'ದೆಹಲಿ ಪರೇಡ್'ಗೆ ಖರ್ಗೆ ಗರಂ: ಒಗ್ಗಟ್ಟು ಮುರಿದರೆ ಸಹಿಸಲ್ಲ ಎಂದು ಖಡಕ್ ಎಚ್ಚರಿಕೆ

ಹೆಚ್ಚಿನ ಶಾಸಕರನ್ನು ಹೊಂದಿರುವ ಸುಭದ್ರ ಸರ್ಕಾರವಿದ್ದರೂ ಈ ರೀತಿ ಗೊಂದಲ ಮಾಡಿಕೊಳ್ಳುತ್ತಿರುವುದು ಸರಿಯೇ ? ಇಲ್ಲಿ ಯಾವೊಬ್ಬ ವ್ಯಕ್ತಿಯಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ, ಎಲ್ಲರ ಶ್ರಮವೂ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Update: 2025-11-22 06:20 GMT

ಡಿಸಿಎಂ ಡಿ.ಕೆ. ಶಿವಕುಮಾರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ

Click the Play button to listen to article

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರ ಮತ್ತು ಸಂಪುಟ ಪುನಾರಚನೆಯ ಚರ್ಚೆಗಳು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಆಡಳಿತಾರೂಢ ಪಕ್ಷದಲ್ಲಿನ ಗೊಂದಲ ತಾರಕಕ್ಕೇರಿದೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರ ಬ್ಯಾಟಿಂಗ್ ಮಾಡಲು ಅವರ ಬೆಂಬಲಿತ ಶಾಸಕರು ಮತ್ತು ಸಚಿವರು ದೆಹಲಿಗೆ ತೆರಳಿದ್ದ ನಡೆಗೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ಯಾತ್ರೆಗೆ ಹೈಕಮಾಂಡ್ ಕೆಂಗಣ್ಣು

ಡಿ.ಕೆ. ಶಿವಕುಮಾರ್ ಪರವಾಗಿ ದೆಹಲಿಯಲ್ಲಿ ನಡೆದ ಶಕ್ತಿ ಪ್ರದರ್ಶನದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸುಭದ್ರ ಬಹುಮತ ಹೊಂದಿರುವ ಸರ್ಕಾರವಿದ್ದರೂ, ಅನಗತ್ಯವಾಗಿ ಗುಂಪುಗೂಡಿಕೊಂಡು ದೆಹಲಿಗೆ ಬರುವ ಔಚಿತ್ಯವೇನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಇಂತಹ ನಡೆಗಳಿಂದ ಪ್ರತಿಪಕ್ಷಗಳಿಗೆ ಟೀಕೆ ಮಾಡಲು ಅಸ್ತ್ರ ಒದಗಿಸಿದಂತಾಗುತ್ತದೆ. ಅಲ್ಲದೆ, ಮಾಧ್ಯಮಗಳ ಮುಂದೆ ಶಕ್ತಿ ಪ್ರದರ್ಶನದಂತೆ ಬಿಂಬಿಸಿಕೊಳ್ಳುವುದು ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಲ್ಲರ ಸಾಮೂಹಿಕ ಶ್ರಮ ಕಾರಣವೇ ಹೊರತು, ಕೇವಲ ಒಬ್ಬ ವ್ಯಕ್ತಿಯಿಂದಲ್ಲ ಎಂದು ಖರ್ಗೆ ಅವರು ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಏನೇ ಭಿನ್ನಾಭಿಪ್ರಾಯವಿದ್ದರೂ ಪಕ್ಷದ ಚೌಕಟ್ಟಿನಲ್ಲಿಯೇ ಚರ್ಚಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಸಿಎಂ ಆಪ್ತ ವಲಯದಲ್ಲಿ ಸಂಚಲನ: ಪ್ರತಿತಂತ್ರಕ್ಕೆ ಸಿದ್ಧತೆ

ಒಂದೆಡೆ ಡಿಕೆಶಿ ಬೆಂಬಲಿಗರು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯ ಕೂಡ ಎಚ್ಚೆತ್ತುಕೊಂಡಿದೆ. ಶುಕ್ರವಾರ (ನ. 21) ರಾತ್ರಿ ಸಿಎಂ ಆಪ್ತ ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಎಚ್.ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್ ಹಾಗೂ ಕೆ. ವೆಂಕಟೇಶ್ ಅವರು ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದ್ದಾರೆ. ಈ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮುಂದಿನ ನಡೆಯ ಬಗ್ಗೆ ಸಮಾಲೋಚನೆ ನಡೆಸಲು ತೀರ್ಮಾನಿಸಿದ್ದಾರೆ.

ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿರುವ ಬೆನ್ನಲ್ಲೇ, ಶನಿವಾರ (ನ. 22) ಬೆಂಗಳೂರಿನ ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಲಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕವಾಗಿ ಖರ್ಗೆ ಅವರನ್ನು ಭೇಟಿಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಡಿಕೆಶಿ ಬಣದ ದೆಹಲಿ ಭೇಟಿಯ ಬಗ್ಗೆ ಖರ್ಗೆ ಬಳಿ ಪ್ರಸ್ತಾಪಿಸುವ ಸಾಧ್ಯತೆಯಿದೆ. ನಂತರ ಡಿಕೆಶಿ ಕೂಡ ಖರ್ಗೆಯವರನ್ನು ಭೇಟಿಯಾಗಿ ಅಧಿಕಾರ ಹಸ್ತಾಂತರದ ಕುರಿತು ತಮ್ಮ ವಾದ ಮಂಡಿಸುವ ನಿರೀಕ್ಷೆಯಿದೆ.

'ಐದು ವರ್ಷ ನಾನೇ' ವರ್ಸಸ್ 'ಆಲ್ ದಿ ಬೆಸ್ಟ್'

ನಾಯಕತ್ವದ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ನಡುವಿನ ವಾಕ್ಸಮರ ಪರೋಕ್ಷವಾಗಿ ಮುಂದುವರಿದಿದೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, "ಐದು ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತೇನೆ ಹಾಗೂ ಮುಂದಿನ ಎರಡೂ ಬಜೆಟ್‌ಗಳನ್ನು ನಾನೇ ಮಂಡಿಸುತ್ತೇನೆ," ಎಂದು ಆತ್ಮವಿಶ್ವಾಸದಿಂದ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, "ಐ ವಿಶ್ ಹಿಮ್ ಆಲ್ ದಿ ಬೆಸ್ಟ್" (ಅವರಿಗೆ ಒಳ್ಳೆಯದಾಗಲಿ) ಎಂದು ಮಾರ್ಮಿಕವಾಗಿ ನುಡಿಯುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ತಳ್ಳಿದ್ದಾರೆ. ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ನ ಆಂತರಿಕ ಕಚ್ಚಾಟವು ಹೈಕಮಾಂಡ್‌ಗೆ ದೊಡ್ಡ ತಲೆನೊವಾಗಿ ಪರಿಣಮಿಸಿದೆ.

Tags:    

Similar News