ಜೈಲು ಜಾಗೃತಿ: Part-3| ಬಂಧಿಗಳಿಗೆ ರಾಜಾತಿಥ್ಯ, ಅಕ್ರಮಗಳ ಕೂಪವಾದ ಪರಪ್ಪನ ಅಗ್ರಹಾರ ಜೈಲು !
ಜೈಲಿನೊಳಗೆ ಮೊಬೈಲ್ ಫೋನ್‌ಗಳ ಬಳಕೆ, ಮಾದಕ ವಸ್ತುಗಳ ಸಾಗಾಟ, ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕೈದಿಗಳು ಕಾರಾಗೃಹದಿಂದಲೇ ತಮ್ಮ ಅಪರಾಧ ಸಾಮ್ರಾಜ್ಯವನ್ನು ನಿಯಂತ್ರಿಸುವುದು ಸಾಮಾನ್ಯವಾಗಿದೆ.
ಕಾರಾಗೃಹಗಳು ಕೈದಿಗಳಿಗೆ ಶಿಕ್ಷೆಗಿಂತಲೂ ಪುನರ್ವಸತಿಯ ಸ್ಥಳಗಳಾಗಬೇಕು ಎನ್ನುವುದು ದೇಶದ ನ್ಯಾಯತಂತ್ರದ ಮೂಲಭೂತ ತತ್ವ. ಆದರೆ, ರಾಜ್ಯದ ಕಾರಾಗೃಹಗಳ ಪ್ರಸ್ತುತ ವಾಸ್ತವ ಸ್ಥಿತಿ ಈ ಧ್ಯೇಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಬಹುತೇಕ ಕಾರಾಗೃಹಗಳು ಮನಃ ಪರಿವರ್ತನೆಯ ಸ್ಥಳವಾಗಿರದೇ ಅಪರಾಧ ಕೃತ್ಯದ ಪಾಠಶಾಲೆಗಳಂತಾಗಿವೆ.!
ರಾಜಧಾನಿ ಬೆಂಗಳೂರಿನ ಪರಪ್ಪನ ಅಗ್ರಹಾರ, ಬೆಳಗಾವಿಯ ಹಿಂಡಲಗಾ, ಮಂಗಳೂರು ಮತ್ತು ಮೈಸೂರು ಕೇಂದ್ರ ಕಾರಾಗೃಹಗಳು ಅಕ್ರಮಗಳ ಕೇಂದ್ರಗಳಾಗಿ ಪರಿಣಮಿಸಿವೆ. ಮೊಬೈಲ್ ಫೋನ್‌ಗಳು, ಡ್ರಗ್ಸ್, ಹಣದ ವ್ಯವಹಾರಗಳು, ಗೂಗಲ್ ಪೇ ಮೂಲಕ ಹಫ್ತಾ ವಸೂಲಿ, ಅಧಿಕಾರಿಗಳ ಲಂಚದ ಆರೋಪಗಳೆಲ್ಲವು ಜೈಲುಗಳ ಮೂಲ ಉದ್ದೇಶವೇ ಮಸುಕಾಗಿಸುವಂತಾಗಿದೆ.
ರಾಜ್ಯದ ಕಾರಾಗೃಹಗಳು ಅಕ್ರಮಗಳ, ಭ್ರಷ್ಟಾಚಾರದ ಮತ್ತು ಐಷಾರಾಮಿ ಜೀವನದ ಕೇಂದ್ರವಾಗಿಯೂ ಕುಖ್ಯಾತಿ ಪಡೆದಿದೆ. ಎಷ್ಟೇ ಕಠಿಣ ಕ್ರಮಗಳು, ಅಧಿಕಾರಿಗಳ ವರ್ಗಾವಣೆ, ಅಮಾನತು ಮತ್ತು ದಾಳಿಗಳು ನಡೆದರೂ, ಜೈಲಿನೊಳಗಿನ ಅಕ್ರಮಗಳ ಜಾಲವನ್ನು ಬೇಧಿಸಲು ಸಾಧ್ಯವಾಗದಿರುವುದು ಆತಂಕಕಾರಿ ಸಂಗತಿಯಾಗಿದೆ. ಜೈಲಿನೊಳಗೆ ಮೊಬೈಲ್ ಫೋನ್‌ಗಳ ಬಳಕೆ, ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕೈದಿಗಳು ಜೈಲಿನಿಂದಲೇ ತಮ್ಮ ಅಪರಾಧ ಸಾಮ್ರಾಜ್ಯವನ್ನು ನಿಯಂತ್ರಿಸುವುದು, ಬೆದರಿಕೆ ಕರೆಗಳನ್ನು ಮಾಡುವುದು ಮತ್ತು ವ್ಯವಹಾರಗಳನ್ನು ನಡೆಸುವುದು ಸಾಮಾನ್ಯವಾಗಿದೆ.
