Siddaramaiah 2.0| ಸರ್ಕಾರಕ್ಕೆ ಎರಡೂವರೆ ವರ್ಷ: ಸಿಎಂ ಬದಲಾವಣೆ ಚರ್ಚೆಗೆ ಅಲ್ಪವಿರಾಮ; ಡಿಕೆಶಿ ಕನಸು ಮರೀಚಿಕೆ?

ಸರ್ಕಾರ ರಚನೆಯಾಗಿ ಎರಡೂವರೆ ವರ್ಷ ಪೂರೈಸಿದರೂ ಗೊಂದಲಗಳು ಮುಂದುವರಿದಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ದೆಹಲಿ ಭೇಟಿ ಬಳಿಕವೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

Update: 2025-11-19 10:27 GMT
Click the Play button to listen to article

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರದ ಎರಡೂವರೆ ವರ್ಷಗಳ ಮಹತ್ವದ ಘಟ್ಟ ತಲುಪಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಸರ್ಕಾರ ರಚನೆಯಾದಾಗಿನಿಂದಲೂ ತೆರೆಮರೆಯಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗೆ ಸದ್ಯಕ್ಕೆ ಹೈಕಮಾಂಡ್ ತಡೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ಸಂದೇಶವನ್ನುಕೈ ʼಕಮಾಂಡ್‌ʼ ರವಾನಿಸಿದೆ. ಆದರೆ, ಆಡಳಿತಕ್ಕೆ ಚುರುಕು ಮುಟ್ಟಿಸಲು ಮತ್ತು ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಶೀಘ್ರದಲ್ಲಿಯೇ  ದೊಡ್ಡ ಮಟ್ಟದ ಸಚಿವ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಭೇಟಿ ಬಳಿಕವೂ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಗೊಂದಲ ಮಾತ್ರ ಮುಂದುವರಿದಿದೆ.  ಒಂದೆಡೆ ಸಿದ್ದರಾಮಯ್ಯಗೆ ಸಂಪುಟ ಪುನಾರಚನೆಯ ಪ್ರಶ್ನೆಗೂ ಉತ್ತರ ಸಿಗದೆ, ಇನ್ನೊಂದೆಡೆ ನಾಯಕತ್ವ ಬದಲಾವಣೆ ಗೊಂದಲ ನಿವಾರಿಸಲಾಗದೇ ಡಿ.ಕೆ.ಶಿವಕುಮಾರ್ ದೆಹಲಿಯಿಂದ ವಾಪಸಾಗಿದ್ದಾರೆ. ಮುಖಂಡರ ದೆಹಲಿ ಭೇಟಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಹತ್ತು ಹಲವು ಅನುಮಾನಗಳಿಗೆ ತೆರೆ ಹಾಕಲಿದೆ ಎಂಬ ಚರ್ಚೆಗಳು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬಂದಿತ್ತು. ಆದರೆ, ಉಭಯ ನಾಯಕರ ದೆಹಲಿ ಭೇಟಿಯಿಂದ ರಾಜ್ಯದ ರಾಜಕೀಯದಲ್ಲಿದ್ದ ಗೊಂದಲ, ಅನುಮಾನ, ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ವಿಫಲವಾಗಿದೆ.‌ ಸಂಪುಟ ಪುನಾರಚನೆಯ ಬಗ್ಗೆಯೂ ಸ್ಪಷ್ಟ ಸಂಕೇತ ಹೈ ಕಮಾಂಡ್‌ನಿಂದ ದೊರಕಿದಂತೆ ಕಾಣುತ್ತಿಲ್ಲ‌. ನಾಯಕತ್ವ ಬದಲಾವಣೆಯ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದಂತೆ ಕಾಣುತ್ತಿಲ್ಲ. ಇದು ಮತ್ತಷ್ಟು ಗೊಂದಲ, ಚರ್ಚೆಗಳಿಗೆ ಎಡೆ ಮಾಡಿಕೊಡುವ ಲಕ್ಷಣಗಳು ಕಾಣುತ್ತಿದೆ‌.

