ಬೆಂಗಳೂರಲ್ಲಿ ಹಾಡಹಗಲೇ 'ಮನಿ ಹೈಸ್ಟ್' ಮಾದರಿ ದರೋಡೆ: ಐಟಿ ಅಧಿಕಾರಿಗಳೆಂದು ನಂಬಿಸಿ 7 ಕೋಟಿ ರೂ. ಲೂಟಿ

ತೆರಿಗೆ ಇಲಾಖೆಯ ಅಧಿಕಾರಿಗಳು, ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಹೇಳಿ, ವಾಹನದಲ್ಲಿದ್ದ ಸಿಬ್ಬಂದಿಯನ್ನು ನಂಬಿಸಿ ಹಣ ದೋಚಿದ್ದಾರೆ.

Update: 2025-11-19 11:21 GMT
Click the Play button to listen to article

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೇ ನಡೆದ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಎಟಿಎಂಗೆ ಹಣ ತುಂಬುವ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಬರೋಬ್ಬರಿ 7 ಕೋಟಿ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಆದಾಯ ತೆರಿಗೆ ಇಲಾಖೆಯ (ಐಟಿ) ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ದರೋಡೆಕೋರರು, ದಾಖಲೆ ಪರಿಶೀಲನೆಯ ನೆಪದಲ್ಲಿ ಈ ಕೃತ್ಯ ಎಸಗಿದ್ದಾರೆ.

ಬುಧವಾರ ಮಧ್ಯಾಹ್ನ, ಜೆ.ಪಿ. ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 'ಸಿಎಂಎಸ್' ಕಂಪನಿಯ ವಾಹನದಲ್ಲಿ ಎಟಿಎಂಗಳಿಗೆ ಹಣ ತುಂಬಲು ಸಾಗಿಸಲಾಗುತ್ತಿತ್ತು. ಈ ವೇಳೆ, ಅಶೋಕ ಪಿಲ್ಲರ್ ಬಳಿ ಇನ್ನೋವಾ ಕಾರಿನಲ್ಲಿ ಬಂದ 7-8 ಜನರ ತಂಡ, ವಾಹನವನ್ನು ಅಡ್ಡಗಟ್ಟಿದೆ.

"ನಾವು ತೆರಿಗೆ ಇಲಾಖೆಯ ಅಧಿಕಾರಿಗಳು, ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು" ಎಂದು ಹೇಳಿ, ವಾಹನದಲ್ಲಿದ್ದ ಸಿಬ್ಬಂದಿಯನ್ನು ನಂಬಿಸಿದ್ದಾರೆ. ನಂತರ, ಹಣ ಮತ್ತು ಸಿಬ್ಬಂದಿ ಸಮೇತ ವಾಹನವನ್ನು ಡೇರಿ ಸರ್ಕಲ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಸಿಬ್ಬಂದಿಯನ್ನು ವಾಹನದಿಂದ ಕೆಳಗಿಳಿಸಿ, ಹಣವಿದ್ದ ವಾಹನದೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರಿಂದ ತೀವ್ರ ಶೋಧ

ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ದರೋಡೆಕೋರರ ಪತ್ತೆಗಾಗಿ ನಗರದಾದ್ಯಂತ ನಾಕಾಬಂಧಿ ಹಾಕಿ, ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಸಿಎಂಎಸ್ ಕಂಪನಿಯ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಘಟನೆಯಲ್ಲಿ ಅವರ ಪಾತ್ರದ ಬಗ್ಗೆಯೂ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬೀದರ್‌ನಲ್ಲಿ ಇದೇ ರೀತಿ ಎಟಿಎಂ ವಾಹನವನ್ನು ದರೋಡೆ ಮಾಡಿದ್ದ ಘಟನೆ ಮಾಸುವ ಮುನ್ನವೇ, ರಾಜಧಾನಿಯ ಹೃದಯ ಭಾಗದಲ್ಲಿ ನಡೆದಿರುವ ಈ ಮಹಾ ದರೋಡೆಯು ತೀವ್ರ ಆತಂಕಕ್ಕೆ ಕಾರಣವಾಗಿದೆ 

Tags:    

Similar News