ಇತ್ತೀಚೆಗೆ ನಡೆದ ದಾಳಿಗಳಲ್ಲಿ ನೂರಾರು ಮೊಬೈಲ್‌ಗಳು, ಸಿಮ್ ಕಾರ್ಡ್‌ಗಳು, ಗಾಂಜಾ ಮತ್ತು ಇತರ ಮಾದಕ ವಸ್ತುಗಳು ಪತ್ತೆಯಾಗಿವೆ. ಈ ಎಲ್ಲಾ ಅಕ್ರಮಗಳ ಹಿಂದೆ ಜೈಲು ಸಿಬ್ಬಂದಿ ಮತ್ತು ಕೆಲವು ಹಿರಿಯ ಅಧಿಕಾರಿಗಳ ಪಾತ್ರವಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಹಣದ ಆಮಿಷಕ್ಕಾಗಿ ಕೈದಿಗಳಿಗೆ ಅಕ್ರಮ ಸೌಲಭ್ಯ ಒದಗಿಸುವುದು, ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ತಲುಪಿಸುವುದು ಮತ್ತು ಕೈದಿಗಳ ಅಕ್ರಮ ಚಟುವಟಿಕೆಗಳಿಗೆ ಕಣ್ಮುಚ್ಚಿ ಕುಳಿತುಕೊಳ್ಳುವ ಆರೋಪಗಳು ಪದೇ ಪದೇ ಕೇಳಿಬರುತ್ತಿವೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ, ಛಾಪಾ ಕಾಗದ ಹಗರಣದ ಅಬ್ದುಲ್ ಕರೀಂ ತೆಲಗಿ, ನಟ ದರ್ಶನ್ ಸೇರಿದಂತೆ ಪ್ರಭಾವಿ ಮತ್ತು ಶ್ರೀಮಂತ ಕೈದಿಗಳಿಗೆ ಜೈಲು ಶಿಕ್ಷೆ ಎನ್ನುವುದು ಕೇವಲ ನಾಮಕಾವಾಸ್ತೆ. ಹಣ ಕೊಟ್ಟರೆ ಅವರಿಗೆ ವಿಶೇಷ ಬ್ಯಾರಕ್‌ಗಳು, ಮನೆಯಿಂದ ಬರುವ ಊಟ, ಮೊಬೈಲ್ ಬಳಕೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಲಭ್ಯವಾಗುತ್ತವೆ. ಜೈಲಿನ ನಿಯಮಗಳು ಕೇವಲ ಬಡ ಮತ್ತು ಪ್ರಭಾವವಿಲ್ಲದ ಕೈದಿಗಳಿಗೆ ಮಾತ್ರ ಸೀಮಿತ ಎಂಬ ಆರೋಪ ವ್ಯಾಪಕವಾಗಿದೆ.
ಜೈಲಿನೊಳಗೆ ಗ್ಯಾಂಗ್‌ವಾರ್‌ಗಳು ಮತ್ತು ಕೈದಿಗಳ ನಡುವಿನ ಘರ್ಷಣೆಗಳು ಸಾಮಾನ್ಯ ಘಟನೆಗಳಾಗಿವೆ. ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಮತ್ತು ಅಕ್ರಮ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸಲು ಪ್ರತಿಸ್ಪರ್ಧಿ ಗುಂಪುಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಹಲವು ಉದಾಹರಣೆಗಳಿವೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಲವಾರು ವೀಡಿಯೊಗಳು ಜೈಲಿನೊಳಗಿನ ಕರಾಳ ಸತ್ಯವನ್ನು ಬಯಲು ಮಾಡಿವೆ. ಈ ವಿಡಿಯೊಗಳಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಯುವಕರನ್ನು ನೇಮಕ ಮಾಡುತ್ತಿದ್ದ ಆರೋಪಿ, ಸರಣಿ ಅತ್ಯಾಚಾರಿ ಮತ್ತು ಕೊಲೆಗಡುಕ ಉಮೇಶ್ ರೆಡ್ಡಿ, ಚಿನ್ನ ಕಳ್ಳಸಾಗಣೆ ಆರೋಪಿ, ನಟ ತರುಣ್ ಸೇರಿದಂತೆ ಹಲವು ಕೈದಿಗಳು ಮೊಬೈಲ್ ಫೋನ್ ಬಳಸುತ್ತಿರುವುದು ಬಹಿರಂಗಗೊಂಡಿದೆ.
