ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಸೋಂಕು; ರಾಜ್ಯದ ಶಬರಿಮಲೆ ಯಾತ್ರಿಕರಿಗೆ ಮಾರ್ಗಸೂಚಿ ಪ್ರಕಟ
ನೇಗ್ಲೇರಿಯಾ ಫೌಲೇರಿ (Naegleria fowlen) ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ. ಇದು ಮುಖ್ಯವಾಗಿ ನಿಂತ ನೀರು, ಕೊಳ, ಈಜುಕೊಳಗಳು ಹಾಗೂ ಕೆರೆಗಳು, ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ.
ಸಾಂದರ್ಭಿಕ ಚಿತ್ರ
ಕೇರಳದಲ್ಲಿ ಮಿದುಳು ತಿನ್ನುವ ಅಮಿಬಾ (ನೇಗೇರಿಯಾ ಫೌಲೇರಿ) ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಶಬರಿಮಲೆ ಯಾತ್ರೆಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳಿಗೆ ಕರ್ನಾಟಕ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸಿದೆ.
ಸುರಕ್ಷತಾ ಸಲಹೆಗಳ ಮಾರ್ಗಸೂಚಿ ಬಿಡುಗಡೆ ಮಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು, ರಾಜ್ಯದ ಶಬರಿಮಲೆ ಯಾತ್ರಿಕರು ಎಚ್ಚರ ವಹಿಸುವಂತೆ ಕೋರಿದ್ದಾರೆ.
ಆರೋಗ್ಯ ಇಲಾಖೆಯ ಮಾರ್ಗಸೂಚಿ ಏನು?
ನೇಗ್ಲೇರಿಯಾ ಫೌಲೇರಿ (Naegleria fowlen) ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ. ಇದು ಮುಖ್ಯವಾಗಿ ನಿಂತ ನೀರು, ಕೊಳ, ಈಜು ಕೊಳಗಳು ಹಾಗೂ ಕೆರೆಗಳು, ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡುಬರುತ್ತದೆ.
ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಹರಡುವುದಿಲ್ಲ.
ನೇಗ್ಲೇರಿಯಾ ಫೌಲರಿ (Naegleria fowleri) ಅತ್ಯಂತ ವಿಷಕಾರಿ ಸೂಕ್ಷ್ಮಜೀವಿಯಾಗಿದ್ದು, ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ, ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ (Amoebic meningoencephalitis) ಎನ್ನುವ ಅಪರೂಪದ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆ ಉಂಟು ಮಾಡುತ್ತದೆ. ಯಾತ್ರೆ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಮೂಗಿಗೆ ಪ್ರವೇಶಿಸದಂತೆ ಕ್ಲಿಪ್ ಗಳನ್ನು ಬಳಸಿ ಅಥವಾ ನಿಮ್ಮ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಸ್ನಾನ ಮಾಡುವುದು ಸೂಕ್ತ.
ನೀರಿನ ಸಂಪರ್ಕದ ಏಳು ದಿನಗಳೊಳಗೆ ಜ್ವರ ತೀವು ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ, ಗೊಂದಲ, ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಹಾಗೂ ವ್ಯಕ್ತಿಯ ವರ್ತನೆಯಲ್ಲಿ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತುರ್ತು ಆರೈಕೆ ಪಡೆಯಬೇಕು ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಕೇರಳದಲ್ಲಿ 6 ಮಂದಿ ಮೃತ
ಕೇರಳದಲ್ಲಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕಿನಿಂದ (ಮೆದುಳಿನ ಸೋಂಕು) ಮೃತಪಟ್ಟಿರುವವರ ಸಂಖ್ಯೆ ಸೆಪ್ಟಂಬರ್ ಅಂತ್ಯಕ್ಕೆ ಆರಕ್ಕೆ ಏರಿದೆ. ಅಪರೂಪ ಮತ್ತು ಮಾರಕವಾದ ಮೆದುಳಿನ ಸೋಂಕು ವ್ಯಾಪ್ತಿಸುತ್ತಿರುವುದು ಆರೋಗ್ಯ ಅಧಿಕಾರಿಗಳಲ್ಲಿ ಕಳವಳ ಸೃಷ್ಟಿಸಿದೆ.
ಮಲ್ಲಪುರಂ ಜಿಲ್ಲೆಯ ಮೂಲದ ಶಾಜಿ (47) ಅವರನ್ನು ಆಗಸ್ಟ್ 9 ರಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು, ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
10 ರೋಗಿಗಳಿಗೆ ಚಿಕಿತ್ಸೆ
ಮೆದುಳು ತಿನ್ನುವ ಸೋಂಕು ಹೇಗೆ ತಗುಲಿತು ಎಂಬುದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಇದು ಪ್ರಾಥಮಿಕವಾಗಿ ಕಲುಷಿತ ನೀರಿನಲ್ಲಿ ಇರುವ ಅಮೀಬಾದಿಂದ ವ್ಯಾಪಿಸಲಿದೆ ಎಂದು ಶಂಕಿಸಲಾಗಿದೆ. ಆಗಸ್ಟ್‌ನಲ್ಲಿ 10 ರೋಗಿಗಳು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಸೋಂಕಿಗೆ ಚಿಕಿತ್ಸೆ ಪಡೆದಿದ್ದಾರೆ. ಮಲಪ್ಪುರಂ ಜಿಲ್ಲೆಯ ವಂಡೂರಿನ 54 ವರ್ಷದ ಮಹಿಳೆಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದರು.