ಸುಪ್ರೀಂ ಕೋರ್ಟ್​​ ಹೆಸರಿನಲ್ಲಿ ತಪ್ಪು ತೀರ್ಪುಗಳ ಉಲ್ಲೇಖ; ಬೆಂಗಳೂರು ಸಿವಿಲ್ ನ್ಯಾಯಾಧೀಶರ ವಿರುದ್ಧ ತನಿಖೆಗೆ ಆದೇಶ

ಈ ಸಿವಿಲ್ ಕೋರ್ಟ್ ತೀರ್ಪು, ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯು ಸಲ್ಲಿಸಿದ ರಿವಿಶನ್ ಅರ್ಜಿಗೆ ಸಂಬಂಧಿಸಿದ್ದಾಗಿದ್ದು, ಟ್ರಯಲ್ ಕೋರ್ಟ್‌ನ ನವೆಂಬರ್ 25, 2024 ರ ಆದೇಶವನ್ನು ಪ್ರಶ್ನಿಸಿದ್ದಾಗಿತ್ತು.;

Update: 2025-03-27 07:52 GMT

ತಮ್ಮ ತೀರ್ಪಿನಲ್ಲಿ ಅಸ್ತಿತ್ವದಲ್ಲಿಲ್ಲದ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ್ದಕ್ಕಾಗಿ ಬೆಂಗಳೂರಿನ ಸಿವಿಲ್ ಕೋರ್ಟ್ ನ್ಯಾಯಾಧೀಶರೊಬ್ಬರ ವಿರುದ್ಧ ಕರ್ನಾಟಕ ಹೈಕೋರ್ಟ್ ತನಿಖೆಗೆ ಆದೇಶಿಸಿದೆ.

ಮಾರ್ಚ್ 24 ರಂದು ನ್ಯಾಯಮೂರ್ತಿ ಆರ್. ದೇವದಾಸ್ ಅವರು ನೀಡಿದ ಆದೇಶವೊಂದರಲ್ಲಿ, ಸಿವಿಲ್ ನ್ಯಾಯಾಧೀಶರ  ನಡವಳಿಕೆ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಸಿವಿಲ್​ ನ್ಯಾಯಾಧೀಶರು, ಸುಪ್ರೀಂ ಕೋರ್ಟ್​ ನೀಡಿದೆ ಎಂದು ಎರಡು ತೀರ್ಪುಗಳನ್ನು ಉಲ್ಲೇಖಿಸಿದ್ದು, ಅವುಗಳನ್ನು ಸುಪ್ರೀಂ ಕೋರ್ಟ್ ಅಥವಾ ಯಾವುದೇ ಇತರ ನ್ಯಾಯಾಲಯ ನೀಡಿಲ್ಲ. ಹೀಗಾಗಿ ತನಿಖೆ ಮತ್ತು ಸೂಕ್ತ ಕ್ರಮದ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಆದೇಶದ ಪ್ರತಿಯನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇರಿಸಿ ಮತ್ತಷ್ಟು ಕ್ರಮಕ್ಕಾಗಿ ಹೈಕೋರ್ಟ್ ಸೂಚನೆ ನೀಡಿದೆ.

ಈ ಸಿವಿಲ್ ಕೋರ್ಟ್ ತೀರ್ಪು ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ ಸಂಸ್ಥೆಯು ಸಲ್ಲಿಸಿದ ರಿವಿಶನ್ ಅರ್ಜಿಗೆ ಸಂಬಂಧಿಸಿದ್ದಾಗಿದ್ದು, ಟ್ರಯಲ್ ಕೋರ್ಟ್‌ನ ನವೆಂಬರ್ 25, 2024 ರ ಆದೇಶವನ್ನು ಪ್ರಶ್ನಿಸಿದ್ದಾಗಿತ್ತು. ಪ್ರಕರಣದಲ್ಲಿ, ಮಂತ್ರಿ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯು ಷೇರುಗಳನ್ನು ಒತ್ತೆ ಇರಿಸಿ ಸಾಲ ಪಡೆದು ನಂತರ ಸಾಲದ ಮರುಪಾವತಿ ಪ್ರಕ್ರಿಯೆಯಲ್ಲಿ ವಿಫಲವಾಗಿತ್ತು. ಸಾಲಗಾರರು ಸೆಪ್ಟೆಂಬರ್ 2024ರಲ್ಲಿ ಒತ್ತೆ ಇರಿಸಿದ ಷೇರುಗಳನ್ನು ವರ್ಗಾಯಿಸುವಂತೆ ನೋಟಿಸ್ ಜಾರಿ ಮಾಡಿದಾಗ, ಸಂಸ್ಥೆಯು ಮೊದಲಿಗೆ ವಾಣಿಜ್ಯ ಮೊಕದ್ದಮೆ ದಾಖಲಿಸಿ ತಡೆಯಾಜ್ಞೆ ಕೋರಿತ್ತು. ಆದರೆ, ಅಕ್ಟೋಬರ್ 1, 2024 ರಂದು, ಕೋರ್ಟ್ ಅನುಮತಿ ಪಡೆಯದೆ ಆ ವಾಣಿಜ್ಯ ಮೊಕದ್ದಮೆ ಹಿಂಪಡೆದು ಅದೇ ವಿಷಯವನ್ನು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಸಿವಿಲ್ ಪ್ರಕರಣವಾಗಿ ಮರುದಾಖಲಿಸಿತ್ತು.

