ಗೆರೋಸಾ ಶಾಲೆ ವಿವಾದವೇನು, ಈಗ ಏನಾಗಿದೆ ?

ಕೋಮು ಸೂಕ್ಷ್ಮ ಪ್ರದೇಶದಲ್ಲಿ ಇದೀಗ ಮತ್ತೊಂದು ವಿವಾದ !;

Update: 2024-02-16 08:58 GMT
ಗೆರೋಸಾ ಶಾಲೆಯ ಮುಂದೆ ನಡೆದ ಪ್ರತಿಭಟನೆ

ಬೆಂಗಳೂರು: ಕೋಮುಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲಾಗಿರುವ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್ ಅವರ ʻಕೆಲಸವೇ ಪೂಜೆʼ ಎನ್ನುವ ಕವನವು ಜೆಪ್ಪುವಿನ ಸೇಂಟ್ ಗೆರೋಸಾ ಇಂಗ್ಲಿಷ್ ಹೈಯರ್‌ ಪ್ರೈಮರಿ ಶಾಲೆಯಲ್ಲಿ ವಿವಾದದ ಕೇಂದ್ರವಾಗಿದೆ.

ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆಧಾರರಹಿತ ಆಡಿಯೋಗಳಿಂದ ವಿವಾದದ ಸ್ವರೂಪವನ್ನು ಪಡೆದುಕೊಂಡಿತು. ಕೊನೆಯದಾಗಿ ಶಾಲೆಯ ಇಂಗ್ಲಿಷ್ ಶಿಕ್ಷಕ್ಷಿಯನ್ನು ಅಮಾನತು ಮಾಡಲಾಯಿತು.

7ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಶಿಕ್ಷಕರು ಶಾಲೆಯಲ್ಲಿ ಹಿಂದೂ ಧಾರ್ಮಿಕ ಆಚರಣೆಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆಡಿಯೋ ಸಂದೇಶಗಳು ವಿವಾದದ ಸ್ವರೂಪ ಪಡೆಯಿತು.

ಕೋಮುಸೂಕ್ಷ್ಮ ಪ್ರದೇಶ ಎಂದೇ ಗುರುತಿಸಲಾಗಿರುವ ಕರಾವಳಿಯ ಮಂಗಳೂರು ಭಾಗದಲ್ಲಿ ಈ ವಿವಾದ ಬಹುಬೇಗ ಹಬ್ಬತೊಡಗಿತು.

ಫೆಬ್ರವರಿ 8 ರಂದು ವಿವಾದ ಶುರುವಾಗಿದ್ದು, ಇದು ಮಂಗಳೂರಿನ ವಿದ್ಯಾರ್ಥಿಗಳು, ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿ ಮೇಲೆ ಪರಿಣಾಮ ಬೀರಿದೆ.

ಫೆಬ್ರವರಿ 12 ರಂದು, ಬಿಜೆಪಿ ಶಾಸಕರು ಮತ್ತು ವಿಎಚ್‌ಪಿ ಮತ್ತು ಬಜರಂಗದಳ ಸೇರಿದಂತೆ ಹಿಂದೂ ಪರ ಗುಂಪುಗಳು ಶಾಲೆಗೆ ಭೇಟಿ ನೀಡಿ ಶಿಕ್ಷಕಿಯನ್ನು ಶಾಲೆಯಿಂದ ತೆಗೆದುಹಾಕುವಂತೆ ಆಡಳಿತ ಮಂಡಳಿಗೆ ಒತ್ತಾಯಿಸಿದ್ದರು. ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಡಾ.ಭರತ್ ಶೆಟ್ಟಿ ಅವರು ಶಾಲಾ ಆಡಳಿತ ಮಂಡಳಿಯವರೊಂದಿಗ, ʻಚಿಕ್ಕ ಮಕ್ಕಳಲ್ಲಿ ಹಿಂದೂ ವಿರೋಧಿ ಭಾವನೆಗಳನ್ನು ಬಿತ್ತಲಾಗುತ್ತಿದೆ. ಮಕ್ಕಳಿಗೆ ಪುಸ್ತಕದಿಂದ ಪಾಠ ಮಾಡುವುದನ್ನು ಬಿಟ್ಟು ಈ ರೀತಿಯ ಪಾಠ ಮಾಡುವ ಅಗತ್ಯವೇನಿದೆ?ʼ ಎಂದು ಪ್ರಶ್ನೆ ಮಾಡಿದ್ದರು.