ಮತ್ತೊಂದು ವಿಡಿಯೊದಲ್ಲಿ ಕೈದಿಗಳು ಮದ್ಯಪಾನ ಸೇವಿಸುತ್ತಾ, ತಟ್ಟೆ ಮತ್ತು ಲೋಟಗಳನ್ನು ಬಾರಿಸುತ್ತಾ ನೃತ್ಯ ಮಾಡುತ್ತಾ ಪಾರ್ಟಿ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಇದು ರಾಷ್ಟ್ರ ಮಟ್ಟದಲ್ಲಿ ಸಂಚಲನ ಉಂಟು ಮಾಡಿವೆ. ಈ ಘಟನೆಗಳು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಜೈಲಿನ ಆಡಳಿತ ಮತ್ತು ಸರ್ಕಾರದ ಕಾರ್ಯವೈಖರಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
ಪರಪ್ಪನ ಆಗ್ರಹಾರ ಜೈಲಿನಲ್ಲಿ ಅಕ್ರಮಗಳ ಸರಮಾಲೆ
ರಾಜ್ಯದ ಅತಿ ದೊಡ್ಡ ಮತ್ತು ಹೆಚ್ಚು ಭದ್ರತೆ ಹೊಂದಿದೆ ಎನ್ನಲಾದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಅಕ್ರಮಗಳ ಸುಳಿಯಲ್ಲಿ ಸಿಲುಕಿದೆ.
ಕೈದಿಗಳಿಗೆ ರಾಜಾತಿಥ್ಯ, ಮಾದಕ ವಸ್ತುಗಳ ಸರಬರಾಜು, ಮೊಬೈಲ್ ಫೋನ್‌ಗಳ ಬಳಕೆ ಮತ್ತು ಭ್ರಷ್ಟಾಚಾರದಂತಹ ಗಂಭೀರ ಆರೋಪಗಳು ಜೈಲಿನ ಆಡಳಿತ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿವೆ. ಇತ್ತೀಚೆಗೆ ನಡೆದ ಸರಣಿ ಘಟನೆಗಳು ಮತ್ತು ಬಹಿರಂಗಗೊಂಡ ವಿಡಿಯೊಗಳು ಕಾರಾಗೃಹದ ಭದ್ರತಾ ವೈಫಲ್ಯವನ್ನು ಜಗಜ್ಜಾಹೀರುಗೊಳಿಸಿವೆ.
ನಟ ದರ್ಶನ್‌ಗೆ ರಾಜಾತಿಥ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ರೌಡಿ ಶೀಟರ್‌ಗಳೊಂದಿಗೆ ದರ್ಶನ್ ಸಿಗರೇಟ್ ಸೇದುತ್ತಿರುವ ಮತ್ತು ಕಾಫಿ ಕುಡಿಯುತ್ತಿರುವ ಫೋಟೋಗಳು ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ರಾಜ್ಯದಲ್ಲಿ ವಿವಾದಗಳು ಸೃಷ್ಟಿಗಳ ಬಳಿಕ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಯಿತು. ಕುಖ್ಯಾತ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ, ಜೈಲಿನೊಳಗೆ ತನ್ನ ಜನ್ಮದಿನವನ್ನು ಕೇಕ್ ಕತ್ತರಿಸಿ ಆಚರಿಸಿಕೊಂಡಿದ್ದರು. ಜೈಲಿನೊಳಗೆ ಹಣ ಕೊಟ್ಟರೆ ಬಿಸಿ ನೀರಿನಿಂದ ಹಿಡಿದು, ವಿಶೇಷ ಊಟ, ಮೊಬೈಲ್ ಫೋನ್ ಮತ್ತು ಮಹಿಳೆಯರನ್ನು ಕಳ್ಳಸಾಗಣೆ ಮಾಡುವಂತಹ ಅಕ್ರಮ ಸೇವೆಗಳು ಲಭ್ಯವಿವೆ ಎಂದು ಇತ್ತೀಚೆಗೆ ಬಿಡುಗಡೆಯಾದ ಕೈದಿಯೊಬ್ಬರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸೇವೆಗಳಿಗೆ ಡಿಜಿಟಲ್ ಪಾವತಿ ವೇದಿಕೆಗಳ ಮೂಲಕ ಹಣ ಸಂದಾಯವಾಗುತ್ತಿತ್ತು ಎನ್ನಲಾಗಿದೆ.
