ತುಂಗಭದ್ರಾ ಅಚ್ಚುಕಟ್ಟು: ನೀರಿದ್ದರೂ ಎರಡನೇ ಬೆಳೆಗೆ ಇಲ್ಲ; ಸರ್ಕಾರದ ವಿರುದ್ಧ ರೈತರ ಹೋರಾಟದ ಎಚ್ಚರಿಕೆ

ರಾಜ್ಯದಲ್ಲಿ ಅತಿವೃಷ್ಟಿ ಸಂಭವಿಸಿದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಇನ್ನು ಸಂಕಷ್ಟದಲ್ಲಿರುವ ರೈತರ ಎರಡನೇ ಬೆಳೆಗೂ ನೀರು ಬಿಡುವುದಿಲ್ಲ ಅಂದರೆ ಹೇಗೆ ಎಂದು ಜೆಡಿಎಸ್‌ ಯುವ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Update: 2025-11-19 11:26 GMT
ತುಂಗಭದ್ರಾ ಜಲಾಶಯದ 19ನೇ ಗೇಟ್‌ ಮುರಿದು ನೀರು ವ್ಯರ್ಥವಾಗಿ ಹರಿದಿದ್ದ ನೀರು
Click the Play button to listen to article

ತುಂಬಿದ ಜಲಾಶಯ, ಬತ್ತಿದ ರೈತರ ಬದುಕು. ಇದು ತುಂಗಭದ್ರಾ ನಾಲಾ ಅಚ್ಚುಕಟ್ಟು ಪ್ರದೇಶದ ಸದ್ಯದ ಪರಿಸ್ಥಿತಿ. ರಾಜ್ಯದಲ್ಲಿ ಉತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರೂ, ಎರಡನೇ ಬೆಳೆಗೆ ನೀರು ಲಭ್ಯವಿಲ್ಲದೆ ವಿಜಯನಗರ, ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಲಕ್ಷಾಂತರ ರೈತರು ಕೃತಕ ಅಭಾವ ಎದುರಿಸುತ್ತಿದ್ದಾರೆ.

ಅರವತ್ತು ವರ್ಷ ಹಳೆಯದಾದ ಜಲಾಶಯದ 33 ಕ್ರಸ್ಟ್‌ಗೇಟ್‌ಗಳ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವುದರಿಂದ, ಈ ವರ್ಷ ಎರಡನೇ ಬೆಳೆಗೆ ನೀರು ಹರಿಸುವುದಿಲ್ಲ ಎಂಬ ಸರ್ಕಾರದ ನಿರ್ಧಾರವು ರೈತರನ್ನು ಬೀದಿಗಿಳಿಯುವಂತೆ ಮಾಡಿದೆ.

ಸರ್ಕಾರದ ವಿರುದ್ಧ ಜೆಡಿಎಸ್ ಗುಡುಗು: ಪರಿಹಾರಕ್ಕೆ ಆಗ್ರಹ

ಸರ್ಕಾರದ ಈ ನಿರ್ಧಾರವನ್ನು 'ರೈತ ವಿರೋಧಿ' ಎಂದು ಕರೆದಿರುವ ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ನವೆಂಬರ್ 25 ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. "ಎರಡನೇ ಬೆಳೆಗೆ ನೀರು ಹರಿಸಲು ಸಾಧ್ಯವಾಗದಿದ್ದರೆ, ಸರ್ಕಾರ ಪ್ರತಿ ಎಕರೆಗೆ 50,000 ರೂಪಾಯಿ ಪರಿಹಾರ ನೀಡಬೇಕು ಮತ್ತು ಕುಸಿದಿರುವ ಮೆಕ್ಕೆಜೋಳ ಹಾಗೂ ಭತ್ತದ ಬೆಳೆಗೆ ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯಬೇಕು," ಎಂದು ಅವರು ಆಗ್ರಹಿಸಿದ್ದಾರೆ.

"ಈ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜಲಾಶಯದ ಸುರಕ್ಷತೆ ಮುಖ್ಯವಾದರೆ, ರೈತರ ಬದುಕು ಕೂಡ ಅಷ್ಟೇ ಮುಖ್ಯ. ಸರ್ಕಾರ ತಕ್ಷಣ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ನೀರಾವರಿ ತಜ್ಞರ ಸಭೆ ಕರೆದು ಪರಿಹಾರ ಕಂಡುಕೊಳ್ಳಬೇಕು," ಎಂದು ನಿಖಿಲ್ ಸಲಹೆ ನೀಡಿದ್ದಾರೆ.

ಏನಿದು ವಿವಾದ? ಸರ್ಕಾರದ ಅನಿವಾರ್ಯತೆ ಏನು?

ಕಳೆದ ವರ್ಷ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ತುಂಡಾಗಿ ಸಾವಿರಾರು ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದುಹೋಗಿತ್ತು. ಈ ಹಿನ್ನೆಲೆಯಲ್ಲಿ, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ 33 ಗೇಟ್‌ಗಳನ್ನು ಬದಲಾಯಿಸಲು ತಾಂತ್ರಿಕ ಸಮಿತಿ ಶಿಫಾರಸು ಮಾಡಿತ್ತು. ಈ ದುರಸ್ತಿ ಕಾರ್ಯವನ್ನು 2025ರ ಡಿಸೆಂಬರ್‌ನಿಂದ 2026ರ ಜೂನ್‌ ಒಳಗೆ ಪೂರ್ಣಗೊಳಿಸಲು ತುಂಗಭದ್ರಾ ಮಂಡಳಿ ನಿರ್ಧರಿಸಿದೆ. ಈ ಕಾರಣದಿಂದ, ಈ ವರ್ಷ ಕೇವಲ ಒಂದು ಬೆಳೆಗೆ ಮಾತ್ರ ನೀರು ಬಿಡಲು ಸಾಧ್ಯ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ನೀರಿನ ಲೆಕ್ಕಾಚಾರ ಮತ್ತು ಸವಾಲುಗಳು

ಒಂದು ಬೆಳೆಗೆ ಬೇಕಾಗುವ ನೀರು ಸುಮಾರು 60 ಟಿಎಂಸಿ, ಕುಡಿಯುವ ನೀರು, ಆವಿಯಾಗುವಿಕೆ ಮತ್ತು ಇತರ ಅಗತ್ಯಗಳಿಗಾಗಿ ಸುಮಾರು 10 ಟಿಎಂಸಿ ನೀರನ್ನು ಮೀಸಲಿಡಬೇಕಿದೆ. ನೀರು ಖಾಲಿಯಾದರೆ ಬೇಸಿಗೆಯಲ್ಲಿ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಎದುರಾಗಲಿದೆ. ಜೊತೆಗೆ, ಒಪ್ಪಂದದ ಪ್ರಕಾರ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೂ ನೀರು ಹರಿಸಬೇಕಾದ ಒತ್ತಡವಿದೆ.

ಈ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಯಾಗಿ ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಕಡಲೆಕಾಯಿ, ಸೂರ್ಯಕಾಂತಿ ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ. ಸರ್ಕಾರದ ನಿರ್ಧಾರದಿಂದಾಗಿ ಈ ಬೆಳೆಗಳನ್ನು ನಂಬಿಕೊಂಡಿದ್ದ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

Tags:    

Similar News