ಬೆಂಗಳೂರು ಟೆಕ್ ಸಮ್ಮಿಟ್: ಎಲ್ಲರ ಗಮನ ಸೆಳೆಯು ಕಿಯೋ' ಕಂಪ್ಯೂಟರ್ನ ಮಾತನಾಡುವ 'ಬುದ್ಧ'
ʼಕಿಯೋʼ ಕಂಪ್ಯೂಟರ್‌ನಲ್ಲಿ ʼಲಿನಕ್ಸ್ʼ ತಂತ್ರಾಂಶವನ್ನು ಬಳಸಲಾಗಿದೆ. ಇದು ಓಪನ್ ಸೋರ್ಸ್ ಆಗಿರುವುದರಿಂದ ಹಣ ಪಾವತಿ ಮಾಡದೆ ಉಚಿತವಾಗಿ ಬಳಸಬಹುದು. ಅಪ್‌ಗ್ರೇಡ್ ,ಪ್ಯಾಕೇಜ್‌ಗಳು ಕೂಡ ಉಚಿತ.
ಕೃತಕ ಬುದ್ಧಿಮತ್ತೆ ಹೊಂದಿರುವ ಕಿಯೊ ಕಂಪ್ಯೂಟರ್ (ಚಿತ್ರ- ರಘು ಆರ್ ಡಿ)
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರದಿಂದ ಆರಂಭವಾದ ಮೂರು ದಿನಗಳ 'ಬೆಂಗಳೂರು ತಂತ್ರಜ್ಞಾನ ಶೃಂಗಸಭೆ' (BTS-2025), ಜಾಗತಿಕ ತಂತ್ರಜ್ಞಾನದ ಅನಾವರಣಕ್ಕೆ ವೇದಿಕೆಯಾಗಿದೆ. ವಿಶ್ವದ ವಿವಿಧ ದೇಶಗಳ ಸ್ಟಾರ್ಟ್‌ಅಪ್ ಕಂಪನಿಗಳು ತಮ್ಮ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತಿದ್ದರೂ, ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ನಮ್ಮ ರಾಜ್ಯದ ಹೆಮ್ಮೆಯ 'ಕಿಯೋ' ಕಂಪ್ಯೂಟರ್ ಮೇಲೆ.
'ಕಿಯೋ' ವೈಶಿಷ್ಟ್ಯಗಳೇನು?
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಅಭಿವೃದ್ಧಿಪಡಿಸಿರುವ 'ಕಿಯೋ' ಕಂಪ್ಯೂಟರ್, ತನ್ನ ಕಾರ್ಯಕ್ಷಮತೆ ಮತ್ತು ಬೆಲೆಯಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಕೇವಲ ಶೈಕ್ಷಣಿಕ ಉದ್ದೇಶಕ್ಕಷ್ಟೇ ಅಲ್ಲದೆ, ಆನ್‌ಲೈನ್ ಪಾವತಿ, ವಿಡಿಯೋ ವೀಕ್ಷಣೆ, ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇದನ್ನು ಬಳಸಬಹುದಾಗಿದೆ.
ಕಿಯೋನಿಕ್ಸ್‌ನ ತಾಂತ್ರಿಕ ಸಿಬ್ಬಂದಿ ರವಿಕಿರಣ್ ಕೆ. ಅವರ ಪ್ರಕಾರ, "ಇತರ ಆರ್ಕಿಟೆಕ್ಚರ್‌ಗಳಿಗೆ ರಾಯಲ್ಟಿ ಹಣ ನೀಡಬೇಕು. ಆದರೆ 'ಕಿಯೋ' ಕಂಪ್ಯೂಟರ್‌ನಲ್ಲಿ 'ರಿಸ್ಕ್ ವಿ ' (RISC-V) ಎಂಬ ಓಪನ್-ಸೋರ್ಸ್ ಆರ್ಕಿಟೆಕ್ಚರ್ ಬಳಸಿರುವುದರಿಂದ ರಾಯಲ್ಟಿ ನೀಡುವ ಅಗತ್ಯವಿಲ್ಲ. ಇದು ಕಡಿಮೆ ಬೆಲೆಗೆ ಕಂಪ್ಯೂಟರ್ ಒದಗಿಸಲು ಪ್ರಮುಖ ಕಾರಣ."
ಆಫ್‌ಲೈನ್ 'ಬುದ್ಧ' AI
'ಕಿಯೋ'ದ ಪ್ರಮುಖ ಆಕರ್ಷಣೆಯೇ 'ಬುದ್ಧ' ಎಂಬ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ. ಇದರ ವಿಶೇಷತೆ ಎಂದರೆ, ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ಇದು ಕಾರ್ಯನಿರ್ವಹಿಸುತ್ತದೆ. ರಾಜ್ಯ ಪಠ್ಯಕ್ರಮವನ್ನು ಆಧರಿಸಿರುವ 'ಬುದ್ಧ', 8 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಪಾಠಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ನಗುಮುಖದಿಂದಲೇ ಉತ್ತರಿಸುತ್ತಾನೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಕಲಿಯಲು ಅನುಕೂಲವಾಗುತ್ತದೆ.
