ಹಾವೇರಿಯಲ್ಲಿ ಪ್ರತಿಭಟನೆಯ ʼಘಾಟುʼ ಹಬ್ಬಿಸಿದ ಬ್ಯಾಡಗಿ ಮೆಣಸಿನಕಾಯಿ!

ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿ ಭಾರತದ ಎಲ್ಲಾ ಮೆಣಸಿನಕಾಯಿ ಪ್ರಭೇದಗಳಲ್ಲಿ ಎರಡನೇ ಅತಿ ದೊಡ್ಡ ವಹಿವಾಟನ್ನು ಹೊಂದಿದೆ. ಗಾಢ ಕೆಂಪು ಬಣ್ಣ, ತಿಳಿ ಖಾರ ಹಾಗೂ ಪರಿಮಳ ಇದರ ವಿಶೇಷ. ಹೀಗೆ ಖ್ಯಾತಿ ಗಳಿಸಿರುವ ಬ್ಯಾಡಗಿ ಮೆಣಸಿನಕಾಯಿ ಸೋಮವಾರ (ಮಾರ್ಚ್‌ 11) ಹಾವೇರಿಯ ಬ್ಯಾಡಗಿಯಲ್ಲಿ ಭಾರೀ ಘಾಟು ಹೊತ್ತಿಸಿದೆ. ಹಾಗಿದ್ದರೆ ಇದಕ್ಕೆ ಕಾರಣವೇನು?, ಈಗ ಪರಿಸ್ಥಿತಿ ಹೇಗಿದೆ? ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.;

By :  Hitesh Y
Update: 2024-03-12 11:19 GMT
ಹಾವೇರಿಯ ಬ್ಯಾಡಗಿಯಲ್ಲಿ ರೈತರ ಪ್ರತಿಭಟನೆ ಯಾಕೆ

ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿ ದೇಶ, ವಿದೇಶಗಳಲ್ಲಿ ಖ್ಯಾತಿ. ಆದರೆ, ಸೋಮವಾರ (ಮಾರ್ಚ್‌ 11) ಹಾವೇರಿ ಜಿಲ್ಲೆಯ ಬ್ಯಾಡಗಿ ಮಾರುಕಟ್ಟೆಯಲ್ಲಿ ಈ ಮೆಣಸಿನಕಾಯಿ  ಘಾಟು ಹುಯಿಲೆಬ್ಬಿಸಿದೆ. ಬ್ಯಾಡಗಿ ಮೆಣಸಿನ ಘಾಟು ಈಗ ಇಡೀ ರಾಜ್ಯಾದ್ಯಂತ ಸುದ್ದಿಯಾಗಿದೆ. ಹಾಗಾದರೆ, ಅದಕ್ಕೆ ಕಾರಣವೇನು, ಈಗ ಪರಿಸ್ಥಿತಿ ಹೇಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದ ಪ್ರಸಿದ್ಧ ಒಣ ಮೆಣಸಿನಕಾಯಿಯ ಬೆಲೆ ಏಕಾಏಕಿ ಕುಸಿದಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಷ್ಯಾದ ಪ್ರಮುಖ ಮೆಣಸಿನಕಾಯಿ ಮಾರುಕಟ್ಟೆ ಎಂದೇ ಖ್ಯಾತಿ ಗಳಿಸಿರುವ ಹಾವೇರಿಯ ಬ್ಯಾಡಗಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ಸೋಮವಾರ ಸಂಜೆ ಆಕ್ರೋಶಿತ ರೈತರ ಗುಂಪು ಬರೋಬ್ಬರಿ 12 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ಒಂದು ಅಗ್ನಿಶಾಮಕ ವಾಹನಕ್ಕೂ ಬೆಂಕಿ ಹಚ್ಚಲಾಗಿದೆ. 

