ಅತ್ಯಾಚಾರ ದೂರು ವಾಪಸು: ಸಂದೇಶಖಾಲಿ ಪ್ರಕರಣಕ್ಕೆ ಹೊಸ ತಿರುವು
ನರೇಗಾ ವೇತನ ಸಿಗದಿರುವ ಬಗ್ಗೆ ಹೇಳಿದ ಬಳಿಕ ಖಾಲಿ ಕಾಗದಕ್ಕೆ ಸಹಿ ಹಾಕಿಸಿಕೊಂಡು ವಂಚಿಸಲಾಗಿದೆ ಎಂದು ಮಹಿಳೆ ಮತ್ತು ಆಕೆಯ ಅತ್ತೆ ಆರೋಪಿಸಿದ್ದಾರೆ.;
ಬಿಜೆಪಿಯೊಡನೆ ಸಂಪರ್ಕ ಹೊಂದಿರುವವರು ಅತ್ಯಾಚಾರ ದೂರು ನೀಡಲು ಒತ್ತಾಯಿಸಿದರು ಎಂದಿರುವ ಇಬ್ಬರು ಮಹಿಳೆಯರು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರ ಮೇಲಿನ ಅತ್ಯಾಚಾರದ ಆರೋಪ ಹಿಂದೆಗೆದುಕೊಂಡಿದ್ದಾರೆ. ಇದರಿಂದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ.
ವೇತನ ಸಿಗದಿರುವ ಬಗ್ಗೆ ಮಾತನಾಡಿದ ನಂತರ ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಹೇಳಿದರು. ಅದನ್ನು ಬಳಸಿಕೊಂಡು ತಮ್ಮನ್ನು ಸಂದೇಶಖಾಲಿಯ ಅತ್ಯಾಚಾರ ಸಂತ್ರಸ್ತರು ಎಂದು ಬಿಂಬಿಸಿರುವುದು ಆನಂತರ ಗೊತ್ತಾಯಿತು ಎಂದು ಮಹಿಳೆ ಮತ್ತು ಆಕೆಯ ಅತ್ತೆ ಆರೋಪಿಸಿದ್ದಾರೆ.
ರಾಜಕೀಯಕ್ಕೆ ಮಹಿಳೆಯರ ಬಳಕೆ: ಬಿಜೆಪಿ ಮಹಿಳೆಯರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂದು ಆಡಳಿತಾರೂಢ ಟಿಎಂಸಿ ಆರೋಪಿಸಿದೆ. ಟಿಎಂಸಿ ಸಂಸದೆ ಸುಶ್ಮಿತಾ ದೇವ್, ʻವಿರೋಧ ಪಕ್ಷದ ವಿರುದ್ಧ ಮಾತನಾಡಿದ್ದಕ್ಕೆ ಸಂದೇಶಖಾಲಿಯ ಧೈರ್ಯಶಾಲಿ ಮಹಿಳೆಯರಿಗೆ ಬಿಜೆಪಿ ಬೆದರಿಕೆ ಹಾಕುತ್ತಿದೆ. ಬಿಜೆಪಿ ರಾಜಕೀಯ ದುರಾಸೆಗಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರ ಘನತೆಯನ್ನು ನಿರ್ಲಜ್ಜವಾಗಿ ತುಳಿಯುತ್ತಿದೆ. ಇಂಥ ಮೋಸದ ಜಾಲದ ಸುತ್ತುವಿಕೆ ಎಷ್ಟು ದಿನ ನಡೆಯುತ್ತದೆ?ʼ ಎಂದು ಪ್ರಶ್ನಿಸಿದರು.
ʻಅತ್ಯಾಚಾರದ ಆರೋಪ ಹಿಂತೆಗೆದುಕೊಂಡ ಮಹಿಳೆಯರಿಗೆ ಸ್ಥಳೀಯ ಬಿಜೆಪಿ ನಾಯಕರು ಬೆದರಿಕೆ ಹಾಕಿದ್ದಾರೆʼ ಎಂದು ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಶಶಿ ಪಂಜಾ ಹೇಳಿದ್ದಾರೆ.
ಮಹಿಳೆಯರ ಹೇಳಿಕೆ: ರಾಷ್ಟ್ರೀಯ ಮಹಿಳಾ ಆಯೋಗದ ತಂಡ ಸಂದೇಶಖಾಲಿ ದ್ವೀಪಕ್ಕೆ ಭೇಟಿ ನೀಡಿತ್ತು. ನರೇಗಾ ಯೋಜನೆಯ 100 ದಿನಗಳ ವೇತನ ನೀಡಿಲ್ಲ ಎಂದು ತಂಡಕ್ಕೆ ತಿಳಿಸಿದ್ದೆವುʼ ಎಂದು ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು. ʻಯಾವುದೇ ಅತ್ಯಾಚಾರ ನಡೆದಿಲ್ಲ. ಅವರು (ಪಿಯಾಲಿ ದಾಸ್) ಖಾಲಿ ಹಾಳೆ ಮೇಲೆ ಸಹಿ ಹಾಕಲು ಹೇಳಿದರು. ಅತ್ಯಾಚಾರ ಆರೋಪ ಮಾಡಿದವರ ಪಟ್ಟಿಯಲ್ಲಿ ನಾನೂ ಇದ್ದೆ ಎಂದು ಆನಂತರ ಗೊತ್ತಾಯಿತು. ಪಿಯಾಲಿ ದಾಸ್ ಸಂದೇಶಖಾಲಿಯ ಮಾನಹಾನಿ ಮಾಡಿದ್ದಾರೆʼ ಎಂದು ಅತ್ತೆ ಆರೋಪಿಸಿದ್ದಾರೆ.
ʻಆಕೆ ಬಿಜೆಪಿಯಲ್ಲಿದ್ದಾಳೆಂದು ನಮಗೆ ಆನಂತರ ತಿಳಿಯಿತು. ನಮಗೆ ಸುಳ್ಳು ಹೇಳಿ ಬಲೆಗೆ ಬೀಳಿಸಿದ ಆಕೆಗೆ ಶಿಕ್ಷೆಯಾಗಬೇಕು.ನನಗೆ ಮತ್ತು ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆʼ ಎಂದು ಮಹಿಳೆ ಆರೋಪಿಸಿದ್ದಾರೆ.
ದೂರು ದಾಖಲು: ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ಟಿಎಂಸಿ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದೆ. ಒಂದು ವಾರದ ಹಿಂದೆ ಸ್ಥಳೀಯ ನಾಯಕರೊಬ್ಬರು ʻಸಂದೇಶಖಾಲಿ ಕುರಿತಂತೆ ಟಿಎಂಸಿ ನಾಯಕರ ವಿರುದ್ಧದ ಎಲ್ಲ ದೂರುಗಳನ್ನು ಸುವೆಂದು ಅಧಿಕಾರಿ ಹೇಳಿದಂತೆ ಮಾಡಲಾಗಿದೆʼ ಎಂದು ಹೇಳಿದ ವಿಡಿಯೋ ಕಾಣಿಸಿಕೊಂಡಿತ್ತು. ಆದರೆ, ಅದು ತಿದ್ದಿದ ವಿಡಿಯೋ ಎಂದು ಬಿಜೆಪಿ ಹೇಳಿಕೊಂಡಿದೆ.