ಶಶಿ ತರೂರ್ ಗೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವ

Update: 2024-02-20 16:12 GMT

ನವದೆಹಲಿ, ಫೆ. 20- ಲೇಖಕ, ರಾಜಕಾರಣಿ ಮತ್ತು ರಾಜತಾಂತ್ರಿಕ ಶಶಿ ತರೂರ್ ಅವರಿಗೆ ಮಂಗಳವಾರ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವ ಶೆವಲಿಯರ್ ಡೆ ಲಾ ಲೀಜನ್ ಡಿ'ಆನರ್ ನೀಡಿ ಗೌರವಿಸಲಾಯಿತು. 

ಲೇಖಕ ಮತ್ತು ತಿರುವನಂತಪುರದ ಕಾಂಗ್ರೆಸ್ ಸಂಸದ ತರೂರ್ ಅವರಿಗೆ ಫ್ರೆಂಚ್ ರಾಯಭಾರ ಕಚೇರಿಯಲ್ಲಿ ಫ್ರೆಂಚ್ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿದರು. ಫ್ರೆಂಚ್ ಸರ್ಕಾರ ಆಗಸ್ಟ್ 2022 ರಲ್ಲಿ ತರೂರ್ ಅವರಿಗೆ ಪ್ರಶಸ್ತಿ ಘೋಷಿಸಿತ್ತು. 

ʻಇಂಡೋ-ಫ್ರೆಂಚ್ ಬಾಂಧವ್ಯವನ್ನು ಗಾಢವಾಗಿಸಲು ನಡೆಸಿದ ಅವಿರತ ಪ್ರಯತ್ನ, ಅಂತಾರಾಷ್ಟ್ರೀಯ ಶಾಂತಿ ಮತ್ತು ಸಹಕಾರಕ್ಕೆ ಬದ್ಧತೆ ಮತ್ತು ಫ್ರಾನ್ಸ್‌ನ ದೀರ್ಘಕಾಲದ ಸ್ನೇಹಿತರಾದ ಅವರಿಗೆ ಅತ್ಯುನ್ನತ ಫ್ರೆಂಚ್ ನಾಗರಿಕ ಪ್ರಶಸ್ತಿಯನ್ನು ನೀಡಲಾಗಿದೆʼ ಎಂದು ಫ್ರೆಂಚ್ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ. 

ಫ್ರೆಂಚ್ ಸೆನೆಟ್ ಅಧ್ಯಕ್ಷ ಲಾರ್ಚರ್ ಮಾತನಾಡಿ,ʻಶಶಿ ತರೂರ್ ಅವರು ಜ್ಞಾನದ ದಾಹ ಮತ್ತು ಬುದ್ಧಿವಂತಿಕೆಯಿಂದ ಜಗತ್ತನ್ನುಆಲಂಗಿಸಿದ್ದಾರೆ. ಅವರು ಫ್ರಾನ್ಸ್‌ನ ನಿಜವಾದ ಸ್ನೇಹಿತ, ಫ್ರಾನ್ಸ್ ಮತ್ತು ಅದರ ಸಂಸ್ಕೃತಿಯ ಬಗ್ಗೆ ಆಳವಾದ ತಿಳಿವಳಿಕೆಯನ್ನು ಹೊಂದಿರುವ ವ್ಯಕ್ತಿ. ಈ ಪ್ರಶಸ್ತಿ ಮೂಲಕ ಫ್ರೆಂಚ್ ಗಣರಾಜ್ಯವು ನಿಮ್ಮನ್ನು ಗೌರವಿಸುತ್ತದೆʼ ಎಂದು ಹೇಳಿದರು. 

ತರೂರ್ ಮಾತನಾಡಿ, ಶೆವಲಿಯರ್ ಡೆ ಲಾ ಲೀಜನ್ ಡಿ'ಆನರ್ ಸ್ವೀಕರಿಸುವುದು ಹೆಮ್ಮೆಯ ವಿಷಯʼ ಎಂದರು. ʻಫ್ರಾನ್ಸ್, ಫ್ರೆಂಚರು, ಅವರ ಭಾಷೆ ಮತ್ತು ಸಂಸ್ಕೃತಿಯನ್ನು, ವಿಶೇಷವಾಗಿ ಅವರ ಸಾಹಿತ್ಯ ಮತ್ತು ಸಿನೆಮಾವನ್ನು ಮೆಚ್ಚುವವನಾಗಿ ಆ ದೇಶದ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿರುವುದಕ್ಕೆ ಋಣಿಯಾಗಿದ್ದೇನೆʼ ಎಂದರು.

2002 ರ ತಮ್ಮ ಫ್ರೆಂಚ್ ಪ್ರವಾಸದ ನೆನಪುಗಳನ್ನು ಹಂಚಿಕೊಂಡರು. ʻಭಾರತೀಯ ಲೇಖಕರ ಗುಂಪು ಹೋಟೆಲ್ ಡಿ ವಿಲ್ಲೆಯಲ್ಲಿ ನಡೆದ ಸ್ವಾಗತ ಸಭೆ ಬಳಿಕ ಹಿಂದಿರುಗುತ್ತಿದ್ದಾಗ ಪ್ಯಾಂಥಿಯಾನ್‌ನ ಭಾರಿ ಕಂಬಗಳು ನೇರಳೆ, ಕೆಂಪು ಮತ್ತು ನೀಲಿ ಬೆಳಕು ಉಜ್ವಲಗೊಂಡಿ ದ್ದವು. ಗುಂಪಿನ ಮುಖ್ಯಸ್ಥ ಹಿರಿಯ ಕಾದಂಬರಿಕಾರ ಅನಂತಮೂರ್ತಿ ಹೇಳಿದರು; 'ಫ್ರೆಂಚರಿಗೆ ತಮ್ಮ ಬರಹಗಾರರನ್ನು ಹೇಗೆ ಗೌರವಿಸಬೇಕೆಂದು ಗೊತ್ತಿದೆʼ ಎಂದು ತರೂರ್ ಸ್ಮರಿಸಿಕೊಂಡರು. 

1802 ರಲ್ಲಿ ನೆಪೋಲಿಯನ್ ಬೋನಪಾರ್ಟೆ ಸ್ಥಾಪಿಸಿದ ಲೀಜನ್ ಡಿ'ಆನರ್ ನ್ನು ರಾಷ್ಟ್ರೀಯತೆಯನ್ನು ಪರಿಗಣಿಸದೆ ಫ್ರಾನ್ಸ್‌ಗೆ ಅತ್ಯುತ್ತಮ ಸೇವೆಗಾಗಿ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. 

ಭಾರತಕ್ಕೆ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ, ಭಾರತದ ಜಿ20 ಶೆರ್ಪಾ ಅಮಿತಾಭ್ ಕಾಂತ್ ಮತ್ತು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು. 

Tags:    

Similar News