ಆರಂಭದಲ್ಲೇ ಸಿಎಂ ಹುದ್ದೆಯತ್ತ ಕಣ್ಣಿಟ್ಟಿದ್ದ ಡಿಕೆಶಿ

2023ರಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ, ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ, ಹೈಕಮಾಂಡ್ ಮಧ್ಯಪ್ರವೇಶಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿತ್ತು. ಆದರೆ, ಎರಡೂವರೆ ವರ್ಷಗಳ ನಂತರ ಅಧಿಕಾರ ಹಂಚಿಕೆಯಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ನಿರಂತರವಾಗಿ ಚಾಲ್ತಿಯಲ್ಲಿದ್ದವು. 

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿರುವುದು ಮತ್ತು ಸರ್ಕಾರದ 'ಗ್ಯಾರಂಟಿ' ಯೋಜನೆಗಳು ಜನಪ್ರಿಯವಾಗಿರುವುದು ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಬಲ ತಂದಿದೆ.  ಜತೆಗೆ ಬಿಹಾರ ಚುನಾವಣೆಯ ಬಳಿಕ ಕಂಗೆಟ್ಟಿರುವ ಕಾಂಗ್ರೆಸ್‌, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯತ್ತ ಮನಸ್ಸು ಮಾಡಿದರೆ, ಪಕ್ಷಕ್ಕಿರುವ ಬಲಾಢ್ಯ ರಾಜ್ಯವನ್ನೂ ಕಳೆದುಕೊಳ್ಳಬಹುದು ಎಂಬ ಆತಂಕ ಎದುರಿಸಿದೆ.

ಈ ಹಂತದಲ್ಲಿ ನಾಯಕತ್ವ ಬದಲಾವಣೆ ಮಾಡಿದರೆ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು ಪಕ್ಷದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾಗಬಹುದು ಎಂದು ಹೈಕಮಾಂಡ್ ಭಾವಿಸಿದೆ. ಹೀಗಾಗಿ, ಸದ್ಯಕ್ಕೆ ಸ್ಥಿರತೆಗೆ ಆದ್ಯತೆ ನೀಡಿ, ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿಯೇ ಸರ್ಕಾರವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಧಿವೇಶನ ಬಳಿಕ ಸಂಪುಟ ಪುನಾರಚನೆ? 

ಸಿದ್ದರಾಮಯ್ಯ ಸಂಪುಟ ಪುನಾರಚನೆಗೆ ಹೈಕಮಾಂಡ್‌ನಿಂದ  ಅನುಮತಿ ಸಿಗುವ ವಿಶ್ವಾಸದಿಂದ ದೆಹಲಿಗೆ ತೆರಳಿದ್ದರು. ನಿರೀಕ್ಷೆಯಂತೆಯೇ ರಾಹುಲ್ ಗಾಂಧಿಯನ್ನೂ ಭೇಟಿ ಮಾಡಿದ್ದರು. ಆದರೆ ಸಂಪುಟ ಪುನಾರಚನೆ ಬಗ್ಗೆ ರಾಹುಲ್ ಗಾಂಧಿಯಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಬಳಿಕ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸುವ ಕುರಿತು ಹೈಕಮಾಂಡ್‌ ಹೇಳಿ ಕಳುಹಿಸಿದೆ ಎನ್ನಲಾಗಿದೆ.

