ಸಿಎಂ ಪಟ್ಟಕ್ಕಾಗಿ 'ಡಿಕೆಶಿ' ಭರ್ಜರಿ ಕಸರತ್ತು: ಜೈಲಿನಲ್ಲಿ ಆಪ್ತರ ಭೇಟಿ, ಉತ್ತರ ಕರ್ನಾಟಕದ ಶಾಸಕರಿಗೆ ಗಾಳ!

ಮೊದಲು ಶಾಸಕ ವೀರೇಂದ್ರ ಪಪ್ಪಿ ಅವರನ್ನು ಭೇಟಿಯಾಗಿ ಸಮಾಧಾನ ಹೇಳಿದ ಅವರು, ನಂತರ ಕೋರ್ಟ್ ಕಲಾಪ ಮುಗಿಸಿ ಬಂದ ವಿನಯ್ ಕುಲಕರ್ಣಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು.

Update: 2025-11-22 07:00 GMT

ಡಿಸಿಎಂ ಡಿ.ಕೆ. ಶಿವಕುಮಾರ್‌, ಶಾಸಕರಾದ ವಿನಯ್‌ ಕುಲಕರ್ಣಿ ಹಾಗೂ ವಿರೇಂದ್ರ ಪಪ್ಪಿ

Click the Play button to listen to article

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿರುವ ನಿರ್ಣಾಯಕ ಘಟ್ಟದಲ್ಲಿ, ಅಧಿಕಾರ ಹಸ್ತಾಂತರದ ಗುಸುಗುಸು ಜೋರಾಗಿದೆ. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರಲು ತೆರೆಮರೆಯ ಕಸರತ್ತು ಚುರುಕುಗೊಳಿಸಿದ್ದು, ಪಕ್ಷದ ಶಾಸಕರ ಬೆಂಬಲ ಗಿಟ್ಟಿಸಿಕೊಳ್ಳಲು ರಣತಂತ್ರ ರೂಪಿಸಿದಂತಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ತಮ್ಮತ್ತ ಸೆಳೆಯಲು ಮತ್ತು ಕಷ್ಟದಲ್ಲಿರುವ ನಾಯಕರಿಗೆ ಸಾಥ್ ನೀಡುವ ಮೂಲಕ ತಮ್ಮ ನಾಯಕತ್ವದ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಡಿಕೆಶಿ ಮುಂದಾಗಿದ್ದಾರೆ.

ಕೈದಿಗಳಾದ ಶಾಸಕರಿಗೆ 'ಧೈರ್ಯ' ತುಂಬಿದ ಡಿಕೆಶಿ

ತಮ್ಮ ಆಪ್ತ ವಲಯವನ್ನು ಗಟ್ಟಿಗೊಳಿಸಿಕೊಳ್ಳುವ ಭಾಗವಾಗಿ ಶುಕ್ರವಾರ ಸಂಜೆ ಡಿಸಿಎಂ ಶಿವಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿದ್ದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಶಾಸಕರಾದ ವಿನಯ್ ಕುಲಕರ್ಣಿ ಹಾಗೂ ವೀರೇಂದ್ರ ಪಪ್ಪಿ ಅವರನ್ನು ಭೇಟಿಯಾದ ಡಿಕೆಶಿ, ಸುಮಾರು ಹೊತ್ತು ಮಾತುಕತೆ ನಡೆಸಿದರು.

ಮೊದಲು ಶಾಸಕ ವೀರೇಂದ್ರ ಪಪ್ಪಿ ಅವರನ್ನು ಭೇಟಿಯಾಗಿ ಸಮಾಧಾನ ಹೇಳಿದ ಅವರು, ನಂತರ ಕೋರ್ಟ್ ಕಲಾಪ ಮುಗಿಸಿ ಬಂದ ವಿನಯ್ ಕುಲಕರ್ಣಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು. "ಕಷ್ಟಕಾಲದಲ್ಲಿ ಪಕ್ಷ ಮತ್ತು ನಾಯಕತ್ವ ನಿಮ್ಮೊಂದಿಗಿದೆ" ಎಂದು ಧೈರ್ಯ ತುಂಬುವ ಮೂಲಕ, ತಾವು ಶಾಸಕರ ಪರವಾಗಿ ಗಟ್ಟಿಯಾಗಿ ನಿಲ್ಲುವ ನಾಯಕ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ. ಈ ಭೇಟಿಯು ಕೇವಲ ಸೌಹಾರ್ದಯುತವಾಗಿರದೆ, ಮುಂದಿನ ರಾಜಕೀಯ ಲೆಕ್ಕಾಚಾರಗಳಲ್ಲಿ ಈ ನಾಯಕರ ಬೆಂಬಲವನ್ನು ಖಚಿತಪಡಿಸಿಕೊಳ್ಳುವ ತಂತ್ರದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉತ್ತರ ಕರ್ನಾಟಕದ ಮೇಲೆ ಡಿಕೆಶಿ ಕಣ್ಣು

ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹಿಡಿತ ಹೆಚ್ಚಿದೆ ಎಂಬ ಮಾತುಗಳಿವೆ. ಈ ಸಮೀಕರಣವನ್ನು ಬದಲಿಸಲು ಡಿ.ಕೆ. ಶಿವಕುಮಾರ್ ಹಾವೇರಿ ಭಾಗದ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಜೈಲು ಭೇಟಿಯ ಬೆನ್ನಲ್ಲೇ, ಶುಕ್ರವಾರ ರಾತ್ರಿ ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಹಾವೇರಿ ಜಿಲ್ಲೆಯ ಪ್ರಮುಖ ಶಾಸಕರು ಪ್ರತ್ಯಕ್ಷರಾಗಿದ್ದು ತೀವ್ರ ಕುತೂಹಲ ಮೂಡಿಸಿದೆ.

ಶಿಗ್ಗಾವಿ ಉಪಚುನಾವಣೆಯಲ್ಲಿ ಗೆದ್ದು ಬೀಗುತ್ತಿರುವ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಹಾಗೂ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರು ಶಿವಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಇವರೊಂದಿಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಆನಂದ್ ಗಡ್ಡದೇವರಮಠ ಕೂಡ ಸಾಥ್ ನೀಡಿದ್ದಾರೆ.

ಬಣ ರಾಜಕೀಯದಲ್ಲಿ ಮಹತ್ವದ ತಿರುವು?

ವಿಶೇಷವೆಂದರೆ, ಶಾಸಕ ಪ್ರಕಾಶ ಕೋಳಿವಾಡ ಅವರು ಈ ಹಿಂದೆ "ನಮ್ಮ ಕುಟುಂಬ 1968ರಿಂದಲೂ ಕಾಂಗ್ರೆಸ್ ಪಕ್ಷದಲ್ಲಿದೆ. ನಮ್ಮದು ಆ ಬಣವೂ ಇಲ್ಲ, ಈ ಬಣವೂ ಇಲ್ಲ, ಕೇವಲ ಕಾಂಗ್ರೆಸ್ ಬಣ," ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಆದರೆ, ದೆಹಲಿ ಮಟ್ಟದಲ್ಲಿ ಬಣ ರಾಜಕೀಯದ ಚಟುವಟಿಕೆಗಳು ಗರಿಗೇರಿರುವ ಸಂದರ್ಭದಲ್ಲೇ ಅವರು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿರುವುದು ಅವರ ನಿಲುವು ಬದಲಾಗಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಅಧಿಕಾರ ಹಂಚಿಕೆ ಒಪ್ಪಂದದಂತೆ 2.5 ವರ್ಷಗಳ ಬಳಿಕ ಸಿಎಂ ಸ್ಥಾನ ತಮಗೆ ಸಿಗಬೇಕು ಎಂದು ಪಟ್ಟು ಹಿಡಿದಿರುವ ಶಿವಕುಮಾರ್, ಶಾಸಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ತಂತ್ರ ಹೂಡಿದ್ದಾರೆ. ದಕ್ಷಿಣ ಕರ್ನಾಟಕದ ಒಕ್ಕಲಿಗ ಬೆಲ್ಟ್‌ನಲ್ಲಿ ಹಿಡಿತ ಹೊಂದಿರುವ ಅವರು, ಈಗ ಲಿಂಗಾಯತ ಮತ್ತು ಅಲ್ಪಸಂಖ್ಯಾತ ಮತಬ್ಯಾಂಕ್ ಹೊಂದಿರುವ ಉತ್ತರ ಕರ್ನಾಟಕದ ಶಾಸಕರ ಒಲವು ಗಳಿಸಲು ಪ್ರಯತ್ನಿಸುತ್ತಿದ್ದಾರೆ.

ವಿನಯ್‌ ಕುಲಕರ್ಣಿ, ಪಪ್ಪಿಯನ್ನು ಭೇಟಿಯಾಗಿದ್ದ ಡಿಕೆಶಿ

ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿ ಮತ್ತು ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಇಬ್ಬರನ್ನೂ ಡಿಕೆಶಿ ಭೇಟಿಯಾಗಲಿದ್ದಾರೆ. ಸದ್ಯ ಯೋಗೇಶ್ ಗೌಡ ಹತ್ಯೆ ಪ್ರಕರದಲ್ಲಿ ವಿನಯ್ ಕುಲಕರ್ಣಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಮತ್ತೊಂದೆಡೆ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ವೀರೇಂದ್ರ ಪಪ್ಪಿ ಕೂಡ ಇಲ್ಲೇ ಇದ್ದಾರೆ, ಇಬ್ಬರೂ ವಿಚಾರಣಾಧೀನ ಕೈದಿಗಳಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Tags:    

Similar News