ಸಿಬಿಐ ದಾಳಿ: ಸಿಇಒಗೆ ದೂರು ಸಲ್ಲಿಸಿದ ಟಿಎಂಸಿ

Update: 2024-04-27 11:55 GMT

ಎರಡನೇ ಹಂತದ ಮತ ಚಲಾವಣೆ ವೇಳೆ ಸಂದೇಶಖಾಲಿಯಲ್ಲಿ ಸಿಬಿಐ ಉದ್ದೇಶಪೂರ್ವಕವಾಗಿ ನಿರ್ಲಜ್ಜ ದಾಳಿ ನಡೆಸಿದೆ ಎಂದು ದೂರಿರುವ ತೃಣಮೂಲ ಕಾಂಗ್ರೆಸ್, ಪಶ್ಚಿಮ ಬಂಗಾಳದ ಮುಖ್ಯ ಚುನಾವಣೆ ಅಧಿಕಾರಿ (ಸಿಇಒ)ಗೆ ದೂರು ಸಲ್ಲಿಸಿದೆ.

ಸಂದೇಶ್‌ಖಾಲಿಯಲ್ಲಿ ಅಮಾನತುಗೊಂಡಿರುವ ಟಿಎಂಸಿ ನಾಯಕ ಶಾಜಹಾನ್ ಶೇಖ್ ಅವರ ಸಹಚರನಿಗೆ ಸೇರಿದ ಎರಡು ಸ್ಥಳಗಳಲ್ಲಿ ಶೋಧ ನಡೆಸಿದೆ ಸಿಬಿಐ, ಪೊಲೀಸ್ ಸರ್ವೀಸ್ ರಿವಾಲ್ವರ್, ವಿದೇಶಿ ನಿರ್ಮಿತ ಬಂದೂಕು ಮತ್ತಿತರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಫೆಬ್ರವರಿ 29 ರಂದು ಪಶ್ಚಿಮ ಬಂಗಾಳ ಪೊಲೀಸರು ಶೇಖ್‌ ಅವರನ್ನು ಬಂಧಿಸಿದಾಗ ಪ್ರಚೋದನೆಗೊಂಡ ಜನಸಮೂಹ ಜಾರಿ ನಿರ್ದೇಶನಾಲಯ (ಇಡಿ) ತಂಡದ ಮೇಲೆ ದಾಳಿ ನಡೆಸಿತ್ತು. 

ಟಿಎಂಸಿ ಪತ್ರ: ಶುಕ್ರವಾರ ಡಾರ್ಜಿಲಿಂಗ್, ರಾಯ್‌ಗಂಜ್ ಮತ್ತು ಬಲೂರ್‌ಘಾಟ್ ಲೋಕಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದಾಗ, ಸಿಸಿಐ ಸಂದೇಶ್‌ಖಾಲಿಯ ಖಾಲಿ ಸ್ಥಳದಲ್ಲಿ ದಾಳಿ ನಡೆಸಿದೆ. ಮನೆಯೊಂದರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಪಡಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆʼ ಎಂದು ಪತ್ರದಲ್ಲಿ ಹೇಳಿದೆ. 

ʻಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಸರ್ಕಾರಕ್ಕೆ ಸೇರಿದ ವಿಷಯಗಳಾಗಿದ್ದು, ಸಿಬಿಐ ರಾಜ್ಯ ಪೊಲೀಸಗಳಿಗೆ ಯಾವುದೇ ಸೂಚನೆ ನೀಡಿಲ್ಲ. ಪಶ್ಚಿಮ ಬಂಗಾಳ ಪೊಲೀಸರು ಬಾಂಬ್ ನಿಷ್ಕ್ರಿಯ ದಳವನ್ನು ಹೊಂದಿದ್ದು, ಅವರು ಕಾರ್ಯಾಚರಣೆಯಲ್ಲಿ ಸಹಾಯ ಮಾಡಬಹುದಿತ್ತು. ದಾಳಿಯಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ಮೂಲಕ ರಾಷ್ಟ್ರವ್ಯಾಪಿ ಸುದ್ದಿಯಾಗಿದೆ,ʼ ಎಂದು ಟಿಎಂಸಿ ಹೇಳಿದೆ. 

ಟಿಎಂಸಿ ಆರೋಪ:  ʻಆಯುಧಗಳನ್ನು ನಿಜವಾಗಿಯೂ ಶೋಧದ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆಯೇ ಅಥವಾ ಸಿಬಿಐ ಅಥವಾ ಎನ್‌ಎಸ್‌ಜಿ ತಂದು ಅಡಗಿಸಿ ಇಟ್ಟಿವೆಯೇ ಎಂದು ತಿಳಿದುಕೊಳ್ಳಲು ಯಾವುದೇ ಮಾರ್ಗವಿಲ್ಲ. ಚುನಾವಣೆ ಸಮಯದಲ್ಲಿ ಟಿಎಂಸಿ ಮತ್ತು ಅದರ ಅಭ್ಯರ್ಥಿಗಳ ವಿರುದ್ಧ ರಾಷ್ಟ್ರವ್ಯಾಪಿ ದ್ವೇಷ ಹುಟ್ಟುಹಾಕಲು ಸಿಬಿಐ ಈ ಕಸರತ್ತು ನಡೆಸಿದೆʼ ಎಂದು ಟಿಎಂಸಿ ಆರೋಪಿಸಿದೆ.

ʻಪಕ್ಷದ ವಿರುದ್ಧ ಅಪಪ್ರಚಾರ ನಡೆಸಲು ಸಿಬಿಐ ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ರಾಜ್ಯ ಸರ್ಕಾರದ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವುದು ಬಿಜೆಪಿ ನಡೆಸಿದ ತಂತ್ರʼ ಎಂದು ಪಕ್ಷ ಹೇಳಿದೆ. 

Tags:    

Similar News