ನವದೆಹಲಿ, ಮೇ 14- ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ)ವನ್ನು ಆರೋಪಿಯನ್ನಾಗಿ ಮಾಡುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ದೆಹಲಿ ಹೈಕೋರ್ಟ್‌ನಲ್ಲಿ ಹೇಳಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಇಡಿ ವಿರೋಧಿಸಿದೆ.
ʻಮುಂದಿನ ದೂರಿನಲ್ಲಿ (ದೋಷಾರೋಪದಲ್ಲಿ) ಎಎಪಿಯನ್ನು ಸಹ ಆರೋಪಿಯನ್ನಾಗಿ ಮಾಡಲಾಗುವುದು. ಪ್ರಕರಣದಲ್ಲಿ ಆರೋಪ ಹೊರಿಸುವ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಆರೋಪಿಗಳು ಸಂಘಟಿತ ಪ್ರಯತ್ನ ಮಾಡುತ್ತಿದ್ದಾರೆ,ʼ ಎಂದು ನ್ಯಾ. ಸ್ವರ್ಣ ಕಾಂತ ಶರ್ಮಾ ಅವರ ಮುಂದೆ ಇಡಿ ವಕೀಲರು ವಾದಿಸಿದರು.
ಸಿಸೋಡಿಯಾ ಪರ ವಕೀಲರು, ʻಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಇಡಿ ಮತ್ತು ಸಿಬಿಐ ಇನ್ನೂ ಜನರನ್ನು ಬಂಧಿಸುತ್ತಿವೆ. ಆದ್ದರಿಂದ, ವಿಚಾರಣೆಯನ್ನು ಶೀಘ್ರವಾಗಿ ಮುಗಿಸುವ ಪ್ರಶ್ನೆ ಬರುವುದಿಲ್ಲ,ʼ ಎಂದು ಹೇಳಿದರು. ಜಾಮೀನು ಅರ್ಜಿ ಕುರಿತು ವಾದ ಮುಂದುವರಿಯಲಿದೆ.