ಠೇವಣಿದಾರರ ಸಭೆಯಿಂದ ಎಸ್ಕೇಪ್ | ತೇಜಸ್ವಿ ಸೂರ್ಯಗೆ ʻಎಮರ್ಜೆನ್ಸಿ ಎಕ್ಸಿಟ್ʼ ನೆನಪಿಸಿದ ಕಾಂಗ್ರೆಸ್
ಏ.13ರಂದು ಸಂಜೆ ನಾಲ್ಕುಗಂಟೆಗೆ ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ಹಾಗೂ ಕೋಆಪರೇಟಿವ್ ಬ್ಯಾಂಕ್‌ಗಳ ಠೇವಣಿದಾರರ ಸಭೆಯನ್ನು ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಕರೆದಿದ್ದರು. ಈ ವೇಳೆ ಠೇವಣಿದಾರರ ಸಭೆಯಲ್ಲಿ ಗದ್ದಲ ಉಂಟಾಗಿದ್ದು, ಗ್ರಾಹಕರನ್ನು ತಳ್ಳಿ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.;
ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ಠೇವಣಿದಾರರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ಸಂಸದ ತೇಜಸ್ವಿ ಸೂರ್ಯ ಸಭೆಯಿಂದ ಹೊರನಡೆದ ಘಟನೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದಿದೆ.
ಏ.13ರಂದು ಸಂಜೆ ನಾಲ್ಕುಗಂಟೆಗೆ ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ಹಾಗೂ ಕೋಆಪರೇಟಿವ್ ಬ್ಯಾಂಕ್‌ಗಳ ಠೇವಣಿದಾರರ ಸಭೆಯನ್ನು ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿ ಸುಬ್ರಮಣ್ಯ ಕರೆದಿದ್ದರು. ಈ ವೇಳೆ ಠೇವಣಿದಾರರ ಸಭೆಯಲ್ಲಿ ಗದ್ದಲ ಉಂಟಾಗಿದ್ದು, ಗ್ರಾಹಕರನ್ನು ತಳ್ಳಿ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಂಸದ ತೇಜಸ್ವಿ ಸೂರ್ಯ ವಿರುದ್ಧ ಠೇವಣಿದಾರರು ಆಕ್ರೋಶವನ್ನು ಹೊರಹಾಕಿ, ನಮಗೆ ಅನ್ಯಾಯ ಮಾಡಿದ್ದೀರಿ, ನಮ್ಮ ಠೇವಣಿಯನ್ನು ವಾಪಸ್ ನೀಡಿ ಎಂದು ಹೇಳುತ್ತಾ ʼಡೌನ್ ಡೌನ್ ತೇಜಸ್ವಿ ಸೂರ್ಯʼ ಎಂದು ಧಿಕ್ಕಾರ ಕೂಗಿದ್ದಾರೆ.
ತೇಜಸ್ವಿ ಸೂರ್ಯ ಕರೆದ ಸಭೆಯಲ್ಲಿಯೇ ಅವರ ವಿರುದ್ಧವೇ ಡಿಪಾಸಿಟರ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದ್ದಲ ಹೆಚ್ಚಾದ ವೇಳೆ ತೇಜಸ್ವಿ ಸೂರ್ಯ ಕುಪಿತಗೊಂಡು ಸಭೆಯಿಂದ ಎದ್ದು ಹೊರ ನಡೆಯಲು ಮುಂದಾಗಿದ್ದು, ಈ ಸಂದರ್ಭದಲ್ಲಿ ತಡೆದ ಮಹಿಳೆಯೊಬ್ಬರನ್ನು ತಳ್ಳಿ ಹೊರ ನಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳದಲ್ಲಿದ್ದ ಚುನಾವಣಾ ಅಧಿಕಾರಿಗಳ ಮೇಲೆಯೂ ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ವಾಗ್ವಾದದ ವೇಳೆ ಶಾಸಕ ರವಿ ಸುಬ್ರಮಣ್ಯಂ ಗ್ರಾಹಕರೊಬ್ಬರನ್ನು ಕೈ ಹಿಡಿದು ಎಳೆಯುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದಾಗಿದೆ.
ಈ ಘಟನೆಗೆ ಪ್ರತಿಕ್ತಿಯಿಸಿರುವ ಕಾಂಗ್ರೆಸ್, ತೇಜಸ್ವಿ ಸೂರ್ಯ ಮತ್ತೊಮ್ಮೆ "ಎಮರ್ಜೆನ್ಸಿ ಎಕ್ಸಿಟ್ ಡೋರ್" ಮೂಲಕ ಜನರಿಂದ ಎಸ್ಕೇಪ್ ಆಗಿದ್ದಾರೆ!: ಎಂದು ವ್ಯಂಗ್ಯವಾಡಿದೆ.