ಸುಮಾರು 10-12 ಸಚಿವರಿಗೆ ಕೊಕ್ ನೀಡಿ ಹೊಸಬರಿಗೆ ಸಚಿವ ಸ್ಥಾನ ನೀಡುವ ಪುನಾರಚನೆ ಚರ್ಚೆಗೆ ಪಕ್ಷದ ವರಿಷ್ಠರಿಂದ ಸಕಾರಾತ್ಮಕ ಸ್ಪಂದನೆ ಸಿಗದೇ ಇರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿ ನಿವಾಸದಲ್ಲಿ ಸುದೀರ್ಘ ಚರ್ಚೆ ನಡೆಸಿದರು. ಸಂಪುಟ ಪುನಾರಚನೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಆದರೆ ಖರ್ಗೆಯವರಿಂದಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಮುಖಂಡರು ಸುಮಾರು ಒಂದು ಗಂಟೆ ಕಾಲ ಸುಧೀರ್ಘ ಸಮಾಲೋಚನೆ ನಡೆಸಿದ್ದಾರೆ. ಖರ್ಗೆ ಜತೆಗಿನ ಮಾತುಕತೆ ವೇಳೆ ಸಂಪುಟ ಪುನಾರಚನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಪುಟ ಪುನಾರಚನೆ ಅಗತ್ಯತೆಯ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ಆದರೆ, ಮಲ್ಲಿಕಾರ್ಜುನ ಖರ್ಗೆ ಈ ಸಂಬಂಧ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ರಾಹುಲ್ ಗಾಂಧಿಯಾಗಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಪುಟ ಪುನಾರಚನೆಯ ಬಗ್ಗೆ ಸ್ಪಷ್ಟತೆ ನೀಡದ ಕಾರಣ ಸದ್ಯ ಸಂಪುಟ ಪುನಾರಚನೆ ಸಾಧ್ಯೆತೆ ಬಗ್ಗೆಯೂ ಹಲವು ಪ್ರಶ್ನೆಗಳು ಎದ್ದಿವೆ.

ರಾಹುಲ್ ಭೇಟಿ ಸಾಧ್ಯವಾಗದೇ ವಾಪಸಾದ ಡಿ.ಕೆ.ಶಿವಕುಮಾರ್

ಉ‌ಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ದಿನಗಳ ಕಾಲ ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದರೂ ಕಾಂಗ್ರೆಸ್‌ ವರಿಷ್ಠ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಯಾವುದೇ ಉತ್ತರ ಸಿಗದೇ ಬರಿಗೈಲಿ ಬೆಂಗಳೂರಿಗೆ ವಾಪಸಾಗಿದ್ದಾರೆ. ನಾಯಕತ್ವ ಬದಲಾವಣೆ ಪ್ರಶ್ನೆಗೆ ಉತ್ತರ ಸಿಗುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಾಳಯದ ಒಂದಷ್ಟು ಮಂದಿಗೆ ಇದರಿಂದ ನಿರಾಶೆಯಾಗಿದೆ.  ಬಿಹಾರ ಚುನಾವಣೆ ಫಲಿತಾಂಶದ ಬಳಿಕ ನಾಯಕತ್ವ ಬದಲಾವಣೆಯ ಚರ್ಚೆಗೆ ಒಂದು ಸ್ಪಷ್ಟ ಆಯಾಮ ಸಿಗಬಹುದು ಎಂಬ ನಿರೀಕ್ಷೆಗಳಿಗೆ ಮೇಲ್ನೋಟಕ್ಕೆ ಸದ್ಯ ಉತ್ತರ ಲಭ್ಯವಾಗಿಲ್ಲ. ರಾಹುಲ್ ಗಾಂಧಿ ಬಳಿ ಮಾತನಾಡಲು ಸಾಧ್ಯವಾಗದ ಕಾರಣ ನಾಯಕತ್ವ ಬದಲಾವಣೆಯ ಗೊಂದಲ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ. 

ದೆಹಲಿ ಭೇಟಿ : ಉಭಯ ನಾಯಕರಿಗೂ ನಿರಾಸೆ?

ಸಂಪುಟ ಪುನಾರಚನೆಯ ನಿರೀಕ್ಷೆಯೊಂದಿಗೆ ಸಿದ್ದರಾಮಯ್ಯಗೆ ಹೈ ಕಮಾಂಡ್‌ನಿಂದ ಸ್ಪಷ್ಟ ಉತ್ತರ ಸಿಗದ ಕಾರಣ ನಿರಾಸೆ ಮೂಡಿದಂತೆ ಕಾಣುತ್ತಿದೆ. ಇನ್ನು, ಡಿ.ಕೆ.ಶಿವಕುಮಾರ್‌ಗೆ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗದ ಕಾರಣ ನಾಯಕತ್ವ ಬದಲಾವಣೆಯ ಪ್ರಶ್ನೆಗೂ ಉತ್ತರ ಸಿಗದೇ ನಿರಾಸೆಯಿಂದ ಹಿಂತಿರುಗಿದಂತೆ ಭಾಸವಾಗುತ್ತಿದೆ. ಉಭಯ ನಾಯಕರಿಗೂ ದೆಹಲಿ ಭೇಟಿ ನಿರೀಕ್ಷಿತ ಫಲ ನೀಡಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಆ ಮೂಲಕ ಉಭಯ ನಾಯಕರಿಗೂ ಹೈ ಕಮಾಂಡ್ ಪರೋಕ್ಷವಾಗಿ ಸಂದೇಶ ನೀಡಿದೆಯಾ ಎಂಬ ಅನುಮಾನವೂ ಮೂಡಿದೆ. 

