KIADB compensation | ಪರಿಹಾರದ ಸವಿಯುಣ್ಣಲು ಬದುಕಿರೋದು ಇಬ್ಬರೇ ವೃದ್ಧರು ; 25 ವರ್ಷ ಅಲೆಸಿ ಪರಿಹಾರ ಕೊಟ್ಟ ಕೆಐಎಡಿಬಿ !

ರಾಮನಗರ ಜಿಲ್ಲೆಯ ರೈತರ ಭೂಮಿಗೆ 25 ವರ್ಷಗಳ ಕಾಲ ಅಲೆದಾಡಿಸಿ ಕೊನೆಗೂ 18.47 ಕೋಟಿ ರೂ ಭೂ ಪರಿಹಾರ ಬಿಡುಗಡೆ ಮಾಡಿದ ಕೆಐಎಡಿಬಿ ಕ್ರಮದಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.;

Update: 2025-02-23 09:19 GMT
ರಾಮನಗರ ಜಿಲ್ಲೆಯ ರೈತರಿಗೆ ಕೆಐಎಡಿಬಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಪರಿಹಾರದ ಮೊತ್ತ ಠೇವಣಿ ಇಟ್ಟಿರುವ ದಾಖಲೆ ನೀಡಿದರು

ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಟೊಯೋಟಾ ಕಾರ್ಖಾನೆ ಸ್ಥಾಪನೆಗಾಗಿ ಭೂಮಿ ಕಳೆದುಕೊಂಡು ಪರಿಹಾರಕ್ಕಾಗಿ 25 ವರ್ಷಗಳ ಕಾಲ ಅಲೆದಾಡಿದ್ದ ವೃದ್ಧರಿಗೆ ಕೊನೆಗೂ ಕೆಐಎಡಿಬಿ ಪuರಿಹಾರ ಮಂಜೂರು ಮಾಡಿದೆ. ಆದರೆ, ಪರಿಹಾರದ ಸವಿಯುಣ್ಣಬೇಕಿದ್ದ ರೈತರಲ್ಲಿ ಇದೀಗ ಬದುಕುಳಿದಿರುವುದು ಕೇವಲ ಇಬ್ಬರು ಮಾತ್ರ. ಪರಿಹಾರದ ಕನಸಿನಲ್ಲೆ ಉಳಿದವರು ಮಣ್ಣಾಗಿ ಹೋಗಿದ್ದಾರೆ.

84 ವರ್ಷದ ಭೋಜ ತಿಮ್ಮಯ್ಯ, 81 ವರ್ಷದ ಪತ್ತಿ ಕುಮಾರಸ್ವಾಮಿ ಅವರು ಮಾತ್ರ ಜೀವಂತವಾಗಿದ್ದಾರೆ. ಕೆಐಎಡಿಬಿ ಕಚೇರಿಗೆ ಬಂದಿದ್ದ ಈ ಇಬ್ಬರು ತಮ್ಮ ಸ್ನೇಹಿತರು ಪರಿಹಾರಕ್ಕಾಗಿ ಪರಿತಪಿಸಿ ಇಹಲೋಕ ತ್ಯಜಿಸಿದ್ದನ್ನು ನನೆದು  ಗದ್ಗದಿತರಾದರು.

ಹೈಕೋರ್ಟ್, ಸುಪ್ರೀಂಕೋರ್ಟ್ ಒಳಗೊಂಡಂತೆ ಬಹುತೇಕ ಎಲ್ಲಾ ನ್ಯಾಯಾಲಯಗಳು ತಕ್ಷಣವೇ ಪರಿಹಾರ ನೀಡುವಂತೆ ನೀಡಿದ ಆದೇಶಗಳಿಗೆ ಕೆಐಎಡಿಬಿ ಮಾತ್ರ ಈವರೆಗೆ ಕ್ಯಾರೆ ಎಂದಿರಲಿಲ್ಲ. ಕೆಐಎಡಿಬಿ ಕಚೇರಿ ಜಪ್ತಿಗೆ ಆದೇಶ ನೀಡುತ್ತಿದ್ದಂತೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು 25 ವರ್ಷಗಳ ನಂತರ ಕೆಐಎಡಿಬಿ ಪರಿಹಾರ ಬಿಡುಗಡೆ ಮಾಡಿದೆ.

ಪರಿಹಾರ ನೀಡುವಂತೆ ರಾಮನಗರ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಕೋರ್ಟ್ ನೀಡಿದ ಆದೇಶಗಳು ಜಾರಿಯಾಗಿರಲಿಲ್ಲ. ಈಚೆಗೆ  ಸುಪ್ರೀಂಕೋರ್ಟ್ ಮತ್ತೊಮ್ಮೆ ಖಡಕ್ ಆದೇಶ ನೀಡಿ ಎರಡು ತಿಂಗಳೊಳಗಾಗಿ ಪರಿಹಾರದ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವಂತೆ ಸೂಚಿಸಿತ್ತು. ಪರಿಹಾರ ವಿಳಂಬವಾದ ಕಾರಣ ಮಹಾರಾಣಿ ಕಾಲೇಜು ಪಕ್ಕದಲ್ಲಿರುವ ಕೆಐಎಡಿಬಿ ಕಚೇರಿ ಜಪ್ತಿ ಮಾಡುವಂತೆ ಆದೇಶಿಸಿತ್ತು.