ಅಲ್ಲದೇ ಹಿಂದೂ ಪರ ನಾಯಕರು ಮತಾಂತರಕ್ಕೆ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಮುಖಂಡರು ಶಾಲಾ ಮಕ್ಕಳು ಘೋಷಣೆಗಳನ್ನು ಕೂಗುವಂತೆ ಮಾಡಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಶಾಸಕರು ಹಾಗೂ ಸ್ಥಳೀಯರ ಒತ್ತಡಕ್ಕೆ ಮಣಿದ ಆಡಳಿತ ಮಂಡಳಿಯು ಶಿಕ್ಷಕರನ್ನು ಅಮಾನತು ಮಾಡಿದೆ. ಆದರೆ, ನಾಗರಿಕ ಹಕ್ಕುಗಳ ಗುಂಪುಗಳು ಮರುದಿನ ಘಟನೆಯನ್ನು ತನಿಖೆ ಮಾಡಿ, ಶಾಲಾ ಆಡಳಿತ ಮಂಡಳಿಗೆ ಬೆಂಬಲ ಸೂಚಿಸಿದರು.

ಅಲ್ಲದೇ ರವೀಂದ್ರನಾಥ ಟ್ಯಾಗೋರ್ ಅವರ ಕವಿತೆಯನ್ನು ಕಲಿಸುವುದನ್ನು ಹೊರತುಪಡಿಸಿ,ಶಿಕ್ಷಕಿಯಿಂದ ಯಾವುದೇ ತಪ್ಪು ಆಗಿಲ್ಲ ಎಂದು ಪ್ರತಿಪಾದಿಸಿದರು. 


ಘಟನೆಯ ಹಿನ್ನೆಲೆ ಏನು:

ಇಂಗ್ಲಿಷ್ ಶಿಕ್ಷಕಿಯೊಬ್ಬರು ರವೀಂದ್ರನಾಥ ಟ್ಯಾಗೋರ್ ಅವರ ʻವರ್ಕ್ ಈಸ್ ವರ್ಶಿಪ್ʼ ಕವನವನ್ನು ಪಾಠ ಮಾಡುತ್ತಿದ್ದರು. ಈ ಕವನದಲ್ಲಿ.,

ಬಿಟ್ಟು ಬಿಡು ಮಂತ್ರ ಪಠಿಸುವುದ

ಹಾಡ ಹಾಡುವುದ, ಮಣಿ ಎಣಿಸುವುದ!

ಎಲ್ಲ ಬಾಗಿಲ ಮುಚ್ಚಿ

ದೇಗುಲದ ಏಕಾಂತ ಕತ್ತಲ ಮೂಲೆಯಲಿ ಕುಳಿತು

ಯಾರ ಜಪಿಸುತಿರುವೆ ?

ಕಣ್ತೆರೆದು ನೋಡು

ನಿನ್ನ ದೇವರು ನಿನ್ನ ಮುಂದಿಲ್ಲ ಎಂದಿದೆʼ ಎಂದು ನಾಗರಿಕ ಹಕ್ಕುಗಳ ಹೋರಾಟಗಾರ ಹಾಗೂ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಹೇಳಿದ್ದಾರೆ.

