Mysore MUDA Case | ಮುಡಾ ಮಾಜಿ ಆಯುಕ್ತ ನಟೇಶ್‌ ಸಮನ್ಸ್‌ ರದ್ದತಿ ಆದೇಶ; ತಡೆ ನೀಡಲು ಹೈಕೋರ್ಟ್‌ ನಿರಾಕರಣೆ

ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂಬ ಕೋರಿಕೆ ಪುರಸ್ಕರಿಸಲಾಗದು. ಆದರೆ, ಪ್ರಕರಣದಲ್ಲಿ ಇತರೆ ಆರೋಪಿಗಳ ವಿರುದ್ಧದ ತನಿಖೆಯನ್ನು ನಿರ್ಬಂಧಿಸಲಾಗದು. ಹೀಗಾಗಿ, ತನಿಖೆ ಮುಂದುವರಿಸಲು ಅನುಮತಿಸಲಾಗಿದೆ ಎಂದು ಹೈಕೋರ್ಟ್‌ ಆದೇಶಿಸಿದೆ.;

Update: 2025-04-02 14:51 GMT

ಕರ್ನಾಟಕ ಹೈಕೋರ್ಟ್‌ 

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ (ಈಗ ವಾಪಸ್‌ ಮಾಡಲಾಗಿದೆ) ಹಂಚಿಕೆ ಮಾಡಿದ ಸಂದರ್ಭದಲ್ಲಿ ಮುಡಾ ಆಯುಕ್ತರಾಗಿದ್ದ ಡಾ. ಬಿ.ಬಿ.ನಟೇಶ್‌ ಅವರಿಗೆ ಜಾರಿ ನಿರ್ದೇಶನಾಲಯ ಜಾರಿ ಮಾಡಿದ್ದ ಸಮನ್ಸ್‌ ರದ್ದುಪಡಿಸಿ ಏಕಸದಸ್ಯ ಪೀಠ ಮಾಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಲು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ. ಆದರೆ, ಪ್ರಕರಣದಲ್ಲಿ ಇತರೆ ಆರೋಪಿಗಳ ವಿರುದ್ಧದ ತನಿಖೆಗೆ ಅನುಮತಿಸಿದೆ.

ನಟೇಶ್‌ಗೆ ಸಮನ್ಸ್‌ ನೀಡಿದ್ದ ಸಮನ್ಸ್‌ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ.

“ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂಬ ಕೋರಿಕೆ ಪುರಸ್ಕರಿಸಲಾಗದು. ಆದರೆ, ಪ್ರಕರಣದಲ್ಲಿ ಇತರೆ ಆರೋಪಿಗಳ ವಿರುದ್ಧದ ತನಿಖೆಯನ್ನು ನಿರ್ಬಂಧಿಸಲಾಗದು. ಹೀಗಾಗಿ, ತನಿಖೆ ಮುಂದುವರಿಸಲು ಅನುಮತಿಸಲಾಗಿದೆ. ನಟೇಶ್‌ ಅವರ ಮನೆ ಜಫ್ತಿ ಮತ್ತು ಶೋಧದ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ದಾಖಲೆಗಳು ಮತ್ತು ಅವರ ಹೇಳಿಕೆ ದಾಖಲಿಸಿಕೊಂಡಿರುವುದನ್ನು ಬಾಕಿ ತನಿಖೆಗೆ ಕಾನೂನಿನ ಅನ್ವಯ ಇಡಿ ಬಳಕೆ ಮಾಡಿಕೊಳ್ಳಬಹುದಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

“ನಟೇಶ್‌ ಪ್ರಕರಣ ಬಾಕಿ ಉಳಿದಿರುವುದರಿಂದ ಅವರಿಗೆ ಯಾವುದೇ ಪೂರ್ವಾಗ್ರಹ ಉಂಟಾಗುವುದಿಲ್ಲ. ಜಾರಿ ನಿರ್ದೇಶನಾಲಯವು ಕಾನೂನಿನ ಅನ್ವಯ ತನಿಖೆ ನಡೆಸುವ ಅರ್ಹತೆ ಹೊಂದಿದೆ. ಈ ನೆಲೆಯಲ್ಲಿ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

Tags:    

Similar News