ಪೋಕ್ಸೋ ಪ್ರಕರಣ| ಮಾಜಿ ಸಿ.ಎಂ ಯಡಿಯೂರಪ್ಪಗೆ ಸಮನ್ಸ್‌ ; ಡಿ. 2ಕ್ಕೆ ಕೋರ್ಟ್‌ಗೆ ಹಾಜರಾಗಲು ಆದೇಶ

ಈ ಸಂಬಂಧ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ಎನ್.ನಾಯಕ್ ಮಂಗಳವಾರ ಪ್ರಸ್ತುತಪಡಿಸಿದ ಅರ್ಜಿಯನ್ನು ಪುರಸ್ಕರಿಸಿದ ಬೆಂಗಳೂರಿನ ಎಫ್‌ಟಿಎಸ್ ವಿಶೇಷ ಕೋರ್ಟ್-1ರ ನ್ಯಾಯಾಧೀಶೆ ಸುಜಾತಾ ಅವರು 30 ದಿನಗಳ ಒಳಗಾಗಿ ಸಾಕ್ಷಿ ವಿಚಾರಣೆ ಆಗಬೇಕು ಎಂಬ ಕಾರಣಕ್ಕೆ ಸಮನ್ಸ್ ಜಾರಿಗೆ ಆದೇಶಿಸಿದರು.

Update: 2025-11-19 05:00 GMT

ಬಿ.ಎಸ್‌ ಯಡಿಯೂರಪ್ಪ 

Click the Play button to listen to article

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮೂವರು ಸಹ-ಆರೋಪಿಗಳಿಗೆ ಬೆಂಗಳೂರಿನ ತ್ವರಿತ ನ್ಯಾಯಾಲಯವು ಮಂಗಳವಾರ ಸಮನ್ಸ್ ಜಾರಿ ಮಾಡಿದೆ. ನ್ಯಾಯಾಲಯವು ನಾಲ್ವರು ಆರೋಪಿಗಳು ಡಿಸೆಂಬರ್ 2 ರಂದು ತನ್ನ ಮುಂದೆ ಹಾಜರಾಗುವಂತೆ ನಿರ್ದೇಶಿಸಿದೆ.

ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ಪರಿಗಣಿಸಿ ಬೆಂಗಳೂರಿನ ಎಫ್‌ಟಿಎಸ್ ವಿಶೇಷ ಕೋರ್ಟ್-I ಹೊರಡಿಸಿರುವ ಸಮನ್ಸ್‌ ಜಾರಿ ಆದೇಶವನ್ನು ರದ್ದುಗೊಳಿಸಬೇಕು ಎಂದು  ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಇತ್ತೀಚೆಗೆ ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿತ್ತು. ವಿಚಾರಣಾ ನ್ಯಾಯಾಲಯವು ಆರೋಪಗಳನ್ನು ಪರಿಗಣಿಸಿ ಸಮನ್ಸ್ ಜಾರಿ ಮಾಡಿದ್ದ ಕ್ರಮವನ್ನು ಎತ್ತಿಹಿಡಿಯಿತು. ಈ ಆದೇಶವು ಯಡಿಯೂರಪ್ಪ ಅವರಿಗೆ ತೀವ್ರ ಹಿನ್ನಡೆ ಉಂಟುಮಾಡಿತ್ತು.

ಪೋಕ್ಸೋ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಾಧಗಳನ್ನು ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಹಾಗೂ ಸಮನ್ಸ್ ಜಾರಿಯನ್ನು ಪ್ರಶ್ನಿಸಿ ಯಡಿಯೂರಪ್ಪ ಮತ್ತು ಸಹ-ಆರೋಪಿಗಳಾದ ಅರುಣಾ ವೈ ಎಂ, ರುದ್ರೇಶ ಮರುಳಸಿದ್ದಯ್ಯ ಮತ್ತು ಮರಿಸ್ವಾಮಿ ಜಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಈ ಸಂಬಂಧ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ಎನ್.ನಾಯಕ್ ಮಂಗಳವಾರ ಪ್ರಸ್ತುತಪಡಿಸಿದ ಅರ್ಜಿಯನ್ನು ಪುರಸ್ಕರಿಸಿದ ಬೆಂಗಳೂರಿನ ಎಫ್‌ಟಿಎಸ್ ವಿಶೇಷ ಕೋರ್ಟ್-1ರ ನ್ಯಾಯಾಧೀಶೆ ಸುಜಾತಾ ಅವರು 30 ದಿನಗಳ ಒಳಗಾಗಿ ಸಾಕ್ಷಿ ವಿಚಾರಣೆ ಆಗಬೇಕು ಎಂಬ ಕಾರಣಕ್ಕೆ ಸಮನ್ಸ್ ಜಾರಿಗೆ ಆದೇಶಿಸಿದರು.