ಜೈಲಿನೊಳಗೆ ಅಕ್ರಮ ಚಟುವಟಿಕೆಗಳಿಗೆ ಕೆಲವು ಸಿಬ್ಬಂದಿಯೇ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪ బಲವಾಗಿದೆ. ಇತ್ತೀಚೆಗೆ, ಜೈಲು ವೀಕ್ಷಕನೊಬ್ಬ ತನ್ನ ಒಳಉಡುಪಿನಲ್ಲಿ ಮೊಬೈಲ್ ಫೋನ್ ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದ ಎಂದು ಹೇಳಲಾಗಿದೆ.
ಜಯಲಲಿತಾ, ಶಶಿಕಲಾಗೆ ವಿಶೇಷ ಸೌಲಭ್ಯ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿಗಳಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಮತ್ತು ಅವರ ಆಪ್ತೆ ವಿ.ಕೆ. ಶಶಿಕಲಾ ಅವರಿಗೆ ಜೈಲು ನಿಯಮಗಳನ್ನು ಗಾಳಿಗೆ ತೂರಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿತ್ತು ಎಂಬ ಆರೋಪಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದವು. ಅದರಲ್ಲೂ ವಿಶೇಷವಾಗಿ, ಶಶಿಕಲಾಗೆ ನೀಡಲಾಗಿದ್ದ 'ರಾಜಾತಿಥ್ಯ'ವು ರಾಜ್ಯದ ಬಂಧಿಖಾನೆ ಇಲಾಖೆಯಲ್ಲಿದ್ದ ಭ್ರಷ್ಟಾಚಾರವನ್ನು ಅನಾವರಣ ಮಾಡಿತ್ತು.
2014ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದಾಗ ಜೆ. ಜಯಲಲಿತಾ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಆಗ ಅವರಿಗೆ ವಿವಿಐಪಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅಂದಿನ ಕಾರಾಗೃಹದ ಡಿಐಜಿ (ಬಂಧೀಖಾನೆ) ಪಿ.ಎಂ. ಜೈಸಿಂಹ ಈ ಆರೋಪಗಳನ್ನು ತಳ್ಳಿಹಾಕಿದ್ದರು. ಜಯಲಲಿತಾ ಅವರನ್ನು ಸಾಮಾನ್ಯ ಕೈದಿಯಂತೆಯೇ ನೋಡಿಕೊಳ್ಳಲಾಗುತ್ತಿದೆ ಮತ್ತು ಅವರು ಯಾವುದೇ ವಿಶೇಷ ಸೌಲಭ್ಯಗಳಿಗೆ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವೈದ್ಯರ ಸಲಹೆಯಂತೆ ಅವರಿಗೆ ಕಬ್ಬಿಣದ ಮಂಚವೊಂದನ್ನು ಒದಗಿಸಲಾಗಿತ್ತು. ಅಲ್ಪಾವಧಿ ಶಿಕ್ಷೆಗೆ ಒಳಗಾದ ಕೈದಿಯಾಗಿರುವುದರಿಂದ ತಮ್ಮ ಸ್ವಂತ ಉಡುಪು ಧರಿಸಲು ಅವರಿಗೆ ಅವಕಾಶ ನೀಡಲಾಗಿತ್ತು. ಅವರು ಸಾಮಾನ್ಯ ಊಟ ಸೇವಿಸುತ್ತಿದ್ದರು, ಪತ್ರಿಕೆಗಳನ್ನು ಓದುತ್ತಿದ್ದರು ಮತ್ತು ಜೈಲಿನ ಆವರಣದಲ್ಲಿ ಬೆಳಿಗ್ಗೆ ವಾಯುವಿಹಾರ ಮಾಡುತ್ತಿದ್ದರು ಎಂದು ಅಧಿಕಾರಿಗಳು ಸಮಾಜಾಯಿಷಿ ನೀಡಿದ್ದರು.