ಈ ಹಿಂದೆಯೂ ಮೆಣಸಿನಕಾಯಿ ಮಾರಾಟದಲ್ಲಿ ಏರಿಳಿತವಾದರೂ ಈ ಪ್ರಮಾಣದಲ್ಲಿ ರೈತರಿಂದ ಆಕ್ರೋಶ ವ್ಯಕ್ತವಾಗಿರಲಿಲ್ಲ. ಪ್ರತಿ ಕ್ವಿಂಟಾಲ್ ಮೆಣಸಿನಕಾಯಿ ಬೆಲೆಯು ಹೋದವಾರ 20 ಸಾವಿರ ರೂಪಾಯಿದಲ್ಲಿತ್ತು. ಆದರೆ, ಈ ವಾರ ಪ್ರತಿ ಕ್ವಿಂಟಾಲ್‌ ಬೆಲೆ 12,000 ಸಾವಿರಕ್ಕೆ ಕುಸಿದಿದ್ದು, ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಹೊರ ಜಿಲ್ಲೆ, ರಾಜ್ಯದವರು

ಸೋಮವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಹೊರ ರಾಜ್ಯದವರು ಹಾಗೂ ಹೊರ ಜಿಲ್ಲೆಯವರೇ ಮುಂಚೂಣಿಯಲ್ಲಿ ಇದ್ದರು. ಈ ಭಾಗದ ರೈತರು ಇರಲಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಬ್ಯಾಡಗಿ ವರ್ತಕರ ಸಂಘದ ಅಧ್ಯಕ್ಷ ಸುರೇಶ ಗೌಡ ಪಾಟೀಲ ಅವರು, "ಬೆಂಕಿ ಹಚ್ಚಿದವರು ರೈತರಲ್ಲ. ಅವರು ಬೇರೆಯೇ ಇದ್ದಾರೆ. ಯಾರು ಎಂದು ನಾನು ಈಗ ಹೇಳಲು ಬರುವುದಿಲ್ಲ. ಆದರೆ, ಬೆಂಕಿ ಹಚ್ಚಿದವರ ಸುಳಿವು ಸಿಕ್ಕಿದೆ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ" ಎಂದು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಭಾರೀ ಪ್ರತಿಭಟನೆಗೆ ಕಾರಣವಾದ ದರ ಕುಸಿತ

ಹಾವೇರಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಬೆಲೆ ಏಕಾಏಕಿ ಕುಸಿದಿದ್ದು, ಸೋಮವಾರ ಸಂಜೆ ರೈತರು ತಮ್ಮ ಆಕ್ರೋಶವನ್ನು ಹೊರ ಹಾಕಲು ಮುಖ್ಯ ಕಾರಣವಾಯಿತು. ಬ್ಯಾಡಗಿ(ಮಾರುಕಟ್ಟೆ)ಎಪಿಎಂಸಿ ಕಚೇರಿಗೆ ನುಗ್ಗಿದ ರೈತರು ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೇ ಕಲ್ಲು ತೂರಾಟವೂ ನಡೆದಿದೆ. ರೈತರು ನಡೆಸಿದ ಕಲ್ಲು ತೂರಾಟದಿಂದಾಗಿ ಎಪಿಎಂಪಿಯ ಕಿಟಕಿ ಗಾಜುಗಳು ಪುಡಿಯಾಗಿವೆ. ಎಪಿಎಂಸಿ ಅಧ್ಯಕ್ಷರ ಕಾರಿನ ಮೇಲೂ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 12 ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಒಂದು ಅಗ್ನಿಶಾಮಕ ವಾಹನಕ್ಕೂ ಬೆಂಕಿ ಹಾಕಿ ಹಚ್ಚಿದ್ದು ವರದಿ ಆಗಿದೆ.