ನಿರಪರಾಧಿ ಶಿಕ್ಷಕರನ್ನು ದೂರು ಅಥವಾ ಯಾವುದೇ ತನಿಖೆ ಮಾಡದೆ ಅಮಾನತು ಮಾಡಲಾಗಿದೆ ಮತ್ತು ಯಾವುದೇ ತಪ್ಪು ಮಾಡದ ಶಿಕ್ಷಕರನ್ನು ಶಿಕ್ಷಿಸಿರುವುದು ನಾಗರಿಕ ಸಮಾಜಕ್ಕೆ ಆಘಾತಕಾರಿಯಾಗಿದೆ ಎಂದಿದ್ದಾರೆ.

ಮಂಗಳೂರಿನ ಖಾಸಗಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಕೆ ರಾಮಕೃಷ್ಣ ಅವರು ಟ್ಯಾಗೋರ್ ಅವರ ಕವಿತೆಯನ್ನು ಸಂಕ್ಷಿಪ್ತಗೊಳಿಸಿದರು. ಪುರೋಹಿತರ ಆಚರಣೆಗಳನ್ನು ತ್ಯಜಿಸಲು ಮತ್ತು ಅವರು ನೀಡಿದ ಸಲಹೆಗಳನ್ನು ನೋಡಿ. ವಿಗ್ರಹಾರಾಧನೆಯ ವಿರುದ್ಧ ಟ್ಯಾಗೋರ್ ಅವರ ನಿಲುವು ಮತ್ತು ಅವರ "ಕೆಲಸವೇ ಪೂಜೆ" ತತ್ವವನ್ನು ಎತ್ತಿ ಹಿಡಿದ ಅವರು, ಕವಿತೆ ರಾಜ್ಯದ 8ನೇ ತರಗತಿಯ ಇಂಗ್ಲಿಷ್ ಪಠ್ಯಕ್ರಮದ ಭಾಗವಾಗಿದೆ ಎಂದು ಸ್ಪಷ್ಟಪಡಿ ಸಿದರು. ಶಿಕ್ಷಕರು ಪಾಠವನ್ನು ಮಾಡಿದ್ದಾರೆ. ಅದರ ವಿವರಣೆಯನ್ನು ನೀಡಿದ್ದಾರೆ. ಇದು ವಿವಾದವಾಗಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಸೇಂಟ್ ಗೆರೋಸಾ ಇಂಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯಿನಿ ಅನಿತಾ ಅವರ ಪ್ರಕಾರ, ಶಿಕ್ಷಕಿ ಪ್ರಭಾ ದೇವಾಲಯಗಳು, ಚರ್ಚ್‌ಗಳು ಮತ್ತು ಮಸೀದಿಗಳು ಕೇವಲ ಕಟ್ಟಡಗಳು ಹಾಗೂ ದೇವರು ಮನುಷ್ಯರ ಹೃದಯದಲ್ಲಿ ನೆಲೆಸಿ ದ್ದಾನೆ ಎಂದಿದ್ದಾರೆಯೇ ಹೊರತು ಯಾವುದೇ ದೇವರ ವಿರುದ್ಧ ಮಾತನಾಡಿಲ್ಲ. ಆದರೆ, ಕವಿತೆಯ ಅರ್ಥವನ್ನು ವಿವರಿಸಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ ಎಂದು ಹೇಳಿದರು. ಧ್ವನಿ ಸಂದೇಶದಲ್ಲಿ ಅನಾಮಧೇಯ ಮಹಿಳೆ ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ, ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದರು.

ಚಾರಿಟಿ ಮಂಗಳೂರು ಪ್ರಾಂತ್ಯದ ಸಿಸ್ಟರ್‌ ಐರಿನ್ ಮೆನೆಜಸ್, ಕವಿತೆಯನ್ನು ವಿವರಿಸುವಾಗ ಇಂಗ್ಲಿಷ್ ಶಿಕ್ಷಕರು ಭಗವಾನ್ ರಾಮ ಅಥವಾ ಯಾವುದೇ ನಿರ್ದಿಷ್ಟ ದೇವತೆಯನ್ನು ಉಲ್ಲೇಖಿಸಿಲ್ಲ ಎಂದು ಫೆಡರಲ್‌ಗೆ ಸ್ಪಷ್ಟಪಡಿಸಿದರು.