ಐಪಿಎಸ್ ಅಧಿಕಾರಿಗಳ ನಡುವೆ ಸಮರ
ರಾಜ್ಯದ ಆಡಳಿತ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಘಟನೆಯೊಂದರಲ್ಲಿ, ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಡಿ. ರೂಪಾ ಮತ್ತು ಅವರ ಮೇಲಧಿಕಾರಿಯಾಗಿದ್ದ ಎಚ್. ಎನ್. ಸತ್ಯನಾರಾಯಣ ರಾವ್ ಅವರ ನಡುವಿನ ತಿಕ್ಕಾಟ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕರಾಳ ಮುಖವನ್ನು ಬಹಿರಂಗಗೊಳಿಸಿತು. ಭ್ರಷ್ಟಾಚಾರ, ರಾಜಾತಿಥ್ಯ ಮತ್ತು ಅಧಿಕಾರ ದುರುಪಯೋಗದ ಆರೋಪಗಳ ಈ ಸಂಘರ್ಷವು ರಾಜ್ಯ ರಾಜಕಾರಣದಲ್ಲಿಯೂ ಬಿರುಗಾಳಿ ಎಬ್ಬಿಸಿತ್ತು.
2017ರ ಜುಲೈ ತಿಂಗಳಿನಲ್ಲಿ ಆಗ ಕಾರಾಗೃಹ ಇಲಾಖೆಯ ಡಿಐಜಿ ಆಗಿದ್ದ ಡಿ. ರೂಪಾ, ತಮ್ಮ ಮೇಲಾಧಿಕಾರಿಯಾಗಿದ್ದ ಡಿಜಿಪಿ ಎಚ್. ಎನ್. ಸತ್ಯನಾರಾಯಣ ರಾವ್ ಅವರಿಗೆ ಒಂದು ವರದಿ ಸಲ್ಲಿಸಿದರು. ಈ ವರದಿಯು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಗಂಭೀರ ಅಕ್ರಮಗಳನ್ನು ಬಯಲಿಗೆಳೆದಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು. ಶಶಿಕಲಾಗಾಗಿ ಪ್ರತ್ಯೇಕ ಅಡುಗೆ ಕೋಣೆ, ಐಷಾರಾಮಿ ಹಾಸಿಗೆ ಮತ್ತು ಇತರ ಸೌಕರ್ಯಗಳನ್ನು ನೀಡಲಾಗಿದ್ದು, ಇದಕ್ಕಾಗಿ 2 ಕೋಟಿ ರೂಪಾಯಿ ಲಂಚ ಪಡೆಯಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಮಹಿಳಾ ಬ್ಯಾರಕ್‌ನಲ್ಲಿದ್ದ ಇಡೀ ಕಾರಿಡಾರ್‌ನ ಐದು ಕೊಠಡಿಗಳನ್ನು ಶಶಿಕಲಾ ಮತ್ತು ಅವರ ಸಂಬಂಧಿ ಇಳವರಸಿ ಬಳಕೆಗಾಗಿ ನೀಡಲಾಗಿತ್ತು. ನಿಯಮಗಳನ್ನು ಮೀರಿ ಸಂದರ್ಶಕರಿಗೆ ಗಂಟೆಗಟ್ಟಲೆ ಭೇಟಿಯಾಗಲು ಅವಕಾಶ ನೀಡಲಾಗುತ್ತಿತ್ತು. ಸಂದರ್ಶಕರ ಭೇಟಿಯ ಸಮಯವನ್ನು ದಾಖಲಾತಿಗಳಲ್ಲಿ ತಿರುಚಲಾಗುತ್ತಿತ್ತು ಮತ್ತು ಜೈಲಿನ ಸಮವಸ್ತ್ರದ ಬದಲು ತಮ್ಮಿಷ್ಟದ ಬಟ್ಟೆಗಳನ್ನು ಧರಿಸಲು ಅವರಿಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದರು.
