Mysore Muda Scam| ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಕ್ಲೀನ್​ ಚಿಟ್​; ಇಡಿ ತಕರಾರು ಅರ್ಜಿ ಸಲ್ಲಿಕೆ

ಕೆಸರೆ ಗ್ರಾಮದ ಸರ್ವೇ ನಂಬರ್‌ 464ರಲ್ಲಿನ ಆಕ್ಷೇಪಾರ್ಹ 3.16 ಎಕರೆ ಡಿನೋಟಿಫಿಕೇಶನ್‌ ಅಕ್ರಮ ಕುರಿತು ಸಾಕ್ಷ್ಯ ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಲಾಗಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಇ ಡಿ ಆಕ್ಷೇಪಿಸಿದೆ.;

Update: 2025-04-02 10:29 GMT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸರು ʼಬಿʼ ರಿಪೋರ್ಟ್‌ ಸಲ್ಲಿಸಿರುವುದಕ್ಕೆ ವಿರೋಧಿಸಿ ಜಾರಿ ನಿರ್ದೇಶನಾಲಯವು (ಇಡಿ) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ತಕರಾರು ಅರ್ಜಿ ಸಲ್ಲಿಸಿದೆ.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿದ ಖಾಸಗಿ ದೂರು ಆಧರಿಸಿ 2024ರ ಸೆಪ್ಟೆಂಬರ್‌ 25ರಂದು ಎಫ್‌ಐಆರ್‌ ದಾಖಲಿಸಲು ಮೈಸೂರು ಲೋಕಾಯುಕ್ತ ಪೊಲೀಸರು ಆದೇಶಿಸಿದ್ದರು. ಇದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 120ಬಿ, 166, 403, 406, 420, 426, 465, 468, 340, 351 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 9 ಮತ್ತು 13, ಬೇನಾಮಿ ವರ್ಗಾವಣೆಗಳ ಕಾಯಿದೆ ಸೆಕ್ಷನ್‌ 3, 53 & 54, ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.

2024ರ ಅಕ್ಟೋಬರ್‌ 1ರಂದು ಜಾರಿ ನಿರ್ದೇಶನಾಲಯವು ಐಪಿಸಿ ಸೆಕ್ಷನ್‌ಗಳಾದ 120ಬಿ, 420, ಭ್ರಷ್ಟಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 9 & 13ರ ಅಡಿ ಪ್ರಕರಣ ದಾಖಲಿಸಿತ್ತು. ನಂತರ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ತನಿಖೆ ಆರಂಭಿಸಿತ್ತು. ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಲೋಕಾಯುಕ್ತದ ಜೊತೆ ನವೆಂಬರ್‌ 30 ಮತ್ತು 2025ರ ಜನವರಿ 24ರಂದು ಹಂಚಿಕೊಂಡಿತ್ತು. ಈ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಕೋರ್ಟ್​​ಗೆ ತಿಳಿಸಿದೆ.

ಲೋಕಾಯುಕ್ತ ಪೊಲೀಸ್‌ ಸಲ್ಲಿಸಿದ್ದ ಬಿ ರಿಪೋರ್ಟ್‌ ಅನ್ನು 2025ರ ಮಾರ್ಚ್‌ 26ರಂದು ಜಾರಿ ನಿರ್ದೇಶನಾಲಯಕ್ಕೆ ನೀಡಲಾಗಿದೆ. ಇದೀಗ ಕೆಸರೆ ಗ್ರಾಮದ ಸರ್ವೇ ನಂಬರ್‌ 464ರಲ್ಲಿನ ಆಕ್ಷೇಪಾರ್ಹ 3.16 ಎಕರೆ ಡಿನೋಟಿಫಿಕೇಶನ್‌ ಅಕ್ರಮ ಕುರಿತು ಸಾಕ್ಷ್ಯ ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಲಾಗಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಇ ಡಿ ಆಕ್ಷೇಪಿಸಿದೆ.

ವರದಿ ಒಪ್ಪದಂತೆ ಮನವಿ

ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಅವರ ಸಹೋದರ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ಜೆ ದೇವರಾಜು ಅವರಿಗೆ ಕ್ಲೀನ್‌ಚಿಟ್‌ ನೀಡಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಯನ್ನು ಒಪ್ಪಬಾರದು. ಸೂಕ್ತ ತನಿಖೆಗೆ ನಿರ್ದೇಶಿಸಬೇಕು ಎಂದು ಇ ಡಿ ಕೋರಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ಇಡಿಯು ವಿಚಾರಣಾ ಸಂಸ್ಥೆಯಾಗಿರುವುದರಿಂದ ಪ್ರಕರಣದಲ್ಲಿ ಬಾಧಿತ ವ್ಯಕ್ತಿ ಎಂದು ಪರಿಗಣಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅಂತಿಮ ವರದಿಯ ಸಂಬಂಧ ಆದೇಶ ಮಾಡುವುದಕ್ಕೂ ಅಭಿಪ್ರಾಯ ಆಲಿಸಬೇಕಿತ್ತು. ಈ ನೆಲೆಯಲ್ಲಿ ತಕರಾರು ಅರ್ಜಿ ಸಲ್ಲಿಸುವ ಹಕ್ಕು ತನಗೆ ಇದೆ ಎಂದು ಇಡಿ ವಾದಿಸಿದೆ. 

Tags:    

Similar News