ಲೇಖಕಿ, ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಾಜ್ಯಸಭೆಗೆ ಶುಕ್ರವಾರ (ಮಾರ್ಚ್ 8) ನಾಮನಿರ್ದೇಶನಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಸುಧಾ ಮೂರ್ತಿ ಅವರು ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ʻಮೇಲ್ಮನೆಯಲ್ಲಿ ಸುಧಾ ಮೂರ್ತಿ ಅವರ ಉಪಸ್ಥಿತಿಯು ʻನಾರಿ ಶಕ್ತಿʼಯ ಪ್ರಬಲವಾದ ಸಾಕ್ಷಿ. ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಇದು ಉದಾಹರಣೆಯಾಗಿದೆʼ ಎಂದಿದ್ದಾರೆ.
ಅವರ ಅವಧಿ ಫಲಪ್ರದವಾಗಲಿ ಎಂದು ಹಾರೈಸಿರುವ ಪ್ರಧಾನಿ, ʻರಾಷ್ಟ್ರಪತಿ ಅವರು ಶ್ರೀಮತಿ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಸಂತೋಷ ತಂದಿದೆ. ಸಮಾಜಸೇವೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಮ್ಮ 'ನಾರಿ ಶಕ್ತಿ'ಗೆ ಬಲವಾದ ಸಾಕ್ಷಿಯಾಗಿದೆʼ ಎಂದು ಹೇಳಿದ್ದಾರೆ.
ಸುಧಾ ಮೂರ್ತಿ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಅತ್ತೆ. 73 ವರ್ಷ ವಯಸ್ಸಿನ ಅವರಿಗೆ 2006 ರಲ್ಲಿ ಪದ್ಮಶ್ರೀ ಮತ್ತು 2023ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭ್ಯವಾಗಿದೆ.