ಸಚಿವ ಸಂಪುಟ ಪುನಾರಚನೆಯತ್ತ ಶಾಸಕರ ಚಿತ್ತ

ಮುಖ್ಯಮಂತ್ರಿ ಬದಲಾವಣೆ ಚರ್ಚೆ ತಣ್ಣಗಾಗುತ್ತಿದ್ದಂತೆ, ಎಲ್ಲರ ಚಿತ್ತ ಈಗ ಸಚಿವ ಸಂಪುಟ ಪುನಾರಚನೆಯತ್ತ ನೆಟ್ಟಿದೆ. ಸಂಪುಟ ಪುನಾರಚನೆಗೆ ಹಲವು ಪ್ರಬಲ ಕಾರಣಗಳಿವೆ. ಅವುಗಳಲ್ಲಿ ಕಾರ್ಯವೈಖರಿಯ ಮೌಲ್ಯಮಾಪನ, ಅತೃಪ್ತ ಶಾಸಕರ ಸಮಾಧಾನ, ಪ್ರಾದೇಶಿಕ ಮತ್ತು ಜಾತಿ ಸಮೀಕರಣ ಸೇರಿದಂತೆ ಇತರೆ ಕಾರಣಗಳು ಪ್ರಮುಖವಾಗಿವೆ. 

ಕಾರ್ಯವೈಖರಿಯ ಮೌಲ್ಯಮಾಪನ

ಕೆಲವು ಸಚಿವರ ಕಾರ್ಯವೈಖರಿ ಮತ್ತು ಇಲಾಖೆಗಳ ಪ್ರಗತಿಯ ಬಗ್ಗೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಅಸಮಾಧಾನವಿದೆ. ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದ ಅಥವಾ ವಿವಾದಗಳಲ್ಲಿ ಸಿಲುಕಿದ ಸಚಿವರಿಗೆ ಕೊಕ್ ನೀಡಿ, ಹೊಸಬರಿಗೆ ಅವಕಾಶ ನೀಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಉದ್ದೇಶವಿದೆ.

ಅತೃಪ್ತ ಶಾಸಕರ ಸಮಾಧಾನ

ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಹಲವಾರು ಹಿರಿಯ ಹಾಗೂ ಕಿರಿಯ ಶಾಸಕರು ಪಕ್ಷದ ವರಿಷ್ಠರ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಸಂಪುಟಕ್ಕೆ ಸೇರ್ಪಡೆಗೊಳ್ಳುವ ಭರವಸೆಯೊಂದಿಗೆ ಕಾಯುತ್ತಿರುವವರ ಅಸಮಾಧಾನವನ್ನು ಶಮನಗೊಳಿಸುವುದು ಪಕ್ಷದ ಮುಂದಿರುವ ದೊಡ್ಡ ಸವಾಲಾಗಿದೆ. ಪುನಾರಚನೆಯ ಮೂಲಕ ಇಂತಹ ಅತೃಪ್ತಿಯನ್ನು ನಿಯಂತ್ರಿಸುವ ಪ್ರಯತ್ನ ಇದಾಗಿದೆ.

ಪ್ರಾದೇಶಿಕ ಮತ್ತು ಜಾತಿ ಸಮೀಕರಣ

ಪ್ರಸ್ತುತ ಸಂಪುಟದಲ್ಲಿ ಕೆಲವು ಪ್ರದೇಶಗಳಿಗೆ ಮತ್ತು ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ದೂರುಗಳಿವೆ. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಮತ್ತು ಜಾತಿ ಸಮೀಕರಣವನ್ನು ಸರಿಪಡಿಸಲು ಪುನಾರಚನೆಯನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.