ರೂಪಾ ಅವರ ವರದಿ ಸೋರಿಕೆಯಾಗುತ್ತಿದ್ದಂತೆ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಯಿತು. ತಕ್ಷಣವೇ ಸರ್ಕಾರವು ಡಿ. ರೂಪಾ ಮತ್ತು ಎಚ್.ಎನ್. ಸತ್ಯನಾರಾಯಣ ರಾವ್ ಇಬ್ಬರನ್ನೂ ವರ್ಗಾವಣೆ ಮಾಡಿತು. ಪ್ರಕರಣದ ತನಿಖೆಗಾಗಿ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಈ ಸಮಿತಿಯು ತನ್ನ 295 ಪುಟಗಳ ವರದಿಯಲ್ಲಿ, ಡಿ. ರೂಪಾ ಮಾಡಿದ ಬಹುತೇಕ ಆರೋಪಗಳು ಸತ್ಯವೆಂದು ದೃಢಪಡಿಸಿತು. ಈ ವರದಿಯ ಆಧಾರದ ಮೇಲೆ, ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆಗೆ ವಹಿಸಲಾಯಿತು. ಸುದೀರ್ಘ ತನಿಖೆಯ ನಂತರ ಎಸಿಬಿ, ಶಶಿಕಲಾ, ಇಳವರಸಿ ಮತ್ತು ಜೈಲಿನ ಅಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತು.
ಸ್ಟಾಂಪ್ ಪೇಪರ್ ಹಗರಣದ ರೂವಾರಿ ತೆಲಗಿಗೆ ಜೈಲಿನಲ್ಲೇ ರಾಜಭೋಗ..
ದೇಶವನ್ನೇ ಬೆಚ್ಚಿಬೀಳಿಸಿದ್ದ ಬಹುಕೋಟಿ ನಕಲಿ ಮುದ್ರಾಂಕ ಪತ್ರ (ಸ್ಟಾಂಪ್ ಪೇಪರ್) ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿಯು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರಲಿಲ್ಲ, ಬದಲಾಗಿ ಅಕ್ಷರಶಃ ರಾಜಭೋಗದ ಜೀವನ ನಡೆಸುತ್ತಿದ್ದ ಎಂಬ ಆಘಾತಕಾರಿ ಸಂಗತಿಗಳು ವರದಿಗಳಿಂದ ಮತ್ತು ಬಹಿರಂಗಗೊಂಡಿದ್ದ ವಿಡಿಯೊಗಳಿಂದ ದೃಢಪಟ್ಟಿದ್ದವು. ಅಂದಿನ ಡಿಐಜಿ (ಕಾರಾಗೃಹ) ಡಿ. ರೂಪಾ 2017ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತೆಲಗಿಗೆ ಸಿಗುತ್ತಿದ್ದ ಕಾನೂನುಬಾಹಿರ ಸೌಲಭ್ಯಗಳನ್ನೂ ಬಯಲಿಗೆಳೆದಿದ್ದರು. ಈ ವರದಿಯು ರಾಜ್ಯದ ಕಾರಾಗೃಹ ವ್ಯವಸ್ಥೆಯಲ್ಲಿದ್ದ ಭ್ರಷ್ಟಾಚಾರದ ಕರಾಳ ಮುಖವನ್ನು ಅನಾವರಣಗೊಳಿಸಿತ್ತು.
ದೇಹಕ್ಕೆ ಮಸಾಜ್ ಮಾಡಲು ಪ್ರತ್ಯೇಕ ಕೈದಿಗಳು
ತೆಲಗಿಯ ಸೇವೆಗಾಗಿಯೇ ಮೂರರಿಂದ ನಾಲ್ಕು ಸಹ ಕೈದಿಗಳನ್ನು ನಿಯೋಜಿಸಲಾಗಿತ್ತು. ವೀಲ್ ಚೇರ್‌ನಲ್ಲಿದ್ದ ತೆಲಗಿಗೆ ದೇಹದ ಮಸಾಜ್ ಮಾಡಲು ಈ ಕೈದಿಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈ ದೃಶ್ಯಗಳಿದ್ದ ಸಿಸಿಟಿವಿ ವಿಡಿಯೊ ತುಣುಕೊಂದು ಸೋರಿಕೆಯಾಗಿ ಭಾರಿ ಸಂಚಲನ ಸೃಷ್ಟಿಸಿತ್ತು. ತೆಲಗಿಯ ಸೆಲ್ ಒಂದು ಜೈಲಿನ ಕೋಣೆಯಂತೆ ಇರಲಿಲ್ಲ. ಬದಲಿಗೆ, ಅಲ್ಲಿ ಹಾಸಿಗೆ, ಎಲ್‌ಇಡಿ ಟಿವಿ, ಕುಡಿಯುವ ನೀರಿನ ಕ್ಯಾನ್ ಮತ್ತು ಟೇಬಲ್‌ಗಳಂತಹ ಸೌಕರ್ಯಗಳನ್ನು ಒದಗಿಸಲಾಗಿತ್ತು. ಆತನ ಕೋಣೆಗೆ ವಿಶೇಷ ಫ್ಲೋರಿಂಗ್ ಕೂಡ ಮಾಡಲಾಗಿತ್ತು ಎಂದು ದೃಶ್ಯಾವಳಿಗಳು ತೋರಿಸಿದ್ದವು. ತೆಲಗಿ ಜೈಲಿನಿಂದಲೇ ಮೊಬೈಲ್ ಫೋನ್‌ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದ. ಈ ಹಿಂದೆಯೂ, 2002-03ರಲ್ಲಿ ತನಿಖಾ ತಂಡವು ಆತನ ಫೋನ್ ಕರೆಗಳನ್ನು ಕದ್ದಾಲಿಸಿಯೇ ಹಗರಣದ ಜಾಲವನ್ನು ಭೇದಿಸಿತ್ತು.