ಪೆಟ್ರೋಲ್ ಸುರಿದರು, ಮೆಣಸಿನಕಾಯಿಗೂ ಬೆಂಕಿ ಹಚ್ಚಿದರು

ಬ್ಯಾಡಗಿ ಎಪಿಎಂಸಿಯಲ್ಲಿ ಮೆಣಸಿನಕಾಯಿ ದರ ಕುಸಿಯುವುದು ಅಥವಾ ಏರಿಳಿತವಾಗುವುದು ಸಾಮಾನ್ಯ. ಆದರೆ, ಇತ್ತೀಚಿನ ವರ್ಷದಲ್ಲಿ ರೈತರು ಈ ರೀತಿ ಆಕ್ರೋಶ ಭರಿತವಾಗಿ ಪ್ರತಿಭಟನೆ ನಡೆಸಿದ್ದು, ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಇದೇ ಮೊದಲು. ಆಕ್ರೋಶಿತ ರೈತರ ಗುಂಪು ಮೆಣಸಿನಕಾಯಿಗೂ ಬೆಂಕಿ ಹಚ್ಚಿದ್ದು, ಮಾರುಕಟ್ಟೆಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಇದರಿಂದ ಉಸಿರಾಡುವುದಕ್ಕೂ ಸಮಸ್ಯೆ ಆಗಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.


 ಮೆಣಸಿನಕಾಯಿ ಬೆಲೆ ಸರಾಸರಿ ಬೆಲೆ (ಪ್ರತಿ ಕ್ವಿಂಟಾಲ್‌ಗೆ ರೂ.ಗಳಲ್ಲಿ)

ತಳಿ 

ಈ ವಾರದ ಬೆಲೆ

 ಕಳೆದ ವಾರ

ಕಡ್ಡಿ 

29,009

32,529

ಡಬ್ಬಿ

34,509

35,511 

ಗುಂಟೂರು

12,189

12,589

ಪ್ರತಿ ಸೋಮವಾರ ಪ್ರಮುಖ ವಹಿವಾಟು

ಹಾವೇರಿಯ ಬ್ಯಾಡಗಿ ಎಪಿಎಂಸಿಗೆ ಪ್ರತಿ ಸೋಮವಾರವೂ ಸಾವಿರಾರು ರೈತರು ತಾವು ಬೆಳೆದ ಮೆಣಸಿನಕಾಯಿಯನ್ನು ಮಾರಾಟಕ್ಕೆ ತರುತ್ತಾರೆ. ಸೋಮವಾರ (ಮಾರ್ಚ್‌ 11)ದಂದು ಇಲ್ಲಿನ ಮಾರುಕಟ್ಟೆಗೆ 3.11 ಲಕ್ಷಕ್ಕೂ ಹೆಚ್ಚು ಮೆಣಸಿನಕಾಯಿ ಚೀಲಗಳ ಆವಕವಾಗಿತ್ತು. ಈ ಮಾರುಕಟ್ಟೆಗೆ ಹಾವೇರಿ, ಬಳ್ಳಾರಿ, ಗದಗ, ವಿಜಯಪುರ, ಕೊಪ್ಪಳ, ಬಾಗಲಕೋಟೆ, ರಾಯಚೂರು ಹಾಗೂ ನೆರಯ ತೆಲಂಗಾಣ ರಾಜ್ಯವೂ ಸೇರಿದಂತೆ ಹಲವು ಭಾಗದ ರೈತರು ತಾವು ಬೆಳೆದ ಮೆಣಸಿನಕಾಯಿಯನ್ನು ಇಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಬರುತ್ತಾರೆ.

ಆಂಧ್ರದಿಂದಲೂ ಖರೀದಿಗೆ ಬರುತ್ತಾರೆ

ಹಾವೇರಿಯ ಎಪಿಎಂಪಿಗೆ ನೆರೆ ರಾಜ್ಯದಿಂದಲೂ ಮೆಣಸಿನ ಕಾಯಿ ಮಾರಾಟ ಮಾಡಲು ರೈತರು ಬರುವ ರೀತಿಯಲ್ಲೇ ಖರೀದಿಗೂ ವರ್ತಕರು ಬರುತ್ತಾರೆ. ಉತ್ತಮ ಬೆಲೆ ಸಿಗುವುದು ಸಹ ಇದಕ್ಕೆ ಕಾರಣ. ಹಾವೇರಿಯನ್ನು ಹೊರತುಪಡಿಸಿದರೆ, ಹುಬ್ಬಳ್ಳಿ- ಧಾರವಾಡದ ಎಪಿಎಂಸಿಯು ಮಾರುಕಟ್ಟೆಯಲ್ಲೂ ರೈತರು ಮೆಣಸಿನಕಾಯಿ ಮಾರಾಟ ಮಾಡುತ್ತಾರೆ. ಉತ್ತರ ಕರ್ನಾಟಕದ ಭಾಗದಲ್ಲಿ ಈ ಎರಡೂ ಮಾರುಕಟ್ಟೆಗಳು ಪ್ರಮುಖವಾಗಿವೆ.