ಹೊಸ ಹುರುಪು ಮತ್ತು ದಕ್ಷತೆ

ಸರ್ಕಾರವು ತನ್ನ ಅರ್ಧದಷ್ಟು ಅವಧಿಯನ್ನು ಪೂರ್ಣಗೊಳಿಸಿರುವ ಈ ಹಂತದಲ್ಲಿ, ಸಂಪುಟಕ್ಕೆ ಹೊಸ ಮುಖಗಳನ್ನು ಸೇರಿಸುವುದರಿಂದ ಆಡಳಿತದಲ್ಲಿ ಹೊಸ ಹುರುಪು ಮತ್ತು ದಕ್ಷತೆಯನ್ನು ತರಬಹುದು ಎಂಬುದು ಹೈಕಮಾಂಡ್‌ನ ಚಿಂತನೆಯಾಗಿದೆ ಎಂದು ಹೇಳಲಾಗಿದೆ. 

ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಕನಸು ಮರೀಚಿಕೆ?

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ ರೂವಾರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಪಟ್ಟದ ಕನಸು ಸದ್ಯಕ್ಕೆ ಮರೀಚಿಕೆಯಾಗಿದೆ. ಪಕ್ಷದ 'ಟ್ರಬಲ್ ಶೂಟರ್', 'ಬಂಡೆ' ಎಂದೇ ಖ್ಯಾತರಾದ ಅವರ ಮಹತ್ವಾಕಾಂಕ್ಷೆಗೆ ಸದ್ಯದ ರಾಜಕೀಯ ಸಮೀಕರಣಗಳು ಮತ್ತು ಹೈಕಮಾಂಡ್‌ನ ನಿಲುವು ತಣ್ಣೀರೆರಚಿದೆ. ಕಾಂಗ್ರೆಸ್ ಪಕ್ಷವು ಅಧಿಕಾರದಿಂದ ದೂರವಿದ್ದ ಸಂಕಷ್ಟದ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಿ.ಕೆ. ಶಿವಕುಮಾರ್, ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಿದರು. ಸಿದ್ದರಾಮಯ್ಯ ಅವರ ಜನಪ್ರಿಯತೆ ಮತ್ತು ತಮ್ಮ ಸಂಘಟನಾ ಚಾತುರ್ಯವನ್ನು ಒಗ್ಗೂಡಿಸಿ, ಪಕ್ಷಕ್ಕೆ 135 ಸ್ಥಾನಗಳ ಭರ್ಜರಿ ಬಹುಮತ ತಂದುಕೊಟ್ಟರು. ಈ ಗೆಲುವಿನ ನಂತರ, ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸರ್ಕಾರ ರಚನೆಯ ಸಂದರ್ಭದಲ್ಲಿ ನಡೆದ ಅಧಿಕಾರ ಹಂಚಿಕೆಯ ಚರ್ಚೆಗಳು, ಎರಡೂವರೆ ವರ್ಷಗಳ ನಂತರ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದ್ದವು.