ವೈಯಕ್ತಿಕ ಹಾಜರಾತಿಯಲ್ಲಿ ವಿನಾಯಿತಿ

ವಿಚಾರಣೆಯ ಸಮಯದಲ್ಲಿ ಯಡಿಯೂರಪ್ಪ ಅವರ ವೈಯಕ್ತಿಕ ಹಾಜರಾತಿಯನ್ನು ಅತ್ಯಗತ್ಯವಿದ್ದಲ್ಲಿ ಮಾತ್ರ ಒತ್ತಾಯಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಅವರ ಉಪಸ್ಥಿತಿಯು ಅನಿವಾರ್ಯವಲ್ಲ ಎಂದು ಪರಿಗಣಿಸಿದರೆ, ಅವರ ಪರವಾಗಿ ಸಲ್ಲಿಸಲಾಗುವ ಯಾವುದೇ ವಿನಾಯಿತಿ ಅರ್ಜಿಯನ್ನು ವಿಚಾರಣೆಯ ಸಮಯದಲ್ಲಿ ಪರಿಗಣಿಸಬೇಕು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದರು. ವಿಚಾರಣಾ ನ್ಯಾಯಾಲಯದಿಂದ ಗೈರುಹಾಜರಿ ಪಡೆಯಲು ಯಡಿಯೂರಪ್ಪ ಅವರಿಗೆ ಸ್ವಾತಂತ್ರ್ಯವಿದೆ ಎಂದೂ ಹೈಕೋರ್ಟ್ ತಿಳಿಸಿತ್ತು.

ಕಾನೂನು ತಜ್ಞರೊಂದಿಗೆ ಮಹತ್ವದ ಸಮಾಲೋಚನೆ

ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯದ ಸಮನ್ಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ,  ಕಾನೂನು ತಜ್ಞರ ಜತೆ ಯಡಿಯೂರಪ್ಪ ಹಾಗು ವಿಜಯೇಂದ್ರ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಕಾರ್ಯತಂತ್ರ ರೂಪಿಸಲು ಅವರು ಕಾನೂನು ತಜ್ಞರು ಮತ್ತು ವಕೀಲರೊಂದಿಗೆ  ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ವಿಚಾರಣಾ ನ್ಯಾಯಾಲಯದ ಸಮನ್ಸ್‌ನಿಂದಾಗಿ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗುವ ಆತಂಕವಿದೆ. ಪ್ರಕರಣದ ವಿಚಾರಣೆ ಮುಂದುವರೆಯುವ ಸಾಧ್ಯತೆ ಮತ್ತು ಸಮನ್ಸ್‌ನ ಕಾನೂನಾತ್ಮಕ ಪರಿಣಾಮಗಳ ಕುರಿತು ಅವರು ಆತಂಕಗೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಈ ಪ್ರಕರಣವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷವು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆಯ ಕುರಿತು ಬಿ.ಎಸ್‌ ಯಡಿಯೂರಪ್ಪ  ಮತ್ತು ವಿಜಯೇಂದ್ರ ಅವರಿಗೆ ಆತಂಕ ಕಾಡಿದೆ ಎಂದು ತಿಳಿದುಬಂದಿದೆ. 

ಏನಿದು ಪೋಕ್ಸೋ ಪ್ರಕರಣ?

ಕಳೆದ 2024 ಮಾರ್ಚ್‌ 14ರ ರಾತ್ರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವ ನಗರ ಠಾಣೆಗೆ ಆಗಮಿಸಿದ್ದ ಮಹಿಳೆಯೊಬ್ಬರು ದೂರು ನೀಡಿದ್ದರು. ತಮ್ಮ 17 ವರ್ಷದ ಮಗಳ ಮೇಲೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು. ಫೆಬ್ರವರಿ 2ರಂದು ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ತನ್ನ ಮಗಳ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಯನ್ನು ತಮ್ಮ ಕೊಠಡಿಗೆ ಕರೆದೊಯ್ದು ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ನಂತರ ಇದನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು ಮತ್ತು ಸಿಐಡಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಗಂಭೀರತೆ ಮತ್ತು ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ, ಸರ್ಕಾರವು ತನಿಖೆಯನ್ನು ರಾಜ್ಯ ಅಪರಾಧ ಸಿಐಡಿಗೆ ವರ್ಗಾಯಿಸಿತ್ತು. ಸಿಐಡಿ ತನಿಖೆ ನಡೆಸಿ, ಯಡಿಯೂರಪ್ಪ ಮತ್ತು ಇತರ ಮೂವರು ಸಹ-ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.  ಯಡಿಯೂರಪ್ಪ ಅವರು ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿ, ನಂತರ ಸುಮ್ಮನಿರಲು ಹಣವನ್ನೂ ನೀಡಿದ್ದರು. ಅಲ್ಲದೆ, ಸಹ-ಆರೋಪಿಗಳಾದ ಅವರ ಸಹಾಯಕರು ದೂರುದಾರ ಮಹಿಳೆಯ ಮೇಲೆ ಒತ್ತಡ ಹೇರಿ, ಘಟನೆಯ ಕುರಿತು ದೂರುದಾರರು ದಾಖಲಿಸಿದ್ದ ವಿಡಿಯೋವನ್ನು ಡಿಲೀಟ್‌ ಮಾಡಲು ಪ್ರಯತ್ನಿಸಿದ್ದರು ಎಂದೂ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ, ದೂರುದಾರ ಮಹಿಳೆ ಶ್ವಾಸಕೋಶದ ಕ್ಯಾನ್ಸರ್‌ನಿಂದಾಗಿ ನಿಧನ ಹೊಂದಿದ್ದರು. ಬಳಿಕ ಪ್ರಕರಣದ ಶೀಘ್ರ ವಿಲೇವಾರಿಗಾಗಿ ಸಂತ್ರಸ್ತೆಯ ಸಹೋದರ ಹೋರಾಟ ಮುಂದುವರೆಸಿದ್ದರು. 

Tags:    

Similar News