ಸಾಲಗಾರರು ಒಂದು ಮಧ್ಯಂತರ ಅರ್ಜಿ ಸಲ್ಲಿಸಿ, ಈ ಪ್ರಕರಣವು ವಾಣಿಜ್ಯ ಸ್ವರೂಪದ್ದಾಗಿದ್ದು, ಸಿವಿಲ್ ಕೋರ್ಟ್‌ಗೆ ಅಧಿಕಾರ ವ್ಯಾಪ್ತಿ ಇಲ್ಲ ಎಂದು ವಾದಿಸಿದ್ದರು. ಆದರೆ, ಸಿವಿಲ್ ನ್ಯಾಯಾಧೀಶರು ಈ ವಾದವನ್ನು ತಿರಸ್ಕರಿಸಿದ್ದು, ಈ ವೇಳೆ ಮೂರು ತೀರ್ಪುಗಳನ್ನು ಉಲ್ಲೇಖಿಸಿದ್ದರು. ಅವುಗಳಲ್ಲಿ ಎರಡು ಸುಪ್ರೀಂ ಕೋರ್ಟ್ ತೀರ್ಪುಗಳೆಂದು ಹೇಳಿದ್ದರು. ಆದರೆ, ಅವರು ಉಲ್ಲೇಖಿಸಿರುವ ತೀರ್ಪುಗಳು ಯಾವುದೇ ಕಾನೂನು ದಾಖಲೆಗಳಲ್ಲಿ ಅಸ್ತಿತ್ವದಲ್ಲಿಲ್ಲ ಎಂದು ಕಂಡುಬಂದಿದೆ.

ಹೈಕೋರ್ಟ್‌ ಹೇಳಿಕೆಯೇನು?

ಕಾನೂನು ಪ್ರಕ್ರಿಯೆ ತಪ್ಪಿಸಲು ಪ್ರತಿವಾದಿಗಳು "ಚತುರ ತಂತ್ರ" ಬಳಸಿದ್ದಾರೆ ಎಂದು ಹೈಕೋರ್ಟ್ ಗಮನಿಸಿದೆ. ಮರುದಾಖಲಾದ ಪ್ರಕರಣದಲ್ಲಿ ಕೆಲವರನ್ನು ಸೇರಿಸಲಾಗಿದ್ದು, ಅವರು ಮೂಲ ವಿವಾದದಲ್ಲಿ ಇರಲಿಲ್ಲ ಎಂಬುದನ್ನು ಕಂಡುಕೊಂಡಿದೆ. 

ಈ ಬಗ್ಗೆಕಳವಳ ವ್ಯಕ್ತಪಡಿಸಿದರು ನ್ಯಾಯಮೂರ್ತಿ ದೇವದಾಸ್, "ಕೆಲವೊಮ್ಮೆ ಚ್ಯಾಟ್‌ಜಿಪಿಟಿಯಂತಹ ಎಐ ಸಾಧನಗಳು ಕಾಲ್ಪನಿಕ ಫಲಿತಾಂಶಗಳನ್ನು ಸೃಷ್ಟಿಸುತ್ತವೆ. ಇಲ್ಲಿ ಏನಾಯಿತು ಎಂದು ನನಗೆ ಗೊತ್ತಿಲ್ಲ, ಆದರೆ ಈ ತೀರ್ಪುಗಳು ಅಸ್ತಿತ್ವದಲ್ಲಿಲ್ಲ," ಎಂದು ಟೀಕಿಸಿದ್ದಾರೆ. 

Tags:    

Similar News