ಆದರೆ, ಸರ್ಕಾರ ಎರಡೂವರೆ ವರ್ಷಗಳ ಪೂರೈಸುತ್ತಿದ್ದು, ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ಯಶಸ್ಸು, ಲೋಕಸಭಾ ಚುನಾವಣೆಯ ಫಲಿತಾಂಶದಿಂದಾಗಿ ಮುಖ್ಯಮಂತ್ರಿ ಸ್ಥಾನ ಗಟ್ಟಿಯಾಗಿದೆ. ಸಿದ್ದರಾಮಯ್ಯ ಸರ್ಕಾರದ 'ಐದು ಗ್ಯಾರಂಟಿ' ಯೋಜನೆಗಳು ಜನಸಾಮಾನ್ಯರಲ್ಲಿ, ವಿಶೇಷವಾಗಿ ತಮ್ಮ ಸಾಂಪ್ರದಾಯಿಕ 'ಅಹಿಂದ' ಮತಬ್ಯಾಂಕ್‌ನಲ್ಲಿ ಅವರ ಹಿಡಿತವನ್ನು ಬಲಪಡಿಸಿವೆ. ಈ ಯೋಜನೆಗಳ ಯಶಸ್ಸಿನ ಕೀರ್ತಿ ನೇರವಾಗಿ ಮುಖ್ಯಮಂತ್ರಿಗಳಿಗೆ ಸಲ್ಲುತ್ತಿರುವುದು ಅವರ ನಾಯಕತ್ವಕ್ಕೆ ದೊಡ್ಡ ಶಕ್ತಿಯಾಗಿದೆ.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 9 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರೀಕ್ಷೆಗಿಂತ ಉತ್ತಮ ಪ್ರದರ್ಶನ ನೀಡಿತು. ಇದು ಸಿದ್ದರಾಮಯ್ಯ ಸರ್ಕಾರದ ಆಡಳಿತಕ್ಕೆ ಸಿಕ್ಕ ಜನಾದೇಶ ಎಂದೇ ಬಿಂಬಿತವಾಗಿದ್ದು, ನಾಯಕತ್ವ ಬದಲಾವಣೆಯ ಚರ್ಚೆಗೆ ಹಿನ್ನಡೆ ಉಂಟುಮಾಡಿದೆ. ಅಲ್ಲದೇ, ಈ ಹಂತದಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸಿದರೆ, ಅದು ಸರ್ಕಾರದ ಸ್ಥಿರತೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಪಕ್ಷದಲ್ಲಿ ಅನಗತ್ಯ ಬಣ ರಾಜಕೀಯಕ್ಕೆ ಕಾರಣವಾಗಬಹುದು ಎಂಬುದು ಹೈಕಮಾಂಡ್‌ನ ಆತಂಕ. ಹೀಗಾಗಿ, ಸಿದ್ದರಾಮಯ್ಯ ಅವರೇ ಸದ್ಯಕ್ಕೆ  ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಸೂಕ್ತ ಎಂಬ ತೀರ್ಮಾನಕ್ಕೆ ವರಿಷ್ಠರು ಬಂದಿದ್ದಾರೆ ಎನ್ನಲಾಗಿದೆ. 

ಪಕ್ಷದ ಸಂಘಟನೆ ಮಾತ್ರ ಡಿ.ಕೆ. ಶಿವಕುಮಾರ್‌ ಅವರ ಮುಂದಿನ ಹಾದಿ?

ರಾಜಕೀಯ ತಜ್ಞರ ವಿಶ್ಲೇಷಣೆ ಪ್ರಕಾರ, ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಕೈತಪ್ಪಿದರೂ, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಅಂತ್ಯಗೊಂಡಿಲ್ಲ. ಬದಲಾಗಿ, ಅವರು ಹೊಸ ಕಾರ್ಯತಂತ್ರದೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ, ಅವರು ತಮ್ಮ ಸಂಪೂರ್ಣ ಗಮನವನ್ನು ಪಕ್ಷವನ್ನು ಇನ್ನಷ್ಟು ಬಲಪಡಿಸುವುದರತ್ತ ಹರಿಸಿದ್ದಾರೆ.

ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ತಮ್ಮ ಸಂಘಟನಾ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಲು ಸಜ್ಜಾಗಿದ್ದಾರೆ.ತಕ್ಷಣದ ಅಧಿಕಾರಕ್ಕಿಂತ, 2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಅವರು ತಮ್ಮ ರಾಜಕೀಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ತಾಳ್ಮೆಯ ಆಟವಾಡುವ ಮೂಲಕ ಭವಿಷ್ಯದಲ್ಲಿ ನಾಯಕತ್ವವನ್ನು ತಮ್ಮದಾಗಿಸಿಕೊಳ್ಳುವ ದೀರ್ಘಾವಧಿಯ ಯೋಜನೆಯನ್ನು ಅವರು ಹೊಂದಿದ್ದಾರೆ ಎಂದು ಹೇಳಲಾಗಿದೆ. 

Tags:    

Similar News