ಇಂದು ಕೋರ್ಟ್ ಅಮೀನ್ ಅವರೊಂದಿಗೆ ಬಿಡದಿ ರೈತರು ಕಚೇರಿ ಜಪ್ತಿಗೆ ಮುಂದಾದಾಗ 38 ರೈತರಿಗೆ 18.47 ಕೋಟಿ ರೂ. ಪರಿಹಾರವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟಿರುವುದಾಗಿ ದಾಖಲೆ ಒದಗಿಸಿದರು. ಇದರಿಂದ ಕಚೇರಿ ಜಪ್ತಿ ಮಾಡಲು ಮುಂದಾಗಿದ್ದ ರೈತರು ಕೆಐಎಡಿಬಿ ಆದೇಶ ಪ್ರತಿ ಪಡೆದು ವಾಪಸ್ ಆದರು.

ರೈತರಿಗೆ ಪರಿಹಾರ ಒದಗಿಸಲೇಬೇಕೆಂದು ಹಠತೊಟ್ಟು ಎರಡೂವರೆ ದಶಕಗಳಿಂದ ತ್ರಿವಿಕ್ರಮನಂತೆ ಹೋರಾಟ ನಡೆಸಿದ್ದ ಕೋಟೆ ಶಿವಣ್ಣ ಅವರು 8 ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಪುತ್ರ ಗಿರೀಶ್ ಶಿವಣ್ಣ ಇದೀಗ ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಗಿರೀಶ್ ಶಿವಣ್ಣ, ನಮ್ಮ ತಂದೆ ಬದುಕಿದ್ದಾಗ ಪರಿಹಾರದ ಹಣ ದೊರೆತಿದ್ದರೆ ಹೋರಾಟ ಸಾರ್ಥಕವಾಗುತ್ತಿತ್ತು. ಹೃದಯಹೀನ ಅಧಿಕಾರಿಗಳು ಮತ್ತು  ಸರ್ಕಾರ ಪರಿಹಾರ ನೀಡುವುದಕ್ಕೆ ವಿಳಂಬ ತೋರಿದೆ ಬೇಸರದಿಂದಲೇ ಹೇಳಿದರು.

"ನಾವು ಬದುಕಿರುವಾಗ ಪರಿಹಾರ ದೊರೆಯುತ್ತದೆ ಎಂದು ಭಾವಿಸಿರಲಿಲ್ಲ. ಆದರೆ ಪರಿಹಾರ ಮೊತ್ತವನ್ನು ಮಕ್ಕಳಿಗೆ ವಿತರಿಸುವ ಜವಾಬ್ದಾರಿಯಾದರೂ ತಮಗೆ ದೊರೆಯಿತಲ್ಲ ಎಂಬುದಷ್ಟೇ ಸಮಾಧಾನ ಎಂದು ಶಾನಮಂಗಲಾದ ರೈತ ಪತ್ತಿ ಕುಮಾರ ಸ್ವಾಮಿ ಹೇಳಿದರು.

ಕೆಐಎಡಿಬಿ 1998 ರಲ್ಲಿ ಭೂ ಸ್ವಾಧೀನಮಾಡಿಕೊಂಡಿತ್ತು. ಶಾನಮಂಗಲ, ಬಾನಂದೂರು, ಅಬ್ಬಿನಕುಂಟೆ ಗ್ರಾಮಗಳ ಬಹುತೇಕ ಸಣ್ಣ ಮತ್ತು ಅತಿ ಸಣ್ಣ ರೈತರು ಕಾರ್ಖಾನೆ ಸ್ಥಾಪನೆಗೆ ಭೂಮಿ ನೀಡಿದ್ದರು. 2003 ರ ಆಗಸ್ಟ್ 26 ರಂದು ಹೈಕೋರ್ಟ್ ರೈತರಿಗೆ ಪರಿಹಾರ ನೀಡುವಂತೆ ಸ್ಪಷ್ಟವಾಗಿ ನಿರ್ದೇಶನ ನೀಡಿತ್ತು. ಆದರೆ ಕೆಐಎಡಿಬಿ ಸಬೂಬುಗಳನ್ನು ಹೇಳುತ್ತಿತ್ತು. ಆದರೆ ಸುಪ್ರೀಂಕೋರ್ಟ್ ಬಡ್ಡಿ ಸಮೇತ ಪರಿಹಾರ ನೀಡುವಂತೆ ಆದೇಶ ನೀಡಿದ ನಂತರ ಎಚ್ಚೆತ್ತುಕೊಂಡ ಕೆಐಎಡಿಬಿ ಅಧಿಕಾರಿಗಳು, ಪರಿಹಾರ ಮೊತ್ತವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಿದ್ದಾರೆ. ತಬರನ ಕಥೆಯಂತಾಗಿದ್ದ ಕೃಷಿಕರ ಗೋಳು ಇದೀಗ ತಾರ್ಕಿಕ ಅಂತ್ಯ ಕಂಡಿದೆ.

"ಪರಿಹಾರ ಪಡೆಯಲು ನಮ್ಮ ಬದುಕನ್ನೇ ಹೋರಾಟಕ್ಕಾಗಿ ಮೀಸಲಿಟ್ಟಿದ್ದೆವು. ನನಗೆ ಸರಿಯಾಗಿ ನಡೆಯಲು ಸಾಧ್ಯವಿಲ್ಲ. ನನ್ನೆಲ್ಲಾ ಸ್ನೇಹಿತರು ಮರಣ ಹೊಂದಿದರು. ಆದರೆ ಇಂದು ಅಧಿಕಾರಿಗಳು ಪರಿಹಾರ ಮಂಜೂರಾತಿ ದಾಖಲೆಗಳನ್ನು ಕೊಟ್ಟಿದ್ದಾರೆ. ಹಣ ಕೈ ಸೇರಿದಾಗಲಷ್ಟೇ ನಮಗೆ ನೆಮ್ಮದಿ ಎಂದು ಕೃಷಿಕ ಭೋಜ ತಿಮ್ಮಯ್ಯ ಹೇಳಿದರು.

Tags:    

Similar News