By-Election | ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನ.13ಕ್ಕೆ ಉಪ ಚುನಾವಣೆ, 23ಕ್ಕೆ ಫಲಿತಾಂಶ

ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಿಸಿದೆ. ಸಂಡೂರು, ಚನ್ನಟ್ಟಣ ಹಾಗೂ ಶಿಗ್ಗಾವಿ ಕ್ಷೇತ್ರದಲ್ಲಿ ತೆರವಾಗಿರುವ ಸ್ಥಾನಗಳಿಗೆ ನ. 13 ರಂದು ಮತದಾನ ನಡೆಯಲಿದೆ.

Update: 2024-10-15 11:50 GMT
ರಾಜ್ಯದ ಮೂರು ಜಿಲ್ಲೆಗಳಿಗೆ ಉಪಚುನಾವಣೆ ಘೋಷಣೆ

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಉಪಚುನಾವಣೆ ಘೋಷಿಸಿದೆ. ಚನ್ನಟ್ಟಣ, ಸಂಡೂರು ಹಾಗೂ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಲ್ಲಿ ತೆರವಾಗಿರುವ ಸ್ಥಾನಗಳಿಗೆ ನ. 13 ರಂದು ಮತದಾನ ನಡೆಯಲಿದೆ. ನ. 23 ರಂದು ಮತಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. 

ಉಪ ಚುನಾವಣೆ ಸಂಬಂಧ ಅ. 18ರಂದು ಅಧಿಸೂಚನೆ ಹೊರಡಿಸಿದ ಬಳಿಕ ನೀತಿ ಸಂಹಿತೆ ಜಾರಿಯಾಗಲಿದೆ. ನಾಮಪತ್ರ ಸಲ್ಲಿಕೆಗೆ ಅ.25 ಕೊನೆಯ ದಿನವಾಗಿದೆ. ಅ.28 ರಂದು ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅ. 30 ಕೊನೆಯ ದಿನವಾಗಿದೆ. 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಇ.ತುಕರಾಂ ಸ್ಪರ್ಧಿಸಿ ಗೆದ್ದಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾದ ಕಾರಣ ತುಕರಾಂ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ ಕ್ಷೇತ್ರ ತೆರವಾಗಿತ್ತು. ಅದೇ ರೀತಿ ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಗೆದ್ದ ಬಳಿಕ ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಶಿಗ್ಗಾವಿ ಕ್ಷೇತ್ರದಿಂದ ಶಾಸಕರಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಲೋಕಸಭಾ ಚುನಾವಣೆ ವೇಳೆ ಹಾವೇರಿ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದಾರೆ. ಹೀಗಾಗಿ ಅವರು ‌ಪ್ರತಿನಿಧಿಸಿದ್ದ ಶಿಗ್ಗಾವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತೆರವಾಗಿರುವ ಈ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇದೀಗ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿದೆ.

ಕರ್ನಾಟಕದ ಮೂರು ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 43 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಜೊತೆಗೆ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆ ದಿನಾಂಕವನ್ನೂ ಆಯೋಗ ಪ್ರಕಟಿಸಿದೆ. ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ನವೆಂಬರ್ 20ಕ್ಕೆ ಮತದಾನ ನಡೆಯಲಿದೆ. ಫಲಿತಾಂಶ ನವೆಂಬರ್ 23ರಂದು ಹೊರಬೀಳಲಿದೆ. ಜಾರ್ಖಂಡ್‌ನಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ನವೆಂಬರ್ 13 ಹಾಗೂ ಎರಡನೇ ಹಂತದ ಮತದಾನ ನವೆಂಬರ್ 20 ರಂದು ನಡೆಯಲಿದೆ. ಫಲಿತಾಂಶ ನವೆಂಬರ್ 23ರಂದು ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

Tags:    

Similar News