೊಂದು ಅಪಘಾತಕ್ಕೆ ತುತ್ತಾಗಿ ಬೆಂಕಿ ಹೊತ್ತಿ ಉರಿದು ಹಲವರು ಧಾರುಣ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ಈ ದುರಂತದಲ್ಲಿ ಇನ್ನೂ ಹೆಚ್ಚಿನ ಸಾವು-ನೋವು ಆಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ದುರಂತದಲ್ಲಿ ಜೀವ ಚೆಲ್ಲಿದವರಿಗೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾಗೂ ಅವರ ಚಿಕಿತ್ಸೆಗೆ ರಾಜ್ಯ ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಿ.ಅಗಲಿದವರ ಕುಟುಂಬದವರಿಗೆ ನನ್ನ ತೀವ್ರ ಸಂತಾಪಗಳು ಎಂದು ಅವರು ತಿಳಿಸಿದ್ದಾರೆ.

- 25 Dec 2025 9:45 AM IST
ಚಿತ್ರದುರ್ಗ ಭೀಕರ ಬಸ್ ಅಪಘಾತ| ಬಸವರಾಜ್ ಬೊಮ್ಮಾಯಿ ಸಂತಾಪ
ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಚಿತ್ರದುರ್ಗದ ಹಿರಿಯೂರಿನ ಬಳಿ ಅಪಘಾತಕ್ಕೆ ಒಳಗಾಗಿ ಅಗ್ನಿ ಅವಘಡ ಸಂಭವಿಸಿದ್ದು ಅದರಲ್ಲಿ 9 ಕ್ಕೂ ಹೆಚ್ಚು ಜನ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ ಎಂದು ತಿಳಿದು ಅತ್ಯಂತ ದುಃಖವಾಯಿತು. ರಾಜ್ಯ ಸರ್ಕಾರವು ಮೃತಪಟ್ಟ ಕುಟುಂಬದವರಿಗೆ ಕೂಡಲೇ ಪರಿಹಾರ ಘೋಷಿಸಿಬೇಕು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲು ಆಗ್ರಹಿಸುತ್ತೇನೆ. ದೇವರು ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ, ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.
- 25 Dec 2025 9:40 AM IST
ಚಿತ್ರದುರ್ಗದಲ್ಲಿ ಭೀಕರ ರಸ್ತೆ ದುರಂತ| ಸಿದ್ದರಾಮಯ್ಯ ಸಂತಾಪ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಸುಮಾರು 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
ಚಿತ್ರದುರ್ಗ ಬಳಿ ಸಂಭವಿಸಿದ ಲಾರಿ ಮತ್ತು ಬಸ್ ನಡುವಿನ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ. ಅಪಘಾತದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾರಣವನ್ನು ಪತ್ತೆಹಚ್ಚಲಾಗುವುದು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅಪಘಾತದಲ್ಲಿ ಮಡಿದ ಕುಟುಂಬಸ್ಥರ ದುಃಖದಲ್ಲಿ ನಾನೂ ಭಾಗಿ ಎಂದು ಅವರು ತಿಳಿಸಿದ್ದಾರೆ.
- 25 Dec 2025 9:24 AM IST
16 ಮಂದಿ ಪ್ರಾಣಾಪಾಯದಿಂದ ಪಾರು
ಕ್ರಿಸ್‌ಮಸ್ ಹಬ್ಬದ ಸಂಭ್ರಮದ ನಡುವೆಯೇ ರಾಜ್ಯವನ್ನು ಕಣ್ಣೀರಿಡುವಂತೆ ಮಾಡಿದ ಚಿತ್ರದುರ್ಗದ ಬಸ್ ದುರಂತದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಈ ಭೀಕರ ಅಪಘಾತದಲ್ಲಿ 17 ಪ್ರಯಾಣಿಕರು ಹಾಗೂ ಲಾರಿ ಚಾಲಕ ಬೆಂಕಿಗೆ ಆಹುತಿಯಾಗಿದ್ದಾರೆ. ಬಸ್‌ನಲ್ಲಿದ್ದ ಒಟ್ಟು 32 ಜನರಲ್ಲಿ 16 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?
ಸೀ ಬರ್ಡ್ ಸಿಬ್ಬಂದಿ ಹೇಳುವ ಪ್ರಕಾರ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಅವರ ಬಸ್‌ನಲ್ಲಿ ಒಟ್ಟು 32 ಜನ ಪ್ರಯಾಣಿಕರು ಇದ್ದರು. ಆ ಕಡೆಯಿಂದ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ, ಡಿವೈಡರ್ ಹಾರಿ ಬಸ್‌ನ ಡೀಸೆಲ್ ಟ್ಯಾಂಕ್ ಬಳಿಯೇ ಜೋರಾಗಿ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೊದಲು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು, ತಕ್ಷಣವೇ ಡೀಸೆಲ್ ಟ್ಯಾಂಕ್ ಒಡೆದು ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಮಾತ್ರದಲ್ಲಿ ಇಡೀ ಬಸ್ ದಗದಗನೆ ಹೊತ್ತಿ ಉರಿದಿದೆ.



