Milk Price Hike | ಸರ್ಕಾರದ ಬೆಲೆ ಏರಿಕೆ ಕ್ರಮದ ವಿರುದ್ಧ ಬಿಜೆಪಿಯ 'ದರ ಪಟ್ಟಿ' ಸಮರ; ಕೇಸರಿ ಪಕ್ಷದ ಆರೋಪಗಳೇನು?
ರೈತರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಇದನ್ನು ಸಹಿಸದೇ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಯವರು ರೈತ ವಿರೋಧಿಗಳು ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.;
ಹಾಲು, ವಿದ್ಯುತ್ ದರ ಏರಿಕೆ ಹಾಗೂ ಕಸಕ್ಕೆ ಸೆಸ್ ವಿಧಿಸುವ ವಿಚಾರದಲ್ಲಿ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರ ಮುಂದುವರಿದಿದೆ.
ದರ ಏರಿಕೆ ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿ ಅಹೋರಾತ್ರಿ ಧರಣಿ ಆರಂಭಿಸಿದೆ. ದರ ಏರಿಕೆ ವಿರುದ್ಧದ ಜನಾಕ್ರೋಶವನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದೆ. ಕಾಂಗ್ರೆಸ್ ಸರ್ಕಾರದ ದರ ಏರಿಕೆಯ ಆರೋಪ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರ ಎರಡು ವರ್ಷದಲ್ಲಿ 50 ವಸ್ತುಗಳ ಬೆಲೆಯನ್ನು ಹೆಚ್ಚಿಸಿ ಒಂದು ಕೈಯಲ್ಲಿ ಹಣ ಕೊಟ್ಟು ಇನ್ನೊಂದು ಕೈಯಲ್ಲಿ ಬಡ್ಡಿ ಸಮೇತ ಕಿತ್ತುಕೊಳ್ಳುತ್ತಿದೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರ ಸಂಪನ್ಮೂಲ ಕ್ರೋಡೀಕರಣಕ್ಕೆ ಕಂಡ ಕಂಡ ವಸ್ತುಗಳ ಬೆಲೆಗಳ ಏರಿಕೆ ಮಾಡಿ ಜನಸಾಮಾನ್ಯರ ಬಗ್ಗೆ ಕಾಳಜಿ ತೋರದ ನಿರ್ದಯಿ ಸರ್ಕಾರವಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಧರಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಿರಿಯ ನಾಯಕರು, ಶಾಸಕರು ಧರಣಿಯಲ್ಲಿ ಪಾಲ್ಗೊಂಡಿದ್ದು, ಸರ್ಕಾರದ ವಿರುದ್ಧ ಕಹಳೆ ಮೊಳಗಿಸಿದ್ದಾರೆ.
ಈ ಮಧ್ಯೆ ಬಿಜೆಪಿ ಧರಣಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ರೈತರಿಗೆ ನೆರವಾಗಲು ಸರ್ಕಾರ ಹಾಲಿನ ದರ ಏರಿಕೆ ಮಾಡಿದೆ. ಇದನ್ನು ಸಹಿಸದೇ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಯವರು ರೈತ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಹೈನುಗಾರ ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ರೈತರಿಗಾಗಿ ಹಾಲಿನ ದರ ಹಚ್ಚಳ ಮಾಡಿದದನ್ನು ಸಹಿಸುತ್ತಿಲ್ಲ. ಬಿಜೆಪಿಯವರಿಗೆ ಜನರ ಮೇಲೆ ಕಾಳಜಿ ಇದ್ದರೆ ಮೊದಲು ಪೆಟ್ರೋಲ್, ಡೀಸೆಲ್ ಹಾಗೂ ಪಶು ಆಹಾರದ ದರಗಳನ್ನು ಇಳಿಸಲಿ ಎಂದು ಕಿಡಿಕಾರಿದ್ದಾರೆ.
ಹಾಲಿನ ದರ ಹೆಚ್ಚಳದ ಲಾಭವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸುತ್ತಿದ್ದೇವೆ. ಹಾಲಿನ ಬೆಲೆ ಏರಿಕೆ ಬಳಿಕವೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲು, ಮೊಸರಿನ ಬೆಲೆ ಕಡಿಮೆ ಇದೆ' ಎಂದು ಹೇಳಿದ್ದಾರೆ.
ನೀರಿನ ದರ ಏರಿಕೆ ಅನಿವಾರ್ಯ
ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರವನ್ನು ಪ್ರತಿ ಲೀಟರ್ ಗೆ ಕನಿಷ್ಠ 1 ಪೈಸೆ ಏರಿಕೆ ಮಾಡಲೇಬೇಕಾಗಿದೆ. ಬಡವರಿಗೆ ಹೊರೆಯಾಗದಂತೆ ನೀರಿನ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜಲ ಮಂಡಳಿಯು ವಾರ್ಷಿಕವಾಗಿ 1 ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಜಲಮಂಡಳಿಯನ್ನು ನಷ್ಟದಿಂದ ಪಾರು ಮಾಡಲು ಹಾಗೂ ಮುಂದಿನ ಯೋಜನೆಗಳನ್ನು ಕೈಗೆತ್ತಿಗೊಳ್ಳಬೇಕಾದರೆ ದರ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ಕಸದ ಸೆಸ್ ಹೆಚ್ಚಿಸಿದ್ದು ಬಿಜೆಪಿ ಸರ್ಕಾರ
ಕಸದ ಸೆಸ್ ಹೆಚ್ಚಳದ ಸಲುವಾಗಿ ಕೇಂದ್ರದ ಬಿಜೆಪಿ ಸರ್ಕಾರ ಕಾನೂನು ಮಾಡಿದೆ. 2022ರಲ್ಲೇ ದುಬಾರಿ ಸೆಸ್ ವಿಧಿಸಿದೆ. ನಾವು ಅದನ್ನು ಈಗ ಕಡಿಮೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿ ವಿರುದ್ಧ ಜಾಹೀರಾತು ಹಾಗೂ ಪತ್ರಿಕಾ ಪ್ರಕಟಣೆ ಹೊರಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಹಾಲಿನ ದರ ಹಾಗೂ ಕಸದ ಸೆಸ್ ಕುರಿತಂತೆ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಿತ್ಯ ಟೀಕೆ ಮಾಡುವುದೇ ಅವರ ಕೆಲಸ. ನಾವು ಜನರಿಗೆ ಉತ್ತಮ ಆಡಳಿತ ನೀಡುವತ್ತ ಗಮನ ಹರಿಸುತ್ತೇವೆ. ಕುಮಾರಸ್ವಾಮಿ ಅವರ ಸಹೋದರ ಎಚ್. ಡಿ. ರೇವಣ್ಣ ಅವರು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರು. ಅವರಿಗೂ ಬೆಲೆ ಕಡಿಮೆ ಮಾಡುವ ಅವಕಾಶವಿದೆ. ಅವರು ಹಾಸನದಲ್ಲಿ 4ರೂ. ಕಡಿಮೆ ಮಾಡಿ ಹಾಲು ನೀಡಲಿ ಎಂದು ಟಾಂಗ್ ನೀಡಿದ್ದಾರೆ.