Waqf Bill : 11 ಗಂಟೆಗಳ ಚರ್ಚೆಯ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ
Waqf Bill : ಮಸೂದೆಯ ಪರ 288 ಮತಗಳು ಬಂದರೆ 232 ಮತಗಳು ವಿರುದ್ಧ ಬಿದ್ದವು. 543 ಸದಸ್ಯರಿರುವ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಅಗತ್ಯವಾದ 272 ಮತಗಳು ಎನ್‌ಡಿಎ ಸರ್ಕಾರಕ್ಕೆ ಸುಲಭವಾಗಿ ಲಭಿಸಿತು.;
ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ್ದ ವಕ್ಫ್ (ತಿದ್ದುಪಡಿ) ಮಸೂದೆ 2025 ಬುಧವಾರ ಮಧ್ಯರಾತ್ರಿ (ಏಪ್ರಿಲ್2ರಂದು) ಲೋಕಸಭೆಯಲ್ಲಿ ಅಂಗೀಕಾರಗೊಂಡಿತು. ಸತತವಾಗಿ 11 ಗಂಟೆಗಳ ಕಾಲ ತಿದ್ದುಪಡಿ ಬಗ್ಗೆ ಚರ್ಚೆಗಳು ನಡೆದು ಅಂತಿಮವಾಗಿ ಮತಕ್ಕೆ ಹಾಕಲಾಯಿತು. ಮಸೂದೆಯ ಪರ 288 ಮತಗಳನ್ನು ಬಂದರೆ 232 ಮತಗಳು ವಿರುದ್ಧ ಬಿದ್ದವು. 543 ಸದಸ್ಯರಲ್ಲಿ ಮಸೂದೆಯ ಅಂಗೀಕಾರಕ್ಕೆ ಅಗತ್ಯವಾದ 272 ಮತಗಳು ಎನ್‌ಡಿಎ ಸರ್ಕಾರಕ್ಕೆ ಸುಲಭವಾಗಿ ಲಭಿಸಿತು.
ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದ್ದು, ದೇಶದ ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ದತ್ತಿ ಆಸ್ತಿಗಳನ್ನು ನಿಯಂತ್ರಿಸುವ ವಕ್ಫ್ ಕಾಯಿದೆ 1995ರಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಉದ್ದೇಶ ಹೊಂದಿದ್ದೇವೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಮಸೂದೆಯು ಭಾರತದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. .
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು. 11 ಗಂಟೆಗಳ ಕಾಲ ನಡೆದ ತೀವ್ರ ಚರ್ಚೆಯ ನಂತರ ಎನ್‌ಡಿಎ ತನ್ನ ಬಹುಮತದ ಬಲದಿಂದ ಮಸೂದೆಯನ್ನು ಅಂಗೀಕರಿಸಿತು. ಚರ್ಚೆಯ ಸಮಯದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು, ಆದರೆ ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ ಮತ್ತು ಶಿವಸೇನೆ ಸಂಪೂರ್ಣ ಬೆಂಬಲ ಕೊಟ್ಟಿತು.
ಮಸೂದೆಯನ್ನು "ಯುನಿಫೈಡ್ ವಕ್ಫ್ ಮ್ಯಾನೇಜ್‌ಮೆಂಟ್ ಎಂಪವರ್‌ಮೆಂಟ್, ಎಫಿಷಿಯೆನ್ಸಿ ಆಂಡ್ ಡೆವಲಪ್‌ಮೆಂಟ್ (ಯುಎಂಇಇಡಿ)" ಎಂದು ಮರುನಾಮಕರಣ ಮಾಡಲಾಗಿದೆ, ಇದು ಸಾಮಾನ್ಯ ಮುಸ್ಲಿಂ ಸಮುದಾಯದ ಪ್ರಗತಿಗೆ ಆಶಾಕಿರಣ ಎಂದು ಸರ್ಕಾರ ಹೇಳಿಕೊಂಡಿದೆ.
ಸರ್ಕಾರದ ವಾದವೇನು?
ಗೃಹ ಸಚಿವ ಅಮಿತ್ ಶಾ ಚರ್ಚೆಯಲ್ಲಿ ಭಾಗವಹಿಸಿ, "ಈ ಮಸೂದೆಯು ಮುಸ್ಲಿಮರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿಲ್ಲ. ಇದು ಕೇವಲ ಆಡಳಿತದ ಸುಧಾರಣೆಗಾಗಿ ಮತ್ತು ಪಾರದರ್ಶಕತೆಗಾಗಿ ತರಲಾಗಿದೆ" ಎಂದು ಸ್ಪಷ್ಟಪಡಿಸಿದರು. ಶಾ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ, 2013ರಲ್ಲಿ ಚುನಾವಣಾ ಲಾಭಕ್ಕಾಗಿ ವಕ್ಫ್ ಕಾಯಿದೆಯನ್ನು ತಿದ್ದುಪಡಿ ಮಾಡಿ ಸರ್ಕಾರ ಜಾಗವನ್ನು ಲೂಟಿ ಮಾಡಲು ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಿದರು. ಸಚಿವ ರಿಜಿಜು ಕೂಡ, "ಈ ಮಸೂದೆಯು ಶಿಯಾ, ಸುನ್ನಿ, ಬೋಹ್ರಾ, ಮಹಿಳೆಯರು ಮತ್ತು ಹಿಂದುಳಿದ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುತ್ತದೆ" ಎಂದು ಹೇಳಿದರು.
ವಿರೋಧ ಪಕ್ಷಗಳ ಟೀಕೆ
ವಿರೋಧ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌ಪಿ), ಟಿಎಂಸಿ ಮತ್ತು ಎಐಎಂಐಎಂ ಈ ಮಸೂದೆ ತೀವ್ರವಾಗಿ ವಿರೋಧಿಸಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ, "ಈ ಮಸೂದೆಯು ಸಂವಿಧಾನದ ಮೂಲಭೂತ ಹಕ್ಕುಗಳಾದ ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ" ಎಂದು ಆರೋಪಿಸಿದ್ದಾರೆ. ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, "ಈ ಮಸೂದೆಯು ಆರ್ಟಿಕಲ್ 26ರ ಉಲ್ಲಂಘನೆಯಾಗಿದ್ದು, ಮುಸ್ಲಿಮರನ್ನು ರಕ್ಷಿಸುವ ಬದಲು ಅವರ ಹಕ್ಕುಗಳನ್ನು ಕಸಿಯುತ್ತದೆ" ಎಂದು ಟೀಕಿಸಿದ್ದಾರೆ. ಸಮಾಜವಾದಿ ಪಕ್ಷದ ಮೊಹಿಬ್ಬುಲ್ಲಾ ಅವರು, "ವಕ್ಫ್ ಮಂಡಳಿಗಳ ಸ್ವಾಯತ್ತತೆಯನ್ನು ಈ ಮಸೂದೆ ಕೊನೆಗೊಳಿಸುತ್ತದೆ" ಎಂದು ಆಕ್ಷೇಪಿಸಿದರು.
ಮಸ್ಲಿಂ ಸಮುದಾಯದ ಪ್ರತಿಕ್ರಿಯೆಯೇನು?
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಈ ಮಸೂದೆಯ ವಿರುದ್ಧ ದೇಶವ್ಯಾಪಿ ಚಳವಳಿಯ ಎಚ್ಚರಿಕೆ ನೀಡಿದೆ. ಎಐಎಂಪಿಎಲ್‌ಬಿ ವಕ್ತಾರ ಡಾ. ಸಯ್ಯದ್ ಖಾಸಿಮ್ ರಸೂಲ್ ಇಲ್ಯಾಸ್, "ನಾವು ಕಾನೂನು ಮತ್ತು ಸಂವಿಧಾನದ ಎಲ್ಲಾ ಮಾರ್ಗಗಳನ್ನು ಬಳಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ" ಎಂದು ಹೇಳಿದ್ದಾರೆ. ಕೆಲವು ಮುಸ್ಲಿ ನಾಯಕರು ವಕ್ಫ್ ಆಸ್ತಿಗಳು ಧಾರ್ಮಿಕ ಮಹತ್ವವನ್ನು ಹೊಂದಿವೆ ಎಂದು ವಾದಿಸಿದ್ದಾರೆ.
ಮುಂದೆ ಹೇಗೆ?
ಮಸೂದೆಯು ಈಗ ರಾಜ್ಯಸಭೆಗೆ ಕಳುಹಿಸಲಾಗುವುದು, ಅಲ್ಲಿ ಎನ್‌ಡಿಎಗೆ ಬಹುಮತವಿಲ್ಲದ ಕಾರಣ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ರಾಜ್ಯಸಭಾ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಏಪ್ರಿಲ್ 2ರಿಂದ 4ರವರೆಗೆ ಸಂಸತ್ತಿನಲ್ಲಿ ಹಾಜರಿರುವಂತೆ ಸೂಚಿಸಿದೆ. ಈ ಮಸೂದೆಯ ಭವಿಷ್ಯವು ರಾಜ್ಯಸಭೆಯಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದ ಮೇಲೆ ಅವಲಂಬಿತವಾಗಿದೆ.