ಶಾಲೆ ಆರು ದಶಕಗಳಿಂದ ಸಾಮುದಾಯಿಕ ಶಿಕ್ಷಣ ನೀಡುತ್ತಿದ್ದು, ಅದಕ್ಕೆ ಬದ್ಧವಾಗಿದೆ. ನಾವು ವೈವಿಧ್ಯಮಯ ವಿದ್ಯಾರ್ಥಿ ಸಮೂಹವನ್ನು ಹೊಂದಿದ್ದೇವೆ. ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ಹೊರಬರುವಾಗ ಸಂಜೆಯಲ್ಲಿ  ಧಾರ್ಮಿಕ ಶ್ಲೋಕಗಳನ್ನು ಪಠಿಸಲು ಮತ್ತು ಶಿಕ್ಷಕರ ವಿರುದ್ಧ ಘೋಷಣೆ ಕೂಗಲು ಮಕ್ಕಳನ್ನು ಪ್ರೇರೇಪಿಸಿದ ಶಾಸಕರ ಬಗ್ಗೆ ಮಿನೇಜಸ್ ಕಳವಳ ವ್ಯಕ್ತಪಡಿಸಿದರು.

ʻಶಿಕ್ಷಕರು ಫೆಬ್ರವರಿ 8 ರಂದು ಕವಿತೆ ಪಾಠ ಮಾಡಿದ್ದಾರೆ ಮತ್ತು ಪೋಷಕರು ಫೆಬ್ರವರಿ 9 ರಂದು ಶಾಲೆಗೆ ಬಂದಿದ್ದರು. ಸೋಮವಾರ (ಫೆಬ್ರವರಿ 12) ಸತ್ಯಾಂಶ ಏನು ಎನ್ನುವುದನ್ನು ತಿಳಿಸುವುದಾಗಿ ಭರವಸೆ ನೀಡಿದ್ದೆವು. ಆದರೆ, ಸೋಮವಾರ, ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಮತ್ತು ಇತರ ಹಿಂದೂ ಪರ ಸಂಘಟನೆಗಳು ಸೇರಿದಂತೆ ಸಾರ್ವಜನಿಕ ಗುಂಪಿನೊಂದಿಗೆ ಬಂದರು. ನಾವು ಅವರನ್ನು ಚರ್ಚೆಗೆ ಶಾಲಾ ಕಚೇರಿಗೆ ಆಹ್ವಾನಿಸಿದರೂ, ಅದನ್ನು ನಿರಾಕರಿಸಿದರು; ಶಿಕ್ಷಕರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು. ಅಲ್ಲದೇ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗಿದರುʼ ಎಂದರು.

ʻಆಡಿಯೋ ಸಂದೇಶವು ಸತ್ಯಕ್ಕೆ ದೂರವಾಗಿದೆ. ಶಾಲೆ  ಆಡಳಿತ ಮಂಡಳಿಯು ಜಿಲ್ಲಾಡಳಿತವನ್ನು ಸಂಪರ್ಕಿಸಿದೆ. ಈ ಸಂಬಂಧ ತನಿಖೆ ನಡೆಸುವಂತೆ ಕೋರಿದೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ರಕ್ಷಣೆ ನೀಡುವಂತೆ ಕೋರಿದ್ದಾರೆ. ಮಹಿಳೆಯ ಆಡಿಯೋ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆʼ ಎಂದು ಎಚ್‌ಎಂ ಅನಿತಾ ಹೇಳಿದ್ದಾರೆ.