ಇನ್ಮುಂದೆ ವಾರದಲ್ಲಿ ಎರಡು ದಿನ ಮಾರುಕಟ್ಟೆ

ಹಾವೇರಿಯ ಎಪಿಎಂಸಿ (ಬ್ಯಾಗಡಿ)ಯಲ್ಲಿ ಪ್ರತಿ ಸೋಮವಾರ ಮೆಣಸಿನಕಾಯಿ ಆವಕವಾಗುತ್ತಿತ್ತು. ಮಾರ್ಚ್‌ 11ರ ಬೆಳವಣಿಗೆಯ ನಂತರ ಮುಂದಿನ ವಾರದಿಂದ ಸೋಮವಾರ ಹಾಗೂ ಗುರುವಾರ ಮೆಣಸಿನಕಾಯಿ ಆವಕಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ರೈತರು ಸೋಮವಾರ ಹಾಗೂ ಗುರುವಾರ ಮೆಣಸಿನಕಾಯಿ ಮಾರಾಟ ಮಾಡಬಹುದಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಸುರೇಶ ಗೌಡ ಪಾಟೀಲ ತಿಳಿಸಿದರು.

ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಪ್ರಮುಖರೆಲ್ಲರೂ ಸಭೆ ಸೇರಿ ವಾರಕ್ಕೆ ಎರಡು ಮಾರುಕಟ್ಟೆ ಮಾಡಲು ನಿರ್ಧರಿಸಿದ್ದೇವೆ. ಮುಂದಿನ ವಾರದಿಂದ ಸೋಮವಾರ ಹಾಗೂ ಗುರುವಾರ ಮೆಣಸಿನಕಾಯಿ ಖರೀದಿ ನಡೆಯಲಿದೆ. ಇದರಿಂದ ಮಾರುಕಟ್ಟೆಯಲ್ಲಿ ದಟ್ಟಣೆ ಉಂಟಾಗುವುದಿಲ್ಲ ಎಂದರು.

ಅದೊಂದು ತಪ್ಪಾಗಿದೆ: ಸುರೇಶ ಗೌಡ

ಇತ್ತೀಚಿನ ಸರಣಿ ಹಬ್ಬ ಹಾಗೂ ಜಾತ್ರೆಗಳಿಂದ ದರ ತುಸು ಏರುಪೇರಾಗಿದೆ. ಅದೊಂದು ತಪ್ಪಾಗಿದೆ ಸರಿಪಡಿಸಿಕೊಳ್ಳುತ್ತೇವೆ ಎಂದು ಸುರೇಶ ಗೌಡ ಪಾಟೀಲ ತಿಳಿಸಿದರು. ಈಚೆಗೆ ಮೈಲಾರ ಜಾತ್ರೆ, ಹಾವನೂರು ಜಾತ್ರೆ ಹಾಗೂ ದುರ್ಗಮ್ಮನ ಜಾತ್ರೆ ಸೇರಿದಂತೆ ವಿವಿಧ ಹಬ್ಬ ಹಾಗೂ ಜಾತ್ರೆಗಳು ನಡೆದಿವೆ. ಈ ಸಂದರ್ಭದಲ್ಲಿ ಹಮಾಲರ ಕೊರತೆಯೂ ಎದುರಾಗಿತ್ತು ಎಂದು ಹೇಳಿದರು.