ಉಚಿತ 'ಲಿನಕ್ಸ್' ತಂತ್ರಾಂಶ
ದೇಶದಲ್ಲಿ ಹೆಚ್ಚಾಗಿ ಮೈಕ್ರೋಸಾಫ್ಟ್ ವಿಂಡೋಸ್ ಬಳಸಲಾಗುತ್ತದೆ. ಆದರೆ 'ಕಿಯೋ'ದಲ್ಲಿ 'ಲಿನಕ್ಸ್' ತಂತ್ರಾಂಶವನ್ನು ಬಳಸಲಾಗಿದೆ. ಇದು ಓಪನ್-ಸೋರ್ಸ್ ಆಗಿರುವುದರಿಂದ, ಬಳಕೆದಾರರು ಹಣ ಪಾವತಿಸದೆ ಉಚಿತವಾಗಿ ಬಳಸಬಹುದು. ಅಪ್‌ಗ್ರೇಡ್ ಮತ್ತು ಪ್ಯಾಕೇಜ್‌ಗಳು ಉಚಿತವಾಗಿ ಸಿಗುವುದರಿಂದ ಹಣ ಉಳಿತಾಯವಾಗುತ್ತದೆ ಮತ್ತು ಇದು ಹೆಚ್ಚು ವರ್ಷ ಬಾಳಿಕೆ ಬರುತ್ತದೆ.
ಸೈಬರ್ ಭದ್ರತೆ ಮತ್ತು ಸುಲಭ ಸೇವೆ
ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ದಾಳಿಗಳಿಂದ ರಕ್ಷಣೆ ನೀಡಲು 'ಕಿಯೋ'ದಲ್ಲಿ 'ಬೂಟ್‌ಲೋಡರ್ಸ್' ಎಂಬ ಭದ್ರತಾ ತಂತ್ರಾಂಶವನ್ನು ಅಳವಡಿಸಲಾಗಿದೆ. ಇನ್ನು ದುರಸ್ತಿ ಮತ್ತು ಸೇವೆಗೆ ಬೆಂಗಳೂರಿಗೆ ಅಲೆಯುವ ಅಗತ್ಯವಿಲ್ಲ. ಮೊಬೈಲ್‌ನಂತೆಯೇ 'ಓವರ್-ದಿ-ಏರ್' (OTA) ತಂತ್ರಜ್ಞಾನದ ಮೂಲಕ ಅಪ್‌ಡೇಟ್ ಮತ್ತು ಪ್ಯಾಚಪ್ ಮಾಡಬಹುದು. ಮೊಬೈಲ್‌ನಂತೆ ಸಿಮ್ ಕಾರ್ಡ್ ಬಳಸಿ ಇಂಟರ್‌ನೆಟ್ ಬಳಸುವ ಸೌಲಭ್ಯವೂ ಇದರಲ್ಲಿದೆ.
ಬೇಡಿಕೆ ಮತ್ತು ಭವಿಷ್ಯದ ಯೋಜನೆ
'ಕಿಯೋ' ಕಂಪ್ಯೂಟರ್‌ಗಾಗಿ ಈಗಾಗಲೇ ಮುಂಗಡ ಕಾಯ್ದಿರಿಸುವಿಕೆ ಆರಂಭವಾಗಿದ್ದು, 500ಕ್ಕೂ ಹೆಚ್ಚು ಯುನಿಟ್‌ಗಳಿಗೆ ಬೇಡಿಕೆ ಬಂದಿದೆ. ಮೊದಲ ಹಂತದಲ್ಲಿ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಇದನ್ನು ತಲುಪಿಸಲಾಗುವುದು. ಸದ್ಯಕ್ಕೆ ಗುತ್ತಿಗೆ ಆಧಾರದಲ್ಲಿ ತಯಾರಿಸಲಾಗುತ್ತಿದ್ದು, ಬೇಡಿಕೆ ಹೆಚ್ಚಾದಂತೆ ರಾಜ್ಯದಲ್ಲೇ ಪೂರ್ಣ ಪ್ರಮಾಣದ ಉತ್ಪಾದನಾ ಘಟಕ ಸ್ಥಾಪಿಸುವ ದೀರ್ಘಕಾಲೀನ ಗುರಿಯನ್ನು ಕಿಯೋನಿಕ್ಸ್ ಹೊಂದಿದೆ.