ಪಲಾಯನ ಯತ್ನಗಳಿಂದಲೂ ಕುಖ್ಯಾತನಾದ ಸೈಕೋ ಜೈಶಂಕರ್
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ತನ್ನ ಕ್ರೌರ್ಯದಿಂದಲೇ ಬೆಚ್ಚಿಬೀಳಿಸಿದ್ದ ಸರಣಿ ಅತ್ಯಾಚಾರಿ ಮತ್ತು ಹಂತಕ ಎಂ. ಜೈಶಂಕರ್ ಅಲಿಯಾಸ್ 'ಸೈಕೋ ಶಂಕರ್', ಕೇವಲ ತನ್ನ ಅಪರಾಧಗಳಿಂದ ಮಾತ್ರವಲ್ಲ, ಜೈಲಿನಲ್ಲಿದ್ದುಕೊಂಡು ತೋರಿದ ದರ್ಪ, ಕಾನೂನು ವ್ಯವಸ್ಥೆಯನ್ನೇ ಸವಾಲೆಸೆದು ನಡೆಸಿದ ಪಲಾಯನ ಯತ್ನಗಳಿಂದಲೂ ಕುಖ್ಯಾತನಾದವನು. ಆತನ ಪ್ರಕರಣವು, ಕಾರಾಗೃಹಗಳಲ್ಲಿನ ಭದ್ರತಾ ಲೋಪಗಳು ಮತ್ತು ಘೋರ ಅಪರಾಧಿಗಳನ್ನು ನಿರ್ವಹಿಸುವಲ್ಲಿನ ಸವಾಲುಗಳಿಗೆ ಕನ್ನಡಿಯಾಗಿತ್ತು.
ಸೈಕೋ ಶಂಕರ್ ರಾಜಾತಿಥ್ಯ ಪಡೆದು ಐಷಾರಾಮಿ ಜೀವನ ನಡೆಸಿಲ್ಲ. ಆದರೆ, ಆತ ತನ್ನ ಕುತಂತ್ರ ಮತ್ತು ಜೈಲು ಸಿಬ್ಬಂದಿಯ ನಿರ್ಲಕ್ಷ್ಯವನ್ನು ಬಳಸಿಕೊಂಡು ಕಾನೂನಿನಿಂದ ತಪ್ಪಿಸಿಕೊಳ್ಳಲು ನಡೆಸಿದ ಯತ್ನಗಳು ಹೆಚ್ಚಾಗಿವೆ. ಪರಪ್ಪನ ಅಗ್ರಹಾರದ ಹೈ-ಸೆಕ್ಯುರಿಟಿ ಜೈಲಿನಿಂದಲೇ ಪಲಾಯನ ಮಾಡಿ ಭಾರೀ ಸುದ್ದಿಯಾಗಿದ್ದ. ಪೊಲೀಸ್ ಸಮವಸ್ತ್ರವನ್ನು ಹೋಲುವ ಬಟ್ಟೆ ಧರಿಸಿ, ನಕಲಿ ಕೀ ಬಳಸಿ ತನ್ನ ಸೆಲ್‌ನ ಬಾಗಿಲು ತೆರೆದಿದ್ದ. ಬೆಡ್‌ಶೀಟ್‌ಗಳನ್ನೇ ಹಗ್ಗದಂತೆ ಬಳಸಿ, ಸುಮಾರು 30 ಅಡಿ ಎತ್ತರದ ಎರಡು ಗೋಡೆಗಳನ್ನು ಹಾರಿ ತಪ್ಪಿಸಿಕೊಂಡಿದ್ದ. ವಿದ್ಯುತ್ ಬೇಲಿ ನಿಷ್ಕ್ರಿಯವಾಗಿದ್ದ ಸಮಯವನ್ನು ಆತ ಬಳಸಿಕೊಂಡಿದ್ದ. ಈ ಘಟನೆಯು ಜೈಲಿನ ಭದ್ರತಾ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಜಗಜ್ಜಾಹೀರುಗೊಳಿಸಿತ್ತು. ಇದರ ಪರಿಣಾಮವಾಗಿ, ಕರ್ತವ್ಯ ಲೋಪದ ಆರೋಪದ ಮೇಲೆ ಜೈಲರ್ ಸೇರಿದಂತೆ 11 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಪಲಾಯನದ ಕೆಲವೇ ದಿನಗಳಲ್ಲಿ, ಜೈಲಿನಿಂದ ಕೇವಲ 2 ಕಿ.ಮೀ ದೂರದ ಬೊಮ್ಮನಹಳ್ಳಿ ಬಳಿಯ ಗುಡಿಸಲೊಂದರಲ್ಲಿ ಆತನನ್ನು ಪೊಲೀಸರು ಮರಳಿ ಬಂಧಿಸಿದರು. ಗೋಡೆ ಹಾರಿದ ರಭಸಕ್ಕೆ ಆತನ ಕಾಲು ಮತ್ತು ಬೆನ್ನುಮೂಳೆಗೆ ಗಂಭೀರ ಗಾಯಗಳಾಗಿದ್ದವು.