ಸ್ಟೋರೇಜ್‌ ಕೊರತೆ ಇದೆ

ಮೆಣಸಿನಕಾಯಿ ಸಂಗ್ರಹಕ್ಕೆ ಸ್ಟೋರೇಜ್‌ (ಶೈತ್ಯಾಗಾರ)ಸಮಸ್ಯೆ ಇದೆ. ಬಿಸಿಲು ತುಂಬಾ ಇರುವುದರಿಂದ ಮೆಣಸಿನಕಾಯಿ ಸಂಗ್ರಹ ಮಾಡಲು ಸ್ಟೋರೇಜ್ ಸಮಸ್ಯೆ ಇದೆ. ಇದೇ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಹಾವೇರಿಯ ಬ್ಯಾಡಗಿ ಮಾರುಕಟ್ಟೆಯಲ್ಲಿ 32 ಕೋಲ್ಡ್‌ ಸ್ಟೋರೇಜ್‌ ಇದೆ. ಆದರೆ, ಬಳ್ಳಾರಿ, ರಾಯಚೂರು, ಕಲಬುರಗಿ ಹಾಗೂ ಆಂಧ್ರದಲ್ಲಿ ಸ್ಟೋರೇಜ್‌ ಇಲ್ಲ, ಎಲ್ಲವೂ ತುಂಬಿವೆ ಎಂದು ಹೆಸರು ಹೇಳಲು ಇಚ್ಛಿಸದ ಎಪಿಎಂಸಿಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ರೈತರು ತಾಳ್ಮೆ ಕಳೆದುಕೊಳ್ಳಬಾರದು

ಬ್ಯಾಡಗಿ ಮೆಣಸಿನಕಾಯಿ ಬೆಲೆ ಕುಸಿದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ರೈತರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಕೃಷಿ ಮಾರುಕಟ್ಟೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಮಾಧ್ಯಮಗಳ ಮೂಲಕ ರೈತರಲ್ಲಿ ಮನವಿ ಮಾಡಿದ್ದಾರೆ.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ: ಬಿಜೆಪಿ ಟೀಕೆ

ರಾಜ್ಯ ಸರ್ಕಾರ ರೈತ ವಿರೋಧ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಹಾವೇರಿಯ ಬ್ಯಾಡಗಿಯಲ್ಲಿ ರೈತರು ಆಕ್ರೋಶಗೊಂಡು ಎಪಿಎಂಸಿ ಮೇಲೆ ದಾಳಿ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ರೈತ ವಿರೋಧಿ ನೀತಿ ಆಗಿದೆ. ಬರ ಪರಿಸ್ಥಿತಿ ನಿರ್ವಹಣೆಯಲ್ಲಿನ ಲೋಪದಿಂದಾಗಿ ರೈತರು ಕಂಗಾಲಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರ ಸಮಸ್ಯೆಗಳಿಗೆ ಕಾಳಜಿ ವಹಿಸಿ ಸೂಕ್ತ ಸಮಯದಲ್ಲಿ ಬರ ಪರಿಹಾರ ವಿತರಿಸಿದ್ದರೆ, ರೈತರು ಎಪಿಎಂಸಿ ಆವರಣವನ್ನು ಹಾನಿ ಮಾಡುವ ಹಂತಕ್ಕೆ ತಲುಪುತ್ತಿರಲಿಲ್ಲ ಎಂದಿದ್ದಾರೆ. ಕನಿಷ್ಠ ಈಗಲಾದರೂ ಸಿಎಂ ಸಿದ್ದರಾಮಯ್ಯ ಅವರು ಗಾಢ ನಿದ್ರೆಯಿಂದ ಎಚ್ಚೆತ್ತುಕೊಂಡು ರೈತರಿಗೆ 'ಬರ ಪರಿಹಾರದ ಭರವಸೆ' ನೀಡಬೇಕು. ಇಲ್ಲದಿದ್ದರೆ ಹತಾಶರಾದ ರೈತರು ಸಿಎಂ ನಿವಾಸ ಹಾಗೂ ವಿಧಾನಸೌಧಕ್ಕೆ ಬೆಂಕಿ ಹಚ್ಚುವ ದಿನ ದೂರವಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

Tags:    

Similar News