ಫೆ.12ರಂದು ಬಿಜೆಪಿ ಶಾಸಕರು ಹಾಗೂ ಇತರರು ಶಾಲೆಯ ವಿರುದ್ಧ ಘೋಷಣೆ ಕೂಗಿದರು. ಆಡಳಿತ ಮಂಡಳಿಯವರು ಶಾಸಕ ಕಾಮತ್ ಅವರನ್ನು ಶಾಲೆಯೊಳಗೆ ಆಹ್ವಾನಿಸಿದರು. ಆದರೆ, ಶಾಸಕರು ಒಳಗೆ ಬರಲು ನಿರಾಕರಿ ಸಿದರು ಮತ್ತು ಶಾಲೆ ಮತ್ತು ಆಡಳಿತದ ವಿರುದ್ಧ ಪ್ರತಿಭಟಿಸಿದರು. ಜೊತೆಗೆ, ಮಕ್ಕಳನ್ನು ಪ್ರತಿಭಟಿಸುವಂತೆ ಹುರಿದುಂಬಿಸಿದರು.

ಶಾಸಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಹಾಗೂ ಜನಸಮೂಹದ ತೀವ್ರ ಒತ್ತಡಕ್ಕೆ ಮಣಿದು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶಿಕ್ಷಕಿ ಪ್ರಭಾ ಅವರನ್ನು ವಜಾ ಮಾಡಬೇಕಾಯಿತು. ಶಿಕ್ಷಣ ಸಂಸ್ಥೆಯ ನಿಯಮಗಳ ಪ್ರಕಾರ, ತನಿಖೆಯ ಅಗತ್ಯವನ್ನು ವಿವರಿಸಿದರೂ, ತೀವ್ರ ಪ್ರತಿಭಟನೆಯ ಬೆದರಿಕೆಯಿಂದ ನಮಗೆ ಬೇರೆ ಆಯ್ಕೆಗಳಿರಲಿಲ್ಲ.ಗೆರೋಸಾ ಶಾಲೆಯಲ್ಲಿ 16 ವರ್ಷಗಳ ಬೋಧನಾ ಅನುಭವ ಹೊಂದಿರುವ ಪ್ರಭಾ ಅವರ ವಿರುದ್ಧ ಯಾವುದೇ ದೂರು ಇಲ್ಲಿಯವರೆಗೆ ಕೇಳಿಬಂದಿಲ್ಲ. ಆದರೆ, ಶಾಲೆಯ ವಿರುದ್ಧ ದೂರವಾಣಿಯಲ್ಲಿ ಮಾತನಾಡಿರುವ ಮಹಿಳೆ ಯಾರು ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಅವರು ನಿಜವಾಗಿಯೂ ಗೆರೋಸಾ ವಿದ್ಯಾರ್ಥಿಯ ಪೋಷಕರೇ ಮತ್ತು ಅವರ ಅಜೆಂಡಾ ಏನಿರಬಹುದುʼ ಎಂದು ಪ್ರಶ್ನಿಸಿದ್ದಾರೆ.

ಶಾಲೆಯ ಆಡಳಿತ ಮಂಡಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಬಿಜೆಪಿ ಶಾಸಕರು, ಮಂಗಳೂರು ಮಹಾನಗರ ಪಾಲಿಕೆಯ ಇಬ್ಬರು ಕಾರ್ಪೊರೇಟರ್‌ಗಳು ಮತ್ತು ಬಜರಂಗದಳದ ಮುಖಂಡರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಅವರ ಕೃತ್ಯವು ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಮತ್ತು ಸೌಹಾರ್ದ ಕದಡುವ ಪ್ರಯತ್ನ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ʻಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹಂಚಿಕೆ, ಶಿಕ್ಷಣ ಸಂಸ್ಥೆಗಳ ಮೇಲೆ ರಾಜಕೀಯ ಅಜೆಂಡಾದ ಪ್ರಭಾವ ಮತ್ತು ಶಿಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೊದಲು ನ್ಯಾಯಯುತ ಮತ್ತು ಸಮಗ್ರ ತನಿಖೆಯ ಅಗತ್ಯವಿದೆʼ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರಾಜೇಶ್ ಶೆಟ್ಟಿ.

Tags:    

Similar News