ತಮಿಳುನಾಡು ಪೊಲೀಸರ ವಶದಿಂದ ಪಲಾಯನ
ಪರಪ್ಪನ ಅಗ್ರಹಾರದಿಂದ ತಪ್ಪಿಸಿಕೊಳ್ಳುವ ಮುನ್ನ, 2011ರಲ್ಲಿ ತಮಿಳುನಾಡಿನ ಸೇಲಂನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್ ಕರೆತರುವಾಗಲೂ ಆತ ಪೊಲೀಸ್ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ. ಶಂಕರ್‌ನ ಪಲಾಯನದಿಂದ ಅವಮಾನಿತರಾದ, ಆತನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ಎಂ. ಚಿನ್ನಸ್ವಾಮಿ ಅವರು ಮರುದಿನವೇ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಜೈಲಿನಲ್ಲಿ ಜೀವನ ಅಂತ್ಯ
ಪರಪ್ಪನ ಅಗ್ರಹಾರದಿಂದ ಪಲಾಯನಗೈದು ಮರಳಿ ಸಿಕ್ಕಿಬಿದ್ದ ನಂತರ ಸೈಕೋ ಶಂಕರ್‌ನನ್ನು ತೀವ್ರ ಭದ್ರತೆಯ ಒಂಟಿ ಸೆಲ್‌ನಲ್ಲಿ ಇರಿಸಲಾಗಿತ್ತು. ಪಲಾಯನದ ವೇಳೆ ಆದ ಗಾಯಗಳಿಂದಾಗಿ ಆತ ನಡೆಯಲು ಅಸಮರ್ಥನಾಗಿದ್ದ ಮತ್ತು ಗಾಲಿಕುರ್ಚಿಯ ನೆರವು ಪಡೆಯುತ್ತಿದ್ದ. ನಿರಂತರ ಜೈಲುವಾಸ ಮತ್ತು ದೈಹಿಕ ಅಸಾಮರ್ಥ್ಯದಿಂದಾಗಿ ಶಂಕರ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಇದಕ್ಕಾಗಿ ಆತನಿಗೆ ಜೈಲಿನಲ್ಲಿ ಕೌನ್ಸೆಲಿಂಗ್ ಸಹ ಕೊಡಿಸಲಾಗಿತ್ತು. ಫೆಬ್ರವರಿ 2018ರಲ್ಲಿ, ಸೈಕೋ ಶಂಕರ್ ತನ್ನ ಸೆಲ್‌ನಲ್ಲಿಯೇ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡನು. ಆತ ಇದ್ದ ಹೈ-ಸೆಕ್ಯುರಿಟಿ ಸೆಲ್‌ಗೆ ಬ್ಲೇಡ್ ಹೇಗೆ ಸಿಕ್ಕಿತು ಎಂಬುದು ಮತ್ತೊಮ್ಮೆ ಜೈಲಿನ ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.