ತೇಜಸ್ವಿ ಸೂರ್ಯ ಅವರು 2022 ಡಿಸೆಂಬರ್ 10ರಂದು ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು ಟೀಕೆಗೆ ಗುರಿಯಾಗಿದ್ದರು. ಅವರು ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಜೊತೆ ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ವಿಮಾನ ಏರಿದ್ದರು. ಈ ವೇಳೆ ತುರ್ತು ನಿರ್ಗಮನ ದ್ವಾರದ ‘ಲಿವರ್’ ಎಳೆದಿದ್ದರು. ಕ್ಷಮಾಪಣಾ ಪತ್ರ ನೀಡಿದ ಬಳಿಕ ಅದೇ ವಿಮಾನದಲ್ಲಿ ಪ್ರಯಾಣಿಸಲು ಅವರಿಗೆ ಅನುವು ಮಾಡಿಕೊಡಲಾಗಿತ್ತು.
ವಿಮಾನಯಾನ ನಿಯಮಾವಳಿಗಳ ಅನುಸಾರ ತುರ್ತು ನಿರ್ಗಮನ ದ್ವಾರ ತೆರೆಯುವುದು ಶಿಕ್ಷಾರ್ಹ ಅಪರಾಧ. ಹೀಗಿದ್ದರೂ ತೇಜಸ್ವಿ ವಿಚಾರದಲ್ಲಿ ಇಂಡಿಗೊ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮೃದುಧೋರಣೆ ತಳೆದಿರುವುದಕ್ಕೆ ಟೀಕೆ ವ್ಯಕ್ತವಾಗಿತ್ತು. ಈ ಘಟನೆಯನ್ನು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ನೆನಪಿಸಿದೆ.
ಘಟನೆಯ ವಿಡಿಯೋ ಹಂಚಿಕೊಂಡು ಎಕ್ಷ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಘಟಕ, ʻʻಬಿಜೆಪಿಯ ತೇಜಸ್ವಿ ಸೂರ್ಯ ಮತ್ತೊಮ್ಮೆ "ಎಮರ್ಜೆನ್ಸಿ ಎಕ್ಸಿಟ್ ಡೋರ್" ಮೂಲಕ ಜನರಿಂದ ಎಸ್ಕೇಪ್ ಆಗಿದ್ದಾರೆ!ʼʼ ಎಂದು ಕಾಲೆಳಿದಿದೆ.
ʻʻಬೆಂಗಳೂರು ದಕ್ಷಿಣದ ಸಂಸದ 5 ವರ್ಷದುದ್ದಕ್ಕೂ ದೋಸೆ ತಿಂದುಕೊಂಡು, ಫುಟ್ ಬಾಲ್ ಆಡಿಕೊಂಡು, ಮೋಜು ಮಾಡಿಕೊಂಡು ಕಾಲ ಕಳೆದಿದ್ದರು, ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಹಣ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಯನ್ನು ಒಂದು ದಿನವೂ ಆಲಿಸದ ತೇಜಸ್ವಿ ಸೂರ್ಯ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.ʼʼ ಎಂದು ಹೇಳಿದೆ.
ʻʻಚುನಾವಣೆಯ ಸಮಯದಲ್ಲಿ ಮತದಾರರ ಮೇಲೆಯೇ ಹಲ್ಲೆ, ನಿಂದನೆ ಮಾಡಲು ಮುಂದಾಗುವ ತೇಜಸ್ವಿ ಸೂರ್ಯನ ಪಟಾಲಂನ ದುರಹಂಕಾರ ಮಿತಿ ಮೀರಿದೆ, ಮತದಾರರು ಈ ಅಹಂಗೆ ಪಾಠ ಕಲಿಸುವ ಸಮಯ ಬಂದಿದೆʼʼ ಎಂದು ಕಿಡಿಕಾರಿದೆ.
ʻʻಎಲ್ಲಾ ಕಡೆಯೂ ಮತದಾರರಿಂದ ಬಿಜೆಪಿ ಅಭ್ಯರ್ಥಿಗಳು ಗೋಬ್ಯಾಕ್ ಎದುರಿಸುತ್ತಿದ್ದಾರೆ, ಈ ಜನಾಕ್ರೋಶಕ್ಕೆ ಬಿಜೆಪಿ ದೂಳಿಪಟ ಮಾಡುವುದು ನಿಶ್ಚಿತʼʼ ಎಂದು ಕಾಂಗ್ರೆಸ್ ಪೋಸ್ಟ್ ಮಾಡಿದೆ.