High Temperature| ಬಿಸಿಲ ಧಗೆ: ಉತ್ತರ ಕರ್ನಾಟಕದ ಕಚೇರಿ ಸಮಯ ಬದಲಾವಣೆ; ಸರ್ಕಾರ ಆದೇಶ

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.‌ ಷಡಾಕ್ಷರಿ ಮನವಿ ಮೇರೆಗೆ, ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಹಾಗೂ ಕಿತ್ತೂರು ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಕಚೇರಿ ಕೆಲಸದ ಸಮಯವನ್ನು ಬೆಳಿಗ್ಗೆ 8 ರಿಂದ ಅಪರಾಹ್ನ 1.30 ರವರೆಗೆ ನಿಗದಿಪಡಿಸಲಾಗಿದೆ.;

Update: 2025-04-02 09:42 GMT

ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಸರ್ಕಾರಿ ನೌಕರರಿಗೆ ಕಾರ್ಯ ನಿರ್ವಹಿಸುವುದು ಕಷ್ಟಕರವಾಗಿದೆ.

ಆ ಕಾರಣದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಮೇರೆಗೆ, ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಹಾಗೂ ಕಿತ್ತೂರು ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಕಚೇರಿ ಕೆಲಸದ ಸಮಯವನ್ನು ಬೆಳಿಗ್ಗೆ 8 ರಿಂದ ಅಪರಾಹ್ನ 1.30 ರವರೆಗೆ ನಿಗದಿಪಡಿಸಿ ಸರ್ಕಾರ ಆದೇಶ ನೀಡಿದೆ.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.‌ ಷಡಾಕ್ಷರಿ ಅವರು ಸರ್ಕಾರಕ್ಕೆ ಮನವಿ ಮಾಡಿ, "ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ (ಕಿತ್ತೂರು ಕರ್ನಾಟಕ) ಹಾಗೂ ಕಲಬುರಗಿ ವಿಭಾಗದ (ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ಯಾದಗಿರಿ ಮತ್ತು ರಾಯಚೂರು (ಕಲ್ಯಾಣ ಕರ್ನಾಟಕ) ಜಿಲ್ಲೆಗಳು ಒಳಗೊಂಡಿದೆ) ಎಲ್ಲಾ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ನೌಕರರು ಕರ್ತವ್ಯ ನಿರ್ವಹಿಸುವಲ್ಲಿ ಎದುರಿಸುತ್ತಿರುವ ತೊಂದರೆಯನ್ನು ಮಾನವೀಯತೆ ದೃಷ್ಟಿಯಿಂದ ಪರಿಗಣಿಸಿ, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕಚೇರಿ ಕೆಲಸದ ಸಮಯವನ್ನು ಬೆಳಿಗ್ಗೆ 8 ರಿಂದ ಅಪರಾಹ್ನ 1.30ರವರೆಗೆ ನಿಗದಿಪಡಿಸಬೇಕು," ಎಂದು ಕೋರಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ದೇಶನ ನೀಡಿದೆ. ಈ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ತಮ್ಮ ಕರ್ತವ್ಯವನ್ನು ಎಂದಿನಂತೆ ಅಡೆತಡೆಯಿಲ್ಲದೆ ನಿವರ್ಹಿಸಬೇಕು. ಸಾರ್ವಜನಿಕರಿಗೆ ಯಾವುದೇ ಅನನುಕೂಲತೆ ಆಗದಂತೆ ಹಾಗೂ ಜಿಲ್ಲಾಧಿಕಾರಿಗಳು/ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಾಹಕ(ಸಿಇಒ) ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಪರಿವೆಯಿಲ್ಲದೆ ಕರ್ತವ್ಯ ನಿರ್ವಹಿಸಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ವಿಮಲಾಕ್ಷಿ ಅದೇಶ ನೀಡಿದ್ದಾರೆ. 



 